Chitradurga News | Nammajana.com | 27-4-2024
ನಮ್ಮಜನ.ಕಾಂ ಮೊಳಕಾಲ್ಮುರು:-ತಾಲೂಕಿನ ಬಿ.ಜಿ.ಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದ್ದು,ಹನಿ ನೀರಿಗೂ ಜನ ಪರಿತಪಿಸುವಂತಾಗಿದೆ, ಕುಡಿಯಲು ನೀರು ಕೊಡದ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಅಧಿಕಾರಿಗಳು ವಿರುದ್ದ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಗ್ರಾಪಂ ಕಚೇರಿಗೆ ಬೀಗ ಜಡಿದು ಕಚೇರಿಯ ಮುಂದೆ ಅಡುಗೆ ಮಾಡಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ.
ಬಿ.ಜಿ.ಕೆರೆ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆ ಸೇರಿದಂತೆ ಗ್ರಾಪಂ ವ್ಯಾಪ್ತಿಯ ಮೊಗಲಹಳ್ಳಿ,ಮುತ್ತಿಗಾರಹಳ್ಳಿ, ಮ್ಯಾಸರಹಟ್ಟಿ ಹಾಗೂ ಸೂರಮ್ಮನಹಳ್ಳಿಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿದ್ದು,ಹನಿ ನೀರಿಗೂ ಸಾರ್ವಜನಿಕರು ಪರದಾಡುತ್ತಿದ್ದಾರೆ. ಸಮಸ್ಯೆ ಪರಿಹಾರ ಮಾಡಬೇಕಾದ ಅಧಿಕಾರಿಗಳು,ಕುಂಟು ನೆಪ ಹೇಳಿ ಕಾಲಹರಣ ಮಾಡುತ್ತಿದ್ದಾರೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ:ಮದುವೆ ಶಾಸ್ತ್ರಗಳ ಬದಿಗಿಟ್ಟು ಮತದಾನಕ್ಕೆ ಆಗಮಿಸಿದ ನವಜೋಡಿ
ಗ್ರಾಮದಲ್ಲಿ ಕೂಲಿ ಕಾರ್ಮಿಕರೇ ಹೆಚ್ಚು ವಾಸವಿದ್ದಾರೆ. ಈಗಲು ರಾತ್ರಿ ಹೊತ್ತಿನಲ್ಲಿ ದುಡಿಮೆಗೆ ಹೋಗುವ ಅವರು, ರಾತ್ರಿ ನೀರಿಗಾಗಿ ಪರದಾಡುತ್ತಿದ್ದಾರೆ.
ನೀರು ತುಂಬಲು ರಾತ್ರಿ ಹೊತ್ತು ನಿದ್ದೆಗೆಟ್ಟು ನೀರು ಹಿಡಿಯಬೇಕು, ನೀರು ಹಿಡಿಯಲು ಹೋದ ಮಹಿಳೆಯೋರ್ವಳು ಕಾಲು ಜಾರಿ ಬಿದ್ದ ಪರಿಣಾಮ ಕಾಲಿಗೆ ತೀವ್ರ ಪೆಟ್ಟಾಗಿದೆ. ಎರಡು ತಿಂಗಳಿಂದ ಈ ಸ್ಥಿತಿ ಇದ್ದರೂ
ಗ್ರಾಪಂ ಪಿಡಿಒ ಹಾಗೂ ಅಧ್ಯಕ್ಷರು ಸಮಸ್ಯೆಗೆ ಸ್ಪಂದಿಸುತ್ತಿಲ್ಲ.
ಹಗಲಲ್ಲಿ ಹೆಚ್ಚು ಜನ ಸೇರುವ ಕಾರಣ, ಹಲವರು ರಾತ್ರಿ ದೂರದ ಸ್ಥಳಗಳಿಗೆ ಹೋಗಿ ನೀರು ತರುತ್ತಾರೆ.ಗ್ರಾಪಂ ವ್ಯಾಪ್ತಿಯ ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆ, ಸೂರಮ್ಮನಹಳ್ಳಿ ಹಾಗೂ
ಮೊಗಲಹಳ್ಳಿಯಲ್ಲಿ ಜನರು ತಳ್ಳು ಗಾಡಿ,ದ್ವಿಚಕ್ರವಾಹನ, ಸೈಕಲ್ ಹಾಗೂ ಆಟೋಗಳಲ್ಲಿ ದೂರದ ರೈತರ ತೋಟಗಳಿಗೆ ತೆರಳಿ ನೀರು ತರುವ ಸ್ಥಿತಿ ಇದೆ, ನೀರಿನ ಸಮಸ್ಯೆ ಬಗೆ ಹರಿಯುವವರೆಗೂ ಸ್ಥಳ ಬಿಟ್ಟು ಕದಲವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.