
Chitradurga news|nammajana.com|21-9-2024
ನಮ್ಮಜನ.ಕಾಂ, ಚಿತ್ರದುರ್ಗ: 2024-25ನೇ ಶೈಕ್ಷಣಿಕ ಸಾಲಿನ ಕರ್ನಾಟಕದ ಸರ್ಕಾರಿ-ಖಾಸಗಿ ಶಾಲಾ ಮಕ್ಕಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ದಸರಾ ರಜೆ (Dasara Holidays 2024 in karnataka) ಘೋಷಿಸಿದೆ. ನಾಡ ಹಬ್ಬ ದಸರಾ ಹಬ್ಬಕ್ಕೆ ಅದ್ಧೂರಿ ಸಿದ್ದತೆ ನಡೆಸುತ್ತಿರುವ ರಾಜ್ಯ ಸರ್ಕಾರ, ಅಕ್ಟೋಬರ್ 3 ರಿಂದ 20 ತನಕ ದಸರಾ ರಜೆ ಘೋಷಿಸಿದೆ. ಈ ಹಿಂದೆ ಮಂಗಳೂರಿನ ಭಾಗದಲ್ಲಿ ವಿದ್ಯಾರ್ಥಿಗಳ ದಸರಾ ರಜೆಯಲ್ಲಿ ಕೊಂಚ ಮಾರ್ಪಾಡು ಆಗುತ್ತಿತ್ತು. ಆದರೆ, ಈ ಬಾರಿ ಯಾವುದೇ ಮಾರ್ಪಾಡು ಆಗಿಲ್ಲ. ಇಡೀ ಕರ್ನಾಟಕದ ಶಾಲೆಗಳಿಗೆ ಒಂದೇ ಮಾರ್ಗದರ್ಶಿ ರೂಪಿಸಿದೆ.
ಕರ್ನಾಟಕ ರಾಜ್ಯದಲ್ಲಿ 2024ರ ಶೈಕ್ಷಣಿಕ ವರ್ಷವು ಮೇ 29ರಿಂದ ಪ್ರಾರಂಭವಾಯಿತು. ಮೊದಲ ಅವಧಿಯು ಅಕ್ಟೋಬರ್ 2ರ ತನಕ ಇರಲಿದೆ. ಸೆಪ್ಟೆಂಬರ್ 23ರಿಂದ ಮಧ್ಯಂತರ ಪರೀಕ್ಷೆಗಳು ಶುರುವಾಗಿ ಸೆಪ್ಟೆಂಬರ್ 30ರ ತನಕ ನಡೆಯಲಿದೆ. ಆ ಬಳಿಕ ಶಾಲಾ ಮಕ್ಕಳಿಗೆ ದಸರಾ ರಜೆ ಪ್ರಕ್ರಿಯೆ ಆರಂಭವಾಗಲಿದೆ. ಅಕ್ಟೋಬರ್ 2ರಂದು ಎಲ್ಲಾ ಶಾಲೆಗಳಲ್ಲೂ ಗಾಂಧಿ ಜಯಂತಿ ಆಚರಿಸಿದ ಮರು ದಿನದಿಂದ ಶಾಲಾ ಮಕ್ಕಳು ರಜೆಯ ಮಜಾ ಕಳೆಯಲಿದ್ದಾರೆ.
ಇದನ್ನೂ ಓದಿ: ವ್ಯಕ್ತಿಯ ಮೇಲೆ ಊರ ದ್ವಾರ ಬಾಗಿಲು ಕಲ್ಲುಗಳ ಕುಸಿತ, ಮುಂದೇ ಆಗಿದ್ದೇನು? | Hosdurga news
ಅಕ್ಟೋಬರ್ 3 ರಿಂದ 20ರ ತನಕ ಅಂದರೆ 17 ದಿನಗಳ ಕಾಲ ರಜೆ ಸಿಗಲಿದೆ. ಅಕ್ಟೋಬರ್ 21ರಿಂದ 2ನೇ ಅವಧಿಯು ಪ್ರಾರಂಭವಾಗಲಿದ್ದು, 2025ರ ಏಪ್ರಿಲ್ 10 ತನಕ ನಡೆಯಲಿದೆ. 2024-2025ರ ಶೈಕ್ಷಣಿಕ ವರ್ಷದ ಶಾಲಾ ಅವಧಿಯ ಮಾರ್ಗದರ್ಶಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ, ಶಾಲೆಗಳು ಆರಂಭಕ್ಕೂ ಮುನ್ನ ಪ್ರಕಟಣೆ ಹೊರಡಿಸಿತ್ತು. ಅದರ ನಿಯಮಾನುಸಾರದಂತೆ ರಜೆಗಳು ಘೋಷಣೆಯಾಗಿವೆ. ಅಕ್ಟೋಬರ್ ತಿಂಗಳಲ್ಲಿ ಕೇವಲ 11 ದಿನಗಳು ತರಗತಿಗಳು ನಡೆಯಲಿವೆ.
