Chitradurga news|nammajana.com|12-10-2024
ನಮ್ಮಜನ.ಕಾಂ, ಹಿರಿಯೂರು: ತಾಲೂಕಿನ ವಾಣಿ ವಿಲಾಸ ಜಲಾಶಯದ ಮೇಲ್ಭಾಗದ ಹಾಗೂ ಹೊಸದುರ್ಗ ಗಡಿ (Haranakanive Sri Ranganatha) ಭಾಗದಲ್ಲಿರುವ ಇತಿಹಾಸ ಪ್ರಸಿದ್ಧ, ಬುಡಕಟ್ಟು ಕಾಡುಗೊಲ್ಲರ ಆರಾಧ್ಯ ದೈವ ಹಾರನಕಣಿವೆ ಶ್ರೀ ರಂಗನಾಥ ಸ್ವಾಮಿಯ ಅಂಬಿನೋತ್ಸವ ಅಕ್ಟೋಬರ್ 13 ರಂದು ಭಾನುವಾರ ನಡೆಯಲಿದೆ.
ಹೊಸದುರ್ಗ ತಾಲೂಕಿನ ಅಂಚಿಬಾರಿಹಟ್ಟಿ ಗ್ರಾಮದಲ್ಲಿರುವ ಶ್ರೀ ರಂಗನಾಥಸ್ವಾಮಿಯ ಉತ್ಸವ ಮೂರ್ತಿಗೆ ವಿಶೇಷಪೂಜೆ ಸಲ್ಲಿಸಿದ ಬಳಿಕ ವಾಣಿವಿಲಾಸ ಸಾಗರ ಜಲಾಶಯದಲ್ಲಿ ಸ್ವಾಮಿಗೆ ಗಂಗಾಪೂಜೆ ಹಾಗೂ ಕುದುರೆ ಪೂಜೆ ಕಾರ್ಯ ನೆರವೇರಿಸಲಾಗುತ್ತದೆ. ಇದಾದ ನಂತರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಮೆರವಣಿಗೆಯೊಂದಿಗೆ ಗುಡಿ ಗೌಡ, ಪೂಜಾರಿ, ಗ್ರಾಮದ ಅಣ್ಣ-ತಮ್ಮಂದಿರು ಹಾಗೂ ಭಕ್ತರ ನೇತೃತ್ವದಲ್ಲಿ ಅದ್ದೂರಿಯಾಗಿ ಹಾರನಕಣಿವೆ ಕ್ಷೇತ್ರಕ್ಕೆ ಕರೆತಂದು ಶಿವ ಹಾಗೂ ವಿಷ್ಣುವಿಗೆ ಮೊದಲ ಪೂಜೆ ಸಲ್ಲಿಸಿದ (Haranakanive Sri Ranganatha) ನಂತರ ಪೂಜಾರಿಯು ಜಂಬೂ ಮರದ ಮುಂದೆ ನೆಟ್ಟಿದ್ದ ಬಾಳೆ ಗಿಡಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಿ ಬಿಲ್ಲು ಹಿಡಿದು ಬಾಣ ಹೊಡೆದು, ಬಾಳೆಗಿಡ ಕಡಿದು, ಬನ್ನಿ ಮುಡಿಯುವ ಅಂಬಿನೋತ್ಸವ ಕಾರ್ಯ ವಿಜೃಂಭಣೆಯಿಂದ ನೇರವೇರುತ್ತದೆ.
ಚಿತ್ರದುರ್ಗ ಜಿಲ್ಲೆಯ ಬಯಲು ಸೀಮೆಯ ಹಿರಿಯೂರಿನಿಂದ ಹೊಸದುರ್ಗಕ್ಕೆ ಹೋಗುವ ಮಾರ್ಗ ಮಧ್ಯೆ ಎಡಭಾಗದ ವಿವಿ ಸಾಗರ ಜಲಾಶಯದ ಪಕ್ಕದ ಕಾಡು ಮೇಡಿನಲ್ಲಿ ನೆಲೆಸಿರುವ ಹಾರನಕಣಿವೆ ಶ್ರೀ ರಂಗಯ್ಯನೊಬ್ಬ ಪವಾಡ ಪುರುಷನೆಂದೇ ಪ್ರತೀತಿ . ಪ್ರತಿ ವರ್ಷ ಆಶ್ವೀಜ ಶುದ್ಧ ಏಕಾದಶಿಯ ವಿಜಯದಶಮಿಯಂದು ಅಂಬಿನೋತ್ಸವ ನೆರವೇರಲಿದೆ.
ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಮಂದಿ ಭಕ್ತರು ಜಾತ್ರೆಯಲ್ಲಿ ಭಾಗಿಯಾಗಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿಕೊಂಡು ಸ್ವಾಮಿಯ ದರ್ಶನ ಪಡೆಯುತ್ತಾರೆ. ಮಧ್ಯ ಕರ್ನಾಟಕದ ಬುಡುಕಟ್ಟು ಕಾಡುಗೊಲ್ಲರ ಧಾರ್ಮಿಕ (Haranakanive Sri Ranganatha) ಕೇಂದ್ರವಾದ ಈ ದೇವಾಲಯದ ಮಹಿಮೆ ಅಪಾರವಾಗಿದೆ. ಕರಡಿ ಬುಳ್ಳಪ್ಪ ವಂಶಸ್ಥರಾದ ಕರಡಿಗೊಲ್ಲರು ಶ್ರೀ ರಂಗನಾಥ ಸ್ವಾಮಿಯನ್ನು ಪೂಜಿಸಿಕೊಂಡು ಬರುತ್ತಿದ್ದು ನಂಬಿ ಬಂದವರನ್ನು ರಂಗಯ್ಯ ಎಂದೂ ಕೈ ಬಿಟ್ಟಿಲ್ಲ ಎನ್ನುವುದು ಭಕ್ತರ ಬಲವಾದ ನಂಬಿಕೆಯಾಗಿದೆ.
ಇದನ್ನೂ ಓದಿ: ಚಿತ್ರದುರ್ಗ ಜಿಲ್ಲೆಯಲ್ಲಿ ಮಧ್ಯಾಹ್ನ ವೇಳೆಗೆ ಮಳೆ ಸಾಧ್ಯತೆ ಹೆಚ್ಚು, ಎಲ್ಲೆಲ್ಲಿ ಎಷ್ಟಿದೆ ತಾಪಮಾನ? | Chitradurga weather