Chitradurga news|nammajana.com|17-05-2025
ನಮ್ಮಜನ.ಕಾಂ, ಚಿತ್ರದುರ್ಗ: ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ
ಗೃಹಲಕ್ಷ್ಮಿ ಯೋಜನೆಯು ಪ್ರತಿ ಮನೆಯ ಯಜಮಾನಿಗೆ ನೆಮ್ಮದಿಯ ಬದುಕು (
Grihalakshmi) ರೂಪಿಸುವಲ್ಲಿ ನೆರವಾಗಿದೆ.
ಬಹಳಷ್ಟು ಮಹಿಳೆಯರ ಬದುಕನ್ನು ಗೃಹಲಕ್ಷ್ಮಿ ಯೋಜನೆ ಕಟ್ಟಿಕೊಟ್ಟಿದ್ದು, ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣದಲ್ಲಿ ಗೃಹಲಕ್ಷ್ಮಿ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಜಿಲ್ಲೆಯಲ್ಲಿ ಯೋಜನೆಯಡಿ ಈವರೆಗೆ 1246.26 ಕೋಟಿ ರೂ. ಹಣ ಮನೆಯ ಯಜಮಾನಿಯರ ಕೈ ಸೇರಿದೆ.
ಸರ್ಕಾರದ ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮಿ ಯೋಜನೆಯು ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಗೃಹಲಕ್ಷ್ಮಿ ಯೋಜನೆ ವರದಾನವಾಗಿದೆ.
ಮಕ್ಕಳ ಶಾಲಾ ಶುಲ್ಕ, ವೈದ್ಯಕೀಯ ಖರ್ಚು, ದಿನಸಿ ಖರೀದಿ ಹೀಗೆ ನಾನಾ ರೀತಿಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿಯಲ್ಲಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ನೀಡುವ ರೂ.2,000 ಸದ್ಭಳಕೆಯಾಗುತ್ತಿದೆ. ಇದರೊಂದಿಗೆ ಕೆಲ ಮಹಿಳೆಯರು ಸ್ವಂತ ವ್ಯಾಪಾರ, ಹೊಲಿಗೆ ಯಂತ್ರ ಖರೀದಿ, ಬಳೆ ಅಂಗಡಿ ವ್ಯಾಪಾರ, ಬ್ಯೂಟಿ ಪಾರ್ಲರ್ ವೃತ್ತಿ ಅಲ್ಲದೆ ಕೆಲವರು ಹೈನುಗಾರಿಕೆಯನ್ನು ಆರಂಭಿಸಿ, ಗೃಹಲಕ್ಷ್ಮೀ ಯೋಜನೆಯ ಸದುಪಯೋಗ (Grihalakshmi) ಪಡೆದುಕೊಂಡಿದ್ದಾರೆ.
ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿಯಾದ ಅರ್ಹ ಫಲಾನುಭವಿಯ ಖಾತೆಗ ರೂ.2,000/-ಗಳನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗುತ್ತಿದೆ. ನೋಂದಣಿ ಪ್ರಕ್ರಿಯೆಗೆ ಕೊನೆಯ ದಿನಾಂಕವಿರುವುದಿಲ್ಲ. ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ವಿತರಿಸುವ ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆಯರು ಈ ಯೋಜನೆಯ ಅರ್ಹ ಫಲಾನುಭವಿಯಾಗಿರುತ್ತಾರೆ. ಗೃಹಲಕ್ಷ್ಮಿ ಯೋಜನೆಯ ಸೌಲಭ್ಯವನ್ನು ಲಿಂಗತ್ವ ಅಲ್ಪಸಂಖ್ಯಾತರಿಗೂ ಸಹ ವಿಸ್ತರಿಸಲಾಗಿದೆ.
ಸ್ತ್ರೀ ಸ್ವಾವಲಂಬನೆಯತ್ತ ಒಂದು ದಿಟ್ಟ ಹೆಜ್ಜೆ:
ರಾಜ್ಯದ ಪ್ರತಿ ಬಡವರ ಮನೆಯ ಕುಟುಂಬದ ಯಜಮಾನಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಸಶಕ್ತರನ್ನಾಗಿ ಮಾಡಲು ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಲಕ್ಷ್ಮಿ ಯೋಜನೆಯು ಜಾರಿಗೊಂಡು ರಾಜ್ಯದ ಕುಟುಂಬಗಳ ಮನೆ ಯಜಮಾನಿಯ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿ ರಾಜ್ಯ ಸರ್ಕಾರವು ಗೃಹಲಕ್ಷ್ಮಿಯನ್ನು ರೂಪಿಸಿದೆ. ಮಹಿಳೆಯರ ಆರ್ಥಿಕ ಸಬಲೀಕರಣದ ದೃಷ್ಟಿಯಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಕುಟುಂಬದ ನಿರ್ವಹಣೆಯಲ್ಲಿ ಮನೆ ಯಜಮಾನಿಯ ಪಾತ್ರ ಬಹುದೊಡ್ಡದು.
ಹೀಗಾಗಿ ಮನೆಯ ನಿರ್ವಹಣೆಗೆ ಅನುಕೂಲವಾಗಲೆಂದು ರಾಜ್ಯ ಸರ್ಕಾರವು ಕುಟುಂಬದ ಯಜಮಾನಿಯ ಖಾತೆಗೆ ಪ್ರತಿ ತಿಂಗಳು ರೂ.2.000 ಜಮಾ ಮಾಡಲು ಯೋಜನೆ ರೂಪಿಸಿ ಅನುಷ್ಠಾನ ಮಾಡಿದೆ.
ಪ್ರತಿ ಕುಟುಂಬದ ನಿರ್ವಹಣೆಯಲ್ಲಿ ಮನೆ ಒಡತಿಯ ಪಾತ್ರ ಬಹು ಮುಖ್ಯವಾಗಿರುತ್ತದೆ. ಹಾಗಾಗಿ ಮನೆ ಯಜಮಾನಿ ಆರ್ಥಿಕವಾಗಿ ಸಬಲೀಕರಣಗೊಂಡಲ್ಲಿ ಕುಟುಂಬದ ನಿರ್ವಹಣಿ ಉತ್ತಮ ಗುಣಮಟ್ಟದಲ್ಲಿರುತ್ತದೆ. ಹೀಗಾಗಿ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.2000 ಗಳನ್ನು (Grihalakshmi) ನೀಡುವ ಗೃಹಲಕ್ಷ್ಮಿ ಯೋಜನೆ ರೂಪಿಸಲಾಗಿದೆ.
ಈ ಯೋಜನೆಗೆ ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಮತ್ತು ಸೇವಾಸಿಂಧು ಪೋರ್ಟಲ್ ಮೂಲಕ ಉಚಿತವಾಗಿ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಜಿಲ್ಲೆಯಲ್ಲಿ ಕಳೆದ 2023 ರ ಆಗಸ್ಟ್ 30ರಂದು ರಾಜ್ಯ ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್ ಅವರ ನೇತೃತ್ವದಲ್ಲಿ ಜರುಗಿದ ಸಮಾರಂಭದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಾಗಿತ್ತು. ಇದೀಗ ಈ ಯೋಜನೆಯ ಸದ್ವಿನಿಯೋಗದ ಪರಿಣಾಮಗಳು ಜಿಲ್ಲೆಯಲ್ಲಿ ಗೋಚರಿಸಲಾರಂಭಿಸಿದ್ದು, ಮಹಿಳೆಯರ ಪಾಲಿಗೆ ಈ ಯೋಜನೆ ನಿಜಕ್ಕೂ ವರದಾನವಾಗಿದೆ.
ರೂ.1246.26 ಕೋಟಿ ಜಮೆ:
ಗೃಹಲಕ್ಷ್ಮಿ ಯೋಜನೆ ಜಾರಿಯಾದ 2023ರ ಆಗಸ್ಟ್ ಮಾಹೆಯಿಂದ ಈವರೆಗೆ ಚಿತ್ರದುರ್ಗ ಜಿಲ್ಲೆಯಲ್ಲಿ 4 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಒಟ್ಟು 1246.26 ಕೋಟಿ ರೂ. ಗಳನ್ನು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್ ತಿಳಿಸಿದ್ದಾರೆ.
ದೇವೀರಮ್ಮ, ಎಂ.ಜಿ. ನಗರ, ಚಿತ್ರದುರ್ಗ ತಾಲ್ಲೂಕು :ನಾನು ಗೃಹಲಕ್ಷ್ಮಿ ಯೋಜನೆ ಪ್ರಾರಂಭವಾದಾಗಿನಿಂದ ನನಗೆ ಪ್ರತಿ ತಿಂಗಳು 2000 ರೂ. ಹಣ ನನ್ನ ಬ್ಯಾಂಕ್ ಖಾತೆಗೆ ಜಮಾ ಆಗಿದೆ. ಇನ್ನೊಬ್ಬರ ಮುಂದೆ ಕೈಚಾಚದೆ, ಜೀವನ ರೂಪಿಸಿಕೊಳ್ಳಲು ಗೃಹಲಕ್ಷ್ಮಿ ಯೋಜನೆಯಲ್ಲಿ ಬಂದ ಹಣದಿಂದ ಕುರಿ ವ್ಯಾಪಾರ ಮಾಡಿದ್ದೇನೆ. ಇದರಿಂದ ನನಗೆ ಸಾವಿರಾರು ರೂಪಾಯಿ ಲಾಭ ಬರುತ್ತಿದೆ. ಹೀಗಾಗಿ ಮತ್ತಷ್ಟು ಕುರಿಗಳನ್ನು ಖರೀದಿಸಿ, ವ್ಯಾಪಾರ ಮುಂದುವರೆಸಲು ಉದ್ದೇಶಿಸಿದ್ದೇನೆ. ನನಗೆ ತುಂಬಾ ಕಾಲು ನೋವು ಇದೆ. ಆಸ್ಪತ್ರೆಗೆ ತೋರಿಸಿಕೊಳ್ಳಲು, ಆರೋಗ್ಯ ಸಮಸ್ಯೆಗೆ ಮಾತ್ರೆ ಮತ್ತು ಇಂಜೆಕ್ಷನ್ ತೆಗೆದುಕೊಳ್ಳಲು ನನ್ನ ಹತ್ತಿರ ಯಾವುದೇ ಹಣ ಇರುತ್ತಿರಲಿಲ್ಲ. ಜೀವನ ನಡೆಸೋದು ತುಂಬಾನೆ ಕಷ್ಟ ಆಗ್ತಿತ್ತು. ಗೃಹಲಕ್ಷ್ಮಿ ಯೋಜನೆಯಿಂದ ಪ್ರತಿ ತಿಂಗಳು ಬರುವ 2 ಸಾವಿರ ರೂ. ಹಣದಿಂದ ನನಗೆ ಔಷಧಿ ಖರೀದಿಸಲು, ಆಸ್ಪತ್ರೆ ಖರ್ಚಿಗೆ ಅನುಕೂಲವಾಗಿದೆ. ನನ್ನ ಆರೋಗ್ಯ ಈಗ ಸುಧಾರಿಸುತ್ತಿದ್ದು, ದಯವಿಟ್ಟು ಈ ಯೋಜನೆಯನ್ನು ನಿಲ್ಲಿಸಬೇಡಿ. ಈ ಯೋಜನೆಯಿಂದ ನಮ್ಮಂತಹ ಬಡವರಿಗೆ ಸಹಾಯವಾಗುತ್ತಿದೆ.
ನಿರ್ಮಲ ವಿಜಯಕುಮಾರ್, ಮುದ್ದಾಪುರ ಗ್ರಾಮ, ಚಿತ್ರದುರ್ಗ ತಾಲ್ಲೂಕು:
***********
ನಾನು ಗೃಹಲಕ್ಷ್ಮೀ ಯೋಜನೆಯಡಿ ಪ್ರತಿ ತಿಂಗಳು 2 ಸಾವಿರ ರೂ. ನಂತ ಹಣ ಪಡೆಯುತ್ತಿದ್ದೇನೆ. ಈ ಯೋಜನೆ ನಮ್ಮ ಅತ್ಯಂತ ಮಹತ್ವಕಾಂಕ್ಷೆ ಈಡೇರಿಸಿದ ಯೋಜನೆಯಾಗಿದೆ. ಈ ಮೊದಲು ಜೀವನ ನಿರ್ವಹಣೆ ಕಷ್ಟಕರವಾಗಿತ್ತು. ಗೃಹಲಕ್ಷ್ಮಿ ಯೋಜನೆ ಜಾರಿಗೆ ಬಂದಾಗಿನಿಂದ, ಆರ್ಥಕವಾಗಿ ಸಬಲರಾಗುತ್ತಿದ್ದೇವೆ. ನನಗೆ ಬಂದ ಹಣದಿಂದ ಬಟ್ಟೆ ಹಾಗೂ ಬಳೆ ವ್ಯಾಪಾರ ಮಾಡುತ್ತಿದ್ದೇನೆ. ಅಲ್ಲದೆ ಮನೆಯಲ್ಲಿಯೇ ಅಣಬೆ ತಯಾರಿಸಿ ಮಾರಾಟ ಮಾಡುತ್ತಿದ್ದು, ಒಳ್ಳೆಯ ಲಾಭವೂ ಬರುತ್ತಿದೆ. ನನ್ನ ಕುಟುಂಬ ಚೆನ್ನಾಗಿ ಸಾಗುತ್ತಿದೆ. ನಮ್ಮಂತಹ ಬಡ ಮಹಿಳೆಯರಿಗೆ ಆರ್ಥಿಕ ಸಬಲೀಕರಣ ತಂದುಕೊಡುವಲ್ಲಿ ಸರ್ಕಾರವು ತುಂಬಾ ಅನುಕೂಲ ಮಾಡಿಕೊಟ್ಟಿದೆ. ಈ ಯೋಜನೆಯನ್ನು ಇದೇ ರೀತಿ ಮುಂದುವರೆಸಬೇಕೆಂದು ಸರ್ಕಾರಕ್ಕೆ ಕೇಳಿಕೊಳ್ಳುತ್ತೇನೆ. ಮಹಿಳಾ ಮತ್ತು ಮಕ್ಕಳ (Grihalakshmi) ಅಭಿವೃದ್ಧಿ ಇಲಾಖೆಗೆ ಧನ್ಯವಾದ ಸಲ್ಲಿಸುತ್ತೇನೆ.
ಇದನ್ನೂ ಓದಿ: Challakere crime | ನವವಿವಾಹಿತೆ ಆತ್ಮಹತ್ಯೆ, ಇಬ್ಬರ ಮೇಲೆ FIR ದಾಖಲು
ಲತಾ, ಮೆದೆಹಳ್ಳಿ, ಚಿತ್ರದುರ್ಗ ತಾಲ್ಲೂಕು:
ನಾನು ಗೃಹಲಕ್ಷ್ಮಿ ಯೋಜನೆಗೆ ಫಲಾನುಭವಿಯಾಗಿ ನೊಂದಣಿಯಾಗಿದ್ದು, ಯೋಜನೆಯ ಪ್ರಾರಂಭದಿಂದಲೂ ನಾನು ಪ್ರತಿ ತಿಂಗಳು 2000 ರೂ. ಪಡೆಯುತ್ತಿದ್ದೇನೆ. ನನ್ನ ಪತಿಯ ಆದಾಯ ನಮ್ಮ ಸಂಸಾರ ಸಾಗಿಸಲು ಸಾಕಾಗುತ್ತಿರಲಿಲ್ಲ. ಗೃಹಲಕ್ಷ್ಮಿ ಯೋಜನೆಯಡಿ ನೀಡಿದ ಹಣದಿಂದ ನಾನು ಬಂಡಿಯಲ್ಲಿ ತರಕಾರಿ ವ್ಯಾಪಾರ ಪ್ರಾರಂಭಿಸಿದ್ದು, ಒಳ್ಳೆಯ ಲಾಭಾಂಶ ಸಿಗ್ತಾ ಇದೆ. ಇದು ಮನೆಯ ಖರ್ಚಿಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯಕವಾಗಿದೆ. ಇದರ ಜೊತೆಗೆ ನನ್ನ ಮಗಳ ಹೆಸರಿನಲ್ಲಿ ಪ್ರತಿ ತಿಂಗಳು 500 ರೂ. ಸುಕನ್ಯ ಸಮೃದ್ಧಿ ಯೋಜನೆಯಡಿ ಠೇವಣಿ ಇಟ್ಟಿದ್ದು, ಇದು ನನ್ನ ಮಗಳ ಭವಿಷ್ಯ ಭದ್ರಪಡಿಸಲು ನೆರವಾಗಿದೆ.