Chitradurga news|nammajana.com|19-10-2024
ನಮ್ಮಜನ.ಕಾಂ, ಹಿರಿಯೂರು: ಗ್ರಾಮದ ಸೊಸೆಯರು ಕುಣಿಯುವ ವಿಶಿಷ್ಟ ಸಂಪ್ರದಾಯದ ಜಾತ್ರೆಯೊಂದು (Dasara) ತಾಲೂಕಿನ ಬಾಲೇನಹಳ್ಳಿ ಗ್ರಾಮದಲ್ಲಿ ನಡೆಯಿತು.
ಕಾಡುಗೊಲ್ಲರ ಆರಾಧ್ಯ ದೇವತೆ ಗೊಲ್ಲಹಳಮ್ಮನ ಭಂಡಾರೋತ್ಸವ ಗುರುವಾರ ಸಂಭ್ರಮದಿಂದ ಜರುಗಿತು. ಈ ಭಂಡಾರೋತ್ಸವದಲ್ಲಿ ಗ್ರಾಮದ ಸೊಸೆಯಂದಿರು ಪ್ರತಿ (Dasara) ವರ್ಷವೂ ಕುಣಿಯುವುದು ವಾಡಿಕೆಯಾಗಿದೆ.
ದಸರಾ ಹಬ್ಬದ ವಿಜಯದಶಮಿ ಅಂಬಿನೋತ್ಸವದೊಂದಿಗೆ ಆರಂಭವಾಗುವ ಈ ಜಾತ್ರೆ ಏಕಾದಶಿ ವಿಶೇಷ ಪೂಜೆ, ದ್ವಾದಶಿ, ಹರಿಸೇವೆ, ಕುರಿ ಕರೆಯುವ ಉತ್ಸವ, ಪಲ್ಲಕ್ಕಿ ಉತ್ಸವ, ಆರತಿ, ಸಿಡಿ ಮದ್ದಿನ ಉತ್ಸವ, ಮರುದಿನ ಭoಡಾರೋತ್ಸವ ಕಾರ್ಯಕ್ರಮದೊಂದಿಗೆ ವಿಜೃಂಭಣೆಯಿಂದ ಕೊನೆಗೊಳ್ಳುತ್ತದೆ.
ಹಬ್ಬದ ಕೊನೆಯ ದಿನದಲ್ಲಿ ಸೊಸೆಯಂದಿರು ಸೀರೆಯುಟ್ಟು, ಕೈಯಲ್ಲಿ ಬೇವಿನ ಸೊಪ್ಪು ಹಿಡಿದು ದೇವಿಯ ಭoಡಾರವನ್ನ ಹಣೆಗೆ ಇಟ್ಟುಕೊಂಡು ಸ್ವಯಂ ಪ್ರೇರಿತರಾಗಿ ವಾಲಗ ಹಾಗೂ ತಮಟೆಯ ಸದ್ದಿಗೆ ಹೆಜ್ಜೆ ಹಾಕುವ ಮೂಲಕ ಹರಕೆ ತೀರಿಸುತ್ತಾರೆ.
ಚಿತ್ತಮುತ್ತಿ ಕುಲದ ಕರಡಿ ಕುಳ್ಳಪ್ಪನ ವಂಶಸ್ಥರಾದ ಕರಡಿಗೊಲ್ಲರು ಈ ಶ್ರೀದೇವಿ ಗೊಲ್ಲಳ್ಳಮ್ಮ, ಶ್ರೀ ಚಿತ್ರಲಿಂಗೇಶ್ವರ ಸ್ವಾಮಿ ಹಾಗೂ ತಿಮ್ಮಪ್ಪ ಸ್ವಾಮಿಯನ್ನು ಆರಾಧನೆ ಮಾಡಿಕೊಂಡು ಬರುತ್ತಿದ್ದಾರೆ.
ವಾರದವರೆಗೂ ದಸರಾ ಹಬ್ಬವನ್ನು ವಿಶೇಷವಾಗಿ ವೈಭವದಿಂದ ಆಚರಿಸಿಕೊಂಡು ಬರಲಾಗುತ್ತದೆ. ಗ್ರಾಮದಲ್ಲಿ ಬಹುತೇಕ ಕರಡಿಗೊಲ್ಲರ ಬೆಡಗಿನ ಮನೆಗಳಿವೆ. ಈ ಕುಟುಂಬಗಳಿಗೆ ಸೊಸೆಯಾಗಿ ಬಂದವರು ಪ್ರತಿಯೊಬ್ಬರು ಈ ಭoಡಾರ ಉತ್ಸವದಲ್ಲಿ ಭಾಗಿಯಾಗಿ ಕುಣಿಯುವ ಮೂಲಕ ಈ ಸಂಪ್ರದಾಯ ಆಚರಣೆ ಮಾಡಿಕೊಂಡು ಬರುತ್ತಿರುವುದು ತಾಲೂಕಿನಲ್ಲಿಯೇ ವಿಶಿಷ್ಟವಾಗಿದೆ.
ಗ್ರಾಮಕ್ಕೆ ಮದುವೆಯಾಗಿ ಬಂದ ಸೊಸೆಯಂದಿರು ಕುಣಿಯದಿದ್ದರೆ ಗ್ರಾಮದೇವತೆ ಗೊಲ್ಲಳಮ್ಮ ಕುಣಿಯುತ್ತಾಳೆ. ಹೀಗಾಗಿ ಅಮ್ಮನ ಅಪ್ಪಣೆಯಂತೆ ಅನಾದಿಕಾಲದಿಂದಲೂ ಸೊಸೆಯಂದಿರು ಈ ಉತ್ಸವದಲ್ಲಿ ಕುಣಿಯುವುದು ವಾಡಿಕೆಯಾಗಿ ಮುಂದುವರೆದುಕೊಂಡು ಬಂದಿದೆ.
ಹಬ್ಬದ ಕೊನೆಯ ಭಂಡಾರೋತ್ಸವದ ದಿನದಂದು ಗ್ರಾಮದಲ್ಲಿ ಶಾಂತಿ, ಸಮೃದ್ಧಿಗಾಗಿ ದೇವರು ಮನೆ ಮನೆಗೆ ಭೇಟಿ ನೀಡುತ್ತದೆ. ಬಳಿಕ ಸೊಸೆಯಂದಿರು ಗ್ರಾಮದ ಹನುಮಂತರಾಯ (Dasara) ದೇವಸ್ಥಾನದಿಂದ ಕುಣಿತ ಆರಂಭಿಸುತ್ತಾರೆ. ಇದಾದ ಬಳಿಕ ಮಣೇವು ಕಾರ್ಯಕ್ರಮದೊಂದಿಗೆ ದಸರಾ ಹಬ್ಬ ಕೊನೆಗೊಳ್ಳುತ್ತದೆ.
ಇದನ್ನೂ ಓದಿ: ಹೊಸ ಕೆರೆ ಕೋಡಿ | ಹಲವು ಗ್ರಾಮಗಳಿಗೆ ಸಂಪರ್ಕ ಕಡಿತ | Hosa kere
ವಿಶೇಷ
ನಮ್ಮೂರಿನ ದೇವಿಗೆ ಕುಣಿಯುವುದು ಎಂದರೆ ಅದು ಭಕ್ತಿಯ ಸಂಕೇತವಾಗಿದೆ. ಹಾಗಾಗಿ ನಾವು ದೇವಿಯನ್ನು (Dasara) ಸಂತೃಪ್ತಿಗೊಳಿಸಲು ಕುಣಿಯುತ್ತೇವೆ. ಮಕ್ಕಳ ಜೊತೆ ಕುಣಿಸಿಕೊಳ್ಳುವುದು ದೇವಿಗೆ ಇಷ್ಟವಿಲ್ಲ. ಹಾಗಾಗಿ ವಿಶೇಷವಾಗಿ ಸೊಸೆಯಂದಿರು ಕುಣಿದಾಗ ದೇವಿ ಸಂತೃಪ್ತಿಯಾಗುತ್ತಾಳೆ. ಗ್ರಾಮದಲ್ಲಿ ಉತ್ತಮ ಮಳೆಯಾಗಲಿ, ಯಾವುದೇ ರೋಗ ರುಜಿನಗಳು ಬಾರದಿರಲಿ, ಊರು ಅಭಿವೃದ್ಧಿಯಾಗಲಿ, ಶಾಂತಿ ನೆಮ್ಮದಿ ದೊರಕಲಿ ಎಂಬುದು ಕುಣಿತದ ಸಂಕೇತವಾಗಿದೆ ಎನ್ನುತ್ತಾರೆ ದೇವಿಯ ಸೊಸೆಯಂದಿರು.