Chitradurga news|nammajana.com|9-10-2024
ನಮ್ಮಜನ.ಕಾಂ, ಚಿತ್ರದುರ್ಗ: ದಿನಾಂಕ:೦೯.೧೦.೨೦೨೪ರಂದು ಅನುಭವ ಮಂಟಪದಲ್ಲಿ ಜಯದೇವ ಜಗದ್ಗುರುಗಳ ಜಯಂತ್ಯುತ್ಸವ ಕಾರ್ಯಕ್ರಮವನ್ನು (Muruga Math) ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಧಾರವಾಡ ಶ್ರೀ ಮುರುಘಾಮಠದ ಶ್ರೀ.ಮ.ನಿ.ಪ್ರ. ಮಲ್ಲಿಕಾರ್ಜುನ ಸ್ವಾಮಿಗಳು ಮಾತನಾಡಿ, ಜಯದೇವ ಶ್ರೀಗಳ ಬಗ್ಗೆ ಯಾರು ಎಷ್ಟು ಸಮಯ ಮಾತನಾಡಿದರೂ ಅದು ಮುಗಿಯಲಾರದ ಕಥೆ. ಶ್ರೀಗಳು ಅಷ್ಟೊಂದು ಶ್ರಮವಹಿಸಿದ್ದಾರೆ. ಕೋಟಿಗೊಬ್ಬ ಶರಣ ಎಂದರೆ ಜಯದೇವ ಶ್ರೀಗಳು ಎಂದರೆ ತಪ್ಪಾಗಲಾರದು.
ಶ್ರೀಗಳು ಕಾರಣಿಕ ಶಿಶುವಾಗಿ ಜನಿಸಿದವರಾಗಿದ್ದಾರೆ. ಅಲ್ಲಮಪ್ರಭುಗಳು ಹೇಳಿದಂತೆ ಕಲ್ಯಾಣಕ್ರಾಂತಿಯನ್ನು ಮಾಡಿದವರೆಂದರೆ ಜಯದೇವ ಶ್ರೀಗಳು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಂಸದರಾದ ಶ್ರೀ ಗೋವಿಂದ ಎಂ. ಕಾರಜೋಳರವರು ಮಾತನಾಡಿ ಮನುಷ್ಯ ಶಿವಸ್ವರೂಪಿಯಾದಾಗ ಯಾವ ಅನಿಷ್ಟಗಳು ಬರುವುದಿಲ್ಲ. ೧೨ನೇ ಶತಮಾನದ ಶರಣರ ಸಂಸ್ಕೃತಿಯನ್ನು ಪ್ರಸ್ತುತಪಡಿಸುವುದೇ ಈ ಶರಣಸಂಸ್ಕೃತಿಯ ಉದ್ದೇಶವಾಗಿದೆ.
ಕಾಯಕ ಜೀವಿಗಳಿಗೆ, ನೊಂದವರಿಗೆ ಮಾರ್ಗದರ್ಶನವಾಗಿದೆ. ವಿಶ್ವಗುರು ಬಸವಣ್ಣನವರು ಶೋಷಣೆ ತಪ್ಪಿಸಲಿಕ್ಕೆ, ಅಸಮಾನತೆ ನಿವಾರಣೆಗಾಗಿ, ಲಿಂಗಭೇದ ತೊಲಗಿಸಲು ಬಸವಧರ್ಮ ಸ್ಥಾಪಿಸಿದರು. ವೀರಶೈವ ಮಠಗಳು ಈ ನಾಡಿನ ಉದ್ದಗಲಕ್ಕೂ ಎಲ್ಲಾ ಸಮಾಜಕ್ಕೂ ಅಕ್ಷರ ದಾಸೋಹ, ಅನ್ನ ದಾಸೋಹ ನೀಡಿವೆ. ಬಸವಣ್ಣನವರು ಹಾಕಿಕೊಟ್ಟ ಕಾರ್ಯಕ್ರಮಗಳನ್ನು (Muruga Math) ಅನುಷ್ಠಾನಕ್ಕೆ ತರುವಲ್ಲಿ ಮುರುಘಾಮಠ ಮುಂಚೋಣಿಯಲ್ಲಿದೆ. ಬಸವಣ್ಣನವರ ಸುಂದರ ಸಮಾಜದ ಕಲ್ಪನೆಗೆ ಮತ್ತೆ ಮೆರಗು ನೀಡಬೇಕೆಂದರೆ ನಾಡಿನ ತಾಯಂದಿರು ಹುಟ್ಟುವ ಮಕ್ಕಳಿಗೆ ಬಸವತತ್ತ÷್ವ ಬೋಧನೆಯನ್ನು ಮಾಡಬೇಕು ಎಂದು ತಿಳಿಸಿದರು.
ನಿವೃತ್ತ ಐ.ಎ.ಎಸ್ ಅಧಿಕಾರಿಗಳಾದ ಡಾ.ಸೋಮಶೇಖರ್.ಸಿ, ಮಾತನಾಡಿ, ಜಯದೇವ ಮಹಾಸ್ವಾಮಿಗಳು ಮಾಡಿದ ಕಾಯಕ, ಲಿಂಗಾರ್ಚನೆ, ಗುರುಪೂಜೆ, ಜಂಗಮ ದಾಸೋಹಕ್ಕಾಗಿ ಶ್ರಮಿಸಿದವರು. ಅವರ ಪರಸೇವೆ ಲೋಕಾರ್ಪಿತವಾದದ್ದಾಗಿದೆ. ಮಹಾನ್ ವ್ಯಕ್ತಿಗಳು ಬರುವುದು ಲೋಕದ ಕಲ್ಯಾಣಕ್ಕೆ. ಜಯದೇವ ಶ್ರೀಗಳು ಕಾರಣಿಕ ಪುರುಷರಾಗಿ ಬಸವಣ್ಣನವರ ಅನುಯಾಯಿಗಳಾಗಿ ಅಕ್ಷರ ಅಕ್ಷರ ದಾಸೋಹ ನೀಡಿ ಮುಕ್ತಿಯ ಮಾರ್ಗ ತೋರಿದ್ದಾರೆ.
ಲೋಕದಂತೆ ಬಂದವರಲ್ಲ. ಲೋಕದಂತೆ ಇದ್ದವರಲ್ಲ. ಸಮಾಜಕ್ಕೆ ದೊಡ್ಡ ದೊಡ್ಡ ಸಹಕಾರವನ್ನು ಮಾಡುತ್ತಾ ಬಂದಿದ್ದಾರೆ. ನಮ್ಮ ಜೀವನ ಶಾಶ್ವತವಲ್ಲ. ಸ್ವಂತಕ್ಕಾಗಿ ಬದುಕಬಾರದು. ಸ್ವಂತಕ್ಕೆ ಬದುಕುವವರು ಸತ್ತಂತೆ. ಪೀಠ ಎಂಬುದು ಸಮಾಜ ರಕ್ಷಣೆಗೆ ಸೀಮಿತವಾಗಿರಬೇಕೆಂದು ಮಠದ ಸಂಪತ್ತನ್ನು ಹಳ್ಳಿ ಹಳ್ಳಿಗೂ ಹೋಗಿ ಸಮಾಜಕ್ಕಾಗಿ ಬೇಡಿದ ವ್ಯಕ್ತಿ ಜಯದೇವ ಶ್ರೀಗಳು. ವೀರಶೈವ ಲಿಂಗಾಯತ ಮಠಗಳು ಸ್ಥಾಪಿಸಿದ ವಿದ್ಯಾರ್ಥಿನಿಲಯಗಳಲ್ಲಿ ಅನೇಕರು ವ್ಯಾಸಂಗ ಮಾಡಿ ಬದುಕನ್ನು ಕಟ್ಟಿಕೊಂಡಿದ್ದಾರೆ. ನಾನು ಸಹ ಜಯದೇವ ವಿದ್ಯಾರ್ಥಿನಿಲಯದಲ್ಲಿ ವಿದ್ಯಾಬ್ಯಾಸ ಮಾಡಿದವನು. ೧೯೩೭ರಲ್ಲಿ ಮಹಾರಾಜರು ಕೇಳಿಕೊಂಡಾಗ ರೋಗ ನಿರೋಧಕ ಔಷದಿಗಾಗಿ ೪೦ಸಾವಿರ ರೂ ದೇಣಿಗೆ ನೀಡಿದಂತಹ ಮಹಾನ್ ವ್ಯಕ್ತಿ ಜಯದೇವ ಶ್ರೀಗಳು ಎಂದು ತಿಳಿಸಿದರು.
ಮಾಜಿ ಶಾಸಕರಾದ ಶ್ರೀ.ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ, ಹಿಂದಿನ ಅನುಭವಮಂಟಪದ ಆಧಾರದ ಮೇರೆಗೆ ಇಂದಿನ ಸಂಸತ್ತು ನಿರ್ಮಾಣವಾಗಿದೆ. ಅದಕ್ಕೆ ಬಸವಣ್ಣನವರೇ ಮೂಲ. ನಮ್ಮ ಸಮುದಾಯದ ಕಟ್ಟಡವನ್ನು ಕಟ್ಟಲು ಜಯದೇವ ಶ್ರೀಗಳು ಅಂದಿನ ಕಾಲದಲ್ಲೇ ೧ ಸಾವಿರ ದೇಣಿಗೆಯನ್ನು ನೀಡಿದ್ದರು. ನಾನು ಚಿಕ್ಕವನಿದ್ದಾಗ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ಶ್ರೀಮಠಕ್ಕೆ ಹೊರಸಂಚಾರ ಬರುತ್ತಿದ್ದುದು ನೆನಪಿದೆ. ಮುರುಘಾಮಠ ದಕ್ಷಿಣ ಭಾರತದ ನವಕೋಟಿ ನಾರಾಯಣಮಠ ಎಂದು ಖ್ಯಾತಿ ಪಡೆದಿತ್ತು ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯರಾದ ಶ್ರೀ ಕೆ.ಎಸ್.ನವೀನ್ ಮಾತನಾಡಿ, ಮಧ್ಯ ಕರ್ನಾಟಕ ಭಾಗಕ್ಕೆ ಶೈಕ್ಷಣಿಕ, ಅನ್ನ ದಾಸೋಹಕ್ಕೆ ಕ್ರಾಂತಿ ಮಾಡಿದವರು ಜಯದೇವ ಶ್ರೀಗಳು. ಅವರ ಪೀಠಾರೋಹಣ ಸಂದರ್ಭದಲ್ಲಿ ಶಿಕ್ಷಣದ ಪ್ರಮಾಣ ಕಡಿಮೆಯಿರುವುದನ್ನು ಅರಿತ ಶ್ರೀಗಳು ಏನಾದರೂ ಕ್ರಾಂತಿಯಾಗಬೇಕಾದರೆ ಶಿಕ್ಷಣ ಕ್ರಾಂತಿಯಿಂದ ಮಾತ್ರ ಸಾಧ್ಯವೆಂದು ಅರಿತು ಕಾರ್ಯಗತ ಮಾಡಿದರು. ಶ್ರೀಗಳ ಜಯಂತ್ಯುತ್ಸವನ್ನು ಸರ್ಕಾರವೇ ಅದ್ಧೂರಿಯಾಗಿ ಮಾಡಬೇಕು. ಕಾರಣ ಶ್ರೀಗಳು ಮಾಡಿದ ಶೈಕ್ಷಣಿಕ ಕ್ರಾಂತಿ. ಶ್ರೀಗಳು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಭಕ್ತರಿಂದ ಬಂದ ಕಾಣಿಕೆ, ದೇಣಿಗೆಯನ್ನು ಸಂಗ್ರಹಿಸಿ ಅಲ್ಲಿಯೇ ಒಂದೊಂದು ವಿದ್ಯಾರ್ಥಿನಿಲಯವನ್ನು ನಿರ್ಮಿಸುತ್ತಿದ್ದರು. ನಮ್ಮ ರಾಜ್ಯ, ರಾಷ್ಟç ಮುಂಚೂಣಿಗೆ ಬರಲು ಶ್ರೀಗಳ ಪರಿಶ್ರಮ ಅಪರಿಮಿತವಾದದ್ದು. ಶ್ರೀಗಳ ಹೆಸರಿನಲ್ಲೇ ಜಯ ಮತ್ತು ದೇವ ಇದೆ. ಅವರನ್ನು ನೆನದರೆ ಜಯ ಮತ್ತು ದೇವರನ್ನು ಕಂಡಂತೆ ಎಂದು ನುಡಿದರು.
ಬೆಂಗಳೂರು ಬೇಲಿಮಠದ ಶ್ರೀ ಶಿವರುದ್ರ ಸ್ವಾಇಮಿಗಳು, ಶ್ರೀ ಮಾದಾರ ಚೆನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು, ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿಗಳು, ಯೋಗಗುರು ವೈದ್ಯಶ್ರೀ ಶ್ರೀ ಚೆನ್ನಬಸವಣ್ಣ, ಶ್ರೀಮತಿ ದೇವಿಕುಮಾರಿ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಶ್ರೀ ಕೆ ಎಂ ವೀರೇಶ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶ್ರೀ ಸೋಮಶೇಖರ್.ಸಿ, ನಿವೃತ್ತ ಐ.ಎ.ಎಸ್ ಅಧಿಕಾರಿಗಳು, ಜಯದೇವ ಹಾಸ್ಟೆಲ್ ಹಳೆಯ ವಿದ್ಯಾರ್ಥಿ ಬೆಂಗಳೂರು, ಕೆ.ಎಸ್.ಎಂ.ಸಿ, ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ.ಜಯವಿಭವ ಸ್ವಾಮಿ, ಐ.ಎ.ಎಸ್ ಇವರನ್ನು ಸನ್ಮಾನಿಸಲಾಯಿತು.
ಇದನ್ನೂ ಓದಿ: ಮೈ ತುಂಬಿ ಹರಿದ ನಗರಂಗೆರೆ ಕೆರೆ, ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದ ಟಿ.ರಘುಮೂರ್ತಿ | Nagarngere lake
ಸಾಂಸ್ಕೃತಿಕ ಸಂಭ್ರಮದಲ್ಲಿ ಚಿತ್ರದುರ್ಗದ ಸರಿಗಮ ಸಂಗೀತ ಪಾಠಶಾಲೆಯ ಶ್ರೀ.ಸುಚಿತ್ ಕುಲಕರ್ಣಿ ಸಂಗೀತ, ಚಂದ್ರವಳ್ಳಿ ಎಸ್.ಜೆ.ಎಂ. ಕಲಾ, ವಿಜ್ಞಾನ ಮತ್ತು ವಾಣಿಜ್ಯ (Muruga Math) ಮಹಾವಿದ್ಯಾಲಯ ಮತ್ತು ಎಸ್.ಜೆ.ಎಂ.ರೆಸಿಡೆನ್ಶಿಯಲ್ ಶಾಲೆ ವತಿಯಿಂದ ನೃತ್ಯ, ಜೀ ಕನ್ನಡ ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಲಾವಿದರಾದ ನಯನ, ಜಗ್ಗಪ್ಪ, ಅಪ್ಪಣ್ಣ ಮತ್ತು ದೀಪಿಕಾ ಹಾಸ್ಯರೂಪಕ, ಜೀ ಕನ್ನಡ ಸರಿಗಮಪ ಹೆಸರಾಂತ ಕಲಾವಿದರಾದ ಸುನೀಲ್, ವರ್ಣ ಚವ್ಹಾಣ್, ಶಿವಾನಿ ಮತ್ತು ದರ್ಶನ ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಜ್ಞಾನಯೋಗಿ ಬಳಗದವರು ಪ್ರಾರ್ಥಿಸಿ, ಜಿ.ಟಿ.ನಂದೀಶ್ ಸ್ವಾಗತಿಸಿ, ಪ್ರೊ. ಜ್ಞಾನಮೂರ್ತಿ, ಶ್ರೀನಿವಾಸ್ ನಿರೂಪಿಸಿ ವಂದಿಸಿದರು.