Chitradurga news | nammajana.com | 20-09-2025
ನಮ್ಮಜನ.ಕಾಂ,ಚಳ್ಳಕೆರೆ: ಚಳ್ಳಕೆರೆ(Challakere KDP) ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ತ್ರೈಮಾಸಿಕ ಪ್ರಗತಿಪರಿಶೀಲನಾ ಸಭೆ ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ಅಧ್ಯಕ್ಷತೆಯಲ್ಲಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಸುಮಾರು ಐದು ಗಂಟೆಗಳ ಕಾಲ ಸಭೆ ನಡೆದಿದ್ದು, ವಿವಿಧ ಇಲಾಖೆಯ ಪ್ರಗತಿಯನ್ನು ಅವಲೋಕಿಸಿದ ಶಾಸಕರು ಕೆಲವೊಂದು ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಕ್ಕೆ ಬೇಸರ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡರು.
ಇದನ್ನೂ ಓದಿ: Government School Teachers: ರಾಜ್ಯದ ಅನುದಾನಿತ ಸರ್ಕಾರಿ ಶಾಲೆ ಶಿಕ್ಷಕರಿಗೆ ಗುಡ್ ನ್ಯೂಸ್ ಕೊಟ್ಟ ಸಚಿವ ಮಧು ಬಂಗಾರಪ್ಪ
ರಾಜ್ಯ ಸರ್ಕಾರ ಜನರಹಿತಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ನೀಡಿದೆ. ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಸರ್ಕಾರದ ನಿಯಮಗಳಾನುಸಾರ ಯೋಜನೆಗಳನ್ನು ಅನುಷ್ಠಾನಗೊಳಿಸಿ ಜನರ ಸಂಕಷ್ಟಗಳಿಗೆ ನೆರವಾಗಬೇಕಿದೆ. ಆದರೆ, ಪ್ರಗತಿಪರಿಶೀಲನಾ ಸಭೆಯಲ್ಲಿ ಕೆಲವೊಂದು ಅಧಿಕಾರಿಗಳು ನೀಡುವ ಮಾಹಿತಿ ಸತ್ಯಕ್ಕೆ ದೂರವಾಗಿದ್ದು ನೋವುತರುವ ವಿಷಯವಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಶಾಸಕರು ಬೇಸರ:
ಜನರಿಂದ ಆಯ್ಕೆಯಾದ ನಾವುಗಳು ಜನರಿಗೋಸ್ಕರ ಕಾರ್ಯನಿರ್ವಹಿಸಬೇಕಿದೆ. ರಾಜ್ಯ ಸರ್ಕಾರ ಈಗಾಗಲೇ ಕೆಳಹಂತದ ಅನೇಕ ವರ್ಗಗಳಿಗೆ ಸೌಲಭ್ಯ ನೀಡುವ ನಿಟ್ಟಿನಲ್ಲಿ ಕಾಯೋನ್ಮುಖವಾಗಿದೆ. ಆದರೆ, ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಪಟ್ಟ ವಿಷಯಗಳ ಬಗ್ಗೆ ಅವರು ನೀಡುವ ಅಂಕಿಅಂಶಗಳಿಂದ ಅವರ ನಿರ್ಲಕ್ಷ್ಯತನವನ್ನು ತೋರುತ್ತದೆ.
ಸರ್ಕಾರ ಎಲ್ಲಾ ರೀತಿಯ ಸೌಲಭ್ಯ ನೀಡಿದರೂ ಅಧಿಕಾರಿಗಳು ಅನುಷ್ಠಾನಗೊಳಿಸದೇ ಇದ್ದಲ್ಲಿ ಜನರು ಅದರ ಕಷ್ಟವನ್ನು ನಿವಾರಣೆ ಮಾಡಬೇಕಾಗುತ್ತದೆ. ಸರ್ಕಾರದ ನಿಯಮಗಳಲ್ಲಿ ಬಡಜನರ ಕಲ್ಯಾಣಕ್ಕಾಗಿ ಅಧಿಕಾರಿಗಳು ಶ್ರಮಿಸಬೇಕೆ ವಿನಃ ಯಾವುದೋ ಕಾನೂನು ಹೇಳಿ ಜನರಿಗೆ ಸೌಲಭ್ಯಗಳು ದೊರೆಯದಂತೆ ಮಾಡುವುದು ಸರಿಯಲ್ಲವೆಂದರು.
ಕೃಷಿ ಇಲಾಖೆ ಸಹಾಯಕ(Challakere KDP) ನಿರ್ದೇಶಕ ಡಾ.ಜೆ.ಅಶೋಕ್ ಮಾಹಿತಿ ನೀಡಿ, ಪ್ರಸ್ತುತ ವರ್ಷ ವಾಡಿಕೆಯಂತೆ ಮಳೆಯಾಗದೆ ಅಭಾವ ಎದುರಿಸುತ್ತಿದ್ದು, ೪೯ ಸಾವಿರ ಹೆಕ್ಟೇರ್‌ನಲ್ಲಿ ಶೇಂಗಾ ಬಿತ್ತನೆ, ೭೯೦೦ ಹೆಕ್ಟೇರ್‌ನಲ್ಲಿ ತೊಗರಿ ಬಿತ್ತನೆ, ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳ ಬಿತ್ತನೆಯಾಗಿದೆ. ಸಕಾಲದಲ್ಲಿ ಮಳೆಬಾರದ ಕಾರಣ ರೈತರ ಬೆಳೆಗಳು ಒಣಗಿವೆ. ಈಗಿರುವ ೪೯ ಹೆಕ್ಟೇರ್ ಪ್ರದೇಶದ ಅಲ್ಲಲ್ಲಿ ಬೆಂಕಿ, ಸಿಡೆರೋಗ ಕಾಣಿಸಿಕೊಂಡಿದೆ. ಈ ಬಗ್ಗೆ ಈಗಾಗಲೇ ಅಧಿಕಾರಿಗಳು ಮಾಹಿತಿ ನೀಡಿ ಜಾಗೃತಿ ಮೂಡಿಸಲಾಗಿದೆ. ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಲು ಇಲಾಖೆ ಮುಂದಾಗಿದೆ ಎಂದರು.
ಶಾಸಕ ಟಿ.ರಘುಮುರ್ತಿ ಮಾತನಾಡಿ, ಸರ್ಕಾರ ಕೃಷಿ, ಕಂದಾಯ, ತೋಟಗಾರಿಕೆ, ರೇಷ್ಮೆ ಹಾಗೂ ಇತರೆ ಇಲಾಖೆ ಸಹಯೋಗದೊಂದಿಗೆ ರೈತ ಬೆಳೆಗಳನ್ನು ಯಾಫ್ ಮೂಲಕ ದಾಖಲಿಸಿ ಬೆಳೆನಷ್ಟ ಪರಿಹಾರ ಪಡೆಯುವಂತೆ ಸಲಹೆ ನೀಡಿದೆ. ಆದರೆ, ಬಹುತೇಕ ಗ್ರಾಮಗಳಲ್ಲಿ ರೈತರಿಗೆ ಯಾವುದೇ ಮಾಹಿತಿ ಇದುವರೆಗೂ ಲಭ್ಯವಾಗಿಲ್ಲ. ಪ್ರಸ್ತುತ ವರ್ಷವೂ ನಿರೀಕ್ಷಿತ ಮಟ್ಟದಲ್ಲಿ ರೈತರಿಗೆ ಬೆಳೆವಿಮೆ ಪಾವತಿ ಸಾಧ್ಯವಾಗಿಲ್ಲವೆಂದರು.
ಈರುಳ್ಳಿ ಬೆಲೆ ಕುಸಿತದಿಂದ ರೈತರಿಗೆ ಸಂಕಷ್ಟ:
ತೋಟಗಾರಿಕೆ ಮಾಹಿತಿ ನೀಡಿ, ಕ್ಷೇತ್ರದಾದ್ಯಂತ ಒಟ್ಟು ೭೪ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆ ಬಿತ್ತನೆಯಾಗಿದ್ದು ಅದರಲ್ಲಿ ೨೭ ಸಾವಿರಹೆಕ್ಟೇರ್ ಪ್ರದೇಶದ ಈರುಳ್ಳಿ ಬೆಳೆ ನಷ್ಟವಾಗಿದೆ. ಬಹುತೇಕ ಈರುಳ್ಳಿ ಬೆಳೆಗಾರರು ಬೆಲೆ ಸಿಗದೆ ನಷ್ಟಕ್ಕೆ ಒಳಗಾಗಿದ್ಧಾರೆ. ಉಳಿದ ಪ್ರದೇಶದಲ್ಲಿರುವ ಈರುಳ್ಳಿ ಬೆಳೆಗೆ ನಿರೀಕ್ಷಿತ ಬೆಲೆ ದೊರೆಯುತ್ತಿಲ್ಲ. ದಿಢೀರನೆ ಈರುಳ್ಳಿ ಬೆಲೆಕುಸಿತದ ಕಾರಣ ರೈತರು ಸಂಕಷ್ಟವನ್ನು ಎದುರಿಸುತ್ತಿದ್ಧಾರೆ.
ಇದನ್ನೂ ಓದಿ: Challakere: ಬೆಲೆ ಕುಸಿತ, ಈರುಳ್ಳಿ, ಟೊಮೆಟೊ ರಸ್ತೆಗೆ ಸುರಿದು ರೈತರ ಪ್ರತಿಭಟನೆ
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ, ೭೪ ಸಾವಿರ ಹೆಕ್ಟೇರ್ ಈರುಳ್ಳಿ ಸಂಪೂರ್ಣವಾಗಿ ನೆಲಕಚ್ಚಿದೆ ಎಂದು ಅಧಿಕಾರಿಗಳಿಗೆ ಮಾಹಿತಿ ನೀಡಿದ ಬಗ್ಗೆ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ವರದಿ ನೀಡಿ ನಾನು ಸಂಬಂಧಪಟ್ಟ ಸಚಿವರು, ಅಧಿಕಾರಿಗಳೊಂದಿಗೆ ಚರ್ಚಿಸುವೆ ಎಂದರು.
ರೇಷ್ಮೆ ಇಲಾಖೆ ಅಧಿಕಾರಿ ರಾಧ ಮಾಹಿತಿ ನೀಡಿ, ಈಗಾಗಲೇ ತಾಲ್ಲೂಕಿನಾದ್ಯಂತ ರೇಷ್ಮೆ ಬೆಳೆ ಹೆಚ್ಚು ಆದ್ಯತೆ ನೀಡುವಂತೆ ರೈತರನ್ನು ಮನವಲಿಸಲಾಗುತ್ತಿದೆ ಎಂದರು.
ಎಸ್ಎಸ್ಎಲ್ ಸಿ ಫಲಿತಾಂಶ ಸುಧಾರಿಸಿ:
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಮಾಹಿತಿ ನೀಡಿ, ಈಗಾಗಲೇ ಶಾಸಕ ಸೂಚನೆಯಂತೆ ಕ್ಷೇತ್ರದಾದ್ಯಂತ ಸುಮಾರು ೧೦೦ಕ್ಕೂ ಹೆಚ್ಚು ಕೊಠಡಿಗಳ ರಿಪೇರಿಕಾರ್ಯ ಮುಕ್ತಾಯವಾಗಿದೆ. ಹೆಚ್ಚುವರಿ ಕೊಠಡಿ ನಿರ್ಮಾಣ ಪ್ರಗತಿಯಲ್ಲಿದೆ. ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಉತ್ತಮ ಪಡಿಸಲು ವಿಶೇಷ ತರಗತಿಗಳನ್ನು ನಡೆಸಲಾಗುತ್ತಿದೆ. ಕೆಲವೆಡೆ ಶಾಲೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಾಗಿದ್ದು ಅತಿಥಿ ಶಿಕ್ಷಕರನ್ನು ಅನಿವಾರ್ಯವಾಗಿ ಕೆಲಸದಿಂದ ತೆಗೆಯಬೇಕಾಗಿದೆ ಎಂದರು.
ಶಾಸಕ ಟಿ.ರಘುಮೂರ್ತಿ ಯಾವುದೇ ಕಾರಣಕ್ಕೂ ಅತಿಥಿ ಶಿಕ್ಷಕರನ್ನು ಕೆಲಸದಿಂದ ಕೈಬಿಡದೆ ಖಾಲಿ ಇರುವ ಕಡೆ ನೇಮಿಸಿ ಅವರಿಗೆ ಸೌಲಭ್ಯ ನೀಡಬೇಕೆಂದರು.
ಅತಿಥಿ ಶಿಕ್ಷಕರನ್ನು ಕೆಲಸದಿಂದ ಕೈಬಿಡದೆ ಖಾಲಿ ಇರುವ ಕಡೆ ನೇಮಿಸಿ:
ಉಳಿದಂತೆ ವಿವಿಧ ಇಲಾಖೆಗಳಿಂದ(Challakere KDP) ಮಾಹಿತಿ ಪಡೆದ ಶಾಸಕರು ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರಿ ಸಭೆಗೆ ಗೈರಾಗಿದ್ದು ಅವರಿಗೆ ನೋಟಿಸ್ ನೀಡುವಂತೆ ಇಒಗೆ ಸೂಚಿಸಿದರು.
ಕೃಷಿ ಇಲಾಖೆ ಜಂಟಿನಿರ್ದೇಶಕ, ಆಡಳಿತಾಧಿಕಾರಿ ಡಾ.ಬಿ.ಮಂಜುನಾಥ, ತಹಶೀಲ್ಧಾರ್ ರೇಹಾನ್‌ಪಾಷ, ಚಿತ್ರದುರ್ಗ ತಹಶೀಲ್ಧಾರ್ ಗೋವಿಂದರಾಜು, ಇಒ ಎಚ್.ಶಶಿಧರ, ಚಿತ್ರದುರ್ಗ ಇಒ ರವಿಕುಮಾರ್, ಪೌರಾಯುಕ್ತ ಜಗರೆಡ್ಡಿ, ನಗರಸಭೆ ಅಧ್ಯಕ್ಷೆ ಬಿ.ಶಿಲ್ಪಮುರುಳಿ, ಗ್ಯಾರಂಟಿ ಸಮಿತಿ ಅಧ್ಯಕ್ಷ ಗದ್ದಿಗೆತಿಪ್ಪೇಸ್ವಾಮಿ, ಕೆಡಿಪಿಸದಸ್ಯರಾದ ಅಂಗಡಿರಮೇಶ್, ಸುರೇಶ್‌ಕುಮಾರ್, ನೇತ್ರಾವತಿ, ವಿಶ್ವನಾಥರೆಡ್ಡಿ, ಜಾಕೀರ್‌ಹುಸೇನ್, ಬಸವರಾಜು ಮುಂತಾದವರು ಉಪಸ್ಥಿತರಿದ್ದರು.
