Chitradurga news | nammajana.com | 15-5-2024
ನಮ್ಮಜನ.ಕಾಂ, ಚಿತ್ರದುರ್ಗ: ನಾಡು ಕಂಡ ವೀರ ಪರಾಕ್ರಮಿ, ನಾಡದೊರೆ ರಾಜವೀರ ಮದಕರಿ ನಾಯಕ (Madakari Nayaka) ಉತ್ತಮ ಆಳ್ವಿಕೆ ಮೂಲಕ ನಾಡನ್ನು ರಕ್ಷಿಸಿ ಸರ್ವ ಜನಾಂಗದ ನಾಯಕನಾಗಿ ಹೊರಹೊಮ್ಮಿ ರಾಜ್ಯದ ಅನೇಕ ಭಾಗಗಳಲ್ಲಿ ಅಭಿವೃದ್ಧಿಗೆ ಶ್ರಮಿಸಿದರು ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ (T. Raghumurthy)ಹೇಳಿದರು.
ನಗರದ ಮದಕರಿ ನಾಯಕ ವೃತ್ತದಲ್ಲಿ ರಾಜವೀರ ಮದಕರಿನಾಯಕರ 242 ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಮದಕರಿ ನಾಯಕ ಪ್ರತಿಮೆಗೆ ಮತ್ತು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪರ್ಚಾನೆ ಮಾಡಿ ಮಾತನಾಡಿದರು.
ಮದಕರಿನಾಯಕರಿಂದ ಜನರ ರಕ್ಷಣೆ
ಚಿತ್ರದುರ್ಗ ರಾಜತ ಆಳ್ವಿಕೆಯಲ್ಲಿ ಅತ್ಯಂತ ವೀರ ರಾಜನಾಗಿ ನಾಡನ್ನು ಸಂರಕ್ಷಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು, ಚಿತ್ರದುರ್ಗ ನಗರದ ಅನೇಕ ನೀರಿನ ಸಂಗ್ರಹಣ ಐತಿಹಾಸಿಕ ಹೊಂಡಗಳ ನಿರ್ಮಾಣ, ಒಳಚರಂಡಿ ವ್ಯವಸ್ಥೆ ಸೇರಿ ಎಲ್ಲಾ ಜನಾಂಗದವರ ಹಿತ ಕಾಯುವ ಕೆಲಸವನ್ನು ಮದಕರಿನಾಯಕ ಅವರು ಮಾಡಿದರು.
12 ವಯಸ್ಸಿನಲ್ಲಿ ಪಟ್ಟಾಭಿಷೇಕ
ಚಿತ್ರದುರ್ಗದ ನಾಯಕರಲ್ಲಿ ಕಡೆಯ ನಾಯಕನಾದ ಮದಕರಿನಾಯಕ ಚಿತ್ರದುರ್ಗ ಸಿಂಹಾಸನವನ್ನು ಅಲಂಕರಿಸಿದಾಗ 12 ವರ್ಷ ವಯಸ್ಸಾಗಿತ್ತು ಎಂದು ಇತಿಹಾಸ ಹೇಳುತ್ತದೆ.25 ವರ್ಷಗಳ ಆಳ್ವಿಕೆ ನಡೆಸಿದ ಮದಕರಿನಾಯಕ 37 ವಯಸ್ಸಿನಲ್ಲಿ ಬಂಧಿಸಿದಾಗ 2.5 ವರ್ಷಗಳ ಸೆರೆ ವಾಸ ಅನುಭವಿಸಿ ವೀರ ಮರಣ ಹೊಂದಿದ್ದು ಅವರ ಮಾಡಿದ ಉತ್ತಮ ಕಾರ್ಯಗಳನ್ನು ಯುವ ಪೀಳಿಗೆ ಮುಟ್ಟಿಸುವ ಕೆಲಸವನ್ನು ಪುಣ್ಯ ಸ್ಮರಣೆ ಮತ್ತು ಜಯಂತ್ಯೋತ್ಸವ ಮೂಲಕ ತಿಳಿಸಲಾಗುತ್ತದೆ ಎಂದು ತಿಳಿಸಿದರು.
ಮದಕರಿನಾಯಕರು ಹಾಕಿ ಕೊಟ್ಟ ದಾರಿಯಲ್ಲಿ ನಡೆಯೋಣ:ಕೆ.ಸಿ.ವೀರೇಂದ್ರ ಪಪ್ಪಿ
ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಮಾತನಾಡಿ ಚಿತ್ರದುರ್ಗ ಆಳ್ವಿಕೆ ಮಾಡಿದ ಮದಕರಿ ನಾಯಕ ಅವರು ಮಾಡಿದ ಉತ್ತಮ ಕಾರ್ಯಗಳನ್ನು ನಾವು ಮರೆಯಲು ಸಾಧ್ಯವಿಲ್ಲ, ಅವರು ಹಾಕಿಕೊಟ್ಟಂತಹ ದಾರಿಯಲ್ಲಿ ನಾವು ನಡೆಯಬೇಕಿದೆ, ನಾಯಕ ಸಮಜದ ಜೊತೆಗೆ ಎಲ್ಲಾ ಸಮಾಜದವರು ಮದಕರಿನಾಯಕರಿಗೆ ಗೌರವ ಸಲ್ಲಿಸಿ ನೆನಪು ಮಾಡಿಕೊಳ್ಳಬೇಕು ಎಂದರು.
ತಾಲೂಕು ನಾಯಕ ಸಮಾಜದ ಅಧ್ಯಕ್ಷ ಬಿ.ಕಾಂತರಾಜ್ ಮಾತನಾಡಿ ರಾಜ ವೀರ ಮದಕರಿ ನಾಯಕ 242 ಪುಣ್ಯ ಸ್ಮರಣೆಗೆ ಎಲ್ಲಾ ಸಮಾಜದ ಬಂಧುಗಳು ಭಾಗವಹಿಸಿ ಯಶಸ್ವಿಗೊಳಿಸಿರುವುದು ಸಂತಸ ತಂದಿದೆ ಎಂದರು.
ಮದಕರಿ ನಾಯಕ ಆಳ್ವಿಕೆಯಲ್ಲಿ ಕೆರೆ ಕಟ್ಟೆಗಳನ್ನು ಕಟ್ಟಿಸಿ ನಗರದ ಅಭಿವೃದ್ಧಿಗೆ ಪಣ ತೊಟ್ಟಿದ್ದರು ಅವರು ಮಾಡಿದ ಕೆಲಸಗಳನ್ನು ದುರ್ಗದ ಜನರು ಮರೆಯಲು ಸಾಧ್ಯವಿಲ್ಲ, ಅವರು ಕಟ್ಟಿಸಿ ನೀರಿನ ಹೊಂಡಗಳಿಂದ ಜಲ ರಕ್ಷಣೆ ಮಾಡಿದರು.
ವರ್ಷಕ್ಕೆ ಎರಡು ಬಾರಿ ಮದಕರಿ ನಾಯಕ ಅವರನ್ನು ನೆನಪು ಮಾಡಿಕೊಳ್ಳುವ ಕೆಲಸ ಮಾಡುತ್ತೇವೆ. ಜಯಂತ್ಯೋತ್ಸವ ಮತ್ತು ಪುಣ್ಯ ಸ್ಮರಣೆ ಮೂಲಕ ಮದಕರಿ ನಾಯಕರ ಸ್ಮರಿಸುತ್ತಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: Dina Bhavishya: ಇಂದಿನ ರಾಶಿ ಭವಿಷ್ಯ 15-5-2024
ಗೋವಿಂದ ಕಾರಜೋಳ ಪುತ್ರ ಉಮೇಶ್ ಕಾರಜೋಳ ಮಾತನಾಡಿ ಮದಕರಿನಾಯಕ ಅವರನ್ನು ನಾವು ಪ್ರತಿದಿನ ಸ್ಮರಿಸಬೇಕು, ಚಿತ್ರದುರ್ಗ ಎಂದರೆ ಮದಕರಿನಾಯಕ, ಮದಕರಿನಾಯಕ ಎಂದರೆ ಚಿತ್ರದುರ್ಗ ಎಂದು ರಾಜ್ಯ ಜನರ ಅಭಿಪ್ರಾಯವಾಗಿದ್ದು ಅವರು ಮಾಡಿದ ಉತ್ತಮ ಕಾರ್ಯಗಳಿಂದ ಜನರ ಮನಸ್ಸಿನಲ್ಲಿ ಉಳಿದಿದ್ದಾರೆ ಎಂದರು.
ಜಯಂತಿಯಲ್ಲಿ ಭಾಗವಹಿಸಿದ ಮುಖಂಡರು
ಈ ಸಂದರ್ಭದಲ್ಲಿ ಜಿಲ್ಲಾ ನಾಯಕ ಸಮಾಜದ ಹೆಚ್.ಜೆ.ಕೃಷ್ಣಮೂರ್ತಿ, ನಗರಸಭೆ ಸದಸ್ಯ ದೀಪು, ರಾಜ ವಂಶಸ್ಥ ರಾಜವೀರ ಮದಕರಿ ನಾಯಕ, ಮುಖಂಡರಾದ ತಿಪ್ಪೇಸ್ವಾಮಿ, ಮಾಜಿ ನಗರಸಭೆ ಅಧ್ಯಕ್ಷ ಸಿ.ಟಿ.ಕೃಷ್ಣಮೂರ್ತಿ,ಎಟಿಎಸ್ ತಿಪ್ಪೇಸ್ವಾಮಿ, ಹೆಚ್.ಅಂಜಿನಪ್ಪ, ಗೋಪಾಲಸ್ವಾಮಿ ನಾಯಕ, ಸೂರನಾಯಕ, ಮಹರಾಣಿ ಕಾಲೇಜು ಆಡಳಿತಧಿಕಾರಿ ಸಂದೀಪ್, ಗುರುಸಿದ್ದಪ್ಪ, ಜಾನ್ಹಾವಿ ನಾಗರಾಜ್,ಕಾಟೀಹಳ್ಳಿ ಕರಿಯಪ್ಪ, ಅಹೋಬಲ ಅರುಣ್ ಕುಮಾರ್ ಮತ್ತು ಅನೇಕ ಮುಖಂಡರು, ಸಾರ್ವಜನಿಕರು ಭಾಗವಹಸಿದ್ದರು.