Chitradurga news|nammajana.com|19-11-2024
ನಮ್ಮಜನ.ಕಾಂ, ಹಿರಿಯೂರು: ತಾಲೂಕಿನ (Gayatri Reservoir) ಜವನಗೊಂಡನಹಳ್ಳಿ ಹೋಬಳಿಯ ಗಾಯಿತ್ರಿ ಜಲಾಶಯ ಬಹುತೇಕ ಭರ್ತಿಯಾಗಿದ್ದು ಜಲಾಶಯ ಕೋಡಿ ಬೀಳಲು ಕೇವಲ ಎರಡು ಅಡಿ ನೀರು ಮಾತ್ರ ಬಾಕಿಯಿದೆ.
ಶಿರಾ ತಾಲೂಕಿನ ಬುಕ್ಕಾಪಟ್ಟಣ ಹೋಬಳಿಯ ಭಾಗದಲ್ಲಿ ಕಳೆದೆರಡು ದಿನಗಳಿಂದ ಮಳೆಯಾಗುತ್ತಿದ್ದು ಅಲ್ಲಿನ ನೀರು ನೇರವಾಗಿ ಗಾಯಿತ್ರಿ ಜಲಾಶಯಕ್ಕೆ ಹರಿದು ಬರುತ್ತಿರುವುದರಿಂದ ಒಳಹರಿವು ಹೆಚ್ಚಿದ್ದು ಜಲಾಶಯ ಕೋಡಿ ಬೀಳುವ ಸಮಯ ಸನ್ನಿಹಿತವಾಗುತ್ತಿದೆ.
ಮುಂಗಾರು ಮಳೆ ಆರ್ಭಟಕ್ಕೆ ಹಲವಾರು ಜಲಾಶಯಗಳಿಗೆ ನೀರು ಹರಿದು ಬಂದಿದ್ದರು ಸಹ ಜೆಜಿ ಹಳ್ಳಿ ಹೋಬಳಿಯ (Gayatri Reservoir) ಗಾಯಿತ್ರಿ ಜಲಾಶಯಕ್ಕೆ ಮಾತ್ರ ಪ್ರಸಕ್ತ ಸಾಲಿನಲ್ಲಿ ಯಾವುದೇ ಒಳಹರಿವು ನೀರು ಬರದೇ ಆ ಭಾಗದ ಜನರ ಆತಂಕ ಹೆಚ್ಚಾಗಿತ್ತು.
ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ತಾಲೂಕಿನ ಜೆಜಿ ಹಳ್ಳಿ ಹೋಬಳಿಯ ಕರಿಯಾಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಸುವರ್ಣಮುಖಿ ನದಿಗೆ 1963 ರಲ್ಲಿ ಗಾಯಿತ್ರಿ ಜಲಾಶಯವನ್ನು ಅಡ್ಡಲಾಗಿ ನಿರ್ಮಿಸಲಾಯಿತು.
ಗಾಯಿತ್ರಿ ಜಲಾಶಯದ ನೀರಿನ ಸಂಗ್ರಹಣಾ ಸಾಮರ್ಥ್ಯವು 0.975 ಟಿಎಂಸಿ ಗಳಾಗಿದ್ದು ಇದರಲ್ಲಿ 0.337 ಟಿಎಂಸಿ ನೀರು ಬಳಕೆಗೆ ಲಭ್ಯವಿದೆ. ಪ್ರಸ್ತುತ ಜಲಾಶಯದ ನೀರಿನ ಸಂಗ್ರಹಣೆಯಲ್ಲಿ ಮೂಲ ಬದ್ದತೆಯನುಸಾರ ಹಂಚಿಕೆಯಾದ ನೀರಿನ ಪ್ರಮಾಣದ ವಿವರಗಳನ್ನು ಗಮನಿಸಿದಾಗ (Gayatri Reservoir) ಅನುಮೋದಿತ ಮಾಸ್ಟರ್ ಪ್ಲಾನ್‌ನಂತೆ ಗಾಯಿತ್ರಿ ಜಲಾಶಯದ ಅಚ್ಚುಕಟ್ಟು ಪ್ರದೇಶಕ್ಕೆ ಹಂಚಿಕೆಯಾಗಿರುವ ನೀರಿನ ಪ್ರಮಾಣ 0.45 ಟಿಎಂಸಿ ಆಗಿರುತ್ತದೆ. ಗಾಯತ್ರಿ ಜಲಾಶಯದಿಂದ ಜವನಗೊಂಡನಹಳ್ಳಿ ಮತ್ತು 37 ಗ್ರಾಮಗಳಿಗೆ ಕುಡಿಯುವ ನೀರಿಗಾಗಿ 0.028 ಟಿಎಂಸಿ ನೀರನ್ನು ಬಳಸಲು ಅನುಮತಿಸಲಾಗಿರುತ್ತದೆ.
ಏಳು ಸಾವಿರ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರು
ಗಾಯಿತ್ರಿ ಜಲಾಶಯ ಸುಮಾರು 7 ಸಾವಿರ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುತ್ತದೆ. ಜಲಾಶಯವು 145 ಅಡಿ ಎತ್ತರ ಹೊಂದಿದ್ದು 16 ಕಿಲೋ ಮೀಟರ್ ಉದ್ದದ ಬಲನಾಲೆ ಹಾಗೂ 7 ಕಿಮೀ ಉದ್ದದ ಎಡನಾಲೆ ಹೊಂದಿದೆ. ಎರಡು ಕಾಲುವೆಗಳ ಮೂಲಕ 0.67 ಟಿಎಂಸಿ ನೀರನ್ನು ಕೃಷಿಗೆ (Gayatri Reservoir) ಬಳಸಿಕೊಳ್ಳಲಾಗುತ್ತದೆ.
ಜಲಾಶಯದ ಒಟ್ಟು ಉದ್ದ 1021.53 ಮೀಟರಿದ್ದು ನೀರಿನ ಸಂಗ್ರಹಣಾ ಸಾಮರ್ಥ್ಯ 27.63 ದಶಲಕ್ಷ ಘನ ಮೀಟರ್ ಇದೆ. ಇದರಲ್ಲಿ ಉಪಯುಕ್ತವಲ್ಲದ ಸಂಗ್ರಹಣಾ ಸಾಮರ್ಥ್ಯ 9.55 ದಶಲಕ್ಷ ಘನ ಮೀಟರ್ ಮತ್ತು ಉಪಯುಕ್ತ ಸಂಗ್ರಹಣ ಸಾಮರ್ಥ್ಯ 18.08 ದಶಲಕ್ಷ ಘನ ಮೀಟರ್ ಆಗಿದೆ.ಜಲಾಶಯದ ಒಟ್ಟು ಜಲಾವೃತ ಪ್ರದೇಶ 1031 ಕಿಮೀ ಆಗಿದ್ದು ಒಟ್ಟು 2305 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನು ಹೊಂದಿರುತ್ತದೆ..
ಈ ಜಲಾಶಯದ ನೀರು ತಾಲೂಕಿನ ಜೆಜಿ ಹಳ್ಳಿಗೆ ಸೀಮಿತಗೊಳ್ಳದೇ ಪಕ್ಕದ ಶಿರಾ ತಾಲೂಕಿನ ಹುಣಸೆಹಳ್ಳಿ, ಉಜ್ಜನಕುಂಟೆ, ಮೇಳೆಕೋಟೆ ಮತ್ತಿತರ ಗ್ರಾಮದ ರೈತರ ಜಮೀನುಗಳಿಗೂ ಹರಿಯುತ್ತದೆ. ಜಲಾಶಯ ಭರ್ತಿಯಾದರೆ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟ ದಿಡೀರನೇ ಹೆಚ್ಚಳವಾಗುತ್ತದೆ.
ಗಾರೆ ಮತ್ತು ಸಿಮೆಂಟ್ ಬಳಸಿ ಈ ಜಲಾಶಯವನ್ನು ನಿರ್ಮಾಣ ಮಾಡಲಾಗಿದ್ದು ಅಂದಿನ ಚಿತ್ರದುರ್ಗ ಜಿಲ್ಲಾ ಬೋರ್ಡ್ (Gayatri Reservoir) ಅಧ್ಯಕ್ಷರಾಗಿದ್ದ ವಕೀಲ ಕೆ.ಕೆಂಚಪ್ಪನವರು ಜಯಚಾಮರಾಜ ಒಡೆಯರ್ ರನ್ನು ಆಹ್ವಾನಿಸಿ ಜಲಾಶಯಕ್ಕೆ ಅಡಿಗಲ್ಲು ಹಾಕಿಸಿದ್ದರು.
ಈ ಜಲಾಶಯವನ್ನು ಜಯಚಾಮರಾಜ ಒಡೆಯರ್ ಮನೆತನದ ಹೆಣ್ಣುಮಗಳಾದ ಗಾಯಿತ್ರಿದೇವಿಯವರ ನೆನೆಪಿಗಾಗಿ ನಿರ್ಮಾಣ ಮಾಡಿ ಅವರ ಹೆಸರನ್ನೇ ನಾಮಕರಣ ಮಾಡಲಾಗಿದೆ.
2017ರ ಅಕ್ಟೋಬರ್ ನಲ್ಲಿ ಕೋಡಿ ಬಿದ್ದಿದ್ದ ಜಲಾಶಯ ತದನಂತರ ಮಳೆ ಇಲ್ಲದ ಕಾರಣ ದೊಡ್ಡ ಪ್ರಮಾಣದಲ್ಲಿ ನೀರು ಹರಿದು ಬಂದಿರಲಿಲ್ಲ.
ಜಲಾಶಯದಲ್ಲಿ ನೀರು ಇಲ್ಲದಂತಾಗಿ ದಿನ ಕಳೆದಂತೆ ಜಾನುವಾರುಗಳ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿತ್ತು. ಅದಾದ ನಂತರ 2021 ರ ನವೆಂಬರ್ ತಿಂಗಳಲ್ಲಿ ಭಾರೀ ಪ್ರಮಾಣದಲ್ಲಿ ಅಕಾಲಿಕ ಮಳೆ ಸುರಿದಿದ್ದರಿಂದ ಜಲಾಶಯ ತುಂಬಿ ಕೋಡಿ ಬಿದ್ದಿತ್ತು. ಇದೀಗ ಮತ್ತೊಮ್ಮೆ ಜಲಾಶಯ ಕೋಡಿ ಬೀಳುವ ಆಸೆ ಆ ಭಾಗದ ಜನರಲ್ಲಿ ಗರಿಗೆದರಿದ್ದು ಇನ್ನು ಎರಡು ಅಡಿ ನೀರು ಹರಿದು ಬಂದರೆ ಮತ್ತೊಮ್ಮೆ ಗಾಯಿತ್ರಿ ಜಲಾಶಯ ಮೈದುಂಬಿ ಕೊಳ್ಳುವುದನ್ನು ನೋಡಬಹುದಾಗಿದೆ.
ಇದನ್ನೂ ಓದಿ: Tagaru kalaga | ಜನಮನ ಸೆಳೆದ ರಾಜ್ಯ ಮಟ್ಟದ ಟಗರು ಕಾಳಗ | ಡಿಚ್ಚಿ ಮೇಲೆ ಡಿಚ್ಚಿ ಹೊಡೆದುಕೊಂಡ ಟಗರುಗಳು
ವಿಶೇಷ ಮಾಹಿತಿ
ತಾಲೂಕಿನ ಮತ್ತೊಂದು ಜಲಾಶಯವಾದ ವಿವಿ ಸಾಗರ ಜಲಾಶಯಕ್ಕೆ ಕಳೆದೊಂದು ವಾರದಿಂದ ಹೇಳಿಕೊಳ್ಳುವಂತಹ ಒಳ ಹರಿವು ಇಲ್ಲದಿದ್ದರೂ ಸಹ ಜಲಾಶಯದ ನೀರಿನ ಮಟ್ಟ 128.10 ಅಡಿಯಷ್ಟಾಗಿದೆ. ಇನ್ನು 1.90 ಅಡಿ ನೀರು ಹರಿದು ಬಂದರೆ ವಿವಿ ಸಾಗರ ಜಲಾಶಯ ಮತ್ತೆ ಕೋಡಿ ಬೀಳುವ ಸುಂದರ ಕ್ಷಣಗಳಿಗೆ ತಾಲೂಕಿನ ಜನರು (Gayatri Reservoir) ಸಾಕ್ಷಿಯಾಗಲಿದ್ದಾರೆ.ಭಾನುವಾರ 462 ಕ್ಯೂಸೆಕ್ಸ್ ಒಳಹರಿವು ದಾಖಲಾಗಿದ್ದು ತಾಲೂಕಿನ ರೈತರು ಜಲಾಶಯ ಕೋಡಿ ಬೀಳುವ ದೃಶ್ಯವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.