ಚಿತ್ರದುರ್ಗ: ದೇಶ ಸುರಕ್ಷಿತವಾಗಿರಬೇಕಾದರೆ ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ. ಅಧಿಕಾರಕ್ಕೆ ಬರಬೇಕಾಗಿದೆ ಎಂದು ಮಾಜಿ ಶಾಸಕ ಎಸ್. ಕೆ. ಬಸವರಾಜನ್ ಹೇಳಿದರು.
ನಗರದ ತಮಟಕಲ್ಲು ರಸ್ತೆಯ ತಮ್ಮ ನಿವಾಸಕ್ಕೆ ಬುಧವಾರ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ. ಅಭ್ಯರ್ಥಿ ಗೋವಿಂದ ಕಾರಜೋಳ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಎಸ್.ಕೆ.ಬಸವರಾಜನ್ ಇದೇ ತಿಂಗಳ 26 ರಂದು ನಡೆಯಲಿರುವ ಲೋಕಸಭಾ ಚುನಾವಣೆ ಅತ್ಯಂತ ಮಹತ್ವದ್ದಾಗಿರುವುದರಿಂದ ಅಭ್ಯರ್ಥಿ ಗೋವಿಂದ ಕಾರಜೋಳರವರನ್ನು ಹೆಚ್ಚಿನ ಬಹುಮತಗಳಿಂದ ಗೆಲ್ಲಿಸುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ನರೇಂದ್ರ ಮೋದಿ 3ನೇ ಭಾರಿಗೆ ಪ್ರಧಾನಿಯಾಗಬೇಕಾಗಿದೆ
ಕಠಿಣ ಸಂದರ್ಭಗಳಲ್ಲಿ ದೇಶವನ್ನು ಸುರಕ್ಷಿತವಾಗಿ ಕಾಪಾಡಿದ ನರೇಂದ್ರ ಮೋದಿ 3ನೇ ಭಾರಿಗೆ ಪ್ರಧಾನಿಯಾಗಬೇಕಾಗಿದೆ. ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್‌ನಿಂದ ಆಗದ ಅಭಿವೃದ್ದಿಯನ್ನು 10 ವರ್ಷಗಳಲ್ಲಿ ಮಾಡುವುದು ಕಷ್ಠವಾಗುತ್ತದೆ. ಬೂಟಾಟಿಕೆಗಾಗಿ ರಾಹುಲ್‌ಗಾಂಧಿ ಭಾರತ್ ಜೋಡೋ ಯಾತ್ರೆ ನಡೆಸಿದರು, ಕಾಶ್ಮೀರವನ್ನು ಭಾರತಕ್ಕೆ ಸೇರಿಸಲಾಗಲಿಲ್ಲ. ಅದೇ ನಮ್ಮ ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರದಲ್ಲಿ ಭಾರತದ ಭಾವುಟವನ್ನು ಹಾರಿಸಿ ದಿಟ್ಟತನ ತೋರಿದ್ದಾರೆ. ಯಾವುದೆ ಹಗರಣದಲ್ಲಿ ಭಾಗಿಯಾಗಿಲ್ಲದ ಇಂತಹ ಪ್ರಧಾನಿ ದೇಶಕ್ಕೆ ಮತ್ತೊಮ್ಮೆ ಬೇಕಾಗಿದೆ. ಈ ನಿಟ್ಟಿನಲ್ಲಿ ಜೆ.ಡಿ.ಎಸ್ ಹಾಗೂ ಬಿ.ಜೆ.ಪಿ ಕಾರ್ಯಕರ್ತರು ಒಟ್ಟಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂತೆ ತಿಳಿಸಿದರು.
ಇದನ್ನು ಓದಿ: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರ ತತ್ತರ: ಬಿ.ಎನ್.ಚಂದ್ರಪ್ಪ
ರಾಜ್ಯದಲ್ಲಿ ಸಾಕಷ್ಟು ಅಭಿವೃದ್ದಿ
ಜೆ.ಡಿ.ಎಸ್. ಜಿಲ್ಲಾಧ್ಯಕ್ಷ ಜಯಣ್ಣ ಮಾತನಾಡಿ, ರಾಜ್ಯದ ಉಪ ಮುಖ್ಯಮಂತ್ರಿಯಾಗಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಲೋಕೋಪಯೋಗಿ ಸಚಿವರಾಗಿದ್ದ ಗೋವಿಂದ ಕಾರಜೋಳ ರವರು ರಾಜ್ಯದಲ್ಲಿ ಸಾಕಷ್ಟು ಅಭಿವೃದ್ದಿಗಳನ್ನು ಕೈಗೊಂಡಿದ್ದಾರೆ. ಇಂತಹ ಅನುಭವಿ ರಾಜಕಾರಣಿಯನ್ನು ಗುರುತಿಸಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟಿರುವುದನ್ನು ಕ್ಷೇತ್ರದ ಮತದಾರರು ಕಳೆದುಕೊಳ್ಳಬಾರದು. ಪ್ರತಿ ಬೂತ್ ಹಾಗೂ ಮನೆ ಮನೆಗೆ ಹೋಗಿ ಕಾರ್ಯಕರ್ತರು ಬಿ.ಜೆ.ಪಿ. ಯೋಜನೆಗಳನ್ನು ಜನತೆಗೆ ತಿಳಿಸಿ ಅಭ್ಯರ್ಥಿಯನ್ನು ಬಹುಮತಗಳಿಂದ ಗೆಲ್ಲಿಸುವಂತೆ ವಿನಂತಿಸಿದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ 8 ವಿಧಾನಸಭಾ ಕ್ಷೇತ್ರಗಳು ಒಳಪಟ್ಟಿರುವುದರಿಂದ ಎಲ್ಲಾ ಕಡೆ ಸುತ್ತಾಡಿ ಮತ ಯಾಚಿಸಲು ಅಭ್ಯರ್ಥಿಗೆ ಸಮಯವಿಲ್ಲ ಹಾಗಾಗಿ ಕಾರ್ಯಕರ್ತರು ನೀವುಗಳೇ ಅಭ್ಯರ್ಥಿಯಾಗಿ, ಪ್ರಧಾನಿಯಾಗಿ ಪ್ರತಿ ಮನೆಗೆ ತೆರಳಿ ಅಭ್ಯರ್ಥಿ ಪರ ಮತ ಯಾಚಿಸಿ ಗೆಲ್ಲಿಸುವಂತೆ ಮನವಿ ಮಾಡಿದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಗೋವಿಂದ ಕಾರಜೋಳ ಮಾತನಾಡಿ ಪ್ರತಿ ಕಾರ್ಯಕರ್ತರು ಅಭ್ಯರ್ಥಿಗಳಾಗಿ ನನ್ನ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸಿ ಕೇಂದ್ರದಲ್ಲಿ ಮತ್ತೊಮ್ಮೆ ಬಿ.ಜೆ.ಪಿ.ಯನ್ನು ಅಧಿಕಾರಕ್ಕೆ ತರುವ ಮೂಲಕ ನರೇಂದ್ರ ಮೋದಿಯನ್ನು 3ನೇ ಬಾರಿಗೆ ಪ್ರಧಾನಿಯನ್ನಾಗಿ ಮಾಡುವಂತೆ ಕೋರಿದರು.
ಭಾರತ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 5ನೇ ಸ್ಥಾನ
ಒಂದು ಕಾಲದಲ್ಲಿ ಬಡತನದ ದೇಶವಾಗಿದ್ದ ಭಾರತ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಇನ್ನು ಮೂರು ವರ್ಷದಲ್ಲಿ 3ನೇ ಸ್ಥಾನಕ್ಕೆ ಬರುವುದರಲ್ಲಿ ಯಾವುದೇ ಅನುಮಾನ ಇಲ್ಲ. ಹಾಗಾಗಿ ಈ ಬಾರಿಯ ಲೋಕಸಭಾ ಚುನಾವಣೆಯನ್ನು ಹಗುರವಾಗಿ ತೆಗೆದುಕೊಳ್ಳದೆ ಕಾರ್ಯಕರ್ತರು ಪ್ರಾಮಾಣಿಕವಾಗಿ ಗೆಲುವಿಗೆ ಶ್ರಮಿಸುವಂತೆ ಭಿನ್ನವಿಸಿಕೊಂಡರು.
ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷೆ ಶ್ರೀಮತಿ ಸೌಭಾಗ್ಯ ಬಸವರಾಜನ್, ಜೆ. ಎನ್. ಕೋಟೆ ಸಿದ್ದಪ್ಪ, ಜಿ.ಪಂ. ಮಾಜಿ ಸದಸ್ಯ ಲಕ್ಷ್ಮಣಪ್ಪ, ಮಾಜಿ ಶಾಸಕ ಪ್ರೊ. ಲಿಂಗಪ್ಪ ಸೇರಿದಂತೆ ಬಿ.ಜೆ.ಪಿ ಮತ್ತು ಜೆ.ಡಿ.ಎಸ್. ಕಾರ್ಯಕರ್ತರು ಈ ಸಂದರ್ಭದಲ್ಲಿದ್ದರು.