ΝChitradurga News | Nammajana.com |16-09-2025
ನಮ್ಮಜನ ನ್ಯೂಸ್ ಕಾಂ,ಚಿತ್ರದುರ್ಗ: ಜಿಲ್ಲೆಯಲ್ಲಿ (CHITRADURGA) ತಾಯಿ ಮತ್ತು ಶಿಶು ಮರಣ ಪ್ರಕರಣಗಳು, ಕ್ಷಯರೋಗಿಗಳ ಮರಣ ಪ್ರಕರಣಗಳೂ ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ವಿವಿಧ ಕಾರಣಗಳಿಗಾಗಿ ಸಂಭವಿಸುವ ಮರಣ ಪ್ರಕರಣಗಳ ಪರಿಶೀಲನೆಗೆ ತಜ್ಞರ ಸಮಿತಿ ರಚನೆ ಮಾಡಿ, ಪರಿಶೀಲನೆ ನಡೆಸಿ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ. ವೆಂಕಟೇಶ್ ತಿಳಿಸಿದರು.

ಇದನ್ನೂ ಓದಿ: Chitradurga Gold Rate | ಬಂಗಾರದ ಬೆಲೆಯಲ್ಲಿ ಭಾರೀ ಏರಿಕೆ
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಮಟ್ಟದ ಕ್ಷಯರೋಗ ವೇದಿಕೆ ಸಭೆ, ರಾಷ್ಟ್ರೀಯ ಆರೋಗ್ಯ ಮಿಷನ್ ಹಾಗೂ ಲಸಿಕಾ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಈ ವರ್ಷ ಒಟ್ಟು 08 ತಾಯಿ ಮರಣ ಹಾಗೂ 101 ಶಿಶು ಮರಣ ಸಂಭವಿಸಿದೆ. ಅದೇ ರೀತಿ 62 ಕ್ಷಯರೋಗಿಗಳು ಮೃತಪಟ್ಟಿದ್ದಾರೆ. ತಾಯಿ ಮತ್ತು ಶಿಶು ಮರಣ ಪ್ರಕರಣಗಳಿಗೆ ಸಂಬಂಧಿಸಿದಂತೆ, ಸಾವನ್ನಪ್ಪಿದವರು, ಘಟನೆಗೂ ಮುನ್ನ ಯಾವ ಯಾವ ಆಸ್ಪತ್ರೆಗಳಲ್ಲಿ ಯಾವ ಚಿಕಿತ್ಸೆ ಪಡೆದಿದ್ದರು, ಯಾವ ವೈದ್ಯರು ಯಾವ ಚಿಕಿತ್ಸೆಯನ್ನು ಶಿಫಾರಸು ಮಾಡಿದ್ದರು ಎಂಬುದರ ಬಗ್ಗೆ ಪ್ರಸ್ತುತ ಸಮರ್ಪಕ ಮಾಹಿತಿ ಲಭ್ಯವಾಗುತ್ತಿಲ್ಲ.
ಹೀಗಾಗಿ ಯಾವುದೇ ತಾಯಿ, ಶಿಶು ಮರಣ ಪ್ರಕರಣದ ಪರಿಶೀಲನೆಯಲ್ಲಿ ಸಮರ್ಪಕ ಮಾಹಿತಿ ಲಭ್ಯವಾದಲ್ಲಿ, ಮರಣ ಪ್ರಕರಣಗಳನ್ನು ತಡೆಗಟ್ಟಬಹುದಾದ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಸಾಧ್ಯವಾಗಲಿದೆ. ಹೀಗಾಗಿ ಜಿಲ್ಲೆಯಲ್ಲಿ ಇಂತಹ ಮರಣ ಪ್ರಕರಣಗಳಿಗೆ ಸಂಬಂಧಿಸಿದಂತೆ ಪರಿಶೀಲನೆಗಾಗಿ ಉನ್ನತ ತಜ್ಞರ ಸಮಿತಿಯನ್ನು ರಚಿಸಲಾಗುವುದು. ಶೀಘ್ರದಲ್ಲಿಯೇ ಈ ಕುರಿತು ಆದೇಶ ಹೊರಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಇದನ್ನೂ ಓದಿ: ರೇಣುಕಾಸ್ವಾಮಿ ಕುಟುಂಬದ ಆರ್ಥಿಕ ಸಂಕಷ್ಟ ಮಿಡಿದ ಶಾಸಕ ಟಿ.ರಘುಮೂರ್ತಿ 1 ಲಕ್ಷ ನೆರವು
ಕ್ಷಯ ರೋಗದಿಂದ ಸಂಭವಿಸಿರುವ(CHITRADURGA) ಮರಣ ಪ್ರಮಾಣ ಕಳೆದ ಜನವರಿಯಿಂದ ಜುಲೈವರೆಗೆ ಶೇ.8ರಷ್ಟಿದೆ. ರಾಜ್ಯದ ಸರಾಸರಿ ಶೇ.6 ಇದೆ ಎಂದು ತಿಳಿಸಿದ ಅವರು, ಕ್ಷಯ ರೋಗ ಪತ್ತೆಯು ವಿಳಂಬಗೊಂಡ ಪ್ರಕರಣದಲ್ಲಿ ಮರಣ ಸಾಧ್ಯತೆ ಅಧಿಕವಾಗಿರುತ್ತದೆ. ಹೀಗಾಗಿ ರೋಗ ಲಕ್ಷಣಗಳು ಕಂಡುಬಂದಲ್ಲಿ ಕೂಡಲೆ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು.
ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಸಿ.ಓ.ಸುಧಾ ಮಾತನಾಡಿ, ಕ್ಷಯರೋಗ ಸಾಮಾಜಿಕ ಸಮಸ್ಯೆಯಾಗಿದ್ದು, ಇದರ ನಿಯಂತ್ರಣಕ್ಕೆ ಸಮುದಾಯದ ಸಹಕಾರ ಅಗತ್ಯವಾಗಿದೆ. ಜಿಲ್ಲೆಯಲ್ಲಿ ಇಲಾಖೆ ವತಿಯಿಂದ 6.25 ಲಕ್ಷ ಜನರ ಸ್ಕ್ರೀನಿಂಗ್ ಮಾಡಲಾಗಿದ್ದು, ಪ್ರಸ್ತುತ ಜಿಲ್ಲೆಯಲ್ಲಿ 2138 ರೋಗಿಗಳು ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕ್ಷಯರೋಗ ಮುಕ್ತ ಜಿಲ್ಲೆ ಮಾಡುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುತ್ತಿದೆ. ಇಲಾಖೆಯ ನಿರ್ದೇಶನದಂತೆ ಕ್ಷಯ ರೋಗಿಗಳಿಗೆ ನೀಡಲಾಗುವ ಔಷಧಗಳನ್ನು ಖಾಸಗಿ ಮೆಡಿಕಲ್ ಸ್ಟೋರ್‍ಗಳಲ್ಲಿ ನೇರವಾಗಿ ರೋಗಿಗಳಿಗೆ ಮಾರಾಟ ಮಾಡುವಂತಿಲ್ಲ, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಎಂದು ಹೇಳಿದರು.
ಇದನ್ನೂ ಓದಿ: 3 ತಿಂಗಳಿಗೊಮ್ಮೆ ರಕ್ತದಾನ ಮಾಡಿ | ಡಾ.ಎಂ.ಚಂದ್ರಪ್ಪ
ಕ್ಷಯರೋಗಿಗಳಿಗೆ ಸಮುದಾಯದ ಸಹಕಾರ ಹಾಗೂ ಪೌಷ್ಠಿಕ ಆಹಾರದ ನೆರವು ಒದಗಿಸಬೇಕಾಗಿದ್ದು, ನಿಕ್ಷಯ್ ಮಿತ್ರ ಫೋರ್ಟಲ್ ಮೂಲಕ ಪೌಷ್ಠಿಕ ಆಹಾರ ಕಿಟ್‍ಗಳನ್ನು ಸಿಎಸ್‍ಆರ್ ನಿಧಿಯಡಿಯಲ್ಲಿ ನೀಡಲಾಗುತ್ತಿದೆ.
ಇದರ ಜೊತೆಗೆ ಸಾಮಾಜಿಕ ಭದ್ರತಾ ಯೋಜನೆಗಳ ಮಾಹಿತಿ ನೀಡಿ, ಅದರ ಪ್ರಯೋಜನವನ್ನು ಫಲಾನುಭವಿಗಳು ಸಿಗುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ ಕ್ಷಯರೋಗಿಗಳ ಗುಣಮುಖ ಪ್ರಮಾಣ ಹೆಚ್ಚಾಗುತ್ತಿದೆ ಎಂದು ತಿಳಿಸಿದರು.
ಉತ್ತಮ ಆರೋಗ್ಯ ಸೇವೆ ನೀಡುವ ಸಲುವಾಗಿ ಶೀಘ್ರದಲ್ಲಿ “ಸಶಕ್ತ ಪರಿವಾರ” 15 ದಿನಗಳ ಪಾಕ್ಷಿಕ ಪ್ರಾರಂಭವಾಗಲಿದ್ದು, ಈ ಅಭಿಯಾನದಲ್ಲಿ ಟಿಬಿ ಅಭಿಯಾನ ಹಾಗೂ ರಕ್ತದಾನ ಶಿಬಿರಗಳನ್ನು ಆಯೋಜಿಸಿ, ಆರೋಗ್ಯ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆ ಸಭೆ:
ಜಿಲ್ಲಾಧಿಕಾರಿ ಟಿ.ವೆಂಕೇಶ್ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಲಸಿಕಾ ಕಾರ್ಯಪಡೆ ಸಭೆ ನಡೆಯಿತು. ಜಿಲ್ಲೆಯಲ್ಲಿ ಲಸಿಕಾಕರಣವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಇದನ್ನೂ ಓದಿ: Democracy: ಭಾರತದಲ್ಲಿ ಪ್ರಜಾಪ್ರಭುತ್ವ ಶಕ್ತಿಶಾಲಿಯಾಗಿದೆ | ಶಾಸಕ ಡಾ.ಎಂ.ಚಂದ್ರಪ್ಪ
ಹಿರಿಯ ಸರ್ವೆಲೆನ್ಸ್ ಮೆಡಿಕಲ್ (CHITRADURGA) ಅಧಿಕಾರಿ ಡಾ. ಶ್ರೀಧರ್ ಮಾತನಾಡಿ, ದಡಾರಾ, ರುಬೆಲ್ಲಾ ನಿರ್ಮೂಲನೆಗೆ ಕಣ್ಗಾವಲು ವ್ಯವಸ್ಥೆಗಾಗಿ ಪ್ರತಿ ತಿಂಗಳಿಗೊಮ್ಮೆ ಪರಿಶೀಲನೆ ಮಾಡುವುದು ಲಸಿಕಾಕರಣದ ಉದ್ದೇಶವಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಸಶಕ್ತ ಪರಿವಾರ್ ಕಾರ್ಯಕ್ರಮದಡಿ ಸೂಕ್ಷ್ಮ ಪ್ರದೇಶಗಳಲ್ಲಿ ವಿಶೇಷ ಲಸಿಕಾ ಅಭಿಯಾನವನ್ನು ಅಕ್ಟೋಬರ್ 12 ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಸ್. ಆಕಾಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಜಿ.ಪಿ. ರೇಣುಪ್ರಸಾದ್, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಪಿ. ರವೀಂದ್ರ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
