Chitradurga news|nammajana.com|22-9-2025
ನಮ್ಮಜನ.ಕಾಂ, ಚಿತ್ರದುರ್ಗ: ಇಂದು ನಡೆದ ಜಿಲ್ಲಾ ಮಟ್ಟದ ಕೆಡಿಪಿ ಸಭೆಯಲ್ಲಿ ಡಿ. ದೇವರಾಜು ಅರಸು ಹಿಂದುಳಿದ (KPD meeting) ವರ್ಗಗಳ ಅಭಿವೃದ್ಧಿ ನಿಗಮ ಸೇರಿದಂತೆ ಹಿಂದುಳಿದ ವರ್ಗಗಳ 12 ಅಭಿವೃದ್ಧಿ ನಿಗಮಗಳಿಗೂ ಒಬ್ಬರೇ ಅಧಿಕಾರಿ ಇದ್ದು, ಈ ಎಲ್ಲ ನಿಗಮಗಳ ಜಿಲ್ಲಾ ವ್ಯವಸ್ಥಾಪಕರು ಸಭೆಗೆ ಗೈರು ಹಾಜರಾಗಿದ್ದರು.

ಈ ಕುರಿತಂತೆ ವಿಷಯ ಪ್ರಸ್ತಾಪಿಸಿದ ಹೊಸದುರ್ಗ ಶಾಸಕ ಬಿ.ಜಿ. ಗೋವಿಂದಪ್ಪ ಅವರು ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಅವರ ಮೇಲೆ ವಿವಿಧ ಆರೋಪಗಳಿರುವ ಬಗ್ಗೆ ಸಭೆಯ ಗಮನಕ್ಕೆ ತಂದರು. ಈ ನಿಗಮಗಳ ಜಿಲ್ಲಾ ವ್ಯವಸ್ಥಾಪಕರ ಮೇಲೆ ಸಾಕಷ್ಟು ದೂರುಗಳು ಕೇಳಿ ಬಂದಿವೆ.
ಉದ್ಯೋಗ ಹಾಗೂ ಶಿಕ್ಷಣದ ನೇರಸಾಲ ಯೋಜನೆ, ಹೊಲಿಗೆ ಯಂತ್ರ ವಿತರಣೆ, ಸ್ವಾವಲಂಬಿ ಸಾರಥಿ ಸೇರಿದಂತೆ ಸಹಾಯಧನ ಯೋಜನೆಗಳ ಸಾಧನೆ ಶೂನ್ಯವಿದೆ. ನಿಗಮಗಳ ಪರಿಶೀಲನೆಗೆ ಉತ್ತರಿಸಬೇಕಾದ ಅಧಿಕಾರಿಯೇ ಕೆ.ಡಿ.ಪಿ ಸಭೆಗೆ ಗೈರು ಹಾಜರಾಗಿದ್ದಾರೆ ಎಂದು ಸಚಿವ ಡಿ.ಸುಧಾಕರ್ ತೀವ್ರ ಅಸಮಧಾನ ವ್ಯಕ್ತಪಡಿಸಿದರು.
ವ್ಯವಸ್ಥಾಪಕಿ ಗೈರು ಹಾಜರಿ ಕುರಿತು ನಿಗಮದ ಸಿಬ್ಬಂದಿಗೆ ಸಭೆಯಲ್ಲಿ ಪ್ರಶ್ನಿಸಿದಾಗ, ಅಧಿಕಾರಿಗೆ ಆರೋಗ್ಯ ಸರಿಯಿಲ್ಲ, ಅವರಿಗೆ ಅಪಘಾತವಾಗಿದ್ದು ಚಿಕಿತ್ಸೆಗಾಗಿ ರಜೆ ಪಡೆದಿದ್ದಾರೆ ಎಂದು ತಿಳಿಸಿದರು. ಕೂಡಲೇ ಸಚಿವ ಡಿ.ಸುಧಾಕರ್ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಮೊಬೈಲ್ ಕರೆ ಮಾಡಿ ಈ ಕುರಿತು ಸ್ಪಷ್ಟನೆ ಕೇಳಿದರು. ಜಿಲ್ಲಾ ವ್ಯವಸ್ಥಾಪಕರು ಅಧಿಕೃತವಾಗಿ ರಜೆ ಪಡೆದಿಲ್ಲ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರು (KPD meeting) ಉತ್ತರಿಸಿದರು. ಉತ್ತಮವಾಗಿ ಕಾರ್ಯನಿರ್ವಹಿಸದ ಜಿಲ್ಲಾ ವ್ಯವಸ್ಥಾಪಕಿಯನ್ನು ಕೂಡಲೇ ಜಿಲ್ಲೆಯ ಕರ್ತವ್ಯದಿಂದ ಬಿಡುಗಡೆ ಮಾಡುವುದಾಗಿ ಎಂದು ಸಚಿವ ಡಿ.ಸುಧಾಕರ್ ವ್ಯವಸ್ಥಾಪಕ ನಿರ್ದೇಶಕರಿಗೆ ತಿಳಿಸಿದರು.
ಜಿಲ್ಲೆಯ ಎಲ್ಲಾ ಅಭಿವೃದ್ಧಿ ನಿಗಮಗಳ ಅಧಿಕಾರಿಗಳು ಏಜಂಟ್‍ರೊಂದಿಗೆ ಸೇರಿ ಬಡವರ ಜೀವ ಹಿಂಡುತ್ತಿದ್ದಾರೆ. ಸರ್ಕಾರ ಯೋಜನೆಗಳನ್ನು ಸರಿಯಾಗಿ ತಲುಪಿಸುತ್ತಿಲ್ಲ. ಪ್ರತಿಯೊಂದಕ್ಕೂ ರೇಟ್ ಕಾರ್ಡು ಫಿಕ್ಸ್ ಮಾಡಿದ್ದಾರೆ.
ಇವರಿಗೆ ಹೇಳುವರು ಕೇಳುವವರು ಯಾರು ಇಲ್ಲದಂತಾಗಿದೆ. ಎಂದು ಶಾಸಕ ಬಿ.ಜಿ.ಗೋವಿಂದಪ್ಪ ನಿಗಮದ ಅಧಿಕಾರಿಗಳ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೂಡಲೇ ಜಿಲ್ಲಾಧಿಕಾರಿ ಹಾಗೂ ಸಿಇಓ ಎಚ್ಚೆತ್ತು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಎಲ್ಲ ಅಭಿವೃದ್ಧಿ ನಿಗಮಗಳ ಯೋಜನೆ ಕುರಿತು ಪರಿಶೀಲನೆ ನಡೆಸಬೇಕು.
ಅರ್ಹ ಫಲಾನುಭವಿಗಳಿಗೆ ಯೋಜನೆಯ ಲಾಭ ತಲುಪಿಸಬೇಕು ಎಂದರು. ಈ ವೇಳೆ ನಿಗಮಗಳ ಅವ್ಯವಹಾರಕ್ಕೆ ಕಡಿವಾಣ ಹಾಕುವಂತೆ ಶಾಸಕ ಟಿ.ರಘೂಮೂರ್ತಿ ಹಾಗೂ ಡಾ.ಚಂದ್ರಪ್ಪ ದನಿಗೂಡಿಸಿದರು.
