Chitradurga news | Nammajana. Com | 28-4-2024
ನಮ್ಮ ಜನ.ಕಾಂ. ಚಳ್ಳಕೆರೆ: ತಾಲ್ಲೂಕಿನ ಗಡಿಭಾಗವಾದ ಮೊಳಕಾಲ್ಮೂರು ವಿಧಾನಸಭಾ ವ್ಯಾಪ್ತಿಯ ಮೈಲನಹಳ್ಳಿ ಸಮೀಪದ ಕಸವಿಗೊಂಡನಹಳ್ಳಿ ಬಳಿ ಕಳೆದ 2020 ರಲ್ಲಿ ಅಂದು ಕ್ಷೇತ್ರದ ಶಾಸಕರು, ಜಿಲ್ಲಾ ಉಸ್ತುವಾರಿಯಾಗಿದ್ದ ಬಿ.ಶ್ರೀರಾಮುಲು ಕಸವಿಗೊಂಡನಹಳ್ಳಿಯ ಬ್ರಿಡ್ಜ್ ಕಂ ಬ್ಯಾರೇಜ್ಗೆ ಭೂಮಿ ಪೂಜೆ ನೆರವೇರಿಸಿ ಈ ಕಾಮಗಾರಿ ಶೀಘ್ರದಲ್ಲೇ ಮುಕ್ತಾಯಗೊಂಡು ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದರು.
ಕಸವಿಗೊಂಡನಹಳ್ಳಿ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿ ಸಂಪೂರ್ಣ ಮುಕ್ತಾಯಗೊಂಡು ಇತ್ತೀಚೆಗೆ ವಾಣಿವಿಲಾಸ ಸಾಗರದ ನೀರು ವೇದಾವತಿ ನದಿಗೆ ಹರಿಬಿಟ್ಟ ಪರಿಣಾಮವಾಗಿ ಕಸವಿಗೊಂಡನಹಳ್ಳಿ ಬ್ಯಾರೇಜ್ ಪ್ರಥಮಬಾರಿಗೆ ಮೈದುಂಬಿ ಹರಿದಿದ್ದು, ಬ್ರಿಡ್ಜ್ ಬ್ಯಾರೇಜ್ ನಿರ್ಮಿಸಿದ ಮಾಜಿ ಸಚಿವ ಶ್ರೀರಾಮುಲು ಅವರಿಗೆ ಗ್ರಾಮಗಳ ಪರವಾಗಿ ಕಾಲುವೇಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಆರ್.ಪಾಲಯ್ಯ, ಮೈಲನಹಳ್ಳಿ ದಿನೇಶ್ ಹಾಗೂ ಇನ್ನಿತರರು ಅಭಿನಂದನೆ ತಿಳಿಸಿದ್ದಾರೆ.
ಕಳೆದ ಹಲವಾರು ದಶಕಗಳಿಂದ ಮೈಲನಹಳ್ಳಿ, ಕಸವಿಗೊಂಡನಹಳ್ಳಿ ಸಂಪರ್ಕಕ್ಕೆ ಯಾವುದೇ ನೇರ ರಸ್ತೆಗಳಿರಲಿಲ್ಲ. ವೇದಾವತಿ ನದಿ ಮಾತ್ರ ಇದ್ದು ಇದರಿಂದ ಎರಡೂ ಗ್ರಾಮದ ಜನರು ತಮ್ಮ ಗ್ರಾಮಗಳಿಗೆ ಕೆಲವು ಕಿ.ಮಿ ದೂರದಿಂದ ಓಡಾಡಬೇಕಿತ್ತು. ಬ್ಯಾರೇಜ್ ನಿರ್ಮಾಣದಿಂದ ಎರಡೂ ಗ್ರಾಮಕ್ಕೆ ರಸ್ತೆ ಸಂಪರ್ಕ ದೊರಕಿದ್ದು, ಈ ಭಾಗದ ಜನರ ದಶಕಗಳ ಕನಸು ನನಸಾಗಿದೆ ಎಂದು ಗ್ರಾಮಸ್ಥರು ಸಂತಸ ಪಟ್ಟರು.