Chitradurga News | Nammajana.com |24-09-2025
ನಮ್ಮಜನ ನ್ಯೂಸ್ ಕಾಂ,ಚಿತ್ರದುರ್ಗ: ಎಸ್.ಟಿ(ST) ಪಟ್ಟಿಗೆ ಅನ್ಯ ಜಾತಿಗಳನ್ನು ಸೇರ್ಪಡೆ ವಿರೋಧಿಸಿ ಸೆಪ್ಟೆಂಬರ್ 25 ರಂದು ಬೆಳಿಗ್ಗೆ 11 ಗಂಟೆಗೆ ನಾಯಕ ಸಮಾಜದ ವತಿಯಿಂದ ನಗರದ ಮದಕರಿ ನಾಯಕ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಜಿಲ್ಲಾಧ್ಯಕ್ಷ ಹೆಚ್.ಜೆ. ಕೃಷ್ಣಮೂರ್ತಿ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತದ ಸಂವಿಧಾನದಲ್ಲಿ ಪರಿಶಿಷ್ಟ ಪಂಗಡಗಳು (Scheduled Tribes) ಎಂಬ ವರ್ಗವನ್ನು ರೂಪಿಸಿದ್ದು, ಇತಿಹಾಸದಲ್ಲಿ ಹಿಂದುಳಿದ, ಸಾಮಾಜಿಕವಾಗಿ ಅನುಪಸ್ಥಿತರಾಗಿದ್ದ ಹಾಗೂ ಅರಣ್ಯ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಜೀವನ ನಡೆಸುತ್ತಿದ್ದ ಬುಡಕಟ್ಟು ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಮತ್ತು ಸಮಾನತೆ ಸೃಷ್ಟಿಸಲು. ಬುಡಕಟ್ಟು ವರ್ಗಗಳು ಅನನ್ಯವಾದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸವಾಲುಗಳನ್ನು ಅನುಭವಿಸುತ್ತಾ ಬಂದಿದ್ದಾರೆ.
ಈಗಾಗಲೇ ಇಂತಹ ಸಂದರ್ಭದಲ್ಲಿ, ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ, ಔದ್ಯೋಗಿಕ ಹಾಗೂ ಸಂಘಟನಾತ್ಮಕವಾಗಿ ತುಂಬಾ ಸದೃಢ ಸ್ಥಿತಿಯಲ್ಲಿರುವ ಅನ್ಯ ಜಾತಿಗಳನ್ನು ಎಸ್.ಟಿ. ಗೆ ಸೇರಿಸುವುದರಿಂದಾಗಿ ಶೋಷಿತ ವಾಲ್ಮೀಕಿ ಜನಾಂಗಕ್ಕೆ ಅನ್ಯಾಯವಾಗುತ್ತದೆ. ಬಹುಮಾನ್ಯವಾದ ಹಕ್ಕುಗಳಿಗಾಗಿ ಪೈಪೋಟಿಯಲ್ಲಿರುವ ನೈಜ ಬುಡಕಟ್ಟು ಸಮುದಾಯಗಳಿಗೆ ಮಾರಕವಾಗುತ್ತದೆ ಎಂದರು.
ಹಕ್ಕುಗಳು ಈಗಾಗಲೇ ಲಭ್ಯವಿರುವ ಸಮುದಾಯಕ್ಕೆ ಮತ್ತಷ್ಟು ಅನುಕೂಲ ನೀಡುವುದು ಅನ್ಯಾಯ. ಅನ್ಯ ಜಾತಿಗಳನ್ನು ಈಗಾಗಲೇ OBC ಪಟ್ಟಿಯಲ್ಲಿದ್ದಾರೆ ಮತ್ತು ಸರ್ಕಾರಿ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ಪಡೆದುಕೊಂಡು ಸದೃಢರಾಗಿದ್ದಾರೆ. ಇಂತಹ ಜಾತಿಯನ್ನು ST ಪಟ್ಟಿಗೆ ಸೇರಿಸುವುದು ಇನ್ನಷ್ಟು ಶೋಷಿತ ಅವಕಾಶಗಳನ್ನು ಕಸಿದುಕೊಳ್ಳಲು ಶೋಷಿತರನ್ನು ಮತ್ತಷ್ಟು ಶೋಷಣೆ ಸಮುದಾಯಗಳ ಮಾಡಿದಂತಾಗುವುದು.
ಹತ್ತಾರು ವರ್ಷಗಳಿಂದ ಶಿಕ್ಷಣ, ಉದ್ಯೋಗ, ರಾಜಕೀಯ ಪ್ರಾತಿನಿಧ್ಯದಲ್ಲಿ ಹಿಂದಿರುವ ಅಸಲಿ ST ಜನಾಂಗಗಳು ಕುರುಬರ ಸೇರ್ಪಡೆ ಹಿನ್ನೆಲೆಯಲ್ಲಿ ಇನ್ನೂ ಅವಕಾಶಗಳಿಂದ ವಂಚಿತರಾಗುವ ಭೀತಿ ಇದೆ.
ರಾಜಕೀಯ ಲಾಭಕ್ಕಾಗಿ ಸಮುದಾಯ ಬಳಕೆ:
ಈ ರೀತಿಯ ಸೇರ್ಪಡೆಗಳು ನಿಜವಾದ ಅಭಿವೃದ್ಧಿ ಗುರಿಗಳಿಗಲ್ಲ. ಇದು ಮತ ಬ್ಯಾಂಕ್ ರಾಜಕಾರಣದ ಭಾಗ ಮತ್ತು ರಾಜಕೀಯವಾಗಿ ಎಸ್.ಟಿ.ಮೀಸಲಾತಿ ಕ್ಷೇತ್ರಗಳ ಮೇಲೆ ಕುರುಹಿಠ ಕಣ್ಣು ಬಿದ್ದು-ಮುಖ್ಯಮಂತ್ರಿಗಳು ಸ್ವಜಾತಿ ಪ್ರೇಮದಿಂದಾಗಿ ಸಂವಿಧಾನದ ಆಶಯಗಳನ್ನೇ ಗಾಳಿಗೆ ತೂರಲು ಮುಂದಾಗಿದ್ದಾರೆ ಎಂದರು.
ನಿವೃತ್ತ ಪ್ರಾಂಶುಪಾಲರಾದ ಗುಡ್ಡದೇಶ್ವರಪ್ಪ ಮಾತನಾಡಿ, ಹೆಚ್ಚು ಜನಸಂಖ್ಯೆಯುಳ್ಳ ಸಮುದಾಯ ಎಸ್.ಟಿ. ಪಟ್ಟಿಗೆ ಬಂದರೆ, ಇತರ ಸಮುದಾಯಗಳು ಮೌನವಾಗಿ ಹೊರಗುಳಿಯುತ್ತವೆ. ಇದು ಸಾಮಾಜಿಕ ಅಶಾಂತಿ, ಜಾತಿ ಆಧಾರಿತ ಸಂಘರ್ಷಗಳಿಗೆ ದಾರಿಯಾಗುತ್ತದೆ.
ಡಾ.ಬಾಬಾಸಾಹೇಬ ಅಂಬೇಡ್ಕರ್ ರೂಪಿಸಿದ ಸಂವಿಧಾನ ಎಸ್.ಟಿ.ವರ್ಗದ ಪೀಡಿತ ಜನರೊಂದಿಗೆ ಸದೃಢ ಸಮುದಾಯಗಳನ್ನು ಸೇರಿಸುವುದು ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ.
ಕೆಲವು ಸಮುದಾಯಗಳು ಶಿಕ್ಷಣ, ರಾಜಕೀಯ, ಉದ್ಯೋಗದಲ್ಲಿ ಈಗಾಗಲೇ ಸ್ಪರ್ಧಿಸಲು ಸದೃಢರಾಗಿದ್ದಾರೆ. ಇದರಿಂದ ಎಸ್.ಟಿ.ಯಲ್ಲಿರುವ ಅಸಲಿ ಬುಡಕಟ್ಟು ಜನರು ಸ್ಪರ್ಧೆಯಲ್ಲಿ ಹಿನ್ನಡೆಯತ್ತ ಹೋಗುತ್ತಾರೆ.
ಇದನ್ನೂ ಓದಿ: Civic Workers: ಜನರಿಗೆ ಉತ್ತಮ ಆರೋಗ್ಯದ ಭಾಗ್ಯ ಕಲ್ಪಿಸಿದ ಕೀರ್ತಿ ಪೌರಕಾರ್ಮಿಕರದ್ದು : ಟಿ.ರಘುಮೂರ್ತಿ
ಕುರುಬರು ಜಾತಿಯಲ್ಲಿ(ST) ಬಡತನವಿದ್ದರೆ ಬಡತನ ಹೋಗಲಾಡಿಸಲು ಸರ್ಕಾರದಿಂದ ಸಾಕಷ್ಟು ಆರ್ಥಿಕ ಕಲ್ಪಿಸುವ ಮಾರ್ಗಗಳಿವೆ. ಸಮಾನತೆಯ ಹೆಸರಿನಲ್ಲಿ ಆಗುವ ಅಸಮಾನತೆ ಎಂದಿಗೂ ನ್ಯಾಯವಾಗದು. ಪರಿಶಿಷ್ಟ ಪಂಗಡವು ಬಲಿಷ್ಠ ಸಮುದಾಯಗಳ ಪ್ರವೇಶಕ್ಕೆ ಪ್ರವೇಶದ್ವಾರವಲ್ಲ ಇದು ಸಾಂವಿಧಾನಿಕ ರಕ್ಷಣೆಯ ಶಕ್ತಿ ಕೇಂದ್ರವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಲಿಂಗವ್ವನಾಗತಿಹಳ್ಳಿ ತಿಪ್ಪೇಸ್ವಾಮಿ, ವಾಲ್ಮೀಕಿ ಕೋಆಪರೇಟಿವ್ ಸೊಸೈಟಿ ಅಧ್ಯಕ್ಷ ಎಟಿಎಸ್. ತಿಪ್ಪೇಸ್ವಾಮಿ, ಬಿ.ಮಂಜುನಾಥ್, ಮಂಜಣ್ಣ, ರತ್ನಮ್ಮ, ಸಿ.ಬೋರಯ್ಯ, ಬಸವರಾಜ್, ಪ್ರಶಾಂತ್ ಕೂಲಿಕರ್, ಅಶೋಕ್ ಬಳೆಗಟ್ಟ ಸೇರಿದಂತೆ ಇತರರು ಉಪಸ್ಥಿತರಿದ್ದರು.
