Chitradurga news|Nammajana.com|3-10-2025
ನಮ್ಮಜನ.ಕಾಂ, ಚಿತ್ರದುರ್ಗ: ನಗರದ ಹೊಸ (Garbage disposal) ಬಡಾವಣೆಯ(ಕೆರೆ ಅಂಗಳ ನೆಹರು ನಗರ) ರಸ್ತೆ ಬದಿಯ ಖಾಲಿ ನಿವೇಶನದಲ್ಲಿ ಹಾಕಿರುವ ಕಸವು ರಸ್ತೆಗೆ ಹರಡಿಕೊಂಡಿದೆ….

ಎಲ್ಲೆಂದರಲ್ಲಿ ಕಸದ ರಾಶಿ, ಸರಿಯಾಗಿ ವಿಲೇವಾರಿ ಮಾಡದ ನಗರಸಭೆ, ಕೊಳೆತು ದುರ್ನಾತ ಬೀರುವ ಕಸದಿಂದ ನಾನಾ ರೋಗಗಳ ಆಹ್ವಾನ. ಮೂಗು ಮುಚ್ಚಿಕೊಂಡು ಓಡಾಡುವ ದುಸ್ಥಿತಿ…
ಇದು ಚಿತ್ರದುರ್ಗ ನಗರದ ಹೊಸ ಲೇಔಟ್ (ಕೆರೆ ಅಂಗಳದಿಂದ) ಮಂಡಕ್ಕಿ ಭಟ್ಟಿ, ನೂರ್ ಮೊಹಲ್ಲಾ, ನೆಹೆರೂ ನಗರದಿಂದ ಭೋವಿ ಕಾಲೋನಿ ಹೋಗುವ ರಸ್ತೆ ಬದಿಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕಸ ಎಂಬ ಮಹಾಮಾರಿಯ ಚಿತ್ರಣ..
ಯಾವುದೇ ನಗರ ಉತ್ತಮ ಎನಿಸಿಕೊಳ್ಳುವುದರಲ್ಲಿ ಸ್ವಚ್ಛತೆಯು ಮಹತ್ತರ ಪಾತ್ರ ವಹಿಸುತ್ತದೆ. ಅದಕ್ಕಾಗಿ ನಗರದ ಘನತ್ಯಾಜ್ಯ ನಿರ್ವಹಣೆ ಜೊತೆಗೆ, ಸೌಂದರ್ಯೀಕರಣಕ್ಕೆ ಸ್ಥಳೀಯ ಆಡಳಿತಗಳು ವಿಶೇಷ ಒತ್ತು ನೀಡುತ್ತವೆ. ನೈರ್ಮಲ್ಯವು ಸ್ವಚ್ಛ ನಗರವೆಂಬ ಹಣೆಪಟ್ಟಿಯನ್ನಷ್ಟೇ ತಂದುಕೊಡದೆ, ಅಲ್ಲಿನ ಜನರಿಗೆ ಉತ್ತಮ ಆರೋಗ್ಯದ ಖಾತ್ರಿಯನ್ನು ಸಹ ನೀಡುತ್ತದೆ…
ಚಿತ್ರದುರ್ಗದ ಮಟ್ಟಿಗೆ ಸ್ವಚ್ಛತೆಯ ವಿಷಯದಲ್ಲಿ (Garbage disposal) ನಿರಾಶೆಯಾಗುತ್ತದೆ. ನಗರವನ್ನೊಮ್ಮೆ ಸುತ್ತಾಡಿದರೆ ರಸ್ತೆ ಬದಿ, ಹಾಗೂ ಖಾಲಿ ಜಾಗಗಳಲ್ಲಿ ಕಸದ ರಾಶಿಯ ದರ್ಶನವಾಗುತ್ತದೆ. ನಗರವನ್ನು ಸುತ್ತುವರಿದಿರುವ ಕಲ್ಲಿನ ಗುಡ್ಡಗಳನ್ನು ನೋಡಿದಾಗ ಸಿಗುವ ಸಂತಸ, ನಗರದೊಳಗೆ ಅಡ್ಡಾಡಿದಾಗ ಸಿಗುವುದಿಲ್ಲ….
ಬದಲಿಗೆ, ನಗರವು ಎಷ್ಟೊಂದು ಗಲೀಜಾಗಿದೆಯಲ್ಲಾ ಎಂಬ ಬೇಸರವಾಗುತ್ತದೆ. ನಗರಸಭೆಯ ಪೌರಾಯುಕ್ತರು, ಪರಿಸರ ಎಂಜಿನಿಯರ್, ಆರೋಗ್ಯ ನಿರೀಕ್ಷಕರ ಕಾರ್ಯವೈಖರಿ ಬಗ್ಗೆಯೂ ಅಸಮಾಧಾನ ಮೂಡುತ್ತದೆ. ನಗರದ ಮಧ್ಯಭಾಗದಿಂದ ಕೂಗಳತೆ ದೂರದಲ್ಲಿರುವ, ಈ (ಕೆರೆ ಅಂಗಳ) ದ ಹೊಸ ಲೇಔಟ್ ನ ಸ್ಥಿತಿ ಹೀಗಿದೆಯಲ್ಲಾ ಎಂಬ ಕೋಪವೂ ಬರುತ್ತದೆ…
‘ಹಸಿ ಕಸ, ಒಣ ಕಸ, ಪ್ಲಾಸ್ಟಿಕ್ ಸೇರಿದಂತೆ ವಿವಿಧ ರೀತಿಯ ಇಂತಹ ತ್ಯಾಜ್ಯ ತಂದು ಎಸೆಯುವುದರಿಂದ ಕಸದ ರಾಶಿಗಳು, ಕೊಳಚೆಯ ತಾಣವೂ ಆಗಿವೆ. ಇದರಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಡೆಂಗಿ, ಮಲೇರಿಯಾ, ಚಿಕುನ್ ಗುನ್ಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಭಯದಲ್ಲೇ ಬದುಕುವಂತಾಗಿದೆ….
ಫೀಲ್ಡಿಗಿಳಿಯದ ಅಧಿಕಾರಿಗಳು?
ನಗರಸಭೆ ಅಧಿಕಾರಿಗಳು ಕಚೇರಿ ಬಿಟ್ಟು ನಗರವನ್ನು ಸುತ್ತಾಡಿದರೆ ಏನಾದರೂ ಬದಲಾವಣೆಯಾಗುತ್ತದೆ. ಅದು ಬಿಟ್ಟು ಕಚೇರಿಯಲ್ಲೇ ಇದ್ದರೆ ಹೊರಗಡೆ ಹೇಗಿದೆ? ಏನಾಗಿದೆ? ಎಂಬುದು ಗೊತ್ತಾಗುವುದಾದರೂ ಹೇಗೆ ಎಂಬ ಪ್ರಶ್ನೆ ಸಾರ್ವಜನಿಕರದ್ದು. ‘ಸ್ವಚ್ಛತೆಯ ಹೊಣೆ ಹೊತ್ತಿರುವ ಪೌರಾಯುಕ್ತರಾದಿಯಾಗಿ ಪರಿಸರ ಎಂಜಿನಿಯರ್, ಆರೋಗ್ಯ ನಿರೀಕ್ಷಕರು ವಾರ್ಡ್‌ಗಳಿಗೆ ಭೇಟಿ ನೀಡಬೇಕು. ಪೌರ ಕಾರ್ಮಿಕರು ಸ್ವಚ್ಛತೆ ಕೆಲಸವನ್ನು ಸರಿಯಾಗಿ ಮಾಡುತ್ತಿದ್ದಾರೆಯೇ ಎಂದು ನಿಗಾ ಇಡಬೇಕು. ರಸ್ತೆ ಮತ್ತು ಖಾಲಿ ಜಾಗದಲ್ಲಿರುವ ಕಸ ತೆರವುಗೊಳಿಸಿ ಅಲ್ಲಿಗೆ ಕಸ ಹಾಕುವವರನ್ನು ಪತ್ತೆ ಹಚ್ಚಿ ಎಚ್ಚರಿಕೆ ನೀಡಬೇಕು. ಅಧಿಕಾರಿಗಳು ಆಗಾಗ ಈ ರೀತಿ ಮಾಡಿದರೆ ನಗರದ ರಸ್ತೆಗಳು ಕಸದ ರಾಶಿಯಿಂದ ಮುಕ್ತವಾಗಲಿವೆ.
ಇದನ್ನೂ ಓದಿ: ವಾಲ್ಮೀಕಿ ಭವನ ಬಳಕೆಗೆ ಮುಹೂರ್ತ ಫಿಕ್ಸ್ | Chitradurga Valmiki Bhavan
(ಕೆರೆ ಅಂಗಳ ನೆಹರು ನಗರ) ಹೊಸ ಲೇಔಟ್ ನಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ ಇರುವುದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಸ್ಥಳೀಯರು ಸಾಂಕ್ರಾಮಿಕ ರೋಗಗಳ ಭೀತಿಯಲ್ಲೇ ಬದುಕುವಂತಾಗಿದೆ. ನಗರಸಭೆಯವರು ಈ ಕುರಿತು ಗಮನ ಹರಿಸದಿದ್ದರೆ ಮುಂದಿನ ದಿನಗಳಲ್ಲಿ ಸಾಂಕ್ರಾಮಿಕ ರೋಗಕ್ಕೆ ನಗರಸಭೆಯೇ ನಾಂದಿಯಾಡಿದಂತೆ ಆಗುತ್ತದೆ ಎಂದು ಯವ ಉತ್ಸಾಹಿ ಅಬ್ಬು ಎಸ್ ಅವರು ಒತ್ತಾಯಿಸಿದ್ದಾರೆ.
