Chitradurga news|Nammajana.com|13-8-2025
ವರದಿ: ಕೆ.ಟಿ. ಓಬಳೇಶ್ ನಲಗೇತನಹಟ್ಟಿ.
ನಮ್ಮಜನ.ಕಾಂ, ಚಿತ್ರದುರ್ಗ: ಚಳ್ಳಕೆರೆ ತಾಲೂಕು (Nayakanahatty) ನಾಯಕನಹಟ್ಟಿ ಹೋಬಳಿಯ ಅಬ್ಬೇನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ತೊರೆಕೋಲಮ್ಮನಹಳ್ಳಿ ಗ್ರಾಮದಲ್ಲಿ
ಪುರಾತನ ಕಾಲದಿಂದ ನಡೆದು ಬರುತ್ತಿರುವ ಅನೇಕ ಆಚರಣೆಗಳು ಪೂರ್ವಜರ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾಗಿವೆ.
ಈ ಆಚರಣೆಗಳು ಹಿಂದಿನಿಂದ ಇಂದಿನವರೆಗೂ ಜೀವಂತವಾಗಿರಿಸಿಕೊಂಡು ಬರುತ್ತಿರುವುದನ್ನು ಹಳ್ಳಿಗಳಲ್ಲಿ ಕಾಣಬಹುದಾಗಿದೆ. ಇಂತಹ ಒಂದು ವಿಶಿಷ್ಠವಾದ ಮತ್ತು ವಿಶೇಷವಾದ ಆಚರಣೆಗಳಲ್ಲೊಂದು “ಹೆಡಿಗೆ ಜಾತ್ರೆ”. ಈ ಹೆಡಿಗೆ ಜಾತ್ರೆ ಚಳ್ಳಕೆರೆ ತಾಲ್ಲೂಕು ಮತ್ತು ಚಿತ್ರದುರ್ಗ ಜಿಲ್ಲೆಯ ಗಡಿ ಗ್ರಾಮವಾದ ತೊರೆಕೋಲಮ್ಮನಹಳ್ಳಿಯಲ್ಲಿ ಇನ್ನೂ ಜೀವಂತವಾಗಿದ್ದು ಪೂರ್ವಜರ ಪರಂಪರಾಗತವಾದ ಈ ಆಚರಣೆಯನ್ನು ಮುಂದಿನ ಪೀಳಿಗೆಗೂ ಉಳಿಸಿಕೊಂಡು (Nayakanahatty) ಬರುವಲ್ಲಿ ಈ ಗ್ರಾಮದವರು ಇತಿಹಾಸವನ್ನು ಎತ್ತಿಹಿಡಿದಿದ್ದಾರೆ.

ಹೆಡಿಗೆ ಜಾತ್ರೆ ಇನ್ನೂ ಜೀವಂತ
“ಹೆಡಿಗೆ ಜಾತ್ರೆ” ಹೆಸರೇ ಹೇಳುವಂತೆ, ಇಡೀ ಗ್ರಾಮದ ಎಲ್ಲಾ ಮನೆಯ ಗಂಡು-ಹೆಣ್ಣು, ಮಕ್ಕಳು-ಮರಿ ಸಹಿತ ಒಂದೇ ರೀತಿಯ ಅಡಿಗೆ ಮಾಡಿಕೊಂಡು (ಕಡುಬು, ಕಾಯಿತೊಗೆ, ಅನ್ನ, ಸೊಪ್ಪಿನ ಸಾರು) ಹೆಡಿಗೆಯಲ್ಲಿ ತುಂಬಿಕೊಂಡು, ಅದನ್ನು ಹೊತ್ತುಕೊಂಡು ತಂಡೋಪ ತಂಡವಾಗಿ ಊರಿನ ಹೊರಗಿರುವ ಮಾರಮ್ಮದೇವಿಯ ಮರದ ಬಳಿಗೆ ಸಂಜೆ ೫ ಗಂಟೆಯ ವೇಳೆಗೆ ಬಂದು ಸೇರುತ್ತಾರೆ.
ಮಾರಮ್ಮ ದೇವಿಗೆ ವಿಶೇಷ ಪೂಜೆ
ಹೊಲಗಳ ಮಧ್ಯದಲ್ಲಿ ಹಚ್ಚ ಹಸುರಿನ ನಡುವೆ ಇರುವ ಮರದಲ್ಲಿ ನೆಲೆಸಿರುವ ಮಾರಮ್ಮ ದೇವಿಗೆ ಪೂಜಿಸಿ, ತಂದ ಕಡುಬು, ಕಾಯಿತೊಗೆ, ಅನ್ನ, ಸೊಪ್ಪಿನ ಸಾರನ್ನು, ನೆಂಟರಿಷ್ಟರು, ಬಂಧು-ಬಾಂಧವರೊಂದಿಗೆ, ಸ್ನೇಹಿತರ ಜೊತೆ ಎಲ್ಲರೂ ಪರಸ್ಪರ ಹಂಚಿ ಉಂಡು ಸಂಭ್ರಮಿಸುತ್ತಾರೆ.
ಈ ಹೆಡಿಗೆ ಜಾತ್ರೆಯು ಇಡೀ ಊರಿನ ಕುಟುಂಬಗಳು ಸಮಾನ ಅಡಿಗೆ ತಯಾರಿಕೆ ಮತ್ತು ಸಹ ಭೋಜನ, ಯಾವುದೇ ಜಾತಿ-ಮತ, ಮೇಲು-ಕೀಳುಗಳುಗಳ ಅಂತರವಿಲ್ಲದೆ ಎಲ್ಲರೂ (Nayakanahatty) ಸಮಾನರು ಎಂಬ ನೀತಿಯನ್ನು ಸಾರುತ್ತದೆ.
ಹೊತ್ತು ಮುಳುಗಿ ಕತ್ತಲಾಗುತ್ತಿದ್ದಂತೆ, ಬಂದ ಭಕ್ತರೆಲ್ಲಾ ತಮ್ಮ ತಮ್ಮ ಹೆಡಿಗೆಗಳನ್ನು ತಲೆಮೇಲೆ ಒತ್ತುಕೊಂಡು ಊರಿನ ಕಡೆ ಮುಖಮಾಡುತ್ತಾರೆ. ಇವರ ಹಿಂದೆಯೇ ಮಾರಮ್ಮ ದೇವಿಯನ್ನು ಆವಾಹನೆ ಮಾಡಿಕೊಂಡ ಪೂಜಾರಿಯನ್ನು ಭಕ್ತರು ಗಟ್ಟಿಯಾಗಿ ಹಿಡಿದುಕೊಂಡು ಊರುಮೆ, ತಪ್ಪಡೆ, ವಾದ್ಯಗಳೊಂದಿಗೆ ಊರ ಕಡೆ ಸಾಗುತ್ತಾರೆ. ಯಾವೊಬ್ಬ ನರಪಿಳ್ಳೆಯೂ ಮರದ ಬಳಿ ಉಳಿಯದಂತೆ ದೇವಿಯೇ ಕರೆತರುತ್ತಾಳೆ ಎಂಬುದು ಪ್ರತೀತಿ. ಜೀವಕಳೆ ಹೊತ್ತ ದೇವಿಯ ಪೂಜಾರಿಯನ್ನು ಊರಿನಲ್ಲಿರುವ ಮಾರಮ್ಮನ ಗುಡಿಗೆ ಕರೆ ತಂದು ಬಿಡುತ್ತಾರೆ.
ಶ್ರಾವಣ ಮಾಸದ ಹುಣ್ಣಿಮೆಯ ನಂತರ ಹಬ್ಬ
ಪ್ರತಿ ವರ್ಷದ ಶ್ರಾವಣ ಮಾಸದ ಹುಣ್ಣಿಮೆಯ ನಂತರ ಬರುವ ಮಂಗಳವಾರದಂದು ಈ ವಿಶೇಷವಾದ ಆಚರಣೆಯ ತೊರೆಕೋಲಮ್ಮನಹಳ್ಳಿ ಗ್ರಾಮದಲ್ಲಿ ನಡೆಯುತ್ತದೆ. ಈ ದಿನಗಳಲ್ಲಿ ಹದವಾದ ಮಳೆಯಿಂದ ಹೊಲಗಳಲ್ಲಿನ ಪೈರು ಹಸಿರಿನಿಂದ ಕೂಡಿ ಕಣ್ಮನ ತಣಿಸುತ್ತವೆ. ಈ ಹಿತಕರವಾದ ವಾತಾವರಣದ ಸುಂದರ ಸಂಜೆಯಲ್ಲಿ ಊರಿನ ಎಲ್ಲಾ ಜನರು ಒಟ್ಟಿಗೆ ಸೇರಿ ಸಂತೋಷದಿಂದ ಆಚರಿಸುವ ಈ ಹೆಡಿಗೆ ಜಾತ್ರೆ ಪಾರಂಪರಿಕ ಸಾಂಸ್ಕೃತಿಯ ಪ್ರತೀಕವಾಗಿದೆ.
ಪೂರ್ವಜರು ನಡೆಸಿಕೊಂಡು ಬಂದ ಈ ಪದ್ಧತಿಯನ್ನು ಈ ಆಧುನಿಕ ಕಾಲದಲ್ಲೂ ಈಗಿನ ಪೀಳಿಗೆ ಮುಂದುವರೆಸಿಕೊಂಡು ಬರುತ್ತಿರುವುದು ನಮ್ಮ ಸಂಸ್ಕೃತಿಯ ಬಗ್ಗೆ ನಮ್ಮ ಹೊಸ ಪೀಳಿಗೆಗೆ ಇರುವ ಗೌರವನ್ನು ಎತ್ತಿಹಿಡಿಯುತ್ತದೆ.
ಭಾದ್ರಪದ ಮಾಸದ ೩ನೇ ಮಂಗಳವಾರ ಊರಿನಲ್ಲಿ ನಡೆಯಲಿರುವ ಮಾರಮ್ಮನ ಹಬ್ಬದಂದು ದೇವಿಯನ್ನು (Nayakanahatty) ಅಲಂಕರಿಸಿ, ಪೂಜಿಸಿ, ಸಂಭ್ರಮದಿಂದ ಮಾರಮ್ಮನ ಹಬ್ಬ ಮಾಡುತ್ತಾರೆ. ಮಾರಮ್ಮನ ಹಬ್ಬ ಮಾಡಿದ ನಂತರ ಬರುವ ಮಂಗಳವಾರದಂದು ಮತ್ತೆ ಮಾರಮ್ಮ ದೇವಿಯನ್ನು ಎಲ್ಲಿಂದ ಕರೆತಂದರೋ ಅದೇ ಮರದ ಬಳಿ ಮತ್ತೆ ಮರಳಿ ಕಳುಹಿಸುತ್ತಾರೆ.
ಬಾಕ್ಸ್
ಪ್ರತಿ ವರ್ಷ ನಡೆಯುವ ಈ ಪುನರಾವರ್ತನೆಯ “ಹೆಡಿಗೆ ಜಾತ್ರೆ” ನಮ್ಮ ಪಾರಂಪರಿಕ ಸಂಸ್ಕೃತಿಯ ಪ್ರತೀಕ ಮತ್ತು ಸಂಸ್ಕಾರದ ದ್ಯೋತಕ ಎಂಬುವುದರಲ್ಲಿ ಎರಡು ಮಾತಿಲ್ಲ ಎಂಬುದು ಗ್ರಾಮಸ್ಥರು ಮಾತು
ಕೆ.ಜಿ. ತಿಪ್ಪೇಸ್ವಾಮಿ ಗ್ರಾಮ ಪಂಚಾಯತಿ ಸದಸ್ಯರು
ತೊರೆಕೋಲಮ್ಮನಹಳ್ಳಿ
ಗ್ರಾಮ ಪಂಚಾಯತಿ ಸದಸ್ಯರಾದ ಗಾದ್ರಪ್ಪ, ಸುಮಿತ್ರಮ್ಮ, ಮಾರಕ್ಕ, ಗ್ರಾಮದ ಮುಖಂಡರು ಕೆ ಟಿ ಗಂಗಣ್ಣ, ಆರ್ ಬಸಪ್ಪ, ಕೆ ಟಿ ಮಂಜಣ್ಣ, ಕೋಲಂನಹಳ್ಳಿ ಪಿತಾಂಬರ್, ಗೌಡರ ನಾಗಪ್ಪ, ಬಿ.ಟಿ. ತಿಪ್ಪೇಸ್ವಾಮಿ, ಚಂದ್ರಶೇಖರಪ್ಪ, ಕೆ.ಜಿ ,ತಿಪ್ಪಣ್ಣ, ಭೂಸಂದ್ರ ನಿಂಗಪ್ಪ, ಎ.ಬಿ. ವಿರೂಪಾಕ್ಷಪ್ಪ, ಜಿ.ಪಿ ಪಾಲಯ್ಯ, ಎಸ್ ಡಿ ಎಂ ಸಿ ಅಧ್ಯಕ್ಷ ಗುರುಸ್ವಾಮಿ, ಗಿರೀಶ, ಈ ಮಧು, ಸಮಸ್ತ ತೊರೆಕೋಲಮ್ಮನಹಳ್ಳಿ ಗ್ರಾಮಸ್ಥರು ಇದ್ದರು.
