Chitradurga News | Nammajana.com |17-09-2025
ನಮ್ಮಜನ ನ್ಯೂಸ್ ಕಾಂ,ಚಿತ್ರದುರ್ಗ: ನಾನಾ(PM Vishwakarma) ವೃತ್ತಿ ಆಧಾರಿತ ಕುಶಲಕರ್ಮಿಗಳಿಗೆ ತರಬೇತಿಯೊಂದಿಗೆ ಆರ್ಥಿಕ ನೆರವು ನೀಡುವ ಪಿ.ಎಂ. ವಿಶ್ವಕರ್ಮ ಯೋಜನೆ ಜಾರಿಗೊಂಡು ಇಂದಿಗೆ (ಸೆ.17ಕ್ಕೆ) ಎರಡು ವರ್ಷ ತುಂಬಿದೆ. ಎರಡನೇ ವರ್ಷ ರೂಪಿಸಿದ ಕಠಿಣ ನಿಯಮಗಳಿಂದಾಗಿ ಯೋಜನೆ ಕುಂಟುತ್ತಾ ಸಾಗಿದೆ.

ಇದನ್ನೂ ಓದಿ: Chitradurga today Gold Rate | ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ
ಯೋಜನೆಯ ಫಲಾನುಭವಿಗಳಿಗೆ ಖಾಸಗಿ ತರಬೇತಿ ಕೇಂದ್ರಗಳಲ್ಲಿ ನೀಡಲಾಗುತ್ತಿದ್ದ ತರಬೇತಿ ಸಂಪೂರ್ಣ ಸ್ಥಗಿತಗೊಂಡಿದೆ. ಈಗ ಸರಕಾರದಿಂದ ನೇರವಾಗಿ ರುಡ್ ಸೆಟ್, ಐಟಿಐ, ಜಿಟಿಟಿಸಿ ಸಂಸ್ಥೆಗಳ ಮೂಲಕ ಮಾತ್ರ ತರಬೇತಿ ನಡೆಯುತ್ತಿದ್ದು, ಕೌಶಲ್ಯ ತರಬೇತಿ ಎಷ್ಟರಮಟ್ಟಿಗೆ ಯಶಸ್ವೀ ಆಗಿದೆ ಎಂಬ ಬಗ್ಗೆ ಮೌಲ್ಯಮಾಪನ ಅಗತ್ಯವಾಗಿದೆ.
ಖಾಸಗಿ ಸಂಸ್ಥೆಗಳಿಗಿಲ್ಲ ಜವಾಬ್ದಾರಿ:
2023 ರಿಂದ 2027ರವರೆಗೆ ಐದುವರ್ಷಗಳ ಯೋಜನೆಯಾಗಿದ್ದು, ಕೇಂದ್ರದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯ ಸೇರಿದಂತೆ ಕೇಂದ್ರದ ಇತರೆ ಹಣಕಾಸು ಸಚಿವಾಲಯಗಳು ಯೋಜನೆಯ ಅನುಷ್ಠಾನದ ಜವಾಬ್ದಾರಿ ಹೊತ್ತಿದ್ದು ತರಬೇತಿ ನೀಡುವ ಹೊಣೆಗಾರಿಕೆಯನ್ನು ಸರಕಾರಿ ಸಂಸ್ಥೆಗಳ ಜತೆಯಲ್ಲಿ ಖಾಸಗಿ ಸಂಸ್ಥೆಗಳಿಗೂ ವಹಿಸಲಾಗಿತ್ತು.
ಕೇಂದ್ರ ಸರಕಾರದಿಂದ ಅನುಮತಿ ಪಡೆದ ದೊಡ್ಡ ದೊಡ್ಡ ಸಂಸ್ಥೆಗಳು ಜಿಲ್ಲಾ ಹಾಗೂ ತಾಲೂಕು ಮಟ್ಟದ ತರಬೇತಿ ಕೇಂದ್ರಗಳಿಗೆ ಉಪ ಗುತ್ತಿಗೆ ನೀಡಿದ್ದರು. ಕೆಲ ಖಾಸಗಿ ತರಬೇತಿ ಕೇಂದ್ರಗಳು ನಕಲಿ ಅರ್ಜಿದಾರರನ್ನು ಸೃಷ್ಟಿಸಿ, ತರಬೇತಿ ನೀಡದೇ ಅನುದಾನ ಪಡೆದುಕೊಳ್ಳುತ್ತಿದ್ದರು ಎಂಬ ಆರೋಪದ ಹಿನ್ನೆಲೆ ಖಾಸಗಿ ತರಬೇತಿ ಸಂಸ್ಥೆಗಳಿಗೆ ತರಬೇತಿ ನೀಡುವ ಜವಾಬ್ದಾರಿಯನ್ನು ನಿಲ್ಲಿಸಲಾಗಿದೆ.
ತರಬೇತಿ ಅವಧಿಯನ್ನು ಆರೇಳು ದಿನಗಳಿಂದ 15 ದಿನಗಳಿಗೆ ಏರಿಕೆ ಮಾಡಿರುವುದು, ವಸತಿಯುತ, ಜಿಪಿಎಸ್ ಆಧಾರಿತ ಭಾವಚಿತ್ರಗಳನ್ನು ಅಪ್ ಲೋಡ್ ಮಾಡಬೇಕಾಗಿರುವುದು, ಮತ್ತಿತರ ಕಠಿಣ ನಿಯಮಗಳಿಂದ ತರಬೇತಿ ಕೇಂದ್ರಗಳು ಹಾಗೂ ಅರ್ಜಿದಾರರಿಗೂ ದುಸ್ತರವೆನಿಸಿದ ಕಾರಣ ಮತ್ತು ಕೆಲ ನಕಲಿ ತರಬೇತಿ ಕೇಂದ್ರಗಳಿಗೆ ಕಡಿವಾಣ ಹಾಕಲು ಖಾಸಗಿ ತರಬೇತಿ ಕೇಂದ್ರಗಳಿಗೆ ಅನುಮತಿ ನಿರಾಕರಿಸಿ ಏಳೆಂಟು ತಿಂಗಳು ಕಳೆದಿವೆ.
ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಅರ್ಜಿ ಸಲ್ಲಿಸಬೇಕಿದ್ದು ನಗರ ಪಟ್ಟಣ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಮೂಲಕ ಪರಿಶೀಲನೆಗೊಂಡು ಅಂತಿಮವಾಗಿ ಆಯ್ಕೆಗೊಂಡ ಅರ್ಜಿಗಳನ್ನು ಪೋರ್ಟಲ್ ನಲ್ಲಿ ನಮೂದಿಸಲಾಗುತ್ತದೆ.
ಯಾರೆಲ್ಲ ಒಳಪಡುತ್ತಾರೆ?
ಪಿ.ಎಂ. ವಿಶ್ವಕರ್ಮ ಯೋಜನೆಯಡಿ ಬಡಗಿ, ದೋಣಿ ತಯಾರಿಕೆ, ಶಸ್ತ್ರತಯಾರಿಕೆ, ಕಮ್ಮಾರಿಕೆ, ಕಲ್ಲುಕುಟಿಗ, ಬಟ್ಟೆ, ಚಾಪೆ-ಕಸಪರಕೆ ತಯಾರಕರು, ಗೊಂಬೆ ಮತ್ತು ಆಟಿಕೆ ತಯಾರಿಕೆ, ಕ್ಷೌರಿಕ ವೃತ್ತಿ, ಸುತ್ತಿಗೆ ಮತ್ತು ಉಪಕರಣಗಳ ತಯಾರಿಕೆ, ಹೂಮಾಲೆ ತಯಾರಿಕೆ, ಅಗಸರು, ಆಭರಣ ತಯಾರಿಕೆ, ಟೈಲರಿಂಗ್, ಕುಂಬಾರಿಕೆ, ಮೀನು ಬಲೆ ಹೆಣೆಯುವವರು, ಮೂರ್ತಿ ಮತ್ತು ಕಲ್ಲಿನ ಕೆತ್ತನೆ ಮಾಡುವ ಶಿಲ್ಪಿಗಳು, ಚಮ್ಮಾರರು, ಪಾದರಕ್ಷೆ ತಯಾರಕರು, ಬೀಗ ತಯಾರಿಕೆ ಸೇರಿದಂತೆ ನಾನಾ ಬಗೆಯ ವೃತ್ತಿ ಮಾಡುವವರು ಈ ಯೋಜನೆ ವ್ಯಾಪ್ತಿಗೆ ಒಳಪಡುತ್ತಾರೆ.
29268 ಮಂದಿ ತರಬೇತಿಗೆ ಆಯ್ಕೆ:
ಜಿಲ್ಲೆಯಲ್ಲಿ ಸುಮಾರು 17 ಕ್ಷೇತ್ರಗಳ ಪೈಕಿ ಈವರೆಗೆ ಟೈಲರಿಂಗ್ 8261, ಹೂಮಾಲೆ ತಯಾರಿಕೆ 9519, ಬುಟ್ಟಿ ಎಣೆಯುವಿಕೆ 2574, ಇಟ್ಟಿಗೆ ಕಲ್ಲು ತಯಾರಿಕೆ 2713, ಬಡಗಿ 1575, ಮೂರ್ತಿ ತಯಾರಿಕೆ 1147, ಅಕ್ಕಸಾಲಿಗ 343 ಮಂದಿ ಹಾಗೂ ಇತರೆ ಕ್ಷೇತ್ರಗಳು ಸೇರಿದಂತೆ 29268 ಮಂದಿ ತರಬೇತಿಗೆ ಆಯ್ಕೆಯಾಗಿದ್ದು ಇವರಲ್ಲಿ ಬಹುತೇಕರು ತರಬೇತಿ ಪಡೆದುಕೊಂಡಿದ್ದು ಉಳಿದವರು ತರಬೇತಿ ಪಡೆಯಬೇಕಿದೆ.
ಏನೆಲ್ಲ ನೆರವು?
ಕೌಶಲ್ಯ ಉನ್ನತೀಕರಣ(PM Vishwakarma) ತರಬೇತಿ, ಒಂದು ದಿನ ಪರೀಕ್ಷೆ ಸೇರಿ ಪ್ರತಿದಿನ 500 ರೂ. ನೀಡಲಾಗುವುದು. ಅಲ್ಲದೆ 15 ಸಾವಿರ ರೂ. ಗಳನ್ನು ಸುಧಾರಿತ ಉಪಕರಣಗಳ ಖರೀದಿಗೆ ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುವುದು. ಬಳಿಕ ಮೊದಲ ವರ್ಷದಲ್ಲಿ ಬ್ಯಾಂಕುಗಳ ಮೂಲಕ ಶೇ.5ರ ಬಡ್ಡಿ ದರದಲ್ಲಿ 1 ಲಕ್ಷದವರೆಗೆ ಸಾಲ ಸೌಲಭ್ಯ, ಎರಡನೇ ಹಂತದಲ್ಲಿ 2 ಲಕ್ಷದ ವರೆಗೆ ಸಾಲ ನೀಡಲಾಗುತ್ತದೆ.
