Chitradurga News | Nammajana.com | 31-08-2025
ನಮ್ಮಜನ ನ್ಯೂಸ್ ಕಾಂ,ಚಿತ್ರದುರ್ಗ: ಪ್ರಧಾನ(food processing units) ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ಧಗೊಳಿಸುವಿಕೆ (ಪಿ.ಎಂ.ಎಫ್.ಎಂ.ಇ) ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಕೇವಲ 3 ಆಹಾರ ಸಂಸ್ಕರಣಾ ಘಟಕಗಳಿಗೆ ಮಾತ್ರ ಬ್ಯಾಂಕ್‍ನಿಂದ ಸಾಲ ಮಂಜೂರು ಮಾಡಲಾಗಿದೆ. ಯೋಜನೆ ಪ್ರಗತಿಯಲ್ಲಿ ಜಿಲ್ಲೆ 20ನೇ ಸ್ಥಾನದಲ್ಲಿದೆ. ಬ್ಯಾಂಕುಗಳು ರೈತರಿಗೆ ಸಾಲ ಮಂಜೂರು ಮಾಡಲು ಹಿಂದೇಟು ಹಾಕದೇ ಉತ್ತೇಜನ ನೀಡಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೂಚಿಸಿದರು.

ಇದನ್ನೂ ಓದಿ: ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ ಕರ್ನಾಟಕ ಆಯ್ಕೆಗೆ ಅರ್ಜಿ ಆಹ್ವಾನ | Mahatma Gandhi
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಪಿ.ಎಂ.ಎಫ್.ಎಂ.ಇ ಹಾಗೂ ಪಿ.ಎಂ.ಆರ್.ಕೆ.ವಿ.ವೈ ಯೋಜನೆಗಳ ಕುರಿತು ಜಿಲ್ಲಾ ಮಟ್ಟದ ಸಮತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
2025-26ನೇ ಸಾಲಿನಲ್ಲಿ ಪಿ.ಎಂ.ಎಫ್.ಎಂ.ಇ ಯೋಜನಯಡಿ ಜಿಲ್ಲೆಗೆ 100 ಘಟಕಗಳ ಗುರಿ ನಿಗದಿ ಮಾಡಲಾಗಿದೆ. ಆದರೆ 54 ಅರ್ಜಿಗಳು ಮಾತ್ರ ಸ್ವೀಕೃತವಾಗಿವೆ. 54 ಅರ್ಜಿಗಳ ಪೈಕಿ 24 ಅರ್ಜಿಗಳನ್ನು ಸಾಲ ಮಂಜೂರಾತಿಗೆ ಬ್ಯಾಂಕ್‍ಗೆ ಕಳುಹಿಸಿಕೊಡಲಾಗಿದೆ.
ಇದರಲ್ಲಿ ಕೇವಲ 06 ಅರ್ಜಿಗಳಿಗೆ ಸಾಲ ನೀಡಲು ಅನುಮೋದನೆ ನೀಡಲಾಗಿದೆ. 03 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 04 ಅರ್ಜಿಗಳು ಪ್ರಗತಿಯಲ್ಲಿದ್ದು, 3 ಅರ್ಜಿದಾರರಿಗೆ ಸಾಲ ಮಂಜೂರಾತಿಯಾಗಿದೆ. ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಸೇರಿದ ರೈತರ ಸಂಖ್ಯೆ ಹೆಚ್ಚಿದೆ.
ರೈತರು ಬ್ಯಾಂಕುಗಳು ನೀಡುವ ಸಾಲ ಮೊತ್ತಕ್ಕಿಂತಲೂ ಹೆಚ್ಚಿನ ಮೌಲ್ಯದ ಜಮೀನುಗಳನ್ನು ಬ್ಯಾಂಕ್‍ಗೆ ಅಡಮಾನ ಇಡುತ್ತಾರೆ. ಆದರೂ ಬ್ಯಾಂಕುಗಳು ಸಾಲ ನೀಡಲು ನಿರಾಕರಿಸುವುದು ಏಕೆ ಎಂದು ಬ್ಯಾಂಕ್‍ಗಳ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಅರ್ಜಿಯೊಂದಿಗೆ ಸಲ್ಲಿಸಿದ ಎಲ್ಲ ದಾಖಲೆಗಳು ಸೂಕ್ತವಾಗಿದ್ದರೇ, ಕೂಡಲೇ ಸಾಲ ಮಂಜೂರಾತಿ ಮಾಡಬೇಕು. ಈ ಕುರಿತು ಎಲ್ಲಾ ಬ್ಯಾಂಕುಗಳ ವ್ಯವಸ್ಥಾಪಕರಿಗೆ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‍ನಿಂದ ನಿರ್ದೇಶನ ನೀಡುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಹೇಳಿದರು.
ಇದನ್ನೂ ಓದಿ: CHITRADURGA ಜಿಲ್ಲೆಯಲ್ಲಿ ಇ-ಪೌತಿ ಆಂದೋಲನ ಪ್ರಾರಂಭ : ಸದುಪಯೋಗಕ್ಕೆ ಮನವಿ
2021-22 ರಿಂದ 28-08-2025 ವರೆಗೆ ಜಿಲ್ಲೆಯಲ್ಲಿ ಪಿ.ಎಂ.ಎಫ್.ಎಂ.ಇ ಯೋಜನೆಯಡಿ 622 ಅರ್ಜಿಗಳು ಸಲ್ಲಿಕೆಯಾಗಿದ್ದು, 103 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 139 ಅರ್ಜಿಗಳಿಗೆ ಸಾಲ ಮಂಜೂರಾತಿ ಅನುಮೋದನೆ ನೀಡಿದ್ದು, 120 ಜನರಿಗೆ ಸಾಲ ವಿತರಿಸಲಾಗಿದೆ. 36 ಅರ್ಜಿಗಳು ಮಂಜೂರಾತಿ ಪ್ರಗತಿಯಲ್ಲಿದೆ.
ಎಸ್.ಬಿ.ಐ ಬ್ಯಾಂಕ್‍ನಲ್ಲಿ 12, ಕೆನರಾ ಬ್ಯಾಂಕ್‍ನಲ್ಲಿ 10, ಕರ್ನಾಟಕ ಗ್ರಾಮೀಣ ಬ್ಯಾಂಕ್‍ನಲ್ಲಿ 7, ಬ್ಯಾಂಕ್ ಆಫ್ ಬರೋಡ, ಕರ್ನಾಟಕ ಬ್ಯಾಂಕ್ ಹಾಗೂ ಯೂನಿಯನ್ ಬ್ಯಾಂಕ್‍ನಲ್ಲಿ ತಲಾ 2, ಸೆಂಟ್ರಲ್ ಬ್ಯಾಂಕ್, ಇಂಡಿಯಾ ಬ್ಯಾಂಕ್ ಹಾಗೂ ಬ್ಯಾಂಕ್ ಆಫ್ ಇಂಡಿಯಾದಲ್ಲಿ ತಲಾ 1 ಅರ್ಜಿಗಳು ಬಾಕಿಯಿವೆ. ಈ ಕುರಿತು ಪರಿಶೀಲನೆ ನಡೆಸಲು ಈ ಎಲ್ಲಾ ಬ್ಯಾಂಕುಗಳ ವ್ಯವಸ್ಥಾಪಕರೊಂದಿಗೆ ಸಭೆ ಆಯೋಜಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸಭೆಯಲ್ಲಿ ಸೂಚಿಸಿದರು.
ಪ್ರಧಾನ ಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ-ಪರ್ ಡ್ರಾಪ್ ಮೋರ್ ಕ್ರಾಪ್-ಸೂಕ್ಷ್ಮ ನೀರಾವರಿ ಯೋಜನೆಯಡಿ ಸೂಕ್ಷ್ಮ, ತುಂತುರು ಹಾಗೂ ಹನಿ ನೀರಾವರಿ ಘಟಕಗಳಿಗೆ ರೂ.6.18 ಕೋಟಿಗಳ ಕ್ರಿಯಾ ಯೋಜನೆ ತಯಾರಿಸಲಾಗಿದೆ.
ಮಾರ್ಗ ಸೂಚಿಯಂತೆ ಸೂಕ್ಷ ನೀರಾವರಿ(food processing units) ಘಟಕಗಳಿಗೆ ಎಲ್ಲಾ ವರ್ಗದ ರೈತರಿಗೆ 2 ಹೆಕ್ಟೇರ್ ಪ್ರದೇಶದವರೆಗೆ ಶೇ.90 ರಷ್ಟು, ಹನಿ ನೀರಾವರಿ ಘಟಕಗಳಿಗೆ ಸಣ್ಣ, ಅತಿ ಸಣ್ಣ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರಿಗೆ 2 ಹೆಕ್ಟೇರ್ ವರೆಗೆ ಶೇ.90 ರಷ್ಟು ಹಾಗೂ ಇತರೆ ವರ್ಗದವರಿಗೆ ಶೇ.45 ರಷ್ಟು ಸಹಾಯಧನವನ್ನು ನೀಡಲಾಗುವುದು ಎಂದು ಕೃಷಿ ಜಂಟಿನಿರ್ದೇಶಕ ಮಂಜುನಾಥ ಸಭೆಯಲ್ಲಿ ತಿಳಿಸಿದರು.
ಇದನ್ನೂ ಓದಿ: ಮಾಜಿ ಸೈಕರ ಮಕ್ಕಳಿಗೆ ಅಗ್ನಿವೀರ್ ನೇಮಕಾತಿ
ಉಪನಿರ್ದೇಶಕ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವ್ಯವಸ್ಥಾಪಕ ರಾಘವೇಂದ್ರ, ಕೃಷಿ ಇಲಾಖೆ ಉಪನಿರ್ದೇಶಕ ಶಿವಕುಮಾರ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
