Chitradurga News | Nammajana.com | 7-5-2024
ನಮ್ಮಜನ.ಕಾಂ. ಚಿತ್ರದುರ್ಗ: ಕೋಟೆ ನಾಡು ಚಿತ್ರದುರ್ಗದಲ್ಲಿ ಸಂಪ್ರದಾಯದಂತೆ ನಗರದ ರಾಜಬೀದಿ ದೊಡ್ಡಪೇಟೆಯಲ್ಲಿ ಮಂಗಳವಾರ ಶಕ್ತಿ ದೇವತೆಗಳಾದ ಅಕ್ಕ ಬರಗೇರಮ್ಮ ಮತ್ತು ತಂಗಿ ತಿಪ್ಪಿನಘಟ್ಟಮ್ಮ ದೇವಿಯರ “ಭೇಟಿ ಉತ್ಸವ” ಭಕ್ತರ ಸಾಗರದ ಮಧ್ಯೆ ನೆರವೇರಿತು.
ನಗರದ ಅಧಿದೇವತೆ ಏಕನಾಥೇಶ್ವರಿ ಭಾನುವಾರ ಮುಂಜಾನೆ ಮೇಲುದುರ್ಗದ ದೇವಸ್ಥಾನಕ್ಕೆ ತೆರಳಿತು. ಗಂಗಾ ಪೂಜೆ ನೆರವೇರಿಸಿ ಪೂಜೆ ಸಲ್ಲಿಸಿದ ಬಳಿಕ ಇತ್ತ ದೊಡ್ಡಪೇಟೆಯಲ್ಲಿ ಭೇಟಿ ಉತ್ಸವದ ಸಿದ್ಧತೆಗಳು ಪ್ರಾರಂಭವಾದವು. ಉತ್ಸವವನ್ನು ಕಣ್ತುಂಬಿಕೊಳ್ಳುವ ಭಕ್ತರಿಗೆ ಯಾವುದೇ ಸಮಸ್ಯೆ ಆಗದಂತೆ ಸಕಲ ವ್ಯವಸ್ಥೆ ಮಾಡಲಾಗಿತ್ತು.

ನಗರದ ಪಶ್ಚಿಮದಲ್ಲಿ ನೆಲೆಸಿರುವ ಬರಗೇರಮ್ಮ
ಹಾಗೂ ಪೂರ್ವದಲ್ಲಿ ನೆಲೆಸಿರುವ ತಿಪ್ಪಿನಘಟ್ಟಮ್ಮ ರಾತ್ರಿ 9-41 ನಿಮಿಷದಿಂದ 9-45 ನಿಮಿಷದವರೆಗೆ (4 ನಿಮಿಷ) ಪರಸ್ಪರ ಭೇಟಿಯಾದರು.
ಉಚ್ಚಂಗಿಯಲ್ಲಮ್ಮ ದೇವಸ್ಥಾನದ ಕಡೆಯಿಂದ ಶ್ರೀ ಬರಗೇರಮ್ಮ ಹಾಗೂ ರಂಗಯ್ಯನ ಬಾಗಿಲ ಕಡೆಯಿಂದ ತಿಪ್ಪಿನಘಟ್ಟಮ್ಮ ದೇವಿಯರು ಎದುರುಗೊಳ್ಳುವುದು ಕೆಲವೇ ಕ್ಷಣಗಳು ಮಾತ್ರವಾದರೂ ಇದೊಂದು ಸ್ಮರಣೀಯ ಕ್ಷಣ ಎನ್ನಬಹುದು.ಈ ಕ್ಷಣವನ್ನು ಕಂಡ ಭಕ್ತರು ಏಕಕಾಲಕ್ಕೆ ಅಕ್ಕ–ತಂಗಿಯರಿಗೆ ನಮಿಸಿ ತಮ್ಮ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸಿಕೊಳ್ಳುವ ಜೊತೆ ಎರಡು ದೈವಗಳ ಪ್ರೀತಿ ಕಂಡು ಪುನೀತರಾದರು.
ಶೃಂಗಾರಗೊಂಡಿದ್ದ ದೊಡ್ಡಪೇಟೆ
ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು, ಹಸಿರು ತೋರಣ, ಬ್ಯಾರಿಕೇಡ್ ನಿರ್ಮಾಣ ಸೇರಿ ಎಲ್ಲವೂ ದೊಡ್ಡಪೇಟೆಯಲ್ಲಿ ಸಂಜೆಯಿಂದಲೇ ಅಂತಿಮ ಹಂತದ ಸಿದ್ಧತೆಗಳು ಪ್ರಾರಂಭವಾದವು.ಕತ್ತಲು ಅವರಿಸುತ್ತಲೇ ಸಂಜೆವ ಏಳು ಗಂಟೆಯಿಂದಲೇ ದೊಡ್ಡ ರಾಜಬೀದಿಯಲ್ಲಿ ಜಮಾಯಿಸುತ್ತಿದ್ದ ಭಕ್ತರ ಸಂಖ್ಯೆ ಕ್ಷಣದಿಂದ ಕ್ಷಣಕ್ಕೆ ಹೆಚ್ಚಾಯಿತು.
ಅಕ್ಕ ತಂಗಿ ಭೇಟಿ ಸ್ಥಳ ಹೂವಿನ ಅಲಂಕಾರ
ಅಕ್ಕ-ತಂಗಿ ಭೇಟಿ ಮಹೋತ್ಸವ ನಡೆಯುವ ಸ್ಥಳದಲ್ಲಿ ಅತ್ಯಾಕರ್ಷಕ ಹೂವಿನ ಅಲಂಕಾರ ಸೇವೆ ಮಾಡಲಾಗಿತ್ತು. ಭೇಟಿಯಾಗುವ ಸ್ಥಳದಲ್ಲಿ ಹಾಕಿದ್ದ ಹೂವಿನ ತೋರಣ, ರಂಗೋಲಿ ಉತ್ಸವಕ್ಕೆ ಮತ್ತಷ್ಟು ಮೆರುಗು ತಂದಿತು.
ವಿವಿಧ ಪುಷ್ಪಗಳಿಂದ ಸುಂದರವಾಗಿ ಅಲಂಕೃತಗೊಂಡಿದ್ದ ಅಕ್ಕ– ತಂಗಿಯರು ಪರಸ್ಪರ ಭೇಟಿಗಾಗಿ ತವಕಿಸುವ ದೃಶ್ಯ ಸೊಗಸಾಗಿತ್ತು.
‘ಏಕನಾಥೇಶ್ವರಿ, ಬರಗೇರಮ್ಮ, ತಿಪ್ಪನಘಟ್ಟಮ್ಮ ಉಧೋ’ ಎಂಬ ಹರ್ಷೋದ್ಗಾರ ಭಕ್ತರಿಂದ ಮೊಳಗಿದವು. ದೇವತೆಗಳನ್ನು ಹೊತ್ತ ಅರ್ಚಕರು ಒಂದು ಹೆಜ್ಜೆ ಮುಂದಕ್ಕೆ, ಎರಡು ಹೆಜ್ಜೆ ಹಿಂದಕ್ಕೆ ಇಡುತ್ತಾ, ಉರುಮೆ ನಾದಕ್ಕೆ ತಕ್ಕಂತೆ ಕುಣಿಯುತ್ತ ಪಂಜಿನ ಜೊತೆ ದೇವತೆಗಳು ಮುಂದೆ ಬರುತ್ತಿದ್ದಂತೆ ದೇವತೆಗಳು ಮುಖಾಮುಖಿಯಾದರು.
ಸೋಮನ ಕುಣಿತ, ಡೊಳ್ಳು ಕುಣಿತ, ದೀವಟಿಗೆಧಾರಿಗಳು, ಉರುಮೆನಾದ, ತಮಟೆಗಳ ಸದ್ದು, ಡೊಳ್ಳು ವಾದನ ಉತ್ಸವಕ್ಕೆ ಹೆಚ್ಚಿನ ಮೆರುಗು ನೀಡಿದವು. ರಾಜಬೀದಿಯಲ್ಲಿ ಜನದಟ್ಟಣೆ ನಿಯಂತ್ರಣಕ್ಕೆ ಭೇಟಿ ಮಹೋತ್ಸವ ಸಮಿತಿಯಿಂದ ಫೇಸ್‌ಬುಕ್, ಯೂಟ್ಯೂಬ್ ಲೈವ್ ನಡೆಸಲಾಯಿತು.
ಅಕ್ಕ -ತಂಗಿ ಭೇಟಿ ಹಿನ್ನೆಲೆ
ಅಕ್ಕ ತಂಗಿಯರಾದ ಬರಗೇರಮ್ಮ, ತಿಪ್ಪಿನಘಟ್ಟಮ್ಮ ದೇವತೆಯ ಭೇಟಿ ಉತ್ಸವಕ್ಕೆ ಐತಿಹಾಸಿಕ ಹಿನ್ನೆಲೆಯಿದೆ. ಏಕನಾಥೇಶ್ವರಿ, ಉಚ್ಚಂಗಿ ಯಲ್ಲಮ್ಮ, ಬರಗೇರಮ್ಮ, ತಿಪ್ಪಿನಘಟ್ಟಮ್ಮ, ಕಣಿವೆಮಾರಮ್ಮ, ಚೌಡಮ್ಮ, ಗೌರಸಂದ್ರ ಮಾರಮ್ಮ, ಕುಕ್ಕವಾಡೇಶ್ವರಿ, ಕಾಳಿ ದೇವತೆ ದುರ್ಗದ ದೇವತೆಗಳಾಗಿವೆ.
ತಿಪ್ಪಿನಘಟ್ಟಮ್ಮ ದೇವಿಗೆ ಏಳು ಜನ ಮಕ್ಕಳು. ಈಕೆಯ ಪ್ರೀತಿಯ ಅಕ್ಕ ಬರಗೇರಮ್ಮ ದೇವಿಗೆ ಸಂತಾನವಿರಲಿಲ್ಲ. ಹೀಗಾಗಿ, ತಂಗಿ ಮಕ್ಕಳ ಮೇಲೆ ಅಪಾರ ಪ್ರೀತಿ, ವಾತ್ಸಲ್ಯವಿದ್ದ ಬರಗೇರಮ್ಮ ತಂಗಿ ಮಕ್ಕಳ ಜತೆ ಆಟವಾಡುತ್ತಾ ಕಾಲ ಕಳೆಯುವುದು ರೂಢಿಯಾಗಿತ್ತು.
ಅಕ್ಕ–ತಂಗಿಯರ ಪ್ರೀತಿ ಕಂಡು ಅಸೂಯೆ ಪಟ್ಟ ನವ ದುರ್ಗೆಯರಲ್ಲೊಬ್ಬ ದೇವತೆ ತಿಪ್ಪಿನಘಟ್ಟಮ್ಮನಿಗೆ, ‘ನಿನ್ನ ಅಕ್ಕನಿಗೆ ಮಕ್ಕಳಿಲ್ಲ ಆಕೆ ನಿನ್ನ ಮಕ್ಕಳನ್ನು ಮುಟ್ಟಿದರೆ ಒಳ್ಳೆಯದಾಗುವುದಿಲ್ಲ’ ಎಂದು ಚಾಡಿ ಹೇಳುತ್ತಾಳೆ.
ಇದರಿಂದ ಹೆದರಿದ ತಿಪ್ಪಿನಘಟ್ಟಮ್ಮ ತನ್ನ ಅಕ್ಕ ಮನೆಗೆ ಬಂದಾಗ ಆಕೆಯ ದೃಷ್ಟಿಗೆ ಬೀಳಬಾರದೆಂದು ತನ್ನ ಮಕ್ಕಳನ್ನು ಬಚ್ಚಿಡುತ್ತಾಳೆ. ಇದರಿಂದ ಕೋಪಗೊಂಡ ಬರಗೇರಮ್ಮ ಸಿಟ್ಟಿನಲ್ಲಿ ‘ನಿನ್ನ ಮಕ್ಕಳು ಕಲ್ಲಾಗಲಿ’ ಇದೇ ಕೊನೆ ಎಂದಿಗೂ ನಿನ್ನ ಮುಖ ನೋಡುವುದಿಲ್ಲ ಎಂದು ಹೇಳಿ ಹಿಂತಿರುಗುತ್ತಾಳೆ.
ಇದನ್ನೂ ಓದಿ: 4 ಲಕ್ಷ ಹಣ ಪಡೆಯುವಾಗ ಲೋಕಯುಕ್ತ ಬಲೆಗೆ ಬಿದ್ದ ಬಸವರಾಜಪ್ಪ
ಆಗ ಹಿರಿಯಳಾದ ಏಕನಾಥೇಶ್ವರಿ ಊರಿನ ಒಳಿತಿಗಾಗಿ ವರ್ಷಕ್ಕೊಮ್ಮೆ ತನ್ನ ಸಮ್ಮುಖದಲ್ಲಿ ನೀವಿಬ್ಬರು ಭೇಟಿಯಾಗಬೇಕೆಂದು ಆದೇಶಿಸುತ್ತಾಳೆ. ಹಿರಿಯಕ್ಕನ ಮಾತಿನಂತೆ ಪ್ರತಿ ವರ್ಷ ಈ ಇಬ್ಬರು ರಾಜಬೀದಿಯಲ್ಲಿ ಭೇಟಿಯಾಗುತ್ತಾರೆ. ಈ ಕ್ಷಣವನ್ನು ಮೇಲುದುರ್ಗದಿಂದ ಏಕನಾಥೇಶ್ವರಿ ದೇವಿ ವೀಕ್ಷಿಸುತ್ತಾಳೆ ಎಂಬ ಪ್ರತೀತಿ ಭಕ್ತರಲ್ಲಿದೆ.
ಈ ಭೇಟಿ ಉತ್ಸವ ಕಾರ್ಯಕ್ರಮದಲ್ಲಿ ಚಿತ್ರದುರ್ಗ ತಾಲೂಕು ದಂಡಧಿಕಾರಿ ನಾಗವೇಣಿ, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಯುವ ಮುಖಂಡ ಎಂ.ಸಿ.ರಘುಚಂದನ್ ,ನಗರಸಭೆ ಸದಸ್ಯರಾದ ಬಾಸ್ಕರ್, ಅನುರಾಧ ರವಿಕುಮಾರ್, ನಗರಸಭೆ ಪೌರಯುಕ್ತೆ ರೇಣುಕಾ, ಭೇಟಿ ಉತ್ಸವ ಉಸ್ತುವಾರಿ ಸಿ.ಟಿ.ಕೃಷ್ಣಮೂರ್ತಿ, ಭೇಟಿ ಉತ್ಸವ ಸಮಿತಿ ಅಧ್ಯಕ್ಚ ಕೆ.ಸಿ.ನಾಗರಾಜ್, ದೊಡ್ಡಗರಡಿ ಅಧ್ಯಕ್ಷ ತಿಮ್ಮಣ್ಣ, ಸಂಘಟನ ಕಾರ್ಯದರ್ಶಿ ವಕೀಲ ಉಮೇಶ್, ಮಾಜಿ ನಗರಸಭೆ ಸದಸ್ಯ ರಾಜೇಶ್ ಮತ್ತು ಸಿಟಿಕೆ ಪುತ್ರ ಅರ್ಜುನ್ ಮತ್ತು ಅವರ ತಂಡ ಸ್ವಯಂ ಸೇವಕರಾಗಿ ಭೇಟಿಯಲ್ಲಿ ಸೇವೆ ಸಲ್ಲಿಸಿದರು..
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252