
Chitradurga news|nammajana.com| 1-3-2025
ನಮ್ಮಜನ.ಕಾಂ, ಚಿತ್ರದುರ್ಗ: ಸಂವಿಧಾನ ರಕ್ಷಣೆಯಿಂದ ಮಾತ್ರ (Constitution) ಪ್ರತಿಯೊಬ್ಬರು ನೆಮ್ಮದಿಯಾಗಿ ಬದುಕಲು ಸಾಧ್ಯ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಜಿಲ್ಲೆಯ ವಿವಿಧ ಘಟಕಗಳ ವತಿಯಿಂದ ತ.ರಾ.ಸು.ರಂಗಮಂದಿರದಲ್ಲಿ ಶುಕ್ರವಾರ ನಡೆದ ಸಂವಿಧಾನ ರಕ್ಷಾ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ಸಂವಿಧಾನದ ಪರವಾಗಿ ಶೇ.90 ರಷ್ಟು ಜನರಿದ್ದರೆ. ವಿರೋಧಿಸುವವರು ಕೇವಲ ಹತ್ತು ಪರ್ಸೆಂಟ್ ಮಾತ್ರ. ಸಂವಿಧಾನ ಅಭಿಯಾನ ರಕ್ಷಾ ಕುರಿತು ದೇಶದಲ್ಲಿ ಚರ್ಚೆಯಾಗುತ್ತಿರುವುದರ ಬಗ್ಗೆ ಯುವ ಜನಾಂಗದಲ್ಲಿ ಜಾಗೃತಿ ಮೂಡಿಸಬೇಕಿದೆ. ಮಾನವ ಬಂಧುತ್ವ ವೇದಿಕೆಯಿಂದ ಪ್ರತಿ ಮನೆ ಮನೆಗೆ ಬುದ್ದ, ಬಸವ, ಅಂಬೇಡ್ಕರ್
ಪೆರಿಯಾರ್ ವಿಚಾರಗಳನ್ನು ತಿಳಿಸುವ ಮೂಲಕ ಜನತೆಯಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತೇವೆ. ಸಂವಿಧಾನ ರಕ್ಷಾ ಅಭಿಯಾನವನ್ನು ಕಾಂಗ್ರೆಸ್ ಗಂಭೀರವಾಗಿ ತೆಗೆದುಕೊಳ್ಳಬೇಕೆಂದರು.
ಸಂವಿಧಾನದ ಮಹತ್ವವನ್ನು ಕಾಂಗ್ರೆಸ್ ವೇದಿಕೆಯಲ್ಲಿ, ಎನ್.ಜಿ.ಓ.ಗಳು ಹಾಗೂ ಇನ್ನಿತರೆ ವೇದಿಕೆಗಳಲ್ಲಿ ಜನತೆಗೆ ತಿಳಿಸಬೇಕು. ಎಲ್ಲಿಯವರೆಗೂ ಸಂವಿಧಾನ ಭದ್ರವಾಗಿರುತ್ತದೋ ಅಲ್ಲಿಯತನಕ ಎಲ್ಲರೂ ಸುರಕ್ಷಿತವಾಗಿರುತ್ತಾರೆ. ಸಂವಿಧಾನ (Constitution) ನೀಡಿರುವ ಸಮಾನತೆಯಿಂದ ನಾವುಗಳು ಮಂತ್ರಿಗಳಾಗಿದ್ದೇವೆ. ದೇಶದ ಪ್ರಜೆಗಳ ರಕ್ಷಣೆ ಮಾಡುವ ಸಂವಿಧಾನದ ಬಗ್ಗೆ ಜಾಗೃತಿ ಮೂಡಿಸುವಂತಾಗಿರುವುದೇ ದೊಡ್ಡ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಸಂವಿಧಾನ ರಕ್ಷಿಸುವ ಜವಾಬ್ದಾರಿ ಕಾಂಗ್ರೆಸ್ ಪಕ್ಷ ಹಾಗೂ ಪ್ರತಿಯೊಬ್ಬರ ಮೇಲಿದೆ. ಕಳೆದ ಮೂವತ್ತು ವರ್ಷಗಳಿಂದಲೂ ಅಂಬೇಡ್ಕರ್ ವಿಚಾರವನ್ನು ಹೇಳುತ್ತಾ ಬರುತ್ತಿದ್ದೇವೆ. ಸಂವಿಧಾನ ರಕ್ಷಾ ಅಭಿಯಾನ ಪ್ರತಿ ತಾಲ್ಲೂಕು, ಗ್ರಾಮ ಮಟ್ಟಕ್ಕೆ ಹೋಗಬೇಕು. ದಲಿತ ಹೋರಾಟಗಾರ ಎಂ.ಜಯಣ್ಣನವರ ಸಮಾಧಿ ಸ್ಥಳದಲ್ಲಿ ಸ್ಮಾರಕ ನಿರ್ಮಿಸಿ ಅಲ್ಲಿ ಅಂಬೇಡ್ಕರ್, ಬುದ್ದ, ಬಸವಣ್ಣನ ವಿಚಾರಗಳನ್ನು ಪ್ರತಿಯೊಬ್ಬರಿಗೂ ತಿಳಿಸುವ ಕೆಲಸವಾಗಬೇಕು. ಅದಕ್ಕಾಗಿ ಮುಂದಿನ ದಿನಗಳಲ್ಲಿ ಪರಿಣಾಮಕಾರಿ ಹೆಜ್ಜೆಗಳನ್ನಿಡುತ್ತೇವೆ. ಇಂದಿನ ಮಕ್ಕಳಿಗೆ ಅಂಬೇಡ್ಕರ್ ವಿಚಾರಗಳನ್ನು ಮನನ ಮಾಡುವ ಅಗತ್ಯತೆಯಿದೆ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ದೇಶಕ್ಕೆ ನೀಡಿರುವ ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಮುಂದುವರೆದ ದೇಶಗಳು ನಮ್ಮ ಸಂವಿಧಾನವನ್ನು ಗೌರವಿಸುತ್ತಿವೆ. (Constitution) ಕೋಮುವಾದಿಗಳು ಸಂವಿಧಾನ ಬದಲಾವಣೆ ಮಾಡುವುದಾಗಿ ಹೇಳುತ್ತಿದ್ದಾರೆ. ಸಾಮಾಜಿಕ ನ್ಯಾಯವೇ ಸಂವಿಧಾನದ ಆಶಯವಾಗಿರುವುದರಿಂದ ಪ್ರತಿ ಹಳ್ಳಿ ಹಳ್ಳಿಗೆ ಸಂವಿಧಾನ ರಕ್ಷಾ ಅಭಿಯಾನ ಮುಟ್ಟಬೇಕೆಂದರು.
ಮಾಜಿ ಸಚಿವ ಹೆಚ್.ಆಂಜನೇಯ ಮಾತನಾಡುತ್ತ ಸಂವಿಧಾನ ರಕ್ಷಾ ಅಭಿಯಾನ ಕುರಿತು ದೇಶದೆಲ್ಲೆಡೆ ದೊಡ್ಡ ಚರ್ಚೆಯಾಗುತ್ತಿದೆ. ಕೋಮುವಾದಿ ಬಿಜೆಪಿ.ಯವರು ಸಂವಿಧಾನವನ್ನು ಮುಟ್ಟಿದರೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ದೊಡ್ಡ ಕ್ರಾಂತಿಯಾಗುತ್ತದೆ. ಅಂಬೇಡ್ಕರ್ ದೇಶ ವಿದೇಶಗಳಲ್ಲಿ ಓದಿ ಸಂವಿಧಾನವನ್ನು ಕೊಟ್ಟಿದ್ದಾರೆ. ಚಿಕ್ಕಂದಿನಲ್ಲಿಯೇ ಸಾಕಷ್ಟು ಹಿಂಸೆ, ನೋವು, ಅವಮಾನ ಅನುಭವಿಸಿದ್ದರಿಂದ ಸಂವಿಧಾನ ನೀಡಲು ಸಾಧ್ಯವಾಯಿತೆಂದು ಹೇಳಿದರು.
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ ಸಂವಿಧಾನ ಉಳಿದರೆ ಪ್ರತಿಯೊಬ್ಬರು ಗೌರವದಿಂದ ಬದುಕಲು ಸಾಧ್ಯ. ಸ್ವಲ್ಪ ಯಾಮಾರಿದರೂ ಮುಂದಿನ ಪೀಳಿಗೆಗೆ ದ್ರೋಹ ಬಗೆದಂತಾಗುತ್ತದೆ. ಭರವಸೆಯ ನಾಯಕ ಸತೀಶ್‍ಜಾರಕಿಹೊಳಿರವರು ಮಾನವ ಬಂಧುತ್ವದ ಮೂಲಕ ನಾಡಿನಾದ್ಯಂತ ಸಂವಿಧಾನ ರಕ್ಷಣೆ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆಂದು ಪ್ರಶಂಶಿಸಿದರು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಮಾತನಾಡುತ್ತ ಅಧಿಕಾರದ ಆಸೆಗಾಗಿ ಕೋಮುವಾದಿ ಬಿಜೆಪಿ. ಸಂವಿಧಾನ ಬದಲಾಯಿಸುವುದಾಗಿ ಹೇಳಿ ಜನತೆಯ ದಿಕ್ಕು ತಪ್ಪಿಸುತ್ತಿರುವುದರ ವಿರುದ್ದ ಎಲ್ಲರೂ ಎಚ್ಚರಿಕೆಯಿಂದ ಇರಬೇಕು. ಮೂಢನಂಬಿಕೆ ಹೋಗಲಾಡಿಸಿ ವೈಚಾರಿಕತೆಯನ್ನು ಎತ್ತಿ ಹಿಡಿಯುವ ಮೂಲಕ ಸಂವಿಧಾನ ಉಳಿಸಬೇಕಾಗಿದೆ ಎಂದರು.
ನ್ಯಾಯವಾದಿ ಅನಂತನಾಯಕ ಉಪನ್ಯಾಸ ನೀಡಿ ರಾಹುಲ್‍ಗಾಂಧಿರವರ ಸಂದೇಶದಂತೆ ದೇಶಾದ್ಯಂತ ಸಂವಿಧಾನ ರಕ್ಷಾ ಅಭಿಯಾನ ನಡೆಯುತ್ತಿದೆ. ವಿಭಿನ್ನವಾದ ಭಾರತದಲ್ಲಿ ಅನೇಕ ಜಾತಿ, ಧರ್ಮ, ಸಂಸ್ಕøತಿಗಳಿರುವುದರಿಂದ ಪ್ರತಿ ಪ್ರಜೆಗೂ ಸಂವಿಧಾನದಿಂದ ಸಮಾನತೆ ಸಿಕ್ಕಿದೆ. ಹಾಗಾಗಿ ಸಂವಿಧಾನ ಉಳಿಸಿಕೊಳ್ಳುವ ಕೆಲಸಕ್ಕೆ ಎಲ್ಲರೂ (Constitution) ಕೈಜೋಡಿಸುವಂತೆ ಮನವಿ ಮಾಡಿದರು.
ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ರಾಮಚಂದ್ರಪ್ಪ ಮಾತನಾಡಿ ಸಂವಿಧಾನ ರಕ್ಷಣೆ ಮಾಡುವಂತೆ ಹೋರಾಟ ಮಾಡುವುದೇ ದುರಂತ. ದೇಶದ ಪ್ರತಿ ಪ್ರಜೆಗೂ ಸಮಾನತೆ ಸಿಕ್ಕಿದೆಯೆಂದರೆ ಸಂವಿಧಾನದಿಂದ ಮಾತ್ರ. ಸಂವಿಧಾನ ಬೇಡ ಎನ್ನುವವರ ನಡುವೆ ಸಂವಿಧಾನ ಉಳಿಸಬೇಕಾಗಿದೆ ಎಂದರು.
ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಸಂವಿಧಾನ ರಕ್ಷಾ ಅಭಿಯಾನದ ಅಧ್ಯಕ್ಷತೆ ವಹಿಸಿದ್ದರು.
ಇದನ್ನೂ ಓದಿ: Max Fashion | ಚಿತ್ರದುರ್ಗದ ಮ್ಯಾಕ್ಸ್ ಫ್ಯಾಷನ್ ಗೆ 10 ಸಾವಿರ ದಂಡ, ಏಕೆ ಗೊತ್ತೆ?
ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ಆದಿಜಾಂಬವ ಅಭಿವೃದ್ದಿ ನಿಗಮದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ಜೆ.ಜೆ.ಹಟ್ಟಿಯ ಡಾ.ಬಿ.ತಿಪ್ಪೇಸ್ವಾಮಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ವಿಧಾನಪರಿಷತ್ ಮಾಜಿ ಸದಸ್ಯೆ ಜಯಮ್ಮ ಬಾಲರಾಜ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್, ದ್ರಾಕ್ಷಾ ರಸ ಮಂಡಳಿ ಅಧ್ಯಕ್ಷ ಬಿ.ಯೋಗೇಶ್‍ಬಾಬು, ಸೋಮಶೇಖರ್, ಗ್ಯಾರೆಂಟಿ ಅನುಷ್ಠಾನಗಳ ಸಮಿತಿ ಅಧ್ಯಕ್ಷ ಆರ್.ಶಿವಣ್ಣ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಡಿ.ಎನ್.ಮೈಲಾರಪ್ಪ, ಸಂಪತ್‍ಕುಮಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತ ನಂದಿನಿಗೌಡ, ಮುರುಳಿಧರ ಹಾಲಪ್ಪ, ಬಿ.ಟಿ.ಜಗದೀಶ್, ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ಎಸ್.ಜಯಣ್ಣ, ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷ ಮಂಜುನಾಥ್, ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಎನ್.ಡಿ.ಕುಮಾರ್, ಕುಶಲ ಕರ್ಮಿ ವಿಭಾಗದ ಅಧ್ಯಕ್ಷ ಪ್ರಸನ್ನಕುಮಾರ್, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಸೈಯದ್ ಖುದ್ದೂಸ್ ಇನ್ನು ಅನೇಕರು ವೇದಿಕೆಯಲ್ಲಿದ್ದರು.
