Chitradurga News | Nammajana.com | 2-5-2024
ನಮ್ಮಜನ.ಕಾಂ.ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಅಬಕಾರಿ ಉಪ ಆಯುಕ್ತರಾಗಿದ್ದ ನಾಗಶಯನ ವಿರುದ್ಧ ಹೂಡಲಾಗಿದ್ದ ಭ್ರಷ್ಟಾಚಾರದ ಪ್ರಕರಣವನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಕಳೆದ 2022 ರಲ್ಲಿ ಚಿತ್ರದುರ್ಗದ “ದುರ್ಗದ ಸಿರಿ” ಹೋಟೆಲ್ ಮಾಲೀಕರಾದ ಜಿ.ಟಿ. ಬಾಬುರೆಡ್ಡಿ ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಅಂದಿನ ಅಬಕಾರಿ ಉಪ ಆಯುಕ್ತರಾಗಿದ್ದ ನಾಗಶಯನ ಅವರ ವಿರುದ್ಧ ದೂರು ನೀಡಿದ್ದರು.
ಚಿತ್ರದುರ್ಗದ ಅಬಕಾರಿ ಉಪ ಆಯುಕ್ತ
ನಾಗಶಯನ ಬಾರ್ ಗಳ ಪರವಾನಗಿ ನವೀಕರಣಕ್ಕೆ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಹಾಗೂ ಈಗಾಗಲೇ ಸ್ವಲ್ಪ ಪ್ರಮಾಣದ ಲಂಚ ನೀಡಲಾಗಿದೆ.ಲಂಚದ ಹಣವನ್ನು ಅವರ ಕಾರು ಚಾಲಕನ ಕಡೆ ನೀಡಲಾಗಿದೆ.
ಅವರು ನಮ್ಮಿಂದ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ಕೆಲವು ಆಡಿಯೋ ದಾಖಲೆಗಳನ್ನು ನೀಡಿ ಎಸಿಬಿಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಮೊಕದ್ದಮೆಯನ್ನು ದಾಖಲಿಸಿಕೊಂಡಿದ್ದ. ಎಸಿಬಿ ಅಧಿಕಾರಿಗಳು ತನಿಖೆ ನಡೆಸಿದ್ದರು.
ಆದರೆ ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದ ನಾಗಶಯನ ಅವರು ಈ ಪ್ರಕರಣದ ಕುರಿತು ಹೈಕೋರ್ಟ್ ಮೊರೆ ಹೋಗಿದ್ದರು. ತಮ್ಮ ಮೇಲೆ ಮಾಡಲಾಗಿರುವ ಭ್ರಷ್ಟಾಚಾರದ ಆರೋಪಗಳೆಲ್ಲವೂ ಸಂಪೂರ್ಣ ಸುಳ್ಳು ಯಾವುದೇ ತಪ್ಪು ಮಾಡಿಲ್ಲ ಹಾಗೂ ಯಾರಿಂದಲೂ ಹಣ ಪಡೆದಿಲ್ಲ ದೂರುದಾರರು ಮಾಡಿರುವ ಆರೋಪಗಳು ಎಲ್ಲಾ ನಿರಾಧಾರವಾಗಿವೆ ಎಂದು ವಾದಿಸಿದ್ದರು.
ಇದನ್ನೂ ಓದಿ: ಜಾತ್ರೆಯಲ್ಲಿ ಕೋಣ ಗುದ್ದಿ ವ್ಯಕ್ತಿ ಸಾವು
ಅಬಕಾರಿ ಅಧಿಕಾರಿ ನಾಗಶಯನ ಅವರ ವಾದವನ್ನು ಮಾನ್ಯ ಮಾಡಿದ್ದ ಹೈ ಕೋರ್ಟ್ ಇಡೀ ಪ್ರಕರಣವನ್ನು ರದ್ಧು ಗೊಳಿಸಿತ್ತು. ನಂತರ ದೂರುದಾರ ಬಾಬುರೆಡ್ಡಿ ಹೈ ಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಮೊಕದ್ದಮೆಯ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯ ಮಂಗಳವಾರ (30ಏಪ್ರಿಲ್ 2024)ಸಂಜೆ ತೀರ್ಪು ಪ್ರಕಟಿಸಿ ಕರ್ನಾಟಕ ಹೈ ಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ.
ಅಬಕಾರಿ ಅಧಿಕಾರಿ ನಾಗಶಯನ ಅವರು ಬಾರ್ ಗಳ ಪರವಾನಗಿ ನವೀಕರಣ ಸೇರಿದಂತೆ ಸಂಬಂಧಿಸಿದ ದೂರುದಾರರ ಯಾವುದೇ ಕಡತಗಳನ್ನು ಕಚೇರಿಯಲ್ಲಿ ಬಾಕಿ ಉಳಿಸಿಕೊಂಡಿಲ್ಲ ಹಾಗೂ ಯಾವುದೇ ಲಂಚ ಪಡೆದಿಲ್ಲ ಆದರೂ ಮೊಕದ್ದಮೆ ದಾಖಲಿಸಿರುವುದು ಸರಿಯಲ್ಲ ಎಂದು ಕೋರ್ಟ್ ನೀಡಿರುವ ತೀರ್ಪಿನಲ್ಲಿ ಉಲ್ಲೇಖಿಸಿದೆ.