Chitradurga news | nammajana.com | 04-08-2025
ನಮ್ಮಜನ.ಕಾಂ, ಚಿತ್ರದುರ್ಗ: ಹೋಟೆಲ್ ಉದ್ದಿಮೆಯಲ್ಲಿ (Akka Cafe) ಮಹಿಳೆಯರು ಪಾಲ್ಗೊಳ್ಳಲು ಅಕ್ಕ ಕೆಫೆ ಉತ್ತೇಜನ ನೀಡಲಿದೆ ಎಂದು ಯೋಜನಾ ಮತ್ತು ಸಾಂಖ್ಯಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬಂಗಾರದ ಬೆಲೆಯಲ್ಲಿ ಏರಿಕೆ
ನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಸೋಮವಾರ ಕೌಶಲ್ಯಾಭಿವೃದ್ಧಿ ಉದ್ಯಮಶೀಲತಾ ಮತ್ತು ಜೀವನೋಪಾಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್‍ಆರ್‍ಎಲ್‍ಎಂ)-ಸಂಜೀವಿನಿ, ಜಿಲ್ಲಾ ಪಂಚಾಯತ್ ವತಿಯಿಂದ ನೂತನವಾಗಿ ಆರಂಭಿಸಲಾಗಿರುವ “ಅಕ್ಕ ಕೆಫೆ” ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯಮಂತ್ರಿಗಳು ಬಜೆಟ್‍ನಲ್ಲಿ ಅಕ್ಕ ಕೆಫೆ ಆರಂಭಿಸುವ ಕುರಿತು ಘೋಷಣೆ ಮಾಡಿದ್ದರು. 2024 ಮಾರ್ಚ್ 8 ರಂದು ರಾಜ್ಯದಲ್ಲಿ ಮೊದಲ ಅಕ್ಕ ಕೆಫೆಗೆ ಚಾಲನೆ ನೀಡಲಾಗಿತ್ತು. ತದ ನಂತರ ರಾಜ್ಯದ ಇತರೆಡೆ ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳ ನಿರ್ವಹಣೆಯಲ್ಲಿ ಆರಂಭಿಸಿದ ಅಕ್ಕ ಕೆಫೆಗಳು ಯಶಸ್ವಿಯಾಗಿವೆ.
ಅಕ್ಕ ಕೆಫೆಯಲ್ಲಿ ಉಪ್ಪಿಟ್ಟು, ಸಿರಿಧಾನ್ಯಗಳ ಬಾತ್, ಕಾಫಿ ಸವಿದ ಸಚಿವ ಡಿ.ಸುಧಾಕರ್ ಶುಚಿ ಹಾಗೂ ರುಚಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ ತಾವು ಅಕ್ಕ ಕೆಫೆಯಲ್ಲಿ ಪಡೆದ ಉಪಹಾರಕ್ಕೆ ಪ್ರತಿಯಾಗಿ ಮೊದಲ ಬಿಲ್ ಹಣವನ್ನು ತಾವೇ ಪಾವತಿಸಿ, ಅಕ್ಕ ಕೆಫೆ ನಿರ್ವಹಿಸುವ ಮಹಿಳೆಯರಿಗೆ ಪ್ರೋತ್ಸಾಹದ ನುಡಿಗಳನ್ನಾಡಿದರು.
ಸಂಪೂರ್ಣವಾಗಿ ಮಹಿಳೆಯರಿಂದಲೇ(Akka Cafe) ಅಕ್ಕ ಕೆಫೆಗಳು ಕಾರ್ಯನಿರ್ವಹಿಸುತ್ತವೆ. ಶುಚಿ ಮತ್ತು ರುಚಿಯಾದ ಆಹಾರವನ್ನು ಸಾರ್ವಜನಿಕರು ಅಕ್ಕ ಕೆಫೆಯಲ್ಲಿ ಸವಿಯಬಹುದು. ಮುಂದಿನ ದಿನಗಳಲ್ಲಿ ಜಿಲ್ಲೆಯ ಇತರೆಡೆ ಅಕ್ಕ ಕೆಫೆಗಳನ್ನು ತೆರೆಯಲು ಚಿಂತನೆ ನಡೆಸಲಾಗಿದೆ ಎಂದರು.
ಇದನ್ನೂ ಓದಿ: ಅರಿವಿನ ಜೊತೆಗೆ ಮನಸ್ಸಿಟ್ಟು ಓದಿದವರು ಮಹತ್ವದ ಕೃತಿಗಳನ್ನು ನೀಡಬಲ್ಲರು
ಅಕ್ಕ ಕೆಫೆಯ ಮಹಿಳಾ ಸದಸ್ಯರನ್ನು ಅಭಿನಂಧಿಸಿದ ಅವರು, ಅಕ್ಕ ಕೆಫೆಯಲ್ಲಿ ಆಹಾರದ ಗುಣಮಟ್ಟ ಚೆನ್ನಾಗಿರಬೇಕು, ಶುಚಿ ಹಾಗೂ ರುಚಿಗೆ ಹೆಚ್ಚಿನ ಆದ್ಯತೆ ನೀಡಿ, ನಿರಂತರವಾಗಿ ಉತ್ತಮ ರೀತಿಯಲ್ಲಿ ನಿರ್ವಹಿಸುವಂತೆ ಸಲಹೆ ನೀಡಿದರು.
ಜಿ.ಪಂ. ಸಿಇಒ ಡಾ. ಆಕಾಶ್ ಮಾತನಾಡಿ, ಕಡಿಮೆ ಬೆಲೆಯಲ್ಲಿ ಜನರಿಗೆ ಅಕ್ಕ ಕೆಫೆಯಲ್ಲಿ ಮನೆಯ ರುಚಿಯ ಅನುಭೂತಿ ನೀಡುವ ತಿಂಡಿ ಊಟಗಳು ದೊರೆಯಲಿವೆ. ರಾಸಾಯನಿಕ ಬಣ್ಣ, ಕೃತಕ ರುಚಿಕಾರಕಗಳನ್ನು ಅಕ್ಕ ಕೆಫೆಯಲ್ಲಿ ಬಳಸುವುದಿಲ್ಲ.
ಶುಚಿ ಮತ್ತು ಆರೋಗ್ಯಕರ ಆಹಾರ(Akka Cafe) ನೀಡುವುದು ಅಕ್ಕ ಕೆಫೆ ಉದ್ದೇಶವಾಗಿದೆ. ಜಿಲ್ಲೆಯಲ್ಲಿ ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದು, ಪ್ರತಿದಿನವು ಸಿರಿಧಾನ್ಯಗಳ ಖಾದ್ಯ ಅಕ್ಕ ಕೆಫೆಯಲ್ಲಿ ದೊರೆಯುತ್ತದೆ. ಜಿ.ಪಂ. ಗೆ ವಿವಿಧ ಕೆಲಸಕ್ಕೆ ಆಗಮಿಸುವ ಸಾರ್ವಜನಿಕರು ಇದರ ಸದಪಯೋಗ ಪಡೆದುಕೊಳ್ಳಬೇಕು ಎಂದರು.
ಇದನ್ನೂ ಓದಿ: ಭದ್ರಾ ಜಲಾಶಯಕ್ಕೆ ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಬಾಗಿನ ಸಮರ್ಪಣೆ
ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ, ಜಿ.ಪಂ. ಮುಖ್ಯ ಯೋಜನಾಧಿಕಾರಿ ಗಾಯತ್ರಿ ಸೇರಿದಂತೆ ಮತ್ತಿರರು ಉಪಸ್ಥಿತರಿದ್ದರು.
