Chitradurga news| nammajana. com |6-11-2024
ನಮ್ಮಜನ.ಕಾಂ, ಹೊಸದುರ್ಗ: ಅನುಭವ ಮಂಟಪ ಕಟ್ಟಡವಲ್ಲ; ಸಮಾಲೋಚನಾ ಸ್ಥಳ. ಇಂದು ಕಟ್ಟಡಗಳು ಹೆಚ್ಚುತ್ತಿವೆಯೇ ಹೊರತು; ಸಮಾಲೋಚನೆ ನಡೆಯುತ್ತಿಲ್ಲ. (National Drama Festival) ಮುರುಡಯ್ಯ ನಟನಾಗಿರುವಂತೆ ಮಾತುಗಾರನೂ ಆಗಿರುವುದು ನಮಗೆ ಸಂತೋಷವಾಯಿತು ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.
ಒಬ್ಬ ನಟ ಒಳ್ಳೆಯ ಮಾತುಗಾರನೂ ಆಗಬಲ್ಲ ಎನ್ನುವುದಕ್ಕೆ ಮುರುಡಯ್ಯ ಸಾಕ್ಷಿಯಾಗಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಶಂಕರ್ ಅವರ ಸಾಧನೆ ಅಪೂರ್ವವಾದುದು. ಮಕ್ಕಳಿಗೆ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಯನ್ನು ಕಲಿಸಿದರೆ ಅವರೇ ಮುಂದೆ ನಾಡಿನ ಸಂಪತ್ತಾಗುವರು. ಮನುಷ್ಯನಿಗೆ ಬೇಕಾಗಿರುವುದು ಹಣ, ಅಧಿಕಾರ, ಸಂಪತ್ತಲ್ಲ; ಖುಷಿ, ಸಂತೋಷ, ನೆಮ್ಮದಿ. ಇವು ಇಂಥ ಕಾರ್ಯಕ್ರಮಗಳಲ್ಲಿ, ಸಜ್ಜನರ ಸಂಗದಲ್ಲಿ ದೊರೆಯುವವು ಎಂದರು
ತಾಲೂಕಿನ ರಂಗಕಾಶಿ ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾಸಂಘ ಶ್ರೀ ಶಿವಕುಮಾರ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ನಾಟಕೋತ್ಸವದ ಸನಿಧ್ಯ ವಹಿಸಿ ಮಾತನಾಡಿದ ಅವರು ಮಾಲಿನ್ಯಗಳು ಎರಡು; ಒಂದು ಮನೋ ಮಾಲಿನ್ಯ, ಇನ್ನೊಂದು ಬಾಹ್ಯ ಪರಿಸರ ಮಾಲಿನ್ಯ. ಮನಸ್ಸಿಗೆ ಸಂಸ್ಕಾರ ನೀಡಿದರೆ ಹೊರಗಿನ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಲು ಸಾಧ್ಯ. ದಿನದಿಂದ ದಿನಕ್ಕೆ ಭ್ರಷ್ಟರ, ದುಷ್ಟರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಶಿಕ್ಷಣವಂತರು, ದೊಡ್ಡ-ದೊಡ್ಡ ಸ್ಥಾನಮಾನಗಳಲ್ಲಿರುವವರೇ ಇಂಥ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಅವರ ದುರಾಸೆ. ಈ ಹಿನ್ನೆಲೆಯಲ್ಲಿಯೇ ಬುದ್ಧ `ಆಸೆಯೇ ದುಃಖಕ್ಕೆ ಮೂಲ’ ಎಂದರು. ಅಲ್ಲಮ ಬಯಲ ಜೀವನ, ಬಯಲ ಭಾವನೆಗಳಿಗೆ ಇಂಥ ಎಲ್ಲ ಸಂಕೋಲೆಗಳನ್ನು ಕಳಚುವ ಶಕ್ತಿಯಿದೆ ಎಂದಿದ್ದಾರೆ. ಗೋಡೆಗಳನ್ನು ಕಟ್ಟಿಕೊಳ್ಳುತ್ತಾ ಹೋದಷ್ಟು ಮನುಷ್ಯ ದುಷ್ಟ, ಕ್ರೂರಿ, ಸಮಾಜಘಾತುಕನಾಗುವನು.
ನಾವು ಇಂದು ಬಸವಣ್ಣ, ಬುದ್ಧ, ಗಾಂಧಿಯ ತತ್ವಗಳನ್ನು ಅಳವಡಿಸಿಕೊಳ್ಳುವ ಮೂಲಕ ಭ್ರಷ್ಟಾಚಾರವನ್ನು, ಆಂತರಿಕ ಮತ್ತು ಬಾಹ್ಯ ಮಾಲಿನ್ಯವನ್ನು ಕಡಿಮೆ ಮಾಡಿಕೊಳ್ಳಬಹುದು. ಬಸವಣ್ಣನವರಂತೆ ಗಾಂಧೀಜಿ ಬಯಸಿದ್ದು (National Drama Festival) ಸರ್ವೋದಯವನ್ನು. ಇಂದು ನಾವು ಉಣ್ಣುವ ಅನ್ನಕ್ಕಿಂತ ತಂತ್ರಜ್ಞಾನಕ್ಕೆ ಹೆಚ್ಚು ಒತ್ತುಕೊಟ್ಟಿದ್ದೇವೆ. ಮುಂದೆ ಇದೇ ನಮ್ಮನ್ನು ಅತಂತ್ರರನ್ನಾಗಿಸುವ ಸಾಧ್ಯತೆ ಇದೆ. ಈ ತಂತ್ರಜ್ಞಾನದ ಸರಪಳಿ ನಮ್ಮ ಮಾನವೀಯ ಮೌಲ್ಯಗಳನ್ನು ಕಟ್ಟಿಹಾಕುತ್ತಿದೆ ಆ ಕಾರಣಕ್ಕಾಗಿಯೇ ಇಲ್ಲಿಗೆ ಅನೇಕ ಗಣ್ಯಮಾನ್ಯರು ಆಹ್ವಾನ ಪತ್ರಿಕೆಯಿಲ್ಲದೆ ಸ್ವಯಂ ಪ್ರೇರಿತರಾಗಿ ಬರುವರು ಎಂದರು.
ಬಸವಕಲ್ಯಾಣದ ಅಂತರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರದ ಡಾ. ಗಂಗಾಂಬಿಕಾ ಅಕ್ಕ ಮಾತನಾಡಿ ಪಂಡಿತಾರಾಧ್ಯ ಶ್ರೀಗಳು ಲಿಂಗಾಯತ ಧರ್ಮದ ಸಂಸ್ಕೃತಿಯನ್ನು ಒಯ್ಯುವ ರಾಯಭಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಸಾಮರಸ್ಯದ ಚಿಂತನೆ ಮತ್ತು ಅನುಭಾವದ ನೆಲೆಯಲ್ಲಿನ ಪೂಜ್ಯರುಗಳಲ್ಲಿ ಮೊದಲಿಗರು ಪೂಜ್ಯರು. ಕಲೆಯ ಮೂಲಕ ಜಗತ್ತಿನ ಕಸ ಕಳೆಯುತ್ತಿದ್ದಾರೆ. `ಮತ್ತೆ ಕಲ್ಯಾಣ’ದ ಮೂಲಕ ಪೂಜ್ಯರು ನಾಡಿನಲ್ಲಿ ಸಂಚಲನವನ್ನೇ ಮೂಡಿಸಿದ್ದರು.
ಆ ಸಂದರ್ಭದಲ್ಲಿ ಅವರಿಗೆ ಎದುರಾದ ಕಷ್ಟ ನಷ್ಟಗಳು ಅಷ್ಟಿಷ್ಟಲ್ಲ. ಆದರೂ ದೃತಿಗೆಡದೆ ಆ ಅಭಿಯಾನವನ್ನು ಮುನ್ನಡೆಸಿದವರು. ಶರಣರು ಲೋಕದಿಚ್ಚಿಗೆ ನಡೆಯುವವರಲ್ಲ, ನುಡಿಯುವವರಲ್ಲ. ಅವರಂತೆ ಪೂಜ್ಯರು ಮುನ್ನಡೆಯುತ್ತಿದ್ದಾರೆ. ಸಾಣೇಹಳ್ಳಿಯನ್ನೇ ಬಸವಕಲ್ಯಾಣದಂತೆ ಅವಿಮುಕ್ತ ಕ್ಷೇತ್ರವನ್ನಾಗಿಸಿದವರು ಪೂಜ್ಯರು. ಅಂಜದೆ, ಅಳುಕದೆ ಬಸವ ತತ್ವವನ್ನು ನಿರ್ಭೆಡಿಯಿಂದ ಪ್ರಚಾರ ಮಾಡುತ್ತಿದ್ದಾರೆ.
ನಿಜ ಸೂರ್ಯನ ದರ್ಶನ ಮಾಡಿಸಿಕೊಡುವ ಇಂಥ ಪೂಜ್ಯರ ಅವಶ್ಯಕತೆ ಇಂದು ಎಲ್ಲ ಕಡೆ ಇದೆ. ಜಾತಿಯಾತೆ ನಿರ್ಮೂಲನೆ, ಸಮಾನತೆ, ಏಕದೇವೋಪಾಸನೆಗಳಂಥ ತತ್ವಗಳನ್ನು ಜನರಿಗೆ ಮುಟ್ಟಿಸುವಲ್ಲಿ ಪೂಜ್ಯರ ಪ್ರಯತ್ನ ಬಹಳ ಮಹತ್ವವಾದುದು. `ನಮ್ಮ ನಡೆ ಸರ್ವೋದಯದ ಕಡೆ’ ಎನ್ನುವ ಧ್ಯೇಯ ವಾಕ್ಯದೊಂದಿಗೆ ಈ ವರ್ಷದ ನಾಟಕೋತ್ಸವವನ್ನು ನಡೆಸುತ್ತಿದ್ದಾರೆ. ಪೂಜ್ಯರು ಕಲೆಯನ್ನು ಮನೋರಂಜನೆಗಾಗಿ ಬಳಸದೆ ತತ್ವ ಪ್ರಸಾರಕ್ಕಾಗಿ ಬಳಸುತ್ತಿರುವುದು ಅನಕರಣೀಯ ಎಂದರು.
`ಪರಿಸರ ರಕ್ಷಣೆಯ ಬಿಕ್ಕಟ್ಟು ಮತ್ತು ಪರಿಹಾರ’ ಕುರಿತಂತೆ ಉಪನ್ಯಾಸ ನೀಡಿದ ಧಾರವಾಡದ ಪರಿಸರ ಪ್ರೇಮಿಗಳಾದ ಡಾ. ಸಂಜೀವ ಕುಲಕರ್ಣಿ ಮಾತನಾಡಿ ಮನುಷ್ಯ ಬೆಂಕಿಯನ್ನು ಕಂಡುಹಿಡಿದಂದಿನಿಂದಲೇ ಪರಿಸರದ ಮೇಲೆ ದಾಳಿ ಮಾಡಲು ಶುರು ಮಾಡಿದ. ನಂತರದ ಕೈಗಾರಿಕಾ ಕ್ರಾಂತಿ ಮತ್ತು ಪ್ಲಾಸ್ಟಿಕ್ನ ಸಂಶೋಧನೆ ಪರಿಸರ ನಾಶದ ವಿರಾಟ ಸ್ವರೂಪವನ್ನು ತಾಳಿತು. ಭೂಮಿಯ ಮೇಲಿರುವ ಜೀವಜಗತ್ತು ಮತ್ತೆಲ್ಲಿಯೂ ಇಲ್ಲ. ಹವಾಮಾನದ ತಾಪಮಾನ ವ್ಯತ್ಯಾಸವಾಗಲು ಮನಷ್ಯರ ಜೀವನ ಶೈಲಿಯೇ ಕಾರಣ.
ಹೀಗೇ ಮುಂದುವರಿದರೆ ಇನ್ನು ಕೆಲವೇ ವರ್ಷಗಳಲ್ಲಿ ಶೇ. 75 ರಷ್ಟು ಜೀವಸಂಕುಲ ಕಣ್ಮರೆಯಾಗುವುದು. ಪವಿತ್ರ ನದಿಗಳ ನೀರು ಸ್ನಾನಕ್ಕೂ ಯೋಗ್ಯವಾಗಿ ಉಳಿದಿಲ್ಲ. ಅರಣ್ಯಪ್ರದೇಶ ಶೇ. 12 ರಷ್ಟಕ್ಕೆ ಇಳಿದಿದೆ. ಆರನೆಯ ಮಹಾ ಜೀವನಾಶದ ಸನಿಹಕ್ಕೆ ಬಂದು ನಿಂತಿದ್ದೇವೆ. ಅತಿವೃಷ್ಠಿ ಮತ್ತು ಅನಾವೃಷ್ಠಿಗೆ ಮುಖ್ಯ ಕಾರಣ ಹವಾಮಾನ ವೈಪರಿತ್ಯ. ವೈಯುಕ್ತಿಕವಾಗಿ ಪರಿಸರ ಸ್ನೇಹಿ ಜೀವನ ಶೈಲಿಯನ್ನು ಅನುಸರಿಸದಿದ್ದರೆ ಜೀವ ಸಂಕುಲಕ್ಕೆ ಉಳಿಗಾಲವಿಲ್ಲ.
ವೈಯುಕ್ತಿಕ ಬದಲಾವಣೆಯ ಹೊರತು; ಸರಕಾರ, ವಿಶ್ವಸಂಸ್ಥೆಗಳಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಮೆದುಳು, ಹೃದಯ ಮತ್ತು ಕೈಗಳು ಒಂದಾಗಿ ಪರಿಸರ ಸಂರಕ್ಷಣೆಯನ್ನು ಮಾಡುವ ಪ್ರಾಮಾಣಿಕ ಪ್ರಯತ್ನ ಸಾಣೇಹಳ್ಳಿಯಲ್ಲಿ ನಡೆದಿದೆ. ಇದು ಎಲ್ಲರಿಗೂ ಅನುಕರಣೀಯ ಎಂದರು.
ಸಾಂಪ್ರದಾಯಕ ಆಚರಣೆಗಳು’ ಕುರಿತಂತೆ ಶಿವಮೊಗ್ಗದ ವಿಧಾನಪರಿಷತ್ ಸದಸ್ಯರಾದ ಡಾ. ಧನಂಜಯ ಸರ್ಜಿ ಮಾತನಾಡಿ ಉಸಿರು ಮತ್ತು ಹೆಸರಿನ ನಡುವಿನ ಅವಧಿಯೇ ಜೀವನ. ಸಂಸ್ಕೃತಿ ಮತ್ತು ಸಂಸ್ಕಾರ ನೀಡಲು ಸಾಂಪ್ರದಾಯಕ ಆಚರಣೆಗಳು ಅಗತ್ಯವಾಗಿ ಬೇಕು. ಮನುಷ್ಯನಿಗೆ ಸಂಸ್ಕಾರ ಸಿಕ್ಕರೆ ಮಹದೇವನಾಗುವನು. ಸಾಂಪ್ರದಾಯಿಕ ಆಚರಣೆಗಳ ಹಿಂದಿನ ವೈಜ್ಞಾನಿಕತೆಯನ್ನು ಗಮನಿಸುವ ಪ್ರಯತ್ನ (National Drama Festival) ಮಾಡಬೇಕು. ಪ್ರತಿಯೊಂದು ಹಬ್ಬಗಳೂ ಆಯಾ ಕಾಲ, ಹವಾಮಾನದ ಅನುಗುಣವಾಗಿ ಆಚರಿಸಲ್ಪಡುತ್ತವೆ. ಈ ಹಬ್ಬಗಳಲ್ಲಿ ತಯಾರಿಸುವ ಆಹಾರ ಪದಾರ್ಥಗಳು ದೈಹಿಕ ಅಗತ್ಯವನ್ನು ಪೂರೈಸುವ ಹಿನ್ನೆಲೆಯಲ್ಲಿ ಇರುತ್ತವೆ. ಅರಿಷಿಣ, ಕುಂಕುಮ, ವಿಭೂತಿ ಹಚ್ಚಲೂ ವೈಜ್ಞಾನಿಕ ಮತ್ತು ಆಧ್ಯಾತ್ಮಿಕ ಕಾರಣಗಳಿವೆ. ಅಮವಾಸೆ ಮತ್ತು ಹುಣ್ಣಿಮೆಗಳು ಪ್ರಾಕೃತಿಕವಾಗಿ ಆಗುವ ಕಾಲದ ಗತಿಯನ್ನು ತೋರಿಸುತ್ತವೆ. ಸಾಂಪ್ರದಾಯಿಕ ಆಚರಣೆಗಳನ್ನು ಸಾರಾಸಗಟಾಗಿ ಅಲ್ಲಗಳೆಯುವುದು ಸರಿಯಲ್ಲ. ಉಪವಾಸದಿಂದ ದೇಹಕ್ಕೆ ಚೈತನ್ಯ ಸಿಗುತ್ತದೆ. ಕಾನ್ಷಿಯಸ್ ಬ್ರೈನ್ಗಿಂತ, ಸಬ್ ಕಾನ್ಷಿಯಸ್ ಬ್ರೈನ್ ಬಹಳ ಮಹತ್ವಪೂರ್ಣವಾದುದು. ಇಷ್ಟಲಿಂಗ ಪೂಜೆಯ ಮೂಲಕ ಏಕಾಗ್ರತೆ ಉಂಟಾಗುತ್ತದೆ. ಆ ಮೂಲಕ ನಮ್ಮ ವೈಯುಕ್ತಿಕ ಸಮಸ್ಯೆಗಳಿಗೆ ಪರಿಹಾರವನ್ನೂ ಕಂಡುಕೊಳ್ಳಬಹುದು ಎಂದರು.
ಬಸವಕಲ್ಯಾಣದ ವಿಧಾನಪರಿಷತ್ ಸದಸ್ಯರಾದ ಡಾ. ಎಂ ಜಿ ಮೂಳೆ ಮಾತನಾಡಿ ಇಲ್ಲಿನ ಪರಿಸರ ಮತ್ತು ಚಟುವಟಿಕೆಗಳನ್ನು ನೋಡಿದರೆ ಸ್ವಾಮಿಜಿಗಳು ಎಷ್ಟು ಕ್ರಿಯಾಶೀಲರಾಗಿದ್ದಾರೆ ಎನ್ನುವುದು ತಿಳಿಯುವುದು. ನಾನು ಬಸವಕಲ್ಯಾಣದಿಂದ ಬಂದಿದ್ದೇನೆ. ಇಲ್ಲಿ ಬಸವಣ್ಣನವರ ಕಲ್ಯಾಣವನ್ನು ಕಾಣುತ್ತಿದ್ದೇನೆ. ಬಸವಕಲ್ಯಾಣದಲ್ಲಿ ಇಂಥ ರಂಗಮಂದಿರ ಇಲ್ಲ, ಇಂಥ ಕಾರ್ಯಕ್ರಮಗಳು ಅಲ್ಲಿ ನಡೆಯುತ್ತಿಲ್ಲ ಎನ್ನುವುದನ್ನು ಬಹಳ ವಿಷಾದಿಂದ ಹೇಳಬೇಕಾಗಿದೆ. ನಾನು ಇಲ್ಲಿನ ಚಟುವಟಿಕೆಗಳನ್ನು ನೋಡಿ ಧನ್ಯತೆಯನ್ನು ಅನುಭವಿಸಿದ್ದೇನೆ ಎಂದರು.
ದಾವಣಗೆರೆಯ ಜಿಲ್ಲಾಧಿಕಾರಿಗಳಾದ ಜಿ ಎಂ ಗಂಗಾಧರಸ್ವಾಮಿ ಮಾತನಾಡಿ ಒಂದು ಮೊಬೈಲ್ ನ್ನು ಉತ್ಪಾದನೆ ಮಾಡಲು ಕನಿಷ್ಟ 25 ಸಾವಿರ ಲೀಟರ್ ನೀರು ಖರ್ಚಾಗುತ್ತದೆ! ಯಾವುದೇ ಭಾಷೆಯ ನಾಟಕವನ್ನು ನೋಡಿದರು ಅರ್ಥವಾಗುತ್ತದೆ. ನಾಟಕ ಕಲೆಗೆ ಯಾವುದೇ ಭಾಷೆಯಿಲ್ಲ. ಅಳು-ನಗು ಎಲ್ಲವೂ ಯಾತ್ರಿಕವಾದರೆ ಮನುಷ್ಯರಾಗುವುದು ಕಷ್ಟ. ಭಾವನೆಗಳು ಬಹಳ ಮುಖ್ಯವಾದವು. ಇಂಥ ಆಧುನಿಕ ಕಾಲದಲ್ಲೂ ಮೊಬೈಲ್ ನ್ನು, ಟಿವಿಯನ್ನು ಬಿಟ್ಟು ಇಲ್ಲಿ ಬಂದು ನಾಟಕ ನೋಡುವ ನೀವೇ ಪುಣ್ಯವಂತರು. ನಾಟಕ ನೋಡುವುದರಿಂದ ಕ್ರಿಯಾಶೀಲತೆ ಬರುತ್ತದೆ. ನಾಟ್ಯ, ನಾಟಕ, ಸಂಸ್ಕೃತಿಗಳ ಹುಚ್ಚಿರುವವರು ಹೆಚ್ಚು ಬುದ್ಧಿವಂತರಾಗುವರು. ನಾನು ಈಗಲೂ ಕನಿಷ್ಟ 50 ಚಲನಚಿತ್ರಳನ್ನು ನೋಡುತ್ತೇನೆ. ನೋಡುವುದರಿಂದ ಹೆಚ್ಚು-ಹೆಚ್ಚು ತಿಳಿದುಕೊಳ್ಳಬಹುದು, ಜ್ಞಾನವಂತರಾಗಬಹುದು ಎಂದರು.
ಕೊಪ್ಪಳ ಕುಲಪತಿಗಳಾದ ಜಿ ಕೆ ರವಿ ಮಾತನಾಡಿ 60 ರ ದಶಕದಲ್ಲಿ ಸಿರಿಗೆರೆಯಲ್ಲಿ ನಡೆದ ಕಾರ್ಯಕ್ರಮಗಳನ್ನು ನಾನು ಕಣ್ಣಾರೆ ಕಂಡಿದ್ದೇನೆ. ನಂತರ ಪೂಜ್ಯರು ಸಾಣೇಹಳ್ಳಿಯನ್ನು ಕೇಂದ್ರವಾಗಿಸಿಕೊಂಡು ಮಾಡುತ್ತಿರುವ ರಂಗಚಟುವಟಿಕೆಗಳು ಇಡೀ ರಾಷ್ಟ್ರದ ಗಮನಸೆಳೆದಿವೆ. ಶಿವಸಂಚಾರದ `ಕಾಲಜ್ಞಾನಿ ಕನಕ’ ಅತ್ಯಂತ ಮನೋಜ್ಞವಾದ ಪ್ರದರ್ಶನ. ಧಾರ್ಮಿಕ ಕೇಂದ್ರವೊಂದು ರಂಗಭೂಮಿಗೆ ಶ್ರಮಿಸುತ್ತಿರುವುದು ಇದೇ ಮೊದಲು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಎನ್ ಎಸ್ ಶಂಕರ್, ಕರ್ನಾಟಕ ಸುವರ್ಣ ಪ್ರಶಸ್ತಿ ಪುರಸ್ಕೃತರಾದ ಆರ್ ಜಿ ಹಳ್ಳಿ ನಾಗರಾಜ್, ಬೆಂಗಳೂರಿನ ಕಲಾವತಿ, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಮುರಡಯ್ಯ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಸಂಜಯ್ ಅವರನ್ನು ಅಭಿನಂದಿಸಲಾಯಿತು
ಅಭಿನಂದನೆ ಸ್ವೀಕರಿಸಿದ ಆರ್ ಜಿ ಹಳ್ಳಿ ನಾಗರಾಜ್ ಮಾತನಾಡಿ ಪೂಜ್ಯರಿಂದ ತುಂಬ ಕಲಿತಿದ್ದೇನೆ. ನನ್ನ `ಅನ್ವೇಷಣೆ’ ಪತ್ರಿಕೆಗೆ ಅಂಕಣ ಬರೆಯುತ್ತಿದ್ದಾರೆ. ಇಂದು ಓದುವ ಸಂಸ್ಕೃತಿ ಕಡಿಮೆಯಾಗುತ್ತಿದೆ. ಪುಸ್ತಕ ಒಳ್ಳೆಯ ಸಂಗಾತಿ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮನೆ ಕಟ್ಟಿದ್ದರೂ ಸಾವಿರಾರು ರೂಪಾಯಿ ಬೆಲೆ ಬಾಳುವ ಪುಸ್ತಕಗಳು ಮನೆಯಲ್ಲಿ ಇರುವುದಿಲ್ಲ. ಕೊಳ್ಳುವ, ಓದುವ ಮೂಲಕ ಪುಸ್ತಕ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಕೆಲಸ ಇಲ್ಲಿ ನಡೆದಿದೆ. ಇದು ಅನುಕರಣೀಯ ಎಂದರು.
ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿ ಅಭಿನಂದನೆ ಸ್ವೀಕರಿಸಿದ ಮುರುಡಯ್ಯ ಮಾತನಾಡಿ ನನಗೆ ಮತ್ತು ಸಾಣೇಹಳ್ಳಿಗೆ ಅವಿನಾಭಾವ ಸಂಬಂಧ. ಸಿಜಿಕೆ ಎನ್ನುವ ಮೂರಕ್ಷರದ ಬೆಳಕು ನನ್ನನ್ನು ಪೂಜ್ಯರಿಗೆ, ರಂಗಭೂಮಿಗೆ ಪರಿಚಯಿಸಿದೆ. ನನಗೆ ಹಸಿವಿನ ಅರಿವನ್ನು ತೋರಿಸಿದವರು ಸಿಜಿಕೆ. ಭಿಕ್ಷೆ ಬೇಡೋ ಕೈನ ಶುದ್ಧವಾಗಿಟ್ಟುಕೊಂಡರೆ ಯಾರಾದರೂ ಭಿಕ್ಷೆ ಹಾಕುವರು ಎನ್ನುವ ಮಾತನ್ನು ಸಿಜಿಕೆ ಹೇಳುತ್ತಿದ್ದರು. ಶಿವಸಂಚಾರದ ಆರಂಭದಿಂದಲೂ ನಾನು ಸಾಣೇಹಳ್ಳಿಯೊಟ್ಟಿಗಿದ್ದೇನೆ. ಈ ಸಾಂಸ್ಕೃತಿಕ ಜಗತ್ತು ನನ್ನನ್ನು ಬೆಳೆಸಿದೆ. ಈ ಕಾರಣಕ್ಕಾಗಿ ನಾನು ಅತ್ಯಂತ ಋಣಿಯಾಗಿದ್ದೇನೆ. ಸಿಜಿಕೆ ಕೇವಲ ನಾಟಕ ಮಾಡಿಸುತ್ತಿರಲಿಲ್ಲ; ಕಲಾವಿದರ ಮನಸ್ಸಿನೊಳಗೆ ಇಳಿಯುತ್ತಿದ್ದರು. ಅಂಥ ಮಹಾನ್ ಗುರುಗಳು ಹತ್ತಿದ ವೇದಿಕೆಯಲ್ಲಿ ನನ್ನನ್ನು ಗೌರವಿಸಿದುದು ನನಗೆ ಅತ್ಯಂತ ಸಂತೋಷ ತಂದಿದೆ ಎಂದರು.
ಆರಂಭದಲ್ಲಿ ಬೆಂಗಳೂರಿನ ರಾಜೇಶ್ವರಿ ಸಾದರ ಮತ್ತು ಕವಿತಾ ಸಾದರ ವಚನಗೀತೆಗಳನ್ನು, ಭಾವಗೀತೆಗಳನ್ನು ಸೊಗಸಾಗಿ ಹಾಡಿದರು.
ಹೊಸದುರ್ಗದ ನಿಸರ್ಗ ಸಂಜಯ್ ಆಕರ್ಷಕ ಭರತ ನಾಟ್ಯವನ್ನು, ದುಮ್ಮಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳು ಆಕರ್ಷಕ ವಚನ ನೃತ್ಯರೂಪಕವನ್ನು ಪ್ರಸ್ತುತ ಪಡಿಸಿದರು. ನಾಟಕೋತ್ಸವದ ದಾಸೋಹಿಗಳನ್ನು, ನಾಟಕದ ಲೇಖಕರು, ನಿರ್ದೇಶಕರನ್ನು ಗೌರವಿಸಲಾಯಿತು. ಶಿಕ್ಷಕರಾದ ಎಂ ಡಿ ರಾಜು ಸ್ವಾಗತಿಸಿದರೆ ಶಿಕ್ಷಕ ಪ್ರಕಾಶ್ ಕಾರ್ಯಕ್ರಮ ನಡೆಸಿಕೊಟ್ಟು ವಂದಿಸಿದರು
ಸಮಾರಂಭದ ನಂತರ ಬೆಂಗಳೂರಿನ ರೂಪಾಂತರ ತಂಡ `ಪರಸಂಗದ ಗೆಂಡೆತಿಮ್ಮ’ ನಾಟಕ ಪ್ರದರ್ಶಿಸಿತು.
– ಹೆಚ್ ಎಸ್ ದ್ಯಾಮೇಶ್
ಕಲ್ಮಶ ನಾಶಕ್ಕೆ ಇಷ್ಟಲಿಂಗ ಪೂಜೆ; ಡಾ.ಸರ್ಜಿ
ಹೊಸದುರ್ಗ : ಅಂಗೈಯಲ್ಲಿ ಲಿಂಗವನ್ನು ಇಟ್ಟುಕೊಂಡು ಕಣ್ಣುಗಳನ್ನು ಕೀಲಿಸಿ ನೋಡುತ್ತ, ಓಂನಮಃ ಶಿವಾಯ ಎಂದು ಹೇಳಿದರೆ ನಮ್ಮ ಗಮನ ಕೇಂದ್ರೀಕೃತವಾಗುತ್ತದೆ. ಇದು ಇಷ್ಟಲಿಂಗ ಪೂಜೆ. ಆಗ ನಮ್ಮಲ್ಲಿನ ಕಲ್ಮಶ ನಾಶವಾಗುತ್ತದೆ. ಹೀಗೆ ನಿತ್ಯ ಇಷ್ಟಲಿಂಗವನ್ನು ಪೂಜಿಸಿದರೆ ಅಧ್ಯಾತ್ಮ ಸಾಧ್ಯವಾಗುತ್ತದೆ. ಇದನ್ನೇ ಶಿವಶರಣರು ಸಾರಿದರು ಎಂದು ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ತಿಳಿಸಿದರು.
ರಾಷ್ಟ್ರೀಯ ನಾಟಕೋತ್ಸವ ಅಂಗವಾಗಿ ಮಂಗಳವಾರ ಸಣ್ಣ ಹಳ್ಳಿಯ ಶಿವಕುಮಾರ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ನಾಟಕೋತ್ಸವ ಸಮಾರಂಭದಲ್ಲಿ ʼಸಾಂಪ್ರದಾಯಿಕ ಆಚರಣೆಗಳುʼ ಕುರಿತು ಅವರು ಮಾತನಾಡಿದರು.
ಮದುವೆಯಲ್ಲಿ ಧರ್ಮೇಚ, ಅರ್ಥೇಚ ಹಾಗೂ ಕಾಮೇಚ ಎಂದು ಹೇಳುತ್ತಾರೆ. ಧರ್ಮೇಚ ಎಂದರೆ ಹೆಂಡತಿಯೊಂದಿಗೆ ಧರ್ಮದೊಂದಿಗೆ ನಡೆದುಕೊಳ್ಳುವೆ ಎಂದು. ಅರ್ಥೇಚ ಎಂದರೆ ಸಂಪಾದನೆಯಲ್ಲಿ ಕುಟುಂಬವನ್ನು ನೋಡಿಕೊಳ್ಳುವುದು ಹಾಗೂ ಕಾಮೇಚ ಎಂದರೆ ಕುಟುಂಬವನ್ನು ಪ್ರೀತಿಸುವುದು ಎಂದು ಅರಿಯಬೇಕು ಎಂದು ಹೇಳಿದರು.
ಆಷಾಢದಲ್ಲಿ ಚೆನ್ನಾಗಿ ಮಳೆ ಬರುವುದರಿಂದ ಇತರ ಕಾರ್ಯಗಳು ಸಾಧ್ಯವಾಗುವುದಿಲ್ಲ. ಶ್ರಾವಣದಲ್ಲಿ ರೈತಾಪಿ ಕೆಲಸಗಳು ಮುಗಿದಿರುತ್ತವೆ. ಶ್ರಾವಣ ಎಂದರೆ ಶ್ರವಣವೂ ಹೌದು ಅಂದರೆ ಚಿಂತನೆ ಮಾಡಲು ಸಾಧ್ಯವಾಗುತ್ತದೆ.
ದೀಪಾವಳಿ ಹಬ್ಬದಲ್ಲಿ ಗೋಪೂಜೆ ಮಾಡುತ್ತೇವೆ. ಏಪ್ರಿಲ್-ಮೇ ತಿಂಗಳಲ್ಲಿ ಜಾತ್ರೆಗಳಾಗುತ್ತವೆ. ಕೃಷಿ ಕೆಲಸಗಳು ಮುಗಿದಿರುವುದರಿಂದ ರೈತರು ಖುಷಿಯಾಗಿರಲು ಸಾಧ್ಯವಾಗುತ್ತದೆ ಎಂದು ವಿವರಿಸಿದರು.
ಪ್ರಕಾಶಕ ಆರ್.ಜಿ.ಹಳ್ಳಿನಾಗರಾಜ್ ಮಾತನಾಡಿ, ಪುಸ್ತಕ ಸಂಸ್ಕೃತಿ ಹೆಚ್ಚಿಸುವುದರ ಜೊತೆಗೆ ನಾಟಕಗಳ ಮೂಲಕ ವೈಚಾರಿಕ ಪ್ರಜ್ಞೆ ಮೂಡಿಸಿದ್ದು ಸಾಣೇಹಳ್ಳಿ ಮಠ ಎಂದರು. ಕಲಾವಿದ ಮುರುಡಯ್ಯ ಮಾತನಾಡಿ, ನನಗೂ ಸಾಣೇಹಳ್ಳಿಗೂ ಅವಿನಾಭಾವ ಸಂಬಂಧವಿದೆ. ಸಿಜಿಕೆ ಅವರು ಈ ಸಾಣೇಹಳ್ಳಿಯನ್ನು ಪರಿಚಯಿಸಿದರು. ಈಮೂಲಕ ಕಲಾವಿದನಾದೆ. ಎಸ್ಎಸ್ಎಲ್ಸಿಯಲ್ಲಿ ಮಾತ್ರ ಓದಿದ ನಂತರ ಸಿಜಿಕೆ ಒಡನಾಟ ಸಿಕ್ಕಿತು. ಅವರು ಹಸಿವಿನ ಅರಿವನ್ನು ತೋರಿಸಿದವರು, ಭಿಕ್ಷೆಯನ್ನು ಶುದ್ಧಮನಸ್ಸಿನಿಂದ ಕೇಳಿದರೆ ಯಾರಾದರೂ ಭಿಕ್ಷೆ ಹಾಕುತ್ತಾರೆ ಎನ್ನುತ್ತಿದ್ದರು. ಅವರು ನನಗೆ ಯುನಿವರ್ಸಿಟಿಯಾದವರು, ಬೆಳಕಾದವರು ಎಂದರು.
ದಾನಿಗಳಾದ ಲೋಕೇಶ್, ನಿಜಲಿಂಗಪ್ಪ, ಬಾಳಿಕಾಯಿ ಮೋಹನ್, ನಟರಾಜ್ ಅವರನ್ನು ಪಂಡಿತಾರಾಧ್ಯ ಸ್ವಾಮಿಗಳು ಸನ್ಮಾನಿಸಿದರು.
ಬಾಕ್ಸ್…
ಖುಷಿಯಾಗಿರಲು ನಾಟಕ ನೋಡಿ” ;ದಾವಣಗೆರೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ,
ಟಿವಿ ಬಂದಾಗ ನೋಡಬೇಡ, ಕೆಟ್ಟು ಹೋಗುತ್ತಿ ಎಂದು ನಮ್ಮಜ್ಜ ಹೇಳುತ್ತಿದ್ದ. ಆದರೆ ನಮ್ಮ ಮಕ್ಕಳಿಗೆ ಟಿವಿ ನೋಡಬೇಡಿ, ಮೊಬೈಲ್ ಫೋನ್ ಬಳಸಬೇಡಿ ಎಂದು ಹೇಳುತ್ತಿಲ್ಲ. ನಾಟಕ, ಸಿನಿಮಾ ನೋಡುವುದರಿಂದ ಕ್ರಿಯಾಶೀಲರಾಗುತ್ತೀರಿ. ಹೀಗೆ ಕ್ರಿಯಾಶೀಲರಾಗಲು ಪಂಡಿತಾರಾಧ್ಯ ಸ್ವಾಮಿಗಳು (National Drama Festival) ಕಾರಣರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಸನ್ಮಾನ:
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್.ಎಸ್.ಶಂಕರ್, ಸುವರ್ಣ ಸಂಭ್ರಮ ಪ್ರಶಸ್ತಿ ಪುರಸ್ಕೃತರಾದ ಆರ್.ಜಿ.ಹಳ್ಳಿನಾಗರಾಜ್, ಡಾ.ಎಂ.ಜಿ.ಮೂಳೆ ಹಾಗೂ ಕಲಾವತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಮುರಡಯ್ಯ, ದುರ್ಗದ ಕೀಲು ಮೊಳೆ ತಜ್ಞ ಡಾಕ್ಟರ್ ಸಂಜಯ್ ಅವರನ್ನು ಸನ್ಮಾನಿಸಲಾಯಿತು.