Chitradurga news|nammajana.com|16-6-2024
ನಮ್ಮಜನ.ಕಾಂ, ವಿಶೇಷ ಲೇಖನ: ಅರುಣ್ ಜೋಳದ ಕೂಡ್ಲಿಗಿ
*ಒಂದು ಗಂಡಿಗೆ ಒಂದೇ ಹೆಣ್ಣು, ಒಂದು ಹೆಣ್ಣಿಗೆ ಒಬ್ಬನೇ ಗಂಡು ಎನ್ನುವ ಭಾರತೀಯ ಸೂತ್ರ ಛಿದ್ರಗೊಳ್ಳುತ್ತಿದೆಯೇ…*
‘ಗಂಡಿ’ನ ಅಹಮಿಕೆ, ಯಾಜಮಾನಿಕೆಯ ನಿಯಂತ್ರಣದಿಂದ ‘ಹೆಣ್ಣು’ ಸ್ವತಂತ್ರವಾಗಿ ಬದುಕುವ ದಾರಿಯ ಒಂದು ಮಾರ್ಗವಾಗಿ ‘ಡೈವೋರ್ಸ್’ ನ್ನು ವ್ಯಾಖ್ಯಾನಿಸಲಾಗುತ್ತಿದೆ. ಇದು ಪ್ರಭಾವಿ ಕಾರಣಗಳಲ್ಲಿ ಒಂದಾದರೂ ಇದರ ಜತೆ ಹೆಣ್ಣಿಗೆ (Arun jolada kudligi) ಸಿಗುವ ಎಜುಕೇಷನ್, ಆಧುನಿಕ ಮನೋಭಾವ, ಬದಲಾದ ಜೀವನ ಶೈಲಿ, ಸ್ವಾತಂತ್ರ್ಯದ ನಡಾವಳಿಕೆ ಹೆಚ್ಚಾದಂತೆ ಹೆಣ್ಣಿನ ಆಯ್ಕೆ ಮತ್ತು ನಿರಾಕರಣೆಗಳು ಮುಕ್ತವಾಗುತ್ತವೆ. ಇದು ಆರೋಗ್ಯಕರ ಸಮಾಜದ ಲಕ್ಷಣ.
ಜೀವನಪೂರ್ತಿ ಒಂದು ಗಂಡಿಗೆ ಒಂದೇ ಹೆಣ್ಣು, ಒಂದು ಹೆಣ್ಣಿಗೆ ಒಬ್ಬನೇ ಗಂಡು ಎನ್ನುವ ಭಾರತೀಯ ಸೂತ್ರ ಛಿದ್ರಗೊಳ್ಳುತ್ತಿದೆ. ಇದು ಜೈವಿಕವಾಗಿಯೂ ಅಸಹಜ ಅಥವಾ ಪ್ರಜ್ಞಾಪೂರ್ವಕ/ ಒತ್ತಾಯಪೂರ್ವಕವಾದ ನಡಾವಳಿಕೆ. ಹೀಗಾಗಿ ಗಂಡು ಅಥವಾ ಹೆಣ್ಣಿನಲ್ಲಿ ಒಂದು ಹೆಣ್ಣು ಅಥವಾ ಒಬ್ಬ ಗಂಡಿಗಿಂತ ಹಲವು ಹೆಣ್ಣು ಗಂಡುಗಳ ಜತೆ ಬೆರೆಯುವುದು ಆಧುನಿಕ ಜೀವನ ಶೈಲಿಯಾಗಿ ಬದಲಾಗುತ್ತಿದೆ. ಈ ಬದಲಾವಣೆ ಬಯಸುವ (Arun jolada kudligi) ಆಧುನಿಕ ಬದುಕಲ್ಲಿ ಎಲ್ಲಾ ಉಪಭೋಗಿ ವಸ್ತು ಸಂಗತಿಗಳನ್ನು ಅಲ್ಪಕಾಲ ಮಾತ್ರ ಬಳಸುತ್ತಾ ಸದಾ Update Version ಬಳಕೆಯೇ ಹೊಸ ಬಗೆಯ ಜೀವನ ಪದ್ದತಿ ಎನ್ನುವಂತಾದಾಗಿದೆ. ಅಂದರೆ ದಿನ ದಿನವೂ ಹಳೆಯದರ ಸಂಬಂಧ ಕಡಿದುಕೊಂಡು ಹೊಸತಾಗುವುದು.
ಪ್ರೀತಿ ಸ್ನೇಹ ನಂಬಿಕೆ ವಿಶ್ವಾಸದ ನೆಲೆಯಲ್ಲಿ ಒಂದಷ್ಟು ಸಂಬಂಧಗಳು ಉಳಿಯಬಹುದಾದರೂ..ಇನ್ನುಮುಂದೆ ದೀರ್ಘಕಾಲೀನ ಬಾಳಿಕೆ ಬರುವ ವಸ್ತು ಸಂಗತಿಗಳಾಗಲಿ, ಮನುಷ್ಯ ಸಂಬಂಧಗಳಾಗಲಿ ಬಹುಕಾಲ ಉಳಿಯಲು ಸಾಧ್ಯವಿಲ್ಲ. ಎಲ್ಲವೂ ಅಲ್ಪಕಾಲೀನ ಸುಖಗಳಾಗಿ ಮಾರ್ಪಡುತ್ತವೆ. ಈ ಹೊತ್ತು ಹಳತು-ಹೊಸತಿನ ಪರಿಕಲ್ಪನೆಗಳನ್ನು ಮಾರುಕಟ್ಟೆಯ ಜಗತ್ತು ಪೂರ್ಣ ಬದಲಿಸಿದೆ.
ಅಲ್ಪಕಾಲೀನ ಬಳಕೆಯ ಜತೆ ಇದೀಗ ಮಾರುಕಟ್ಟೆ ‘Use and Through’ ಬಳಸು ಬಿಸಾಡು ಎನ್ನುವ ಹಂತಕ್ಕೆ ಬಂದಿದೆ. ಅಂದರೆ ಬಳಸಿ ಬಿಸಾಡಿದರೆ ಮಾರುಕಟ್ಟೆಯ ಉತ್ಪಾದಿತ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಬದುಕಿನಲ್ಲಿ ಅಗತ್ಯಕ್ಕೆ ಬೇಕಾಗುವ ಊಟ ಉಡುಪು ವಸತಿಯನ್ನು ಮೊದಲುಗೊಂಡು ದಿನ ಬಳಕೆಯ ಎಲ್ಲ ಬಗೆಯ ವಸ್ತುಗಳಲ್ಲಿಯೂ ಬಹು ಆಯ್ಕೆಯ ಮುಕ್ತ ಸ್ವಾತಂತ್ರ್ಯ ನೀಡಿ ಹೆಣ್ಣು-ಗಂಡಿನ ವಿಷಯದಲ್ಲಿ ಮಾತ್ರ ಏಕೈಕ ಆಯ್ಕೆಗೆ ಸೀಮಿತಗೊಳಿಸಿದರೆ ಇದು ಹೇಗೆ ಬಹುಕಾಲ ಬಾಳಲು ಸಾಧ್ಯ?
ಹೀಗಿರುವಾಗ ದೀರ್ಘಕಾಲೀನ ಬಾಳಿಕೆಗೆಂದು ಮಾಡಿದ ಮದುವೆಗಳು ಅಲ್ಪಕಾಲೀನ ಆಯುಷ್ಯ ಪಡೆಯುತ್ತಿವೆ. ಈ ಎಲ್ಲಾ ಕಾರಣಗಳಿಂದಾಗಿ
ಸಹಜವಾಗಿ ಡೈವೋರ್ಸ್ ಗಳು ಏರಿಕೆ ಕ್ರಮದಲ್ಲಿ ಹೆಚ್ಚುತ್ತವೆ. ಇದು ಅಪರಾಧವೂ ಅಲ್ಲ ಅನೈತಿಕವೂ ಅಲ್ಲ. ಕಾಲದ ಪಲ್ಲಟವಷ್ಟೆ. ಅಚ್ಚರಿಯಾಗಲಿ ವಿಶೇಷವಾಗಲಿ ಏನೂ ಇಲ್ಲ. ನಮ್ಮಗಳ ಹಿಪಾಕ್ರಸಿಯನ್ನು ಬದಿಗೆ ಸರಿಸಿ
ಈ ಬದಲಾವಣೆಯನ್ನು ಮುಕ್ತವಾಗಿ ಸ್ವಾಗತಿಸಬೇಕಷ್ಟೆ.
*ಅಜೋ*