ನಮ್ಮೂರಲ್ಲಿ ಯುಗಾದಿ ಮಾರನವಮಿ ಎಂದರೆ ದೊಡ್ಡ ಹಬ್ಬಗಳು. ಸರಿಸುಮಾರು ತಿಂಗಳಿನಿಂದಲೇ ಸುಣ್ಣ ಬಳಿಯುವವರು ಯಾರು ಸಿಕ್ಕಾರು? ಈ ಸರ್ತಿ ಸುಣ್ಣಗುಮ್ಮಿಯಲ್ಲಿ ಸುಣ್ಣ ಸರಿಯಾಗಿ ಅಳೆಸಬೇಕು; ಇಲ್ಲ ಬರೀ ಕಲ್ಲು ಸೇರಿಸಿಬಿಟ್ಟರೆ ಗೋಡೆ ಬಿರುಕು ಬಿಟ್ಕಳತ್ತೆ.
ಈ ಸರ್ತಿ ಸಾಮಾನು ಹೊರಗಿಟ್ಟು, ಬಳಿದ ಮೇಲೆ ಅದ ಜೋಡಿಸಿ ಕೊಡೋರು ಯಾರು? ಎಂದೆಲ್ಲ ತಿಂಗಳೊಪ್ಪತ್ತಿನ ಮುಂಚೆಯೇ ಜಗುಲಿಕಟ್ಟೆಯಲ್ಲಿ ಚರ್ಚೆ ನಡೆಯುತ್ತಿದ್ದವು. ಸುಣ್ಣದ ಸಮಸ್ಯೆ ನೀಗಿದ ನಂತರ ಮನೆಮಂದಿಯ ಬಟ್ಟೆ, ಉಡುದಾರ ಇತ್ಯಾದಿಗಳ ದೊಡ್ಡ ರಖಮ್ಮಿನ ಸಂಗತಿ ಮುನ್ನೆಲೆಗೆ ಬರುತ್ತಿತ್ತು.
ಈ ಬಾರಿ ಉಗಾದಿಗೆ ಒಳ್ಳೆ ಬಟ್ಟೆನೆ ಹಾಕೊಬೇಕು ಎನ್ನುವುದು ಹೆಂಗಸ್ರು ಮಕ್ಕಳು ದೊಡ್ಡವರು ಎಲ್ಲರ ಅಪೇಕ್ಷೆ. ಆದರೆ ಅದಕ್ಕೆ ದುಡ್ಡು? ಅದರದು ಇದಕ್ಕೆ ಇದರದು ಅದಕ್ಕೆ ಎಂದು ಜೋಡಿಸಿ ಕೊನೆಗೊಮ್ಮೆ ಮನೆಮಂದಿಯ ಆಸೆಯ ಮುಂದೆ ಸೋಲೊಪ್ಪಲಾರದೆ ಮನೆ ಯಜಮಾನನಾದವನು ನಿಡಿದಾದ ಉಸಿರ್ಗರೆದು ಆಯ್ತಪ್ಪ, ಈ ಸಾರಿ ದುಡಿದಿದ್ದು ಇಲ್ಲಿಗೇ ಆಗಲಿ ಎನ್ನುವಂತೆ ತನ್ನ ಉಳಿತಾಯ ಖಾತೆಯ ಹಣವನ್ನು ಬಟ್ಟೆಗೆ ಕೊಟ್ಟು,‘ಬಟ್ಟೆಗೆ ಹಾಕ್ದೊ ಬರಿಗ್ಯಯ್ಯಾದೊ ಅಂತಾರೆ’ ಎಂದು ಗೊಣಗುತ್ತಾ ಕೊಡುತ್ತಿದ್ದುದು ಸಾಮಾನ್ಯವಾಗಿತ್ತು. ಆದರೆ ಒಮ್ಮೆ ಕೈಗೆ ದುಡ್ಡು ಹತ್ತಿತೆಂದರೆ ಸಾಕು ಯಾರಾದರೂ ಒಬ್ಬರು ಮುಂದಾಳ್ತನ ತಗೊಂಡು ಇಟಗಿಯವರ ಅಂಗಡಿಗೆ ಹೋಗೋಣ, ಈ ಸರ್ತಿ ಅಲ್ಲಿ ಬೇಡ ಹಳೆ ತರದವೇ ಇರ‍್ತಾವೆ, ಹೊಸ ಮಾರ್ವಾಡಿ ಅಂಗಡಿ ಆಗಿದೆ ಅಲ್ಲಿಗೇ ಹೋಗೋಣ ಎನ್ನಬೇಕು.
ಇನ್ನೂ ಕೆಲವು ಶೋಕಿಯವರು ದಾವಣಗೆರೆಗೆ ಹೋಗೋಣ, ಏನು ಹೈವೇ, ನಿಮಿಷಕ್ಕೊಂದು ಬಸ್ ಇರ‍್ತಾವೆ, ಅವಕ್ಕೇನು ಬರ? ಹಿಂಗೆ ಹೋಗಿ ಹಂಗೆ ಬರಾಣ ಎಂದು ತಯಾರಾಗುತ್ತಿದ್ದುದು ಉಂಟು. ಅವರ ಕಣ್ಣ ಮುಂದೆ ದಾವಣಗೆರೆಯ ನಮನಮೂನೆ ಅಂಗಡಿಗಳಲ್ಲಿ ಹೊಕ್ಕು ತಂದ ಹೊಸ ಬಟ್ಟೆಯ ಹಾಕಿಕೊಂಡು ಜನದ ಮುಂದೆ ಅಡ್ಡಾಡುವ ದೃಶ್ಯ ಕಣ್ಣ ಮುಂದೆ ಹಾಯುತ್ತಿತ್ತು.
ಹೀಗೆ ಹೊಂಚುವ ಹೊತ್ತಿಗೆ ದುರ್ಗದ ದೊಡ್ಡ ಸಮಸ್ಯೆ ಧುತ್ತೆಂದು ಎದುರು ಬಂದು ನಿಲ್ಲುತ್ತಿತ್ತು. ಅದೆಂದರೆ ನೀರಿನದೇ ಮತ್ತೇನಿಲ್ಲ. ನೀರು ಎನ್ನುವುದು ಸದಾ ಮರೀಚಿಕೆಯಾಗಿಯೇ ಇದ್ದ ನಾಡಿನಲ್ಲಿ ವರ್ಷದ ಮೊದಲ ಹಬ್ಬಕ್ಕೆ ನೀರಿಲ್ಲದೇ ಇರುವುದನ್ನು ಸಹಿಸಲು ಸಾಧ್ಯವೇ ಆಗುತ್ತಿರಲಿಲ್ಲ.
ಮುನಿಸಿಪಾಲಿಟಿಯ ನೀರುಗಂಟಿಯರಿಗೆ ಎಡತಾಕಿ ಅವರು ಯಾವಾಗ ನೀರು ಬಿಡುತ್ತಾರೆ? ಹಬ್ಬದ ಹೊತ್ತಿಗೆ ಎಷ್ಟು ಹೊತ್ತು ಬಿಟ್ಟಾರು? ಎಷ್ಟು ಕೊಡ ಒಂದೊಂದು ಮನೆಗೆ ಸಿಗಬಹುದು? ಎನ್ನುವುದು ಬೀದಿಜನರೆಲ್ಲರ ಚಿಂತೆಯಾಗಿರುತ್ತಿತ್ತು.
ಮುನಿಸಿಪಾಲಿಟಿ ನಲ್ಲಿ ಎಲ್ಲರ ಮನೆಗೂ ಇರಲಿಲ್ಲವಲ್ಲ. ಬೀದಿಯಲ್ಲಿ ತಡರಾತ್ರಿಯಿಂದಲೇ ಚೆಂಬು, ಹಳೆಕೊಡ, ಮುರಿದ ಬಕೀಟುಗಳ ಸರದಿ ಇಟ್ಟು ಮಲಗುತ್ತಿದ್ದವರೆಷ್ಟೊ ಮಂದಿ. ಮತ್ತೆ ತಮ್ಮ ಬಕೀಟು, ಕೊಡಗಳ ಜಾಗ ಅದಲು ಬದಲಾಯಿತೆಂದು ಬೆಳಿಗ್ಗೆ ಮುಂದೆ ಕಿತ್ತಾಟವಾಡುತ್ತಿದ್ದವರೂ ಅವರೇ. ಜಲಪ್ರಳಯದ ಮುಂದೆ ಜಗಳಪ್ರಳಯವೇ ಆಗಿ ಹೊತ್ತಿಕೊಂಡು ಉರಿದು, ಕೊನೆಗೆ ಎಲ್ಲರ ಮನೆಯ ತಿಪ್ಪೆಯೂ ಕೆದರಿ ಬಾಗಿಲಿಗೇ ಬಂದಂತಾಗಿ ಹೇಗೊ ಮುಗಿತಾಯ ಕಾಣುತ್ತಿತ್ತು.
ಆದರೂ ಸೋ ,, ಎನ್ನುವ ರಾಗ, ಗೊಣಗಾಟ ಇದ್ದದ್ದೇ. ನೀರಿನ ವ್ಯವಸ್ಥೆ ಬಗ್ಗೆ ನಂಬಿಕೆ ಇಲ್ಲದೆ ಮತ್ತೆ ನೀರು ಬರದೇ ಇದ್ದರೆ ಎಂಬ ಆತಂಕದಲ್ಲಿ ಬಾವಿಯಿದ್ದವರ ಮನೆಬಾಗಿಲು ತಟ್ಟುತ್ತಿದ್ದರು ನಮ್ಮ ಬೀದಿಜನ.
ಯಾವ ಬಾವಿ ಸೀನೀರಿನದು? ಯಾವುದು ತಲೆಸ್ನಾನಕ್ಕೆ ಬರುವಂತದ್ದು? ಎಂದೆಲ್ಲ ಮೊದಲೇ ಅಂದಾಜು ಹಾಕಿಕೊಂಡಿರುತ್ತಿದ್ದರಿಂದ ಬಾವಿ ವಿಳಾಸಗಳು ತಿಳಿದಂತವೇ ಆಗಿರುತ್ತಿದ್ದವು. ಹೀಗೆ ನಲ್ಲಿ ನೀರು/ಬಾವಿ ನೀರುಗಳನ್ನು ತೊಟ್ಟಿ, ಬಾನಿ, ಹಂಡೆ, ಕೊಳಗ, ಕಡೆಗೆ ಸಣ್ಣಪುಟ್ಟ ಪಾತ್ರೆಗಳಲೆಲ್ಲಾ ಸಂಗ್ರಹಿಸಿ ಹಬ್ಬಕ್ಕೆ ತಯಾರಾಗುತ್ತಿದ್ದುದು ನೆನಪಾಗುತ್ತದೆ.
ಹಬ್ಬದ ದಿನ ಹರಳೆಣ್ಣೆ ಮೆತ್ತಿಕೊಂಡ ತಲೆಗಳು, ಅಲ್ಲಲ್ಲಿ ಎಡತಾಕಿ ತೆಗೆದುಕೊಂಡು ಬಂದ ಬೇವಿನಸೊಪ್ಪು, ಮಾವಿನಸೊಪ್ಪು ಬಾಗಿಲಿಗೆ ಕಟ್ಟಿ ಸಂಭ್ರಮಿಸುತ್ತಲೇ ನಡುಮಧ್ಯಾಹ್ನದ ಹೋಳಿಗೆ ಊಟಕ್ಕೆ ಕರೆ ಬರುವವರೆಗೂ ಒಂದು ಸಂಭ್ರಮ. ಆನಂತರ ಇನ್ನೂ ಒಂದು ಜೊಂಪು ಹೂಡಿ ಏಳುವುದರೊಳಗೆ ಜೂಜಿನ ದೊಡ್ಡ
ಬಯಲೇ ತೆರೆದುಕೊಂಡು ಬಿಡುತ್ತಿತ್ತು ನಮ್ ಹಳೇ ದುರ್ಗದ ಬೀದಿಗಳಲ್ಲಿ. ಗಂಡಸರು ಆಡುತ್ತಿದ್ದ ಒಂಟ್ಲಿರಾಜ, ಕಟ್ಟೆಮೂಲೆಗಳಲ್ಲಿ ಗುಬುರು ಹಾಕಿಕೊಂಡು ಆಡುತ್ತಿದ್ದ ಇಸ್ಪೀಟು, ಅಂದರ್ ಬಾಹರ್ ಎಲ್ಲವೂ ಖುಲ್ಲಾ ಖುಲ್ಲಾ. ಬೇರೆ ದಿನ ಆಡಿದರೆ ಬೈದಾಡುತ್ತಿದ್ದ ಮನೆಮಂದಿ ಉಗಾದಿಗೆ ಏನೊಂದೂ ತುಟಿಪಿಟಿಕ್ ಎನ್ನುತ್ತಿರಲಿಲ್ಲ. ಜೂಜಿನ ಮಸ್ತಿ ಅನುಭವಿಸಿದ ಗಂಡು ಇರಲೇ ಇಲ್ಲ.
ಸಣ್ಣ ಪಣಗಳಿಂದ ಹಿಡಿದು ದೊಡ್ಡ ದೊಡ್ಡ ರಖಮುಗಳ ತನಕ ಜನ ಹುಚ್ಚೆದ್ದು ಆಡುತ್ತಿದ್ದರು. ಜಟಕಾ ಹೊಡೆಯುತ್ತಿದ್ದ ಮಾಸ್ತಪ್ಪನು ಅವತ್ತು ಹೇಗಾದರೂ ದುಡ್ಡು ಹೊಂದಿಸಿಕೊಂಡು ಮನೆಗಳ ಮುಂದೆ ಬಂದು ‘ಬನ್ನಿ ಸಾಮಿ ಆಡನಾ’ ಎಂದು ಕರೆಯುತ್ತಿದ್ದ. ಒಂದು ಹಂಚಿಬೋಕಿ ತೆಗೆದುಕೊಂಡು ಅದರಲ್ಲಿ ಪೆಟ್ಟಿಗೆಯಲ್ಲಿ ಮುಚ್ಚಿಟ್ಟಿದ್ದ ರಾಣಿವಿಕ್ಟೋರಿಯಾ ಅಮ್ಮನ ಚಿತ್ರವಿರುವ ನಾಣ್ಯ ಇಟ್ಟು ತೂರುವುದು; ರಾಣಿ ಬಿದ್ದರೆ ‘ಹೋ’ ಎನ್ನುವುದು. ಆಗಾಗ್ಗೆ ಪೋಲಿಸರ ಬೀಟ್ ಸದ್ದು ಕೇಳಿ ಮನೆ ಹೊಕ್ಕಿಕೊಳ್ಳುವುದು ಮತ್ತೆ ಶುರು ಹಚ್ಚುವುದು…
ಮರುದಿನ ಚಂದ್ರನ್ನ ನೋಡುವುದು ದುರ್ಗದಲ್ಲಿ ದೊಡ್ಡ ಹಬ್ಬ. ‘ಕರೆ(ರಕ್ತದ ಕಲೆ) ತಿಂದು ಪರೆ(ಚಂದ್ರ) ನೋಡು’ ಎಂದು ಹಟ್ಟಿಗಳಲ್ಲಿ ಪ್ರಚಲಿತವಿರುವ ಮಾತು. ಅಂದರೆ ಉಗಾದಿ ಮೊದಲ ದಿನ ಸಿಹಿ ಅಡುಗೆ ಇದ್ದರೆ ಮರುದಿನ ಮಾಂಸಾಹಾರ ತಿನ್ನುವವರು ಅದನ್ನು ಮಾಡುತ್ತಾರೆ.
ಹಾಗಾಗಿ ಎರಡೆರಡು ದಿನ ಹಬ್ಬದ ಬೇರೆ ಬೇರೆ ರುಚಿ, ಆಚರಣೆ ಎಲ್ಲ. ಹಬ್ಬವಾದ ಮೇಲೂ ಒಬ್ಬರ ಮೇಲೊಬ್ಬರು ನೀರುಗ್ಗಿಕೊಂಡು ಬೀದಿಯಲ್ಲಿ ಮೀಯುವ ಆಟ ಆಡುವವರೂ ಇದ್ದರು. ಹೀಗೆ ಹೋಳಿಗೆ ಸಾರು ಒಂದು ದಿನ ತಿಳಿಯಾಗಿ, ಎರಡನೇ ದಿನ ತುಸು ಗಟ್ಟಿಯಾಗಿ ಮೂರನೇ ದಿನ ಇನ್ನೂ ಗಟ್ಟಿಲೇಹ್ಯದಂತಾಗಿ ಬಿಸಿ ಅನ್ನಕ್ಕೆ ತುಪ್ಪದ ಜೊತೆ ತಿನ್ನುವಂತಾಗುವ ಹೊತ್ತಿಗೆ ಹಬ್ಬ ಇಳಿಮುಖವಾದಂತೆ. ಮತ್ತೆ ಊರ ದುರ್ಗಿಯರು ಸಿಡಿಯಾಡಲು ತಯಾರಾಗತೊಡಗುತ್ತಾರೆ.
ಯುಗಾದಿ ಪಾಡ್ಯದ ನಂತರದ ದಿನ ಚಂದ್ರದರ್ಶನ ಮಾಡುವುದರಿಂದ ಶುಭ ಎನ್ನುವುದು ನಂಬಿಕೆ. ಚಂದ್ರ ಎತ್ತ ವಾಲುತ್ತಾನೆ ಆ ವಾರೆಯನ್ನು ನೋಡಿ ನಮ್ಮಲ್ಲಿ ಆ ಸರ್ತಿಯ ಮಳೆಬೆಳೆ ಹೇಳುವವರಿದ್ದರು.
ಒಮ್ಮೊಮ್ಮೆ ದಿನ/ತಿಥಿ ಶುದ್ಧವಿಲ್ಲದೆ ಎರಡೆರಡು ದಿನ ಹಬ್ಬ ಬಂದಾಗ ಚಂದ್ರ ಆಗಲೇ ದೊಡ್ಡದಾಗಿ ಕಾಣುತ್ತಿದ್ದುದು ಉಂಟು. ಆಗ ಜನ ಈ ಸರಿ ಯಾಕೊ ಚಂದ್ರ ಬಲಿತುಬಿಟಿದ್ದಾನೆ, ಏನ್ ಗ್ರಾಚಾರಾನೊ ಏನೊ ಎಂದು ಆಕಾಶಕ್ಕೇ ಕೈಮುಗಿದುಕೊಳ್ಳುತ್ತಿದ್ದರು. ಮುದುಕರಿಗಂತೂ ಚಂದ್ರನನ್ನ ಕಾಣುವುದು ಎಂದರೆ ತಮ್ಮ ದಿನಮಾನಗಳ ಲೆಕ್ಕವನ್ನು ಕಾಣುವುದು ಎಂತಲೇ ಲೆಕ್ಕ.
ಅಂದರೆ ಚಂದ್ರದರ್ಶನ ಸಂಜೆಹೊತ್ತಿಗೆ ಆಗಲಿಲ್ಲ, ಅದು ಉದಯವಾಗಿ ಗಂಟೆ ಕಳೆದ ಮೇಲೆ ನೋಡಬೇಕಾಯಿತು ಎಂದರೆ ಮುದುಕರಿಗೆ ತಮ್ಮ ಸಾವು ಹತ್ತಿರ ಬಂದಿದೆ ಎನ್ನುವ ಸೂಚನೆಯಾಗಿತ್ತು. ಅಂದರೆ ಕಣ್ಣಿನ ಸೂಕ್ಷö್ಮ ಹೋಯಿತು, ಇನ್ನು ಮೂಲೆಗೆ ಬೀಳುವ ಹೊತ್ತು ಬಂದಿತು ಎನ್ನುವ ಭಾವನೆ.
ನಮ್ಮ ಮನೆಯ ಹತ್ತಿರ ಇದ್ದ ಅಜ್ಜಿಯೊಬ್ಬರು ಹೀಗೆ ಕಣ್ಣೀರು ಸುರಿಸಿದ್ದೂ ಅದೇ ವರ್ಷ ಅವರು ಸತ್ತಿದ್ದೂ ನೆನಪಾಗುತ್ತಿದೆ. ಅದಕ್ಕೆ ನಮ್ಮಜ್ಜ ಅದ್ಯಾಕವ್ವ ಅಳುತ್ತಿಯಾ, ಇವತ್ತು ನೀನು, ನಾಳೆ ನಾವು ಹೋಗೊಗು ಎಂದು ಸಮಾಧಾನಿಸಿ ಕಳಿಸಿದ್ದರು.
ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತ್ತಿದೆ ಎನ್ನುವ ಹಾಡು ಕೇಳಿ ಉಗಾದಿ ಮಾಡುತ್ತಿದ್ದ ದಿನಗಳು ಹಿಂದೆ ಸರಿದು ಹೊಸ ಬೇನೆ, ಬೇಗೆಗಳನ್ನು ಹೊತ್ತ ಸಮುದಾಯಗಳು ಮತ್ತೊಮ್ಮೆ ಯುಗಾದಿಗೆ ತಯಾರಾಗುತ್ತಿವೆ.
ಜಗತ್ತನ್ನು ನೋಡುವ ಲೋಕದೃಷ್ಟಿಯೇ ಇಂದು ಬೇರೆಯಾಗಿದೆ. ಋತುಮಾನಗಳೂ ಸಿಡುಕಿ, ಯಾವಾಗೊ ಮಳೆ, ಯಾವಾಗಲೊ ಬಿಸಿಲು ಸುರಿಸಿ ಕೆರಳಿ ಕೆಂಡವಾಗುತ್ತಿವೆ. ಕೆಲವು ಮರಗಳು ತಮ್ಮ ನೇಮ ಬಿಡದೆ ಒಂದೂ ಎಲೆಗಳಿಲ್ಲದಂತೆ ಉದುರಿಸಿಕೊಂಡು, ಹೊಸ ಚಿಗುರಿಗೆ ಅಣಿಯಾಗಿ ಕಂಗೊಳಿಸುತ್ತಿವೆ. ಬೇಸಿಗೆಯ ಮುಂದೆ ಬರುವ ಹಬ್ಬದಲ್ಲಿ ಅಖಿಲ ಜೀವಜಾತವೂ ತಂತಮ್ಮ ಮಿತಿಯಲ್ಲಿ ಹೊಸತನವನ್ನು ಆಹ್ವಾನಿಸಿಕೊಳ್ಳುತ್ತಾ ಇದ್ದರೆ ಮನುಷ್ಯನಿಗೆ ಈ ಭಾಗ್ಯವಿಲ್ಲ ಎಂಬುದು ಕವಿಯ ಅನುಭವದ ನುಡಿ. ಆದರೆ ಯುಗಾದಿ ಮನುಷ್ಯನಿಗೆ ಒಂದು ಆಯ್ಕೆ ಕೊಡುತ್ತದೆ.
ಹೊಸ ಋತುವಿಗೆ ಅಣಿಯಾಗು ಎಂದು. ಸವಿಯೆನ್ನುವುದು ಮನೋಭಾವ ಅದನ್ನು ರೂಢಿಸಿಕೊ ಎಂದು. ಉಗಾದಿ ಎಂದರೆ ಮತ್ತೇನಿಲ್ಲ; ಇರುವ ತಗಾದೆಗಳಿಗೆ ಹೊಸ ಉತ್ತರಗಳನ್ನು ಕಂಡುಕೊಳ್ಳುವುದು. ಮತ್ತೆ ಮತ್ತೆ ಹಳೆಯ ಕಾಂಡಗಳಲ್ಲೇ ಹೊಸ ಚಿಗುರುಗಳು ಹುಟ್ಟುವುದಕ್ಕೆ ಅನುವು ಮಾಡಿಕೊಡುವುದು.