Chitradurga news|nammajana.com|7-12-2024
ನಮ್ಮಜನ.ಕಾಂ, ಹೊಳಲ್ಕೆರೆ: ವಿಕಲಚೇತನರು ಕೀಳರಿಮೆ ತೊರೆದು ಸಮಾಜದ ಮುಖ್ಯ ವಾಹಿನಿಗೆ ಬರಲಿ ಎನ್ನುವ ಉದ್ದೇಶದಿಂದ ಸರ್ಕಾರ ಹಲವಾರು ಸಲಕರಣೆಗಳನ್ನು ನೀಡುತ್ತಿದೆ. ಎಲ್ಲವನ್ನು ಸದ್ಬಳಕೆ ಮಾಡಿಕೊಂಡು (Handicapped) ಸ್ವಾವಲಂಭಿಗಳಾಗಿ ಬದುಕಿ ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಅಂಗವಿಕಲರಿಗೆ ಕರೆ ನೀಡಿದರು.
ಪಟ್ಟಣದ ಉರ್ದು ಶಾಲೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಲಕರಣೆಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾಮಾನ್ಯರಿಗಿಂತ ವಿಕಲಚೇತನರಿಗೆ ಹೆಚ್ಚಿನ ಬುದ್ದಿಶಕ್ತಿ, ಜ್ಞಾನರ್ಜಾನೆಯಿರುತ್ತದೆ. ಹಾಗಾಗಿ ಜೀವನದಲ್ಲಿ ಮುಂದೆ ಬರುವ ಪ್ರಯತ್ನ ಮಾಡುತ್ತಿರುತ್ತಾರೆ. ಸರ್ಕಾರ ಅಂಗವಿಕಲರಲ್ಲಿ ಆತ್ಮಸ್ಥೈರ್ಯ ತುಂಬುವುದಕ್ಕಾಗಿ ಒಂದು ಕೋಟಿ 90 ಲಕ್ಷ ರೂ.ಗಳ ವೆಚ್ಚದಲ್ಲಿ ಲ್ಯಾಪ್‍ಟಾಪ್, ತ್ರಿಚಕ್ರ ವಾಹನ, ಬ್ಯಾಟರಿ ಚಾಲಿತ ವೀಲ್‍ಚೇರ್‍ಗಳನ್ನು ನೀಡಿದೆ. 180 ವಿಕಲಚೇತನರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಬೋರ್‍ವೆಲ್ ಕೊರೆಸಿ ಮೋಟಾರ್ ಕೊಡುವ ಕೆಲಸವಾಗುತ್ತಿದೆ. ಎಸ್ಟಿ. (Handicapped) ಕಾರ್ಪೊರೇಷನ್‍ನಿಂದ 200 ಕ್ಕೂ ಹೆಚ್ಚು ಪರಿಶಿಷ್ಟ ಜಾತಿಯ ವಿಕಲಚೇತನರಿಗೆ ಕೊಳವೆ ಬಾವಿಗಳನ್ನು ಮಂಜೂರು ಮಾಡಲಾಗಿದೆ. ಸರ್ಕಾರ ನಿಮಗೆ ನೀಡುವ ಸಲಕರಣೆಗಳು ದುರುಪಯೋಗವಾಗಬಾರದು. ನೀವುಗಳೇ ಬಳಸಿಕೊಳ್ಳಿ ಎಂದು ತಿಳಿಸಿದರು.
ಇದನ್ನೂ ಓದಿ: ಆಕಾಶದಲ್ಲಿ ಹಾರಾಡಿದ ಹೊಸದುರ್ಗ ಸರ್ಕಾರಿ ಶಾಲೆ ಮಕ್ಕಳು: ವಿಮಾನದಲ್ಲಿ ಪ್ರವಾಸ | Air travel
ಹೊಳಲ್ಕೆರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ್, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ವೈಶಾಲಿ, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದ ತಾಲ್ಲೂಕು ಅಧಿಕಾರಿ ದೇವರಾಜ ಈ ಸಂದರ್ಭದಲ್ಲಿ ಹಾಜರಿದ್ದರು.