Chitradurga News | Nammajana.com | 01-09-2025
ನಮ್ಮಜನ ನ್ಯೂಸ್ ಕಾಂ,ಚಿತ್ರದುರ್ಗ: ನಗರದ (CHITRADURGA Gandhi Circle) ಗಾಂಧಿ ವೃತ್ತದ ಬಳಿ ಇರುವ ನಗರಸಭೆಗೆ ಸೇರಿದ ಜಾಗದಲ್ಲಿ ಬಹು ಹಂತದ ಪಾರ್ಕಿಂಗ್ ಕಟ್ಟಡವನ್ನು ನಿರ್ಮಿಸಲು ಈಗಾಗಲೆ ಡಿಪಿಆರ್ ಸಿದ್ಧಪಡಿಸಲಾಗುತ್ತಿದ್ದು, ಡಿಪಿಆರ್‍ಗೆ ಸರ್ಕಾರದಿಂದ ಅನುಮೋದನೆ ದೊರೆತ ಬಳಿಕ ಇಲ್ಲಿ ಸುಸಜ್ಜಿತ ಬಹುಹಂತದ ಪಾರ್ಕಿಂಗ್ ಸ್ಥಳ ನಿರ್ಮಾಣವಾಗಲಿದೆ.

ಇದನ್ನೂ ಓದಿ: ನಾಗಪುರ ದೀಕ್ಷಾ ಭೂಮಿ ಯಾತ್ರೆಗೆ ಅರ್ಜಿ ಅಹ್ವಾನ
ಸಂತೆಹೊಂಡ ಪಕ್ಕದಲ್ಲಿ ನಿರ್ಮಾಣಗೊಂಡು, ಸ್ಥಗಿತಗೊಂಡಿರುವ ಕಾಮಗಾರಿಯನ್ನು ಪೂರ್ಣಗೊಳಿಸಿ, ಇಲ್ಲಿ ನೆಲ ಮಹಡಿಯಲ್ಲಿ ಪಾರ್ಕಿಂಗ್‍ಗೆ ಹಾಗೂ ಮೇಲ್ಭಾಗದಲ್ಲಿ ತರಕಾರಿ ಅಂಗಡಿಗಳಿಗೆ ಮಳಿಗೆ ನಿರ್ಮಾಣ ಮಾಡಿಕೊಡಲಾಗುವುದು ಎಂದು ನಗರಸಭೆ ಪೌರಾಯುಕ್ತೆ ರೇಣುಕಾ ಅವರು ಸಭೆಗೆ ಮಾಹಿತಿ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಡಿವೈಡರ್‍ಗಳ ಸಂಪೂರ್ಣ ವರದಿ ನೀಡಲು ಸೂಚನೆ:
ಚಿತ್ರದುರ್ಗ ನಗರದಲ್ಲಿ ಕೈಗೊಂಡಿರುವ ಪೂರ್ಣಗೊಂಡಿರುವ ಹಾಗೂ ಬಾಕಿ ಇರುವ ಡಿವೈಡರ್‍ಗಳ ಸಂಪೂರ್ಣ ವರದಿ ನೀಡುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಲೋಕೋಪಯೋಗಿ ಇಲಾಖೆ ಅಧಿಕಾರಿಗೆ ಸೂಚಿಸಿದರು.
ತುರುವನೂರು ರಸ್ತೆಯ ಅಂಡರ್ ಪಾಸ್ ಹತ್ತಿರವಿರುವ ಒಳಚರಂಡಿ ವ್ಯವಸ್ಥೆ ಸರಿಪಡಿಸುವಂತೆ ಕಾರ್ಯಪಾಲಕ ಇಂಜಿನಿಯರ್ ಅವರಿಗೆ ಸೂಚಿಸಿದರು.
ಚಿತ್ರದುರ್ಗ ನಗರದ ಬಾಪೂಜಿ ಕಾಲೇಜು ಮುಂಭಾಗ ಪಾದಾಚಾರಿ ಸ್ಕೈವಾಕ್ ನಿರ್ಮಾಣಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಪೊಲೀಸ್ ಇಲಾಖೆಯ ಸಹಕಾರ ಪಡೆದು, ಕಾಮಗಾರಿ ಕೈಗೆತ್ತಿಕೊಳ್ಳುವಂತೆ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳು ಗುಣಮಟ್ಟದ್ದಾಗಿಲ್ಲ, ವಿಡಿಯೋದಲ್ಲಿ ಕನಿಷ್ಟ ಪಕ್ಷ ವಾಹನದ ನಂಬರ್ ಕೂಡ ಗೋಚರಿಸುವುದಿಲ್ಲ, ಹೀಗಾಗಿ ಇದರಿಂದ ಏನೂ ಪ್ರಯೋಜನವಿಲ್ಲ ಎಂದು ಡಿವೈಎಸ್‍ಪಿ ರಾಜಣ್ಣ ಅವರು ಹೇಳಿದರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ಕೂಡಲೆ ಉತ್ತಮ ಗುಣಮಟ್ಟದ ಸಿಸಿ ಕ್ಯಾಮೆರಾಗಳನ್ನು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಉತ್ತಮ ಗುಣಮಟ್ಟದ ಸಿಸಿ ಕ್ಯಾಮೆರಾ ಅಳವಡಿಸಲು ಕ್ರಮ ವಹಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಚಿತ್ರದುರ್ಗ ನಗರದಲ್ಲಿ ಟ್ರಾಫಿಕ್ ಸಿಗ್ನಲ್ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಚಿತ್ರದುರ್ಗ ನಗರಸಭೆಯವರು ನಿರ್ವಹಣೆ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದರು.
ಇದನ್ನೂ ಓದಿ: ಆಧಾರ್ ಸೀಡಿಂಗ್ ಅಭಿಯಾನ : Aadhaar
ಚಿತ್ರದುರ್ಗ ನಗರದ ಮಾತ್ರವಲ್ಲದೇ, ಎಲ್ಲ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಸಂದರ್ಭದಲ್ಲಿ ಪೊಲೀಸ್ ಇಲಾಖೆಯವರು ಹೇಳಿದ ಕಡೆ ಶಾಶ್ವತವಾಗಿ ಸಿ.ಸಿ.ಕ್ಯಾಮೆರಾ ಅಳವಡಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ ಎನ್.ಹೆಚ್. 48ರ ಚಿತ್ರದುರ್ಗದಿಂದ ಬೆಂಗಳೂರು ಕಡೆ ಹೋಗುವ ರಸ್ತೆಯಲ್ಲಿ ಗೊರ್ಲಡಕು ಗೇಟ್ ಜೆ.ಜೆ. ಹಳ್ಳಿ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಸುಗಮ ಸಂಚಾರಕ್ಕೆ ಸೂಕ್ತ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು. ಎರಡು ದಿನದೊಳಗೆ ರಸ್ತೆ ಕಾಮಗಾರಿ ಮುಗಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿಗಳು ತಾಕೀತು ಮಾಡಿದರು. ಎರಡು ದಿನದೊಳಗೆ ಕಾಮಗಾರಿ ಪೂರ್ಣಗೊಳಿಸಿದ್ದರೆ ಸಂಬಂಧಪಟ್ಟ ಗುತ್ತಿಗೆದಾರರನ್ನು ಅರೆಸ್ಟ್ ಮಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರು.
ಟೋಲ್ ಸಂಗ್ರಹಣೆ ಕ್ರಮಕ್ಕೆ ಅಸಮಾಧಾನ :
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಗೆ ಒಪ್ಪಂದದ ಅನುಸಾರ ಟೋಲ್ ಅನ್ನು ಸಂಗ್ರಹಿಸಲಾಗುತ್ತಿದೆ. ಕೆಲವೆಡೆ ರಸ್ತೆಗಳು ಬಹಳಷ್ಟು ಹಾಳಾಗಿದ್ದು, ಅದನ್ನು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ, ರಸ್ತೆ ಕಾಮಗಾರಿಗಳಿಗಾಗಿ ಮಾರ್ಗ ಬದಲಾಯಿಸಿ, ಸಂಚಾರ ದಟ್ಟಣೆ ಹಾಗೂ ಅಪಘಾತಗಳು ಕೂಡ ಸಂಭವಿಸುತ್ತಿವೆ.
ಟೋಲ್ ಸಂಗ್ರಹಣೆ ಕೇಂದ್ರಗಳ ಪೈಕಿ ಅರ್ಧದಷ್ಟು ಕೇಂದ್ರಗಳನ್ನು ಬಂದ್ ಮಾಡಿ, ಕೇವಲ ಒಂದೆರಡು ಕೇಂದ್ರಗಳನ್ನು ಮಾತ್ರ ತೆರೆಯುವುದರಿಂದ, ವಾಹನ ದಟ್ಟಣೆ ಉಂಟಾಗುತ್ತಿದೆ. ವಿಐಪಿ, ಆ್ಯಂಬುಲೆನ್ಸ್ ವಾಹನಗಳು ಸಂಚರಿಸುವ ಮಾರ್ಗದಲ್ಲಿ ಲಾರಿ, ಟ್ರಕ್‍ಗಳು ಕೂಡ ಪ್ರವೇಶ ಮಾಡುತ್ತಿವೆ.
ಇದರಿಂದಾಗಿ ವಿಐಪಿ, ಆಂಬುಲೆನ್ಸ್‍ಗಳು ಟೋಲ್ ಮಾರ್ಗ ಪ್ರವೇಶಿಸಲು ಕಾಯುವಂತಹ ಸ್ಥಿತಿ ಇರುತ್ತದೆ. ರಸ್ತೆಗಳು ಸಮರ್ಪಕವಾಗಿ ಇಲ್ಲದೇ ಇರುವ ಸಂದರ್ಭಗಳಲ್ಲಿ ಟೋಲ್ ಸಂಗ್ರಹ ಮಾಡಬಾರದು ಎಂಬುದಾಗಿ ಇತ್ತೀಚೆಗೆ ನ್ಯಾಯಾಲಯ ತೀರ್ಪು ನೀಡಿದೆ. ಹೀಗಿದ್ದಾಗ, ರಸ್ತೆ ಸರಿ ಇಲ್ಲದ ಕಡೆಗಳಲ್ಲಿ ಟೋಲ್ ಏಕೆ ಸಂಗ್ರಹಿಸುತ್ತೀರಿ ಎಂದು ಜಿಲ್ಲಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.
12 ಆಟೋ ನಿಲ್ದಾಣ ಕಾಮಗಾರಿ ಪೂರ್ಣ:
ಚಿತ್ರದುರ್ಗ ನಗರದಲ್ಲಿ 27 ಆಟೋ ನಿಲ್ದಾಣಗಳನ್ನು ಗುರುತಿಸಿದ್ದು, ಈಗಾಗಲೇ 12 ಆಟೋ ನಿಲ್ದಾಣ ಕಾಮಗಾರಿಗಳು ಪೂರ್ಣಗೊಂಡಿದ್ದು, ಈ ಬಾಕಿ ಉಳಿದ ಆಟೋ ನಿಲ್ದಾಣ ನಿರ್ಮಿಸಲು ಟೆಂಡರ್ ಕರೆಯಲಾಗಿದೆ ಎಂದು ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದರು.
ರಿಫ್ಲೆಕ್ಟರ್ ಸ್ಟಿಕರ್ ಇಲ್ಲದ ಟ್ರ್ಯಾಕ್ಟರ್‍ಗಳಿಂದ ಅಪಘಾತ :
ಜಿಲ್ಲೆಯಲ್ಲಿ ಬಹಳಷ್ಟು ಟ್ರ್ಯಾಕ್ಟರ್‍ಗಳಿಗೆ ಪ್ರತಿಫಲನ (ರಿಫ್ಲೆಕ್ಟರ್) ಸ್ಟಿಕರ್ ಅಳವಡಿಸದೇ ಇರುವುದರಿಂದ, ರಾತ್ರಿ ವೇಳೆ ಟ್ರಾಕ್ಟರ್‍ಗಳು ಗೋಚರಿಸದ ಕಾರಣ ಅಪಘಾತಗಳು ಸಂಭವಿಸುತ್ತಿವೆ. ಈ ಹಿಂದೆಯೂ ಈ ಬಗ್ಗೆ ಕ್ರಮ ಕೈಗೊಳ್ಳುವುಂತೆ ತಿಳಿಸಲಾಗಿದ್ದರೂ, ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ ಎಂದು ಜಿಲ್ಲಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: Today Gold Rate | ಬಂಗಾರದ ಬೆಲೆಯಲ್ಲಿ ಭಾರೀ ಏರಿಕೆ
ಉತ್ತರಿಸಿದ ಆರ್‍ಟಿಒ ಭರತ್ ಕಾಳೆಸಿಂಗೆ(CHITRADURGA Gandhi Circle) ಅವರು, ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು 25205 ಟ್ರಾಕ್ಟರ್‍ಗಳು ಹಾಗೂ 151 ವಾಣಿಜ್ಯ ಟ್ರ್ಯಾಕ್ಟರ್‍ಗಳು ಇವೆ. ಆರ್‍ಸಿ ಅವಧಿ ಮುಗಿದಿರುವ ಹಳೆ ಟ್ರಾಕ್ಟರ್‍ಗಳು, ನವೀಕರಣಕ್ಕೂ ಬಾರದೆ ಸಂಚರಿಸುತ್ತಿವೆ. ಕೃಷಿ ಉಪಯೋಗಕ್ಕಾಗಿ ಎಂದು ನೊಂದಣಿಯಾಗಿರುವ ಟ್ರ್ಯಾಕ್ಟರ್‍ಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಕೆ ಮಾಡುತ್ತಿರುವುದು ಕೂಡ ಕಂಡುಬಂದಿದೆ. ಹಂತ ಹಂತವಾಗಿ ಇಂತಹ ಟ್ರ್ಯಾಕ್ಟರ್‍ಗಳನ್ನು ಪತ್ತೆ ಮಾಡಿ, ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್ ಎಂ.ಕಾಳೇಸಿಂಘೆ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ನಾಗರಾಜ್, ನಗರಸಭೆ ಪೌರಾಯುಕ್ತೆ ರೇಣುಕಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
