Chitradurga news |nammajana.com |26-5-2024
ವಿಶೇಷ ವರದಿ: ಪಿ.ಟಿ.ಸಿದ್ಧೇಶ್ ಲಕ್ಕಿಹಳ್ಳಿ
ನಮ್ಮಜನ.ಕಾಂ, ಹೊಸದುರ್ಗ: ಕಳೆದ ಒಂದು ವಾರಗಳಿಂದ ಹೊಸದುರ್ಗ ತಾಲೂಕಿನ ಹಲವೆಡೆ ಹಾಗೂ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಸುರಿಯುತ್ತಿರುವ ಮಳೆಗೆ, ವೇದಾವತಿ ನದಿ ಮೈದುಂಬಿ ಕೆಲ್ಲೋಡು ಬ್ಯಾರೇಜ್ (Kellodu Barrage) ಮೂಲಕ ವಿವಿ ಸಾಗರ ಜಲಾಶಯ ಸೇರುತ್ತಿದೆ. ಬರುತ್ತಿರುವ ಹೊಸ ನೀರಿಗೆ ಜಲಾಶಯದಲ್ಲಿದ್ದ ಮೀನುಗಳು ಹೊರ ಬರುತ್ತಿದ್ದು, ಮೀನುಗಳ ಶಿಕಾರಿಗಾಗಿ ಕೆಲ್ಲೋಡು ಬ್ಯಾರೇಜ್ (Kellodu Barrage) ಬಳಿ ನೂರಾರು ಜನರು ಹರಿಯುವ ನೀರಿಗೆ ಬಲೆ ಮತ್ತು ಗಾಣ ಹಾಕಿ ಕಾದು ಕುಳಿತುಕೊಳ್ಳುವ ದೃಶ್ಯ ಶನಿವಾರ ಕಂಡುಬಂದಿತು.
ಮಧ್ಯ ಕರ್ನಾಟಕದ ಜಲಪಾತ್ರೆ ಎಂದು ಖ್ಯಾತಿ ಪಡೆದಿರುವ ವಿ.ವಿ ಸಾಗರ ಜಲಾಶಯ 2 ವರ್ಷಗಳ ಹಿಂದೆ (2022 ಸೆ.1) ನಿರಂತರವಾಗಿ ಸುರಿದ ಮಳೆಯಿಂದಾಗಿ 88 ವರ್ಷಗಳ ಬಳಿಕ ಕೊಡಿ ಬಿದ್ದು, 5 ತಿಂಗಳು ಕೋಡಿಯ ನೀರು ಹೊರಹರಿದು ಹೋಗಿತ್ತು. ಆಗ ವಿವಿ ಸಾಗರ ಜಲಾಶಯದ ಮಟ್ಟ 135 ಅಡಿ ತಲುಪಿತ್ತು. 2 ವರ್ಷ ಪೂರ್ಣಗೊಳ್ಳುವುದರೊಳಗಾಗಿ ನೀರಿನ ಮಟ್ಟ 112 ಅಡಿಗೆ ಇಳಿದಿತ್ತು.
ಡ್ಯಾಮ್ ಭರ್ತಿಯಾದ ಸಂದರ್ಭದಲ್ಲಿ ಜಲಾಶಯದ ಹಿನ್ನೀರು ಹೊಸದುರ್ಗ ತಾಲೂಕಿನ ಬಹಳಷ್ಟು ಗ್ರಾಮಗಳ ಸಮೀಪಕ್ಕೆ ಬಂದು ನಿಂತು, ಜನರು ಅತಿವೃಷ್ಟಿಯಿಂದಾಗಿ ಬಹಳಷ್ಟು ಸಮಸ್ಯೆ ಎದುರಿಸಿದರು. ಒಂದು ವರ್ಷಕ್ಕೆ ಅಂತರ್ಜಲ ಮಟ್ಟ ಕುಸಿತ ಕಂಡು ಅನಾವೃಷ್ಟಿ ಎದುರಿಸುವ ಪರಿಸ್ಥಿತಿ ಎದುರಾಗಿತ್ತು. ಆದರೆ ಕೃತಿಕ ಮಳೆ ಉತ್ತಮವಾಗಿ ಬಂದಿದ್ದು ರೈತರು ಸಂತಸಗೊಳ್ಳುವಂತಾಗಿದೆ.
ಮೈದುಂಬಿ ಹರಿಯುತ್ತಿರುವ ವೇದಾವತಿ ನದಿಯನ್ನು ನೋಡಲು ನಿತ್ಯವೂ ಕೆಲ್ಲೋಡು ಬ್ಯಾರೇಜ್ (Kellodu Barrage) ನತ್ತ ಸಾವಿರಾರು ಜನರು ದೌಡಯಿಸುತ್ತಿದ್ದಾರೆ.
ವೇದಾವತಿ ನದಿ ನೀರು ಕೆಲ್ಲೋಡು ಬ್ಯಾರೇಜ್ (Kellodu Barrage) ಮೂಲಕ ಒಂದು ವಾರಗಳಿಂದ ನಿರಂತರವಾಗಿ ಜಲಾಶಯ ಸೇರುತ್ತಿದ್ದು ಜಲಾಶಯದ ನೀರಿನ ಮಟ್ಟ 114 ಅಡಿಗೆ ತಲುಪಿದೆ.
ಕೃತ್ತಿಕಾ ಮಳೆಯಂತೆಯೇ ಮಂದೆ ಬರಲಿರುವ ಮಳೆಗಳು ಬಂದರೆ ಈ ಬಾರಿಯೂ ಕೂಡ ಮತ್ತೊಮ್ಮೆ ಜಲಾಶಯ ಭರ್ತಿಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂಬುದು ಗ್ರಾಮೀಣ ಜನರ ಮಾತಾಗಿದೆ, ವಾರದಿಂದ ಸುರಿಯುತ್ತಿರುವ ಮಳೆಗೆ ರೈತರ ಮುಖದಲ್ಲಿ ಮಂದಹಾಸ ಮೂಡಿದ್ದು ಕೃಷಿ ಕಾರ್ಯಗಳು ಚುರುಕುಗೊಂಡಿವೆ.
ಟ್ಯಾಂಕರ್ ನೀರಿಗೆ ವಿದಾಯ ಹೇಳಿದ ಅಡಿಕೆ ಬೆಳೆಗಾರರು
ಕಳೆದ ಒಂದು ವರ್ಷದಿಂದ ತಾಲೂಕಿನಾದ್ಯಂತ ತೀವ್ರ ಬರಗಾಲದ ಪರಿಸ್ಥಿತಿ ಆವರಿಸಿತ್ತು. ಅಂತರ್ಜಲದ ಮಟ್ಟ ಕುಸಿತ ಕಂಡು ಕೊಳವೆ ಬಾವಿಗಳಲ್ಲಿ ನೀರು ಬರಿದಾಗಿ ಅಡಿಕೆ ಮತ್ತು ಇನ್ನಿತರ ಬೆಳೆಗಳ ಬೆಳೆಗಾರರು ಬೆಳೆಗಳಿಗೆ ನೀರಿಲ್ಲದೆ ನಿತ್ಯವೂ ಸಮಸ್ಯೆ ಎದುರಿಸುತ್ತಿದ್ದರು.
ಒಣಗಿಹೋಗುತ್ತಿದ್ದ ತೋಟಗಳನ್ನು ಉಳಿಸಿಕೊಳ್ಳಲು ಕೆಲವು ರೈತರು ಟ್ಯಾಂಕರ್ ಮೂಲಕ ತಮ್ಮ ತೋಟಗಳಿಗೆ ನೀರು ಹಾಯಿಸಿಕೊಳ್ಳುತ್ತಿದ್ದರು. ಆದರೆ ಇದೀಗ ಒಂದು ವಾರಗಳಿಂದ ತಾಲೂಕಿನಾದ್ಯಂತ ಉತ್ತಮ ಹದ ಮಳೆಯಾಗುತ್ತಿದ್ದು ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಹೊಸದುರ್ಗ ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿನ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಸ್ವಲ್ಪ ಹೆಚ್ಚಾಗಿದ್ದು ಜನರು ಸಂತಸಗೊಂಡಿದ್ದಾರೆ.
ಕೋಟ್
ಕಳೆದ 6 ತಿಂಗಳಿನಿಂದ ಪಟ್ಟಣದ ಜನರಿಗೆ ನೀರಿನ ಸಮಸ್ಯೆ ಎದುರಾಗಿತ್ತು. ಬಹಳಷ್ಟು ಬೋರ್ವೆಲ್ಗಳಲ್ಲಿ ನೀರು ಬರುವುದೇ ನಿಂತು ಹೋಗಿದ್ದವು. ಕುಡಿಯುವ ನೀರಿಗೂ ಕೂಡ ಪರದಾಟ ನಡೆಸುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಪಟ್ಟಣದ ಜನರಿಗೆ ಕೆಲ್ಲೋಡು ಬ್ಯಾರೇಜ್ (Kellodu Barrage) ಜೀವ ಜಲವಾಗಿದೆ. 6 ತಿಂಗಳಿಂದ ಬ್ಯಾರೇಜ್ ನಲ್ಲಿ ನೀರಿಲ್ಲದೆ ಸಂಪೂರ್ಣವಾಗಿ ಖಾಲಿಯಾಗಿತ್ತು. ಇದರಿಂದಾಗಿ ದಿನನಿತ್ಯ ಬಳಕೆಯ ನೀರಿಗೂ ಸಮಸ್ಯೆಯಾಗಿತ್ತು. ವಿವಿ ಸಾಗರ ಜಲಾಶಯದ ಹಿನ್ನೀರಿನಿಂದ ಟ್ಯಾಂಕರ್ ಗಳ ಮೂಲಕ ಮನೆಗಳಿಗೆ ನೀರು ಹೊಡೆಸಲಾಗುತ್ತಿತ್ತು. ಆದರೆ ಇದೀಗ ಕೆಲ್ಲೋಡ್ ಬ್ಯಾರೇಜ್ (Kellodu Barrage) ಸಂಪೂರ್ಣವಾಗಿ ಮೈದುಂಬಿ ಹರಿಯುತ್ತಿದ್ದು, ಪಟ್ಟಣದ ಜನರಿಗೆ ನೀರಿನ ಸಮಸ್ಯೆ ದೂರವಾಗಿದೆ.