Chitradurga News | Nammajana.com 11-5-2024
ನಮ್ಮಜನ.ಕಾಂ , ಪರಶುರಾಂಪುರ: ಸಮೀಪದ ಟಿ.ಎನ್.ಕೋಟೆಯಲ್ಲಿ ಶುಕ್ರವಾರ ಪ್ರತಿ ವರ್ಷದಂತೆ ಈ ವರ್ಷವು ಬಸವ ಜಯಂತಿಯಂದು ಕೋಡಿ ಬಸವೇಶ್ವರ ಸ್ವಾಮಿಯ ರಥೋತ್ಸವ ಶ್ರದ್ದಾ, ಭಕ್ತಿಯಿಂದ ವಿಜೃಂಭಣೆಯಿಂದ ನೆರವೇರಿದ್ದು ಶಾಸಕ ಟಿ.ರಘುಮೂರ್ತಿ ಭಾಗವಹಿಸಿ ದೇವರಲ್ಲಿ ನಮ್ಮ ಜಿಲ್ಲೆಗೆ ಉತ್ತಮ ಮಳೆ ಬೆಳೆ ಆಗಲಿ ಎಂದು ಪ್ರಾರ್ಥನೆ ನಡೆಸಿದರು.
ಸ್ವಾಮಿಗೆ ಬೆಳಿಗ್ಗೆ ಕುಂಭಾಭಿಷೇಕ ಮತ್ತು ಕಳಸ ಪ್ರತಿಷ್ಠಾಪನೆ ಜತೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿಸಿದ ಸಂದರ್ಭದಲ್ಲಿ ಶಾಸಕರು ವಿಶೇಷ ಪೂಜೆ ಸಲ್ಲಿಸಿದರು. ರಾಜ್ಯದಲ್ಲಿ ಬರಗಾಲ ಎದುರಾಗಿದ್ದು ಅಲ್ಲಲ್ಲಿ ಅಲ್ಪಸ್ವಲ್ಪ ಮಳೆಯಾಗುತ್ತಿದ್ದು ಉತ್ತಮ ಮಳೆಯಾಗಲಿ ಎಂದು ಪ್ರಾರ್ಥನೆ ನಡೆಸಿದ್ದೇನೆ. ಮಳೆಯಿಂದ ರೈತರು ಸಂತೃಷ್ಟಿಯಿಂದ ಇರಲು ಸಾಧ್ಯ, ರೈತರಿಗೆ ಮಳೆ ಬೆಳೆಗೆ ಉತ್ತಮವಾದರೆ ನಾಡು ಸುಭಿಕ್ಷವಾಗಿರುತ್ತದೆ ಎಂದು ಹೇಳಿದರು.
ಈ ಜಾತ್ರೆಯಲ್ಲಿ ಒಪ್ಪತ್ತಿನಿಂದ ಭಕ್ತರು ರಥಕ್ಕೆ ಅಲಂಕರಿಸಿ ಬಸವೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ರಥವನ್ನು ಎಳೆಯಲಾಯಿತು.ಈ ವೇಳೆಯಲ್ಲಿ ಜಾನಪದ ಕಲಾ ತಂಡಗಳ ಜತೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆಯಲ್ಲಿ ನೆರೆದಿದ್ದ ಭಕ್ತರು ಭಕ್ತಿಯಿಂದ ಹಣ್ಣು ಹೂವುಗಳನ್ನು ದೇವರಿಗೆ ಅರ್ಪಿಸುವ ಜತೆ ರಥದ ಗಾಲಿಗೆ ತೆಂಗಿನ ಕಾಯಿ ಒಡೆದು ಬಳಿಕ ಸೂರುಬೆಲ್ಲ, ಮಂಡಕ್ಕಿ, ಬಾಳೆಹಣ್ಣನ್ನು ರಥಕ್ಕೆ ಎಸೆಯುವ ಮೂಲಕ ಸ್ವಾಮಿ ಕೃಪೆಗೆ ಪಾತ್ರರಾದರು.
ಇದನ್ನೂ ಓದಿ: ಪೆನ್ ಡ್ರೈವ್ |ಬಿಜೆಪಿ ಮುಖಂಡ ವಕೀಲ ದೇವರಾಜೇಗೌಡ ಪೋಲಿಸ್ ವಶಕ್ಕೆ
ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಮುತ್ತುರಾಜ, ಸ್ಥಳೀಯ ಗ್ರಾಪಂ ಸದಸ್ಯರು,ಹಿರಿಯರು,ಮುಖಂಡರು ಸುತ್ತಮುತ್ತಲಿನ ಗ್ರಾಮಸ್ಥರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.