Chitradurga News | Nammajana.com | 8-5-2024
ನಮ್ಮಜನ.ಕಾಂ.ಹೊಳಲ್ಕೆರೆ : ಹೋಯ್ಯ ಹೋಯ್ಯ ಮಳೆರಾಯ, ಮಳೆಯ ಮಲ್ಲಪ್ಪ ಬಂದ್ವನೇ, ನೀರಾಕಿ ನೀರಾಕಿ ಹೀಗೆ ಚಿಕ್ಕ ಮಕ್ಕಳು ಕೂಗುತ್ತಿದ್ದರೇ, ಹಟ್ಟಿಯ ಮಹಿಳೆಯರು ಹಾಡುಗಳನ್ನು ಹೇಳುತ್ತಿದ್ದರು.
ಇವರ ಜತೆಗೆ ಅರೆಬೆತ್ತಲೆಯ ಮಗು, ತಲೆಯ ಮೇಲೊಂದು ಹಲಗೆ, ಅದರ ಮೇಲೊಂದು ಬೆರಣಿ ಗಣಪ ಹೊತ್ತು. ಮನೆ ಮುಂದೆ ಬಂದು ನಿಂತು ಮಳೆಗಾಗಿ ಮಳೆಯ ಮಲ್ಲಪ್ಪ ಬಂದಿದ್ದಾನೆ ಪೂಜೆ ಮಾಡಿ ಮಳೆಗಾಗಿ ಪ್ರಾರ್ಥಿಸುವಂತೆ ಜತೆಯಲ್ಲಿದ್ದ ಹಿರಿಯರು ತಿಳಿಸುತ್ತಿದ್ದ ದೃಷ್ಯಗಳು ಪಟ್ಟಣದ ಕೋಟೆ ಬೀದಿಯಲ್ಲಿ ಸೋಮವಾರ ಸಂಜೆ ಮಳೆಗಾಗಿ ಮಳೆಮಲ್ಲಪ್ಪ ಆಚರಣೆಯಲ್ಲಿ ಕಂಡು ಬಂದವು.
ಇದಕ್ಕೂ ಮೊದಲು ಮಹಿಳೆಯರಲ್ಲ ಹೊಳಲ್ಕೆರೆ ಪಟ್ಟಣದ ಕಾಲಭೈರಶ್ವರ ದೇವಸ್ಥಾನದ ಕನ್ನಕ್ಕಿ ಬಾವಿಯಲ್ಲಿ ಗಂಗಾಪೂಜೆ ಸಲ್ಲಿಸಿ, ಹುಡಿ ತುಂಬಿ ಹರಿಶಿಣ ಕುಂಕುಮ, ಹೂವು ಮುಡಿದು, ಗಂಗೆಯನ್ನು ತುಂಬಿದ ಕಳಸವನ್ನು ಮಕ್ಕಳ ಮೇಲೆ ಹೊರಿಸಿಕೊಂಡು ಮನೆಗಳ ಮುಂದೆ ನಿಂತು ಮಳೆ ಮಲ್ಲಪ್ಪ ಬಂದ್ವನೇ ಎಂದು ಕೆರಿ ಕೆರಿ ಸುತ್ತಿ ಪೂಜೆ ಸಲ್ಲಿಸುವಂತೆ ಹೇಳುತ್ತಿದ್ದಂತೆ ಮನೆ ಮಂದಿಯಲ್ಲ ವಿಶೇಷ ಪೂಜೆ ಸಲ್ಲಿಸಿದರು.
ನಾಡಿಗರ ಮನೆ ಮುಂದೆ ಹಾಕಿದ ರಂಗೋಲಿಯಲ್ಲಿ ಗಂಗಾ ಕಳಸವಿಟ್ಟು ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಿದರು. ಗಂಗೆ ಕಳಸದ ಚಂಬಿನ ಮೇಲೆ ಮಣೆ ಇಟ್ಟು ಮಕ್ಕಳನ್ನು ಕೂರಿಸಿ ಮಳೆಗಾಗಿ ಅಪ್ಪಣೆ ಕೇಳಿದಾಗ ಕಳಸದ ಚಂಬು ಸುತ್ತುತ್ತಿದ್ದಂತೆ ಮಳೆ ಬರುವ ಶುಭ ಸಂದೇಶವಾಗಿದೆ. ಮಳೆ ಬರುತ್ತದೆ ಸಂತಸಗೊಂಡರು.
ಮಳೆಗಾಗಿ ಮಳೆ ಮಲ್ಲಪ್ಪ ಪೂಜೆ ಮಾಡಿದ ನಂತರ ಊರಬಾಗಿಲಿನ ಕರೆಕಲ್ಲಪ್ಪ ದೇವರಿಗೆ ಪೂಜೆ ಸಲ್ಲಿಸಲಾಗಿತ್ತು. ಏಕೋ ಮಳೆ ಬರುತ್ತಿಲ್ಲ. ಮೋಡ ಕಟ್ಟಿದರೂ ಮಳೆ ಹನಿ ಸುರಿಯುತ್ತಿಲ್ಲ. ಬರೇ ಗಾಳಿ ದೂಳಿ, ಮಳೆರಾಯ ಮುನಿಸಿಕೊಂಡಾನೆ. ಮಳೆ ಮಲ್ಲಪ್ಪನೇ ಮಳೆ ತರಿಸುವಂತೆ, ನಮ್ಮನ್ನು ಕಷ್ಟದಿಂದ ಪಾರು ಮಾಡು, ಮಳೆ ಬೆಳೆ ಚನ್ನಾಗಿ ನಡೆಸುವಂತೆ ಸೇರಿದ್ದ ಜನರೆಲ್ಲ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
ಇದನ್ನೂ ಓದಿ: SSLC ಪರೀಕ್ಷೆ ಫಲಿತಾಂಶ ನಾಳೆ ಪ್ರಕಟ, ಎಷ್ಟೊತ್ತಿಗೆ? ಯಾವ ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು?
ಮಳೆ ಮಲ್ಲಪ್ಪ ಪೂಜೆಯಲ್ಲಿ ರೈತ ಸಂಘದ ಅಧ್ಯಕ್ಷ ಸಿದ್ದರಾಮಪ್ಪ, ಕಾರ್ಯದರ್ಶಿ ಅಜ್ಜಯ್, ರೈತರಾದ ಬಿ.ಎಸ್.ರಂಗಸ್ವಾಮಿ, ಮಲ್ಲಿಕಾರ್ಜುನ್, ಬಸಯ್ಯಸ್ವಾಮಿ, ಮಲ್ಲಿಕಾರ್ಜುನಯ್ಯ, ಕೋಟಿಯ ಮಹಿಳೆಯರು ಪಾಲ್ಗೊಂಡಿದ್ದರು.