Chitradurga news|nammajana.com|28-05-2025
ನಮ್ಮಜನ.ಕಾಂ, ಚಿತ್ರದುರ್ಗ: ಬೇಸಿಗೆ ರಜೆ ಮುಗಿದು (Chitradurga School) ಶಾಲೆಗಳಿಗೆ ಚಿಣ್ಣರು ಆಗಮಿಸಲು ಕ್ಷಣಗಣನೆ ಆರಂಭವಾಗಿದ್ದು, ಮೇ 29 ರಂದು ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಿಕ್ಷಣ ಇಲಾಖೆ ಸಕಲ ಸಿದ್ಧತೆ ಕೈಗೊಂಡಿದೆ.
ಪ್ರತಿ ವರ್ಷದಂತೆ ಶೈಕ್ಷಣಿಕ ವರ್ಷದ ಆರಂಭದಲ್ಲಿ ವಿದ್ಯಾರ್ಥಿಗಳನ್ನು ವಿನೂತನವಾಗಿ ಸ್ವಾಗತಿಸುವ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಜಿಲ್ಲೆಯ ಶಾಲೆಗಳು, ಶಿಕ್ಷಕರು ಸಿದ್ಧಗೊಂಡಿದ್ದಾರೆ.

ಶಾಲಾ ಶಿಕ್ಷಣ ಇಲಾಖೆಯ ಸೂಚನೆಯಂತೆ ಗುರುವಾರದಿಂದ ಶಾಲೆಗಳು ಬಾಗಿಲು ತೆರೆಯುವುದರಿಂದ ಬುಧವಾರ ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯಗಳು ಭರದಿಂದ ಸಾಗಿದವು.
ಸಿಬ್ಬಂದಿ ಜತೆ ಕೈ ಜೋಡಿಸಿದ ಶಿಕ್ಷಕರು ಶಾಲಾ ಆವರಣ, ತರಗತಿ ಕೋಣೆ, ಅಡುಗೆ ಕೋಣೆ, ಶೌಚಾಲಯ ಹಾಗೂ ನೀರಿನ ಸಿಂಟೆಕ್ಸ್, ಅಡುಗೆ ಪರಿಕರ ಸ್ವಚ್ಛತೆ ಹಾಗೂ ಶಾಲೆಗಳ ಮೇಲ್ಛಾವಣೆ ಮೇಲಿರುವ ಕಸ ತೆಗೆದು ಸ್ವಚ್ಛತೆ ಕಾರ್ಯ (Chitradurga School) ನಡೆಸಿದರು.
ಜಿಲ್ಲೆಯ ವಿವಿಧೆಡೆಯ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಶಾಲಾ ಪ್ರಾರಂಭಕ್ಕೆ ಸಕಲ ಸಿದ್ಧತೆಗಳು ನಡೆದುವು. ಗ್ರಾಮೀಣ ಭಾಗದಲ್ಲಿ ಮಕ್ಕಳ ಜತೆ ಗ್ರಾಮಗಳ ಓಣಿ ಓಣಿಗಳಲ್ಲಿ ಸಂಚರಿಸಿದ ಶಿಕ್ಷಕರು ಶಾಲಾ ಪ್ರಾರಂಭ ಹಾಗೂ ವಿಶೇಷ ದಾಖಲಾತಿ ಆಂದೋಲನ ನಡೆಸಿದರು.
ಶಾಲಾ ಕಟ್ಟಡಗಳಿಗೆ ತಳಿರು ತೋರಣ, ರಂಗೋಲಿ ಬಿಡಿಸಿ ಮಕ್ಕಳಿಗೆ ಸಂಭ್ರಮದ ಸ್ವಾಗತದ ಮೂಲಕ ಶಾಲಾ ಪ್ರಾರಂಭೋತ್ಸವದ ಮೊದಲ ದಿನದಿಂದಲೇ ಬಿಸಿ ಊಟ ಹಾಗೂ ಮೊಟ್ಟೆ, ಬಾಳೆಹಣ್ಣು, ರಾಗಿ ಮಾಲ್ಟ್ ವಿತರಿಸಲು (Chitradurga School) ಕ್ರಮವಹಿಸಲಾಗಿದ್ದು, 2025-26ನೇ ಸಾಲಿನಿಂದ ರಾಗಿ ಮಾಲ್ಟ್ ಅನ್ನು ವಾರದ ಐದು ದಿನಗಳ ಕಾಲ ಮಕ್ಕಳಿಗೆ ನೀಡಲು ಶಾಲಾ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ. ಅಲ್ಲದೆ ಈಗಾಗಲೆ ಅಗತ್ಯ ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ಸರಬರಾಜು ಮಾಡಲು ಸರ್ಕಾರ ಸಾಕಷ್ಟು ಮುಂಚಿತವಾಗಿಯೇ ಕ್ರಮ ಕೈಗೊಂಡಿದೆ.
ಕಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳು ಸೇರಿ ಜಿಲ್ಲೆಯಲ್ಲಿ 1,751 ಸರ್ಕಾರಿ ಶಾಲೆಗಳು, 275 ಅನುದಾನಿತ ಶಾಲೆಗಳು ಹಾಗೂ 390 ಅನುದಾನ ರಹಿತ ಶಾಲೆಗಳು ಇವೆ. 2024-25ನೇ ಸಾಲಿನಲ್ಲಿ ಚಳ್ಳಕೆರೆ ತಾಲ್ಲೂಕಿನಲ್ಲಿ 27,920 ವಿದ್ಯಾರ್ಥಿಗಳು, ಚಿತ್ರದುರ್ಗ ತಾಲ್ಲೂಕು 24,267 ವಿದ್ಯಾರ್ಥಿಗಳು, ಹಿರಿಯೂರು ತಾಲ್ಲೂಕಿನಲ್ಲಿ 18,877 ವಿದ್ಯಾರ್ಥಿಗಳು, ಹೊಳಲ್ಕೆರೆ ತಾಲ್ಲೂಕಿನಲ್ಲಿ 11,750 ವಿದ್ಯಾರ್ಥಿಗಳು, ಹೊಸದುರ್ಗ ತಾಲ್ಲೂಕಿನಲ್ಲಿ 13,354 ವಿದ್ಯಾರ್ಥಿಗಳು ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 17,663 ವಿದ್ಯಾರ್ಥಿಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 1,13,831 ವಿದ್ಯಾರ್ಥಿಗಳು ನೋಂದಣಿಯಾಗಿದ್ದರು.
ಪ್ರಸಕ್ತ ಶೈಕ್ಷಣಿಕ ಸಾಲಿನ ಶಾಲಾ ಪ್ರಾರಂಭೋತ್ಸವಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದ್ದು, ಗುರುವಾರದಿಂದ ಶಾಲೆಗಳು ವಿದ್ಯುಕ್ತವಾಗಿ ಪ್ರಾರಂಭವಾಗುತ್ತಿವೆ. ಈಗಾಗಲೇ ಶೇ.100ರಷ್ಟು ಪಠ್ಯಪುಸ್ತಕಗಳನ್ನು ಶಾಲೆಗಳಿಗೆ ತಲುಪಿಸಲಾಗಿದೆ.
ಮೇ 27 ರಿಂದ ವಿಶೇಷ ದಾಖಲಾತಿ ಆಂದೋಲನ ಪ್ರಾರಂಭವಾಗಿದ್ದು, ಮೇ31 ರವರೆಗೆ ವಿಶೇಷವಾಗಿ ಎಲ್ಲ ಗ್ರಾಮಗಳಲ್ಲಿಯೂ ದಾಖಲಾತಿ ಆಂದೋಲನ (Chitradurga School) ನಡೆಸಲಾಗುವುದು. ಜೂನ್ 02 ರಿಂದ 30 ರವರೆಗೆ ಸಾಮಾನ್ಯ ದಾಖಲಾತಿ ಆಂದೋಲನ ಅನುಷ್ಟಾನ ಮಾಡಲಾಗುವುದು.
ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಮಿಂಚಿನ ಸಂಚಾರದ ಆಂದೋಲನ ಹಮ್ಮಿಕೊಳ್ಳಲಿದ್ದಾರೆ. ಎಸ್ಎಸ್ಎಲ್ಸಿ ಫಲಿತಾಂಶ ಹೆಚ್ಚಿಸಲು ಶಾಲಾ ಪ್ರಾರಂಭದ ದಿನದಿಂದಲೇ ವಿಶೇಷ ಕ್ರಿಯಾ ಯೋಜನೆ ರೂಪಿಸಿಕೊಂಡು ವಿಶೇಷ ತರಗತಿಗಳನ್ನು ನಡೆಸಲಾಗುವುದು ಎನ್ನುತ್ತಾರೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್ ಅವರು. ಮೆದೇಹಳ್ಳಿ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಉದ್ಘಾಟನಾ ಕಾರ್ಯಕ್ರಮ: ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ವತಿಯಿಂದ 2025-26ನೇ ಸಾಲಿನ ಚಿತ್ರದುರ್ಗ ತಾಲ್ಲೂಕು ಮಟ್ಟದ ಶಾಲಾ (Chitradurga School) ಪ್ರಾರಂಭೋತ್ಸವ ಉದ್ಘಾಟನಾ ಕಾರ್ಯಕ್ರಮ ಇದೇ ಮೇ 29 ರಂದು ಬೆಳಿಗ್ಗೆ 10ಕ್ಕೆ ಚಿತ್ರದುರ್ಗ ತಾಲ್ಲೂಕು ಮೆದೇಹಳ್ಳಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: job | ರೈಲ್ವೆ ಇಲಾಖೆಯಲ್ಲಿ ಮಾಜಿ ಸೈನಿಕರಿಗೆ ಉದ್ಯೋಗಾವಕಾಶ
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಶಾಲಾ ಪ್ರಾರಂಭೋತ್ಸವ ಉದ್ಘಾಟಿಸುವರು. ಮೆದೇಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಎನ್.ಕಾವ್ಯ ವಿಜಯಕುಮಾರ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿ.ಪಂ ಸಿಇಒ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಎಂ.ಆರ್.ಮಂಜುನಾಥ್, ಎಂ.ನಾಸಿರುದ್ದೀನ್, ಬಿಇಒ ಎಸ್.ನಾಗಭೂಷಣ್, ಬಿಆರ್ಸಿ ಈ.ಸಂಪತ್ ಕುಮಾರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಹೆಚ್.ಗುರುರಾಜ್ ಸೇರಿದಂತೆ ಮೆದೇಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಸದಸ್ಯರು, ಎಸ್ಡಿಎಂಸಿ ಅಧ್ಯಕ್ಷರು, ಸದಸ್ಯರು ಭಾಗವಹಿಸುವರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252