Chitradurga news |nammajana.com|19-9-2024
ನಮ್ಮಜನ.ಕಾಂ, ಹೊಸದುರ್ಗ: ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದ ಹಿಂಭಾಗದ ಆವರಣದಲ್ಲಿ ಪ್ರತಿಷ್ಠಾಪನೆ (Hosadurga) ಮಾಡಿರುವ ವಿರಾಟ್ ಹಿಂದೂ ಮಹಾಸಾಗರ ಗಣಪತಿಯ ಬೃಹತ್ ಶೋಭಾಯಾತ್ರೆ ಗುರುವಾರ ನಡೆಯಲಿದ್ದು, ಇದರ ವಿಶೇಷವಾಗಿ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಕೇಸರಿ ಬಾವುಟ, ಪ್ಲೇಕ್ಸ್ ಗಳು ರಾರಾಜಿಸುತ್ತಿವೆ.
ವಿರಾಟ್ ಹಿಂದೂ ಮಹಾಸಾಗರ ಗಣಪತಿ ಸೇವಾ ಟ್ರಸ್ಟ್ ವತಿಯಿಂದ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದು, ಕಳೆದ 13 ದಿನಗಳಿಂದ ವಿಶೇಷ ಪೂಜೆ, ಪ್ರಸಾದ ವಿತರಣೆ ಮತ್ತು ನಿತ್ಯವೂ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆ ಯೋಜನೆ ಮಾಡಲಾಗಿತ್ತು. 12ನೇ ದಿನವಾದ ಬುಧವಾರದಂದು ಸ್ವಾಮಿಗೆ ಗಣ ಹೋಮ ಹಾಗೂ ಇನ್ನಿತರ ಪೂಜಾ ಕಾರ್ಯಗಳು ನೆರವೇರಿದವು. ಇದೇ ಸಂದರ್ಭದಲ್ಲಿ ಬಂದಂತಹ ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.
ಈ ಬಾರಿ ವಿಶೇಷವಾದ ಅಲಂಕೃತ ವಾಹನದಲ್ಲಿ ಸ್ವಾಮಿಯನ್ನು ಕೂರಿಸಿ ಪ್ರತಿಷ್ಠಾಪನಾ ಸ್ಥಳದಿಂದ ಆರಂಭವಾದ ಶೋಭಾಯಾತ್ರೆ ಅಂಬೇಡ್ಕರ್ ಸರ್ಕಲ್, ಗಾಂಧಿ ಸರ್ಕಲ್, ಬಸವೇಶ್ವರ ಸರ್ಕಲ್, ಮದಕರಿ ಸರ್ಕಲ್ ಮತ್ತು ವೀರಭದ್ರೇಶ್ವರ ಸ್ವಾಮಿ (Hosadurga) ದೇವಾಲಯದ ಮೂಲಕ ಮಠದ ಬಾವಿ ಹತ್ತಿರ ತಲುಪಲಿದೆ. ರಾತ್ರಿ 9 ಗಂಟೆ ಸುಮಾರಿಗೆ ಸ್ವಾಮಿಗೆ ಪೂಜೆ ಸಲ್ಲಿಸಿ ವಿಸರ್ಜನಕಾರ್ಯ ಮಾಡಲಾಗುವುದು. ಮೆರವಣಿಗೆಯಲ್ಲಿ 10 ರಿಂದ 15 ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎಂದು ಸೇವಾ ಸಮಿತಿಯ ಅಧ್ಯಕ್ಷ ಪ್ರದೀಪ್ ತಿಳಿಸಿದ್ದಾರೆ.
ಶೋಭಾಯಾತ್ರೆಯ ವಿಶೇಷವಾಗಿ ಒಬ್ಬರು ಅಡಿಷನಲ್ ಎಸ್ಪಿ, ಒಬ್ಬರು ಡಿವೈಎಸ್ಪಿ, 4 ಸಿಪಿಐ, 12 ಪಿಎಸ್ಐ, 250 ಪೊಲೀಸ್ ಸಿಬ್ಬಂದಿ, ಒಂದು ಕೆ ಎಸ್ ಆರ್ ಪಿ, 4 ವಿಶೇಷ ಪೊಲೀಸ್ ಪಡೆಗಳನ್ನು ನಿಯೋಜನೆ ಮಾಡಲಾಗಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ತಿಮ್ಮಣ್ಣ ಮಾಹಿತಿ ನೀಡಿದ್ದಾರೆ.