Chitradurga news|nammajana.com|12-6-2024
ನಮ್ಮಜನ.ಕಾಂ, ಚಿತ್ರದುರ್ಗ: ಚಿತ್ರದುರ್ಗದ ಬ್ಯಾಂಕ್ ಕಾಲೋನಿಯ ಅಪೋಲೋ ಶಾಪ್ ಕೆಲಸಗಾರ ರೇಣುಕಾ ಸ್ವಾಮಿ ಕೊಲೆ (Renukaswamy murder) ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ವಿರುದ್ಧ ಚಿತ್ರದುರ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ದರ್ಶನ್ ವಿರುದ್ಧ ಆಕ್ರೋಶ ಹೊರಹಾಕಿದರು.
ನಟ ದರ್ಶನ್ ಅಪ್ತೆ ಪವಿತ್ರ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದಕ್ಕಾಗಿ ಕೊಲೆಯಾಗಿರುವ ರೇಣುಕಾ ಸ್ವಾಮಿ ಪರವಾಗಿ (Renukaswamy murder) ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ನಗರದ ನೀಲಕಂಠೇಶ್ವರ ಸ್ವಾಮಿ ದೇವಸ್ಥಾನದಿಂದ ಆರಂಭವಾದ ಪ್ರತಿಭಟನೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾಚಾರಿಗೆ ತೆರಳಿ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಶಿಕ್ಷೆ ನೀಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಒಂದು ಮೆಸೇಜ್ ಗಾಗಿ ಏಕಾಏಕಿ ಮರ್ಡರ್ ಮಾಡಿರುವುದು ದುಃಖಕರ ಸಂಗತಿ: ಜಿ.ಹೆಚ್.ತಿಪ್ಪಾರೆಡ್ಡಿ (Renukaswamy murder)
ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ದರ್ಶನ್ ಅಪ್ತೆ ಪವಿತ್ರಗೌಡಗೆ ಅಶ್ಲೀಲ ಸಂದೇಶ ಕಳಿಸುತ್ತಿದ್ದನೆಂಬ ಕಾರಕ್ಕಾಗಿ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ ಕ್ರೂರವಾಗಿ ಹೊಡೆದು ಸಾಯಿಸಿರುವುದನ್ನು ನೋಡಿದರೆ ಎಂತಹವರಿಗೂ ಮನ ಕರಗುತ್ತದೆ.
ಅಶ್ಲೀಲ ಸಂದೇಶ ಕಳಿಸುತ್ತಿದ್ದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಬಹುದಿತ್ತು. ಇಲ್ಲವೇ ಅವರ ಮನೆಯ ಹಿರಿಯರ ಗಮನಕ್ಕೆ ತರಬಹುದಿತ್ತು. ಇದ್ಯಾವುದನ್ನು ಮಾಡದೆ ಏಕಾಏಕಿ ಮರ್ಡರ್ ಮಾಡಿರುವುದು ದುಃಖಕರ ಸಂಗತಿ. ಗೃಹ ಸಚಿವ ಡಾ.ಜಿ.ಪರಮೇಶ್ವರ್ ತನಿಖೆ ನಡೆಸೋಣ ಎಂದು ಹೇಳುತ್ತಿರುವುದರಲ್ಲಿ ಅರ್ಥವಿಲ್ಲ. ದರ್ಶನ್ ಮತ್ತವರ ಗ್ಯಾಂಗ್‍ಗೆ ಗಲ್ಲು ಶಿಕ್ಷೆಯಾಗಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆಂದು ಎಚ್ಚರಿಸಿದರು.
ವಿಕೃತ ಮನಸ್ಸಿನ ನಟ ದರ್ಶನ್: ಕೆ.ಎಸ್.ನವೀನ್ ಅಕ್ರೋಶ (Renukaswamy murder)
ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ ವಿಕೃತ ಮನಸ್ಸಿನ ನಟ ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಅಮಾನುಷವಾಗಿ ಹತ್ಯೆಗೈದಿರುವುದು ಅವರ ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿರುವುದರಿಂದ ಮೇಲಿಂದ ಮೇಲೆ ಇಂತಹ ಘಟನೆಗಳು ಮರುಕಳಿಸುತ್ತಿವೆ. ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ತನಿಖೆಯನ್ನು ಸಿ.ಬಿ.ಐ.ಗೆ ವಹಿಸಿ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ದರ್ಶನ್ ಗ್ಯಾಂಗ್ ಯಾವ ಕಾರಣಕ್ಕೂ ತಪ್ಪಿಸಿಕೊಳ್ಳಬಾರದು: ಎಸ್.ಕೆ.ಬಸವರಾಜನ್ (Renukaswamy murder)
ಮಾಜಿ ಶಾಸಕ ಎಸ್.ಕೆ.ಬಸವರಾಜನ್ ಮಾತನಾಡುತ್ತ ರೇಣುಕಾಸ್ವಾಮಿಯನ್ನು ಕೊಲೆಗೈದಿರುವ ನಟ ದರ್ಶನ್ ಮತ್ತವರ ಗ್ಯಾಂಗ್ ಯಾವುದೇ ರೀತಿಯಲ್ಲಿ ತಪ್ಪಿಸಿಕೊಳ್ಳಬಾರದು. ರಾಜ್ಯ ಸರ್ಕಾರ ರಕ್ಷಣೆ ಮಾಡಿದಂತೆ ಕಾಣುತ್ತಿದೆ. ನಟ ದರ್ಶನ್‍ಗೆ ಹುಚ್ಚು ಅಭಿಮಾನಿಗಳು ಇರುವುದರಿಂದ ಈ ರೀತಿಯ ವಿಕೃತಿಗಳು ನಡೆಯುತ್ತಿವೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು.
ಇದನ್ನೂ ಓದಿ: Renukaswamy murder: ನಾನು ಗರ್ಭಿಣಿ | ಮಗುವಿನ ಜವಬ್ದಾರಿ ಯಾರದು, ರೇಣುಕಾಸ್ವಾಮಿ ಪತ್ನಿ ಏನೆಲ್ಲ ಹೇಳಿದರು.
ಜಿಲ್ಲಾ ವೀರಶೈವ ಲಿಂಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜದ ಉಪಾಧ್ಯಕ್ಷ ನಾಗರಾಜ್ ಸಂಗಮ್ ಮಾತನಾಡಿ ನಟ ದರ್ಶನ್ ಮೇಲೆ ಈಗಾಗಲೇ ಸಾಕಷ್ಟು ದೂರು ಆಪಾದನೆಗಳಿವೆ. ರಾಜ್ಯ ಸರ್ಕಾರ ಸರ್ಕಾರ ರಕ್ಷಿಸಲು ಹೊರಟಂತಿದೆ. ಸಿ.ಬಿ.ಐ.ಗೆ ವಹಿಸಿ ತನಿಖೆಗೆ ಆದೇಶಿಸಿದರೆ ನಿಜಾಂಶ ಬಯಲಿಗೆ ಬರುತ್ತದೆ. ಈಗಲಾದರು ದರ್ಶನ್ ಹುಚ್ಚಭಿಮಾನಿಗಳು ಎಚ್ಚೆತ್ತುಕೊಂಡು ಹೊರಬರಬೇಕು. ನಿಸ್ಪಕ್ಷಪಾತ ತನಿಖೆ ನಡೆಸಿ ನೊಂದಿರುವ ಕುಟುಂಬಕ್ಕೆ ನ್ಯಾಯ ಕೊಡಬೇಕೆಂದು ವಿನಂತಿಸಿದರು.
ನಗರಸಭೆ ಮಾಜಿ ಅಧ್ಯಕ್ಷೆ ಸುನಿತಾ ಮಲ್ಲಿಕಾರ್ಜುನ್, ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದ ಕಾರ್ಯದರ್ಶಿ ಕೆ.ಎಂ.ವೀರೇಶ್, ಛಲವಾದಿ ಗುರುಪೀಠದ ಬಸವನಾಗಿದೇವಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ, ಜಿಲ್ಲಾ ವೀರಶೈವ ಲಿಂಗಾಯತ ಹೇಮರಡ್ಡಿ ಮಲ್ಲಮ್ಮ ಸಮಾಜದ ಕಾರ್ಯದರ್ಶಿ ಡಿ.ಟಿ.ಶಿವಾನಂದ್, ಜೆಡಿಎಸ್. ಮಹಿಳಾ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಗೀತ, ಮರುಳಾರಾಧ್ಯ, ರೇಣುಕಾರಾಧ್ಯ, ಭಜರಂಗದಳದ ಪ್ರಭಂಜನ್, ರುದ್ರೇಶ್, ಸಿದ್ದೇಶ್, ವೀರಶೈವ ಲಿಂಗಾಯಿತ ಸಮಾಜದ ಮುಖಂಡರು, ದಲಿತ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.