Chitradurga News | Nammajana.com | 26-09-2025
ನಮ್ಮಜನ ನ್ಯೂಸ್ ಕಾಂ,ಚಿತ್ರದುರ್ಗ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ತಂತ್ರಾಂಶದಲ್ಲಿ ಉಂಟಾಗಿದ್ದ ಎಲ್ಲಾ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಲಾಗಿದೆ. ಆಯೋಗವು ಅಭಿವೃದ್ಧಿ ಪಡಿಸಿದ ಮೂರನೇ ಆವೃತ್ತಿಯ ತಂತ್ರಾಂಶವು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಗಣತಿದಾರರು ತ್ರೀವಗತಿಯಲ್ಲಿ ಸಮೀಕ್ಷೆ ಕಾರ್ಯ ನಡೆಸುವಂತೆ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಹೇಳಿದರು.

ಇದನ್ನೂ ಓದಿ: ಸರ್ಕಾರಿ ನೌಕರರ ಮೇಲಿನ ಹಲ್ಲೆ ಮತ್ತು ದೌರ್ಜನ್ಯ ಖಂಡಿಸಿ ನೌಕರರಿಂದ ಮೌನ ಪ್ರತಿಭಟನೆ | Government employees protest
ನಗರದ ಜಿಲ್ಲಾಧಿಕಾರಿಗಳ ಕಚೇರಿ ಕೆಸ್ವಾನ್ ಸಭಾಂಗಣದಲ್ಲಿ ಶುಕ್ರವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಪ್ರಗತಿ ಪರಿಶೀಲನೆ ಸಭೆಯ ಬಳಿಕ ಅವರು, ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ಸಮೀಕ್ಷೆ ಆರಂಭಕ್ಕೂ ಮುನ್ನವೇ ವಿದ್ಯುತ್ ಸಂಪರ್ಕ ಸಂಖ್ಯೆ ಆಧರಿಸಿ ಸ್ಟಿಕರ್ ಅಂಟಿಸುವ ಮೂಲಕ ಬೆಸ್ಕಾಂ ವತಿಯಿಂದ ಸಮೀಕ್ಷೆ ನಡೆಸುವ ಮನೆಗಳನ್ನು ಗುರುತಿಸಲಾಗಿದೆ. ಪ್ರತಿ ತಾಲ್ಲೂಕಿಗೂ ನೇಮಿಸಿರುವ ಉಸ್ತುವಾರಿ ಅಧಿಕಾರಿಗಳು ಬೆಸ್ಕಾಂ ಕಾರ್ಯಪಾಲಕ ಅಭಿಯಂತರರೊಂದಿಗೆ ಸಮನ್ವಯ ಸಾಧಿಸಿ, ಮನೆಗಳ ವಿವರ, ಮಾಲಿಕರ ಮೊಬೈಲ್ ಸಂಪರ್ಕ ಸಂಖ್ಯೆಗಳನ್ನು ಪಡೆದುಕೊಂಡು ಗಣತಿದಾರರಿಗೆ ನೀಡಬೇಕು.
ಗಣತಿದಾರರು ಸಮೀಕ್ಷೆಗೆ ತೆರಳುವ ಮುನ್ನಾ ದಿನವೇ ಕರೆ ಮಾಡಿ ಸಮೀಕ್ಷೆ ಆಗಮಿಸುತ್ತಿರುವ ಕುರಿತು ಮಾಹಿತಿ ನೀಡಬೇಕು. ನಾಲ್ಕು ದಿನ ಸಮೀಕ್ಷೆ ಕಾರ್ಯಕ್ಕೆ ಹಿನ್ನಡೆಯಾಗಿದ್ದು, ಪ್ರತಿ ಗಣತಿದಾರರು ಪ್ರತಿ ದಿನ ಕನಿಷ್ಠ 10 ರಿಂದ 20 ಮನೆಗಳ ಸಮೀಕ್ಷೆ ನಡೆಸುವ ಮೂಲಕ ನಿಗದಿಪಡಿಸಿದ ದಿನದ ಒಳಗೆ ಗಣತಿ ಕಾರ್ಯ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.
ನೆಟ್‍ವರ್ಕ್ ಸಿಗದಿದ್ದರೆ ಶಿಬಿರ ಆಯೋಜಿಸಿ :
ನೆಟ್‍ವರ್ಕ್ ಸಿಗದೆ ಇರುವ ಪ್ರದೇಶಗಳಲ್ಲಿ ಶಾಲೆ ಅಥವಾ ಗ್ರಾಮ ಪಂಚಾಯಿತಿಗಳಲ್ಲಿ ಶಿಬಿರಗಳನ್ನು ಆಯೋಜಿಸಿ ಸಮೀಕ್ಷೆ ಕಾರ್ಯನಡೆಸಲು ಆಯೋಗ ಅನುಮತಿಸಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ನೆಟ್‍ವರ್ಕ ಸಿಗದ ಶ್ಯಾಡೋ ಪ್ರದೇಶಗಳನ್ನು ಅಧಿಕಾರಿಗಳು ಗುರುತಿಸಬೇಕು. ಮನೆ ಮನೆ ಸಮೀಕ್ಷೆ ಕಾರ್ಯಕ್ಕೆ ಸಮಾನಾಂತರವಾಗಿ ಸಮೀಕ್ಷೆ ಶಿಬಿರಗಳನ್ನು ಆಯೋಜಿಸುವಂತೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ನಿರ್ದೇಶಿಸಿದರು.
ಜಿಲ್ಲಾಧಿಕಾರಿ ಹಾಗೂ ಸಿಇಓಗೆ ಸಮೀಕ್ಷೆ ಜವಬ್ದಾರಿ:
ಜಿಲ್ಲಾಧಿಕಾರಿಗಳು ಹಾಗೂ ಸಿಇಓಗಳು ಸಮೀಕ್ಷೆ ಜವಾಬ್ದಾರಿ ವಹಿಸಿಕೊಳ್ಳಬೇಕು. ಪ್ರತಿದಿನ ಸಮೀಕ್ಷೆ ಪ್ರಗತಿ ಕುರಿತು ಪರಿಶೀಲನೆ ಸಭೆ ನಡೆಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಡಿಯೋ ಕಾನ್ಫರೆನ್ಸ್‍ನಲ್ಲಿ ಸೂಚಿಸಿದರು.
ಇದನ್ನೂ ಓದಿ: Chitradurga today Gold Rate | ಬಂಗಾರದ ಬೆಲೆಯಲ್ಲಿ ಏರಿಕೆ
ರಾಜ್ಯದಲ್ಲಿ ಒಟ್ಟು 1,43,81,702 ಕುಟುಂಬಗಳ ಸಮೀಕ್ಷೆ ಕಾರ್ಯವನ್ನು ನಡೆಸಬೇಕಾಗಿದ್ದು, ಇದುವರೆಗೆ 2,76,016 ಕುಟುಂಬಗಳ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಲಾಗಿದೆ. ಸಮೀಕ್ಷೆ ಕಾರ್ಯಕ್ಕೆ ಒಟ್ಟು 1,20,728 ಗಣತಿದಾರರನ್ನು ನಿಯೋಜಿಸಲಾಗಿದೆ. ಒಟ್ಟು 1,22,085 ಗಣತಿ ಬ್ಲಾಕ್‍ಗಳನ್ನು ಗುರುತಿಸಲಾಗಿದೆ. ಸಮೀಕ್ಷೆ ಕಾರ್ಯ ಸರ್ಕಾರದ ಕೆಲಸವಾಗಿದ್ದು, ಸಮೀಕ್ಷೆ ಕಾರ್ಯವನ್ನು ಎಲ್ಲಾ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಅಕ್ಟೋಬರ್ 7ರ ಒಳಗಾಗಿ ಗಣತಿ ಕಾರ್ಯ ಪೂರ್ಣಗೊಳಿಸಬೇಕು ಎಂದರು.
ಶಿಕ್ಷಕರು ಗಣತಿ ಕಾರ್ಯಕ್ಕೆ ಅಸಹಕಾರ ತೋರಿಸಬಾರದು. ಇದು ಸರ್ಕಾರಿ ಕೆಲಸವಾಗಿದೆ. ಗಣತಿದಾರರಿಗೆ ಸರ್ಕಾರದಿಂದ ಈಗಾಗಲೇ ಗೌರವಧನವನ್ನು ಬಿಡುಗಡೆ ಮಾಡಿದ್ದೇವೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಗಣತಿ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ನಿರ್ಲಕ್ಷ್ಯ ತೋರುವ ಗಣತಿದಾರರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.
ಕಂದಾಯ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸಮನ್ವಯದಿಂದ ಸಮೀಕ್ಷೆ ಕಾರ್ಯ ನಡೆಸಬೇಕು. ಸಮೀಕ್ಷೆ ಕಾರ್ಯದ ಮೇಲ್ವಿಚಾರಣೆ ನಡೆಸಲು ಪ್ರತಿ ತಾಲೂಕಿಗೆ ಜಿಲ್ಲಾ ಮಟ್ಟದ ಅಧಿಕಾರಿಯನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇದನ್ನೂ ಓದಿ: ST ಪಟ್ಟಿಗೆ ಅನ್ಯ ಜಾತಿ ಸೇರ್ಪಡೆ ವಿರೋಧಿಸಿ ರಾಜ್ಯ ಸರ್ಕಾರದ ವಿರುದ್ಧ ನಾಯಕ ಸಮಾಜ ಪ್ರತಿಭಟನೆ
ವಿಡಿಯೋ ಕಾನ್ಫರೆನ್ಸ್‍ನಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಚ್.ಕೆ.ಪಾಟೀಲ್, ಶಿವರಾಜ ತಂಗಡಗಿ, ಕೃಷ್ಣ ಭೈರೇಗೌಡ, ರಹೀಂ ಖಾನ್, ಭೈರತಿ ಸುರೇಶ್, ಮಧು ಬಂಗಾರಪ್ಪ, ಎನ್.ಎಸ್. ಬೋಸರಾಜು, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ ನಾಯ್ಕ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಕಾನೂನು ಸಲಹೆಗಾರ ಪೊನಣ್ಣ, ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದ ಸಭೆಯಲ್ಲಿ ಜಿ.ಪಂ. ಸಿಇಓ ಡಾ.ಆಕಾಶ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ವಿಶೇಷ ಭೂಸ್ವಾಧೀನಾಧಿಕಾರಿ ವೆಂಕಟೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪುಷ್ಪಲತಾ, ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಸೇರಿದಂತೆ ಮತ್ತಿತರರು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದರು.
