Chitradurga news|nammajana.com|11-6-2024
ಕಣ್ಣು, ಕಿವಿ ಮತ್ತು ಎದೆಯ ಭಾಗಕ್ಕೆ ಪರಚಿ ಹೆಚ್ಚಿನ ಗಾಯ* ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಜಿಲ್ಲಾ ಆಸ್ಪತ್ರೆಗೆ ದಾಖಲು
ನಮ್ಮಜನ.ಕಾಂ, ಹೊಸದುರ್ಗ: ಹೊಸದುರ್ಗಕ್ಕೂ ಕರಡಿಗು (Bear attack in Hosdurga) ಅವಿನಾಭಾವ ನಂಟು , ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕರಡಿಗಳ ಹಾವಳಿ ಹೆಚ್ಚಾಗಿದ್ದು, ಹಾಡಹಗಲೇ ಹೊಸದುರ್ಗ ಪಟ್ಟಣದ ಹಲವು ಬಡಾವಣೆಗಳಲ್ಲಿ ಕರಡಿಗಳು ಕಾಣಿಸಿಕೊಳ್ಳುತ್ತಿದ್ದು ನಿತ್ಯವೂ ಜನರು ಆತಂಕದಲ್ಲಿಯೇ ಜೀವನ ದೂಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕರಡಿ ದಾಳಿಗೆ ರೈತನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.
ತಾಲೂಕಿನ ಯಲಕ್ಕಪ್ಪನಹಟ್ಟಿ ಸಮೀಪದ ಸಿದ್ದಪ್ಪನಬೆಟ್ಟದ (Bear attack in Hosdurga) ಬಳಿಯಿರುವ ಜಮೀನಿಗೆ ಭಾನುವಾರ ರಾತ್ರಿ ದಿನೇಶ್ ಎಂಬ ರೈತ ತೆರಳುತ್ತಿದ್ದ ವೇಳೆ ಕರಡಿಯೊಂದು ಏಕಾಏಕಿ ದಾಳಿ ಮಾಡಿ, ಗಂಭೀರ ಗಾಯಗೊಳಿಸಿದೆ. ರೈತನ ಮೇಲೆ ಎರಗಿದ ಕರಡಿ ಮುಖ, ಕಣ್ಣು, ಕಿವಿ, ಎದೆ ಭಾಗಕ್ಕೆ ಪರಚಿ ಗಂಭೀರ ಗಾಯಗೊಳಿಸಿದ ಘಟನೆ ಸಾರ್ವಜನಿಕರನ್ನು ಬೆಚ್ಚಿ ಬೀಳುವಂತೆ ಮಾಡಿದೆ.
ಜೋರಾಗಿ ಕಿರುಚಾಡಿದ್ದರಿಂದ ಕರಡಿ ಬಿಟ್ಟು ಓಡಿಹೋಗಿದೆ. ಗಾಯಗೊಂಡಿದ್ದ ವ್ಯಕ್ತಿಯನ್ನು ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಹೆಸರಾಂತ ಕೀಲು ಮೂಳೆ ವೈದ್ಯರಾದ ಡಾಕ್ಟರ್ ಸಂಜಯ್ ಹಾಗೂ ಸಿಬ್ಬಂದಿ. ಗಾಯಾಳಿಗೆ ಹೊಲಿಗೆ ಹಾಕಿ ಚಿಕಿತ್ಸೆ ನೀಡಿದರು. ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ತಾಲೂಕಿನ ಬಹುತೇಕ ಗ್ರಾಮೀಣ ಭಾಗದಲ್ಲಿ ಆಗಾಗ ಕರಡಿಗಳು ಕಾಣಿಸಿಕೊಳ್ಳುತ್ತಿದ್ದು, ರೈತರು ಜೀವ ಬಿಗಿ ಹಿಡಿದುಕೊಂಡು ಜಮೀನುಗಳಿಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
“ಕರಡಿಗಳು ಇವೆ ಬೆಳಗಿನ ವಾಯು ವಿಹಾರಿಗಳಿಗೆ ಎಚ್ಚರ (Bear attack in Hosdurga)
ಕರಡಿಗಳ ಹಾವಳಿ ಬಗ್ಗೆ ಸಾರ್ವಜನಿಕರು ಹಲವು ಬಾರಿ ಅರಣ್ಯ ಇಲಾಖೆಗೆ ದೂರು ನೀಡುತ್ತಲೆ ಬಂದಿದ್ದಾರೆ. ಪಟ್ಟಣದ ಜಂಗಮ ನಗರ, ಕುಂಚಿಟಿಗ ಮಠ, ಸಿದ್ದರಾಮನಗರ, ಶಾಂತಿನಗರ ಇನ್ನಿತರ ಕಡೆಗಳಲ್ಲಿ ವರ್ಷದ ಹಿಂದೆ ಕಾಣಿಸಿಕೊಂಡಿದ್ದ ಕರಡಿಗಳನ್ನು (Bear attack in Hosdurga) ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಿಡಿದು ಅರಣ್ಯಕ್ಕೆ ಬಿಡುವಲ್ಲಿ ಯಶಸ್ವಿಯಾಗಿದ್ದರು. ಮತ್ತೆ ಇದೀಗ, ಹಲವು ಕಡೆಗಳಲ್ಲಿ ಕರಡಿಗಳು ಕಾಣಿಸಿಕೊಳ್ಳುತ್ತಿದ್ದು, ಕೂಡಲೇ ಅರಣ್ಯ ಇಲಾಖೆಯವರು ಎಚ್ಚೆತ್ತುಕೊಂಡು ಬೋನುಗಳನ್ನು ಇಟ್ಟು ಕರಡಿಗಳನ್ನು ಹಿಡಿದು ಅರಣ್ಯಕ್ಕೆ ಬಿಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.