ನಮ್ಮಜನ.ಕಾಂ, ಸಾಣೇಹಳ್ಳಿ: ಮನುಷ್ಯ ಹಬ್ಬಗಳ ನೆಪದಲ್ಲಾದರೂ ದ್ವೇಷ ಭಾವನೆಯನ್ನು ದೂರ ತಳ್ಳಿ ಪ್ರೀತಿ, ವಿಶ್ವಾಸ, ದಯೆ ಕೃತಜ್ಞತಾ ಭಾವವನ್ನು ಅಳವಡಿಸಿಕೊಳ್ಳುವ ಸಂಕಲ್ಪ ತಳೆಯಬೇಕು. ಆ ಗುಣಗಳು ಹೊರಗಿನಿಂದ ಹಣ ಕೊಟ್ಟು ಕೊಳ್ಳುವಂಥವುಗಳಲ್ಲ. ನಮ್ಮೊಳಗಡೆ ಇರುವ ಅಪಾರ ಸಂಪತ್ತು. ಆ ಸಂಪತ್ತು ಸದ್ವಿನಿಯೋಗ ಮಾಡಿಕೊಂಡಾಗ ಬದುಕು ಹರ್ಷದಾಯಕವಾಗಲು ಸಾಧ್ಯ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಹೇಳಿದರು.
ಇಲ್ಲಿನ ಶ್ರೀ ಮಠದ ಆವರಣದಲ್ಲಿ ಚಂದ್ರದರ್ಶನವನ್ನು ಶಿಷ್ಯರೊಂದಿಗೆ ವೀಕ್ಷಿಸಿ ಮಾತನಾಡಿ ಪ್ರಕೃತಿ ಮಾತೆ ನಮಗೆ ಎಷ್ಟೆಲ್ಲಾ ಒಳಿತನ್ನು ಮಾಡಿದರೂ ನಾನು ಮಾಡಿದೆ ಎಂದು ಜಂಬ ಕೊಚ್ಚಿಕೊಳ್ಳುವುದಿಲ್ಲ. ಅದರಿಂದ ಮಾನವ ಪಾಠ ಕಲಿತರೆ ಮಾತ್ರ ಹಬ್ಬ ಹುಣ್ಣಿಮೆಗಳಿಗೆ ವಿಶೇಷ ಮೆರಗು, ಅರ್ಥ ಬರುವುದು. ಇಲ್ಲವಾದರೆ ಅವು ಸಹ ಸಾಂಪ್ರದಾಯಕ ಆಚರಣೆಗಳಾಗಿ ಕೊನೆಗೆ ಮನುಷ್ಯರನ್ನೇ ಮೂಢರನ್ನಾಗಿ, ಕಂದಾಚಾರಿಗಳನ್ನಾಗಿ ಮಾಡಬಹುದು.
ಭಾರತೀಯರಿಗೆ ಯುಗಾದಿ ಹೊಸ ವರ್ಷ
ಭಾರತೀಯರಿಗೆ ಯುಗಾದಿ ಹೊಸ ವರ್ಷ. ಅಲ್ಲಿಂದಲೇ ನಮ್ಮ ಚಟುವಟಿಕೆಗಳು ಪ್ರಾರಂಭವಾಗುವುದು. ಪ್ರಕೃತಿಯಲ್ಲಿ ಅನೇಕ ಬದಲಾವಣೆಗಳನ್ನು ಈ ಸಂದರ್ಭದಲ್ಲಿ ಕಾಣಬಹುದು. `ಲೋಕದ ಚೇಷ್ಟೆಗೆ ರವಿ ಬೀಜವಾದಂತೆ’ ಎಂದು ಅಕ್ಕಮಹಾದೇವಿಯವರು ಹೇಳಿದ್ದಾರೆ.
ಹಳೆಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು
`ಹಳೆಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು’ ಎನ್ನುವಂತೆ ಯುಗಾದಿಯ ಸಂದರ್ಭದಲ್ಲಿ ಗಿಡ ಮರಗಳು ಹಣ್ಣೆಲೆಗಳನ್ನು ಕಳಚಿಕೊಂಡು ಹೊಸ ಚಿಗುರೊಡೆದು ಪ್ರಕೃತಿಮಾತೆಗೆ ಹಸಿರು ಸೀರೆ ಉಡಿಸಿದಂತೆ ಕಾಣುವುದು. ಆದರೆ ಈ ವರ್ಷ ಮಳೆ ಇಲ್ಲದೇ ಎಲ್ಲೆಡೆ ಬಿಸಿಲಿನ ತಾಪ, ಕೆರೆ ಕಟ್ಟೆಗಳು ಒಣಗಿ ಬಿಕೋ ಎನ್ನುತ್ತಿವೆ. ದನಕರುಗಳಿಗೆ ಮೇವು, ನೀರಿಗೆ ಬರ. ಎಲ್ಲ ಊರುಗಳಲ್ಲೂ ಕುಡಿಯುವ ನೀರಿಗೆ ಅಹಕಾರ ಎದ್ದು ಜನ ಜನುವಾರುಗಳ ಬದುಕು ತುಂಬಾ ಕಷ್ಟವಾಗಿದೆ.
ಯುಗಾದಿಯ ಸಂದರ್ಭದಲ್ಲಿ ಮೈಗೆ ಎಣ್ಣೆ ಹಚ್ಚಿಕೊಂಡು ಬೇವಿನ ಸೊಪ್ಪನ್ನು ನೀರಲ್ಲಿ ಹಾಕಿ ಸ್ನಾನ ಮಾಡುವುದು, ಬೇವು ಬೆಲ್ಲ ತಿನ್ನುವುದು ಈ ಹಬ್ಬದ ವಿಶೇಷತೆ. ಬೇವು ಕಹಿಯನ್ನು ನೆನಪಿಸುತ್ತದೆ. ಬದುಕು ಸಿಹಿ ಕಹಿಗಳ ಸಮ್ಮಿಶ್ರಣ. ಸಿಹಿ ಬಂದಾಗ ಹಿಗ್ಗದೆ ಕಹಿ ಬಂದಾಗ ಕುಗ್ಗದೇ ಎರಡನ್ನೂ ಸಮಾನವಾಗಿ ಸ್ವೀಕರಿಸಿದಾಗ ಮಾತ್ರ ಬದುಕು ಬಂಗಾರವಾಗುವುದು.
ವಿಶ್ವಾಸದಿಂದ ಬಾಳೋಣ
ಜಗಳ, ದ್ವೇಷ, ಅನುಮಾನ ಇನ್ನೇನೇನೋ ಕಾರಣದಿಂದ ಬಹುದಿನಗಳಿಂದ ಒಬ್ಬರ ಮುಖ ಒಬ್ಬರು ನೋಡದಿದ್ದರೂ ಚಂದ್ರದರ್ಶನ ಪಡೆದ ನಂತರ ಪರಸ್ಪರ ಕೈ ಕುಲುಕಿ, ಕೈ ಮುಗಿದು ಇಲ್ಲವೇ ಪಾದ ನಮಸ್ಕಾರ ಮಾಡಿ ವಿಶ್ವಾಸದಿಂದ ಬಾಳೋಣ ಎನ್ನುವ ಭಾವನೆ ಬೆಳೆಸಿಕೊಳ್ಳಬೇಕು. ಒಟ್ಟಾರೆ ಯುಗಾದಿ ಹಬ್ಬ ಎಲ್ಲರ ಮನಸ್ಸುಗಳನ್ನು ಹಸನು ಮಾಡುವ, ಒಟ್ಟುಗೂಡಿಸುವ ಕಾರ್ಯ ಮಾಡುವುದು ಎಂದರು. ಈ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳು, ಊರಿನ ಗ್ರಾಮಸ್ಥರು ಚಂದ್ರದರ್ಶನ ಮಾಡಿ ಶ್ರೀಗಳ ಆಶೀರ್ವಾದ ಪಡೆದು ಬೇವು-ಬೆಲ್ಲ ಪ್ರಸಾದ ಸೇವಿಸಿದರು.