Chitradurga news |nammajana.com|27-6-2024
ನಮ್ಮಜನ.ಕಾಂ, ಚಿತ್ರದುರ್ಗ: ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿಯನ್ನು ತಾಲ್ಲೂಕುವಾರು (SEP TSP Grant Chitradurga) ಸಂಗ್ರಹಿಸಿ ವಾರದೊಳಗೆ ವರದಿ ನೀಡಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ 2024ನೇ ಸಾಲಿನ ಎರಡನೇ ತ್ರೈಮಾಸಿಕ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಾಲೆಯಿಂದ ಹೊರಗುಳಿದ ಮಕ್ಕಳು ಬಾಲ್ಯವಿವಾಹ, ಬಾಲ ಕಾರ್ಮಿಕರಾಗುವ ಸಾಧ್ಯತೆ ಇರುವುದರಿಂದ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ವಿವಿಧ ಕಾರ್ಯತಂತ್ರದ ಮೂಲಕ ಮುಖ್ಯವಾಹಿನಿಗೆ ತರಬೇಕು. ಮಕ್ಕಳು ಶಾಲೆಯಿಂದ ಹೊರಗುಳಿಯಲು ಕಾರಣವೇನು ಎಂಬಿತ್ಯಾದಿ ವಿಚಾರಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಜಿಲ್ಲೆಯಲ್ಲಿ ಯಾವುದೇ ಮಕ್ಕಳು ಶಾಲೆಯಿಂದ ಹೊರಗುಳಿಯದಂತೆ ಕ್ರಮವಹಿಸಬೇಕು ಎಂದು ತಾಕೀತು ಮಾಡಿದರು.
ಶಾಲಾ ಶಿಕ್ಷಣ ಇಲಾಖೆಯ ಡಿವೈಪಿಸಿ ವೆಂಕಟೇಶ್ ಮಾತನಾಡಿ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಕ್ರಮವಹಿಸಲಾಗಿದ್ದು, ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ 489 ಮಕ್ಕಳಲ್ಲಿ 27 ಮಕ್ಕಳು ಪ್ರವೇಶಾತಿ ಪಡೆಯುವುದು ಬಾಕಿ ಇದೆ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಭಾರತಿ ಆರ್ ಬಣಕಾರ್ ಮಾತನಾಡಿ, ಶಾಲೆಯಿಂದ ಹೊರಗುಳಿದ 11 ರಿಂದ 18 ವರ್ಷದ ಕಿಶೋರಿಯರ ಮಾಹಿತಿ ಸಂಗ್ರಹಿಸಲು ಈಗಾಗಲೇ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಇದನ್ನೂ ಓದಿ: ಮಾಳಿಗೆ ಮಣ್ಣು ಕುಸಿದು ಓರ್ವ ವ್ಯಕ್ತಿ ಸಾವು | person died due soil collapse
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧಮೇರ್ಂದರ್ ಕುಮಾರ್ ಮೀನಾ ಮಾತನಾಡಿ, ಬಹಳ ಸೂಕ್ಷ್ಮ ಹಾಗೂ ಜವಾಬ್ದಾರಿಯುತವಾಗಿ ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿಯನ್ನು ಸಂಗ್ರಹಿಸಬೇಕು ಎಂದು ಹೇಳಿದರು.
ಬಾಲಕಾರ್ಮಿಕರ ಪತ್ತೆಗೆ ತಪಾಸಣೆ ನಡೆಸಿ: ಬಾಲಕಾರ್ಮಿಕರ ಪತ್ತೆಗಾಗಿ ನಿಯಮಿತವಾಗಿ ಕಾರ್ಮಿಕ ಇಲಾಖೆ ಅಧಿಕಾರಿಗಳು ವಿವಿಧ ಇಲಾಖೆ ಅಧಿಕಾರಿಗಳ ಸಮನ್ವಯದೊಂದಿಗೆ ತಪಾಸಣೆ ಕಾರ್ಯ ನಡೆಸಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಯಾವ ಯಾವ ಸ್ಥಳಗಳಲ್ಲಿ ಬಾಲಕಾರ್ಮಿಕರ ಪತ್ತೆಗೆ ತಪಾಸಣೆ ಮಾಡಲಾಗಿದೆ, ಎಷ್ಟು ಬಾಲಕಾರ್ಮಿಕರ ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ಈ ಕುರಿತು ಇದುವರೆಗೂ ಎಷ್ಟು ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಕೈಗೊಂಡ (SEP TSP Grant Chitradurga) ಕ್ರಮಗಳೇನು ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ಜಿಲ್ಲಾಧಿಕಾರಿಗಳು ಪ್ರಶ್ನಿಸಿದರು. ಬಾಲಕಾರ್ಮಿಕರ ಪತ್ತೆಗೆ ನಿಯಮಿತವಾಗಿ ತಪಾಸಣಾ ಕಾರ್ಯವನ್ನು ಪೊಲೀಸ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಸಮನ್ವಯದೊಂದಿಗೆ ತಪಾಸಣೆ ಮಾಡಲಾಗುತ್ತಿದೆ. ಕಳೆದ 15 ದಿನಗಳಿಂದ ಯಾವುದೇ ಬಾಲಕಾರ್ಮಿಕ ಮಕ್ಕಳು ಕಂಡುಬಂದಿರುವುದಿಲ್ಲ ಎಂದು ಕಾರ್ಮಿಕ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸವಿತಾ ಮಾತನಾಡಿ, 2023-24ನೇ ಸಾಲಿನಲ್ಲಿ 16 ಮಕ್ಕಳು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರಾಗಿದ್ದು, ಅದರಲ್ಲಿ ಇಬ್ಬರು ಮಕ್ಕಳಿಗೆ 18 ವರ್ಷ ಪೂರ್ಣಗೊಂಡಿದೆ. 13 ಮಕ್ಕಳು ಪೋಷಕರ ವಶದಲ್ಲಿದ್ದು, ವಿದ್ಯಾಭ್ಯಾಸದ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿಗೆ ಅನುಪಾಲನೆ ವರದಿ ಸಲ್ಲಿಸಲಾಗಿದೆ. 1 ಮಗು ಮಕ್ಕಳ ಕಲ್ಯಾಣ ಸಮಿತಿಯಿಂದ ಪಶ್ಚಿಮ ಬಂಗಾಳ ರಾಜ್ಯದ ಕುಚ್ ಬಿಹಾರ್ ಜಿಲ್ಲೆ ಮಕ್ಕಳ ಕಲ್ಯಾಣ ಸಮಿತಿಗೆ ವರ್ಗಾವಣೆ ಮಾಡಲಾಗಿದೆ ಎಂದರು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಬಾಲಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡ ಮಾಲೀಕರ ವಿರುದ್ಧ ಕ್ರಮಕೈಗೊಳ್ಳಲು ಅಗತ್ಯ ಕ್ರಮವಹಿಸಬೇಕು ಎಂದು ಸೂಚಿಸಿದರು.
ಸಮಿತಿ ಸದಸ್ಯ ಹೇಮೇಗೌಡರು ಮಾತನಾಡಿ ನಿಗಮ ಮಂಡಳಿಯಲ್ಲಿರುವ ವಿವಿಧ ಯೋಜನೆಗಳ ಬಗ್ಗೆ ಅದಕ್ಕೆ ಫಲಾನುಭವಿಗಳಾಗಲು ಇರುವ ಅರ್ಹತೆ, ಮಾನದಂಡಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಕೊರತೆ ಇರುತ್ತದೆ. ಈ ಕುರಿತು ಹೆಚ್ಚು ಅರಿವು ಮೂಡಿಸಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಸರ್ಕಾರದ ಯೋಜನೆಗಳು, ನಿಗಮ ಮಂಡಳಿಗಳಲ್ಲಿನ ಯೋಜನೆಗಳ ಮಾಹಿತಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತಾಗಬೇಕು. ಈ ಕುರಿತು ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು. ನಿಗಮ ಮಂಡಳಿಗಳಲ್ಲಿನ ಯೋಜನೆಗಳು, ಅರ್ಹತೆ, ಮಾನದಂಡದ ಕುರಿತು ಗ್ರಾಮ ಪಂಚಾಯಿತಿ ಪ್ರಕಟಣೆ ಫಲಕ, ಸ್ಥಳೀಯ ಪತ್ರಿಕೆಗಳಿಗೆ ಬಿಡುಗಡೆ ಮಾಡಿರುವ ಪತ್ರಿಕಾ ತುಣುಕುಗಳ ವಿವರದ ವರದಿ ನೀಡುವಂತೆ ನಿಗಮ ಮಂಡಳಿ ಜಿಲ್ಲಾ ವ್ಯವಸ್ಥಾಪಕರಿಗೆ ಸೂಚಿಸಿದರು.
ಸ್ಥಳೀಯ ಅಂಗಡಿಗಳಲ್ಲಿ ಮಧ್ಯವನ್ನು ಅನಧಿಕೃತವಾಗಿ ಮಾರಾಟ ಮಾಡಲಾಗುತ್ತದೆ. ಇದರಿಂದ ಪರಿಶಿಷ್ಟ ಜಾತಿಯ ಜನಗಳಲ್ಲಿ ಶೇ.90 ರಷ್ಟುಜನ ಕುಡಿತಕ್ಕೆ ಒಳಗಾಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಕ್ರಮವಹಿಸಬೇಕು ಎಂದು ಸಮಿತಿ ಸದಸ್ಯರು ಸಭೆಯಲ್ಲಿ ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಜಿಲ್ಲಾ ವ್ಯಾಪ್ತಿಯಲ್ಲಿ ಸರ್ಕಾರದಿಂದ ಪರವಾನಗಿ ಪಡೆಯದೇ ಮದ್ಯ ಮಾರಾಟ ಮಾಡುವ ಬಗ್ಗೆ ಮಾಹಿತಿ, ದೂರು ಬಂದ ಕೂಡಲೇ ಖಚಿತಪಡಿಸಿಕೊಂಡು ದಾಳಿ ಮಾಡಿ ಕಾನೂನು ಕ್ರಮಕೈಗೊಳ್ಳಲಾಗುತ್ತಿದೆ.
ಪ್ರಸಕ್ತ ಸಾಲಿನಲ್ಲಿ ಅಕ್ರಮ ಮದ್ಯ ಮಾರಾಟ ಮಾಡುವವರ ಮೇಲೆ ದಾಳಿ ಮಾಡಿ ಒಟ್ಟು 179 ಪ್ರಕರಣ ದಾಖಲು ಮಾಡಲಾಗಿದೆ. ಜಿಲ್ಲೆಯ ಎಲ್ಲಾ ಠಾಣೆಯ ಬೀಟ್ ಸಿಬ್ಬಂದಿಗಳು ಗ್ರಾಮದಲ್ಲಿ ಗಸ್ತು ಮಾಡಿ ಪರವಾನಗಿ ಪಡೆಯದೇ ಮದ್ಯ ಮಾರಾಟ ಮಾಡುವವರ ಮಾಹಿತಿ ಕಲೆಹಾಕುವಂತೆ ಹಾಗೂ ಅಂಗಡಿ ಮಾಲೀಕರಿಗೆ ಅರಿವು ಮೂಡಿಸಲು ಸೂಚನೆ ನೀಡಲಾಗಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಗದೀಶ್ ಹೆಬ್ಬಳ್ಳಿ ಮಾತನಾಡಿ, 2024ರ ಮಾರ್ಚ್ 04 ರಿಂದ ಜೂನ್ 26ರವರೆಗೆ ದೌರ್ಜನ್ಯ ನಿಯಂತ್ರಣ ಕಾಯ್ದೆ 1989 ಅಡಿಯಲ್ಲಿ ಪರಿಶಿಷ್ಟ ಜಾತಿಯ 25 ಪರಿಶಿಷ್ಟ ವರ್ಗದ 07 ಪ್ರಕರಣಗಳು ಸೇರಿದಂತೆ ಒಟ್ಟು 32 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಪರಿಶಿಷ್ಟ ಜಾತಿಯ 21 ಪುರುಷರು, 22 ಮಹಿಳೆಯರು, ಪರಿಶಿಷ್ಟ ವರ್ಗದ 06 ಪುರುಷರು, 06 ಮಹಿಳೆಯರು ಸೇರಿದಂತೆ 27 ಪುರುಷರು ಹಾಗೂ 28 ಮಹಿಳೆಯರು ಸೇರಿದಂತೆ ಒಟ್ಟು 55 ಸಂತ್ರಸ್ಥರಿಗೆ ಪರಿಹಾರಧನವನ್ನು ಆರ್‍ಟಿಜಿಎಸ್ ಮೂಲಕ ಪಾವತಿ ಮಾಡಲಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜೆ.ಕುಮಾರಸ್ವಾಮಿ, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್, ಸಮಿತಿ ಸದಸ್ಯರಾದ ಚಿನ್ನಪ್ಪ, ಗುಜ್ಜಾರಪ್ಪ, ಹೇಮೇಗೌಡ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.
ಎಸ್‍ಸಿಪಿ, ಟಿಎಸ್‍ಪಿ ಪ್ರಗತಿ ಪರಿಶೀಲನೆ:(SEP TSP Grant Chitradurga)
ಮೇ-2024ರ ಅಂತ್ಯಕ್ಕೆ ಎಸ್‍ಸಿಪಿ, ಟಿಎಸ್‍ಪಿ ಯೋಜನೆಯ ಪ್ರಗತಿ ಪರಿಶೀಲನೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು, ಎಸ್‍ಸಿಪಿ, ಟಿಎಸ್‍ಪಿ ಯೋಜನೆಯಡಿ ಇಲಾಖೆವಾರು (SEP TSP Grant Chitradurga) ಹಂಚಿಕೆಯಾದ ಅನುದಾನಕ್ಕೆ ಅನುಗುಣವಾಗಿ ಕ್ರಿಯಾಯೋಜನೆ ಸಿದ್ದಪಡಿಸಬೇಕು. ಈ ಅನುದಾನ ಯಾವ ಉದ್ದೇಶಕ್ಕಾಗಿ ಬಳಕೆ ಮಾಡಬೇಕೋ ಅದೇ ಉದ್ದೇಶಕ್ಕೆ ಮಾತ್ರ ಬಳಕೆ ಆಗಬೇಕು. ಎಸ್‍ಸಿ, ಎಸ್‍ಟಿ ಕಾಲೋನಿಗಳಲ್ಲಿ ಹಾಗೂ ಈ ಜನಾಂಗ ಇರುವ ಕಡೆ ಕೆಲಸಗಳಾಗಬೇಕು. ಯಾವುದೇ ಕಾರಣಕ್ಕೂ ನಿಯಮ ಮೀರುವಂತಿಲ್ಲ. ಕಡ್ಡಾಯವಾಗಿ ಸರ್ಕಾರದ ಮಾರ್ಗಸೂಚಿಯನ್ನು ಅನುಸರಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಇದನ್ನೂ ಓದಿ: ವಿದ್ಯಾರ್ಥಿನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ | Hosadurga
ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ.ಮಂಜುನಾಥ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ. ರೇಣುಪ್ರಸಾದ್, ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ನಮ್ಮ ವರದಿಗಾರರು. ನಿಮ್ಮೂರಿನ ಸಭೆ, ಸಮಾರಂಭ, ಶಾಲೆ ಕಾಲೇಜು ಕಾರ್ಯಕ್ರಮಗಳು, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಉತ್ತಮವಾದ ಫೋಟೋ ಜೊತೆಗೆ ಕಳುಹಿಸಬಹುದು. ಸುದ್ದಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ. ಮತ್ತು ಜಾಹಿರಾತುಗಳನ್ನು ಆಕರ್ಷಕ ದರದಲ್ಲಿ ಪ್ರಕಟಿಸಲಾಗುವುದು.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ನಮ್ಮಜನ.ಕಾಂ gmail: nammajananews@gmail.com
» Whatsapp Number-9686622252