Chitradurga news | nammajana.com | 14-5-2024
ನಮ್ಮಜನ.ಕಾಂ, ಚಿತ್ರದುರ್ಗ: 2024-25ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಪರಿಶಿಷ್ಟ ವರ್ಗಗಳ ಮೆಟ್ರಿಕ್ ನಂತರದ ಬಾಲಕ, ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ ಪ್ರವೇಶ ಪಡೆಯಲು, ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪಿಯುಸಿ, ಪದವಿ, ಡಿಪ್ಲೋಮಾ, ಬಿಎಸ್ಸಿ ನರ್ಸಿಂಗ್, ಪ್ಯಾರಾಮೆಡಿಕಲ್, ಸ್ನಾತಕೋತ್ತರ ಪದವಿ ಹಾಗೂ ವಿವಿಧ ವೃತ್ತಿಪರ ಇಂಜಿನಿಯರಿಂಗ್ ಕೋರ್ಸ್ ಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಪರಿಶಿಷ್ಟ ವರ್ಗದ ಶೇ.75ರಷ್ಟು ಬಾಲಕ, ಬಾಲಕಿಯರು ಹಾಗೂ ಉಳಿದ ಶೇ.25ರಷ್ಟು ಪರಿಶಿಷ್ಟ ಜಾತಿ, ಇತರೆ ಹಿಂದುಳಿದ ವರ್ಗಗಳ ಜನಾಂಗದ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದೆ.
ಆಸಕ್ತರು 2024ರ ಜೂನ್ ಮೊದಲ ವಾರದಲ್ಲೇ ಮೆಟ್ರಿಕ್ ನಂತರದ ಬಾಲಕ, ಬಾಲಕಿಯರ ವಿದ್ಯಾರ್ಥಿನಿಲಯಗಳಿಗೆ SHP/HMIS ಪೋರ್ಟಲ್ ಮುಖಾಂತರ ಆನ್‌ಲೈನ್‌ನಲ್ಲಿ ತಾಲ್ಲೂಕುವಾರು ಅರ್ಜಿ ಸಲ್ಲಿಸಬಹುದು. ಇಚ್ಛೆಯುಳ್ಳ ಪರಿಶಿಷ್ಟ ವರ್ಗ, ಪರಿಶಿಷ್ಟ ಜಾತಿ, ಇತರೆ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಮೀಸಲಾತಿಗೆ ಅನುಗುಣವಾಗಿ ಪ್ರವೇಶ ಪಡೆಯಲು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ www.tw.kar.nic.in ಜಾಲತಾಣದ ಮೂಲಕ ಪರಿಶೀಲಿಸಿ ಅರ್ಜಿ ಸಲ್ಲಿಸಬಹುದು.
ಇದನ್ನೂ ಓದಿ: ಹುಣಸೆಹಣ್ಣು ತಿಂದ 12 ಕುರಿಗಳು ಸಾವು
ಹೆಚ್ಚಿನ ಮಾಹಿತಿಗಾಗಿ ಚಿತ್ರದುರ್ಗ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ 08194-226659 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.