
Chitradurga news|nammajana.com|19-03-2025
ನಮ್ಮಜನ.ಕಾಂ, ಚಳ್ಳಕೆರೆ: ರಾಜ್ಯದ ಮದ್ಯ ಕರ್ನಾಟಕದ ನಾಲ್ಕು ಜಿಲ್ಲೆಗಳಾದ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ತುಮಕೂರು ಜಿಲ್ಲೆ ವ್ಯಾಪ್ತಿಯಲ್ಲಿ ಭದ್ರಾಮೇಲ್ದಂಡೆ ಯೋಜನೆ ಮೂಲಕ (Upper Bhadra) ನೀರಾವರಿ ಸೌಲಭ್ಯ ಕಲ್ಪಿಸುವ ಕುರಿತು ವಿಧಾನಸೌದದಲ್ಲಿ ನಡೆದ ಬಜೆಟ್ ಅಧಿವೇಶನದಲ್ಲಿ ಕ್ಷೇತ್ರದ ಶಾಸಕ, ಸಣ್ಣಕೈಗಾರಿಕೆ ಮಂಡಳಿ ಅಧ್ಯಕ್ಷ ಟಿ.ರಘುಮೂರ್ತಿ ಭದ್ರಾಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಅಗತ್ಯವಿರುವ ಹಣವನ್ನು ಬಿಡುಗಡೆಗೊಳಿಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.
ಬುಧವಾರ ನಡೆದ ಅಧಿವೇಶನದಲ್ಲಿ ಪಾಲ್ಗೊಂಡ ಮಾತನಾಡಿದ ಅವರು, ಕೇಂದ್ರ ಸರ್ಕಾರ 2023-4ನೇ ಸಾಲಿನ ಆಯವ್ಯಯದಲ್ಲಿ ಭದ್ರಾಮೇಲ್ದಂಡೆಯೋಜನೆಗೆ 5300 ಕೋಟಿ ಹಣ ನೀಡುವ ಪ್ರಸ್ತಾಪನೆ ಮಾಡಿದ್ದು ಇದುವರೆಗೂ ಹಣ ನೀಡಿಲ್ಲ. 2025-26ನೇಸಾಲಿನ ಆಯವ್ಯಯದಲ್ಲಿ 2600ಕೋಟಿ ಹಣನೀಡುವ ಭರವಸೆ ನೀಡಿದ್ದಾರೆ.

ಒಟ್ಟಾರೆಯಾಗಿ ಯೋಜನೆಗೆ 21500ಕೋಟಿ ಹಣ ಬೇಕಿದ್ದು, ಈಗಾಗಲೇ 10500 ಕೋಟಿ ವೆಚ್ಚವಾಗಿದೆ. ಇನ್ನೂ 10 ಸಾವಿರ ಕೋಟಿ ಹಣ ಬೇಕಿದ್ದು ಮುಖ್ಯಮಂತ್ರಿಗಳು 2611 ಕೋಟಿ ನೀಡಿ ಕೇಂದ್ರ ಸರ್ಕಾರ 5300ಕೋಟಿ ನೀಡಿದರೆ ಯೋಜನೆ (Upper Bhadra) ಪೂರ್ಣಗೊಳ್ಳಲು ಅವಶ್ಯವಿರುವ 5 ಸಾವಿರ ಕೋಟಿ ಹಣವನ್ನು ರಾಜ್ಯಸರ್ಕಾರ ನೀಡಿ ಯೋಜನೆ ಪೂರ್ಣಗೊಳಿಸಲು ಸಹಕಾರ ನೀಡಬೇಕು.
ಒಟ್ಟು 29.9 ಟಿಎಂಸಿ ನೀರು ಲಭ್ಯವಿದ್ದು, 21.9 ಟಿಎಂಸಿ ನೀರಿನಲ್ಲಿ ಹನಿನೀರಾವರಿ 2.25 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ, 6 ಟಿಎಂಸಿ ನೀರು 767 ಕೆರೆ ತುಂಬಿಸಲು, ವಾಣಿವಿಲಾಸಸಾಗರಕ್ಕೆ 2 ಟಿಎಂಸಿ ನೀರು ಸಿಗಲಿದೆ.
ಆದರೆ, ಈ ಯೋಜನೆಗೆ ಸಕಾಲದಲ್ಲಿ ಹಣ ನೀಡದ ಹಿನ್ನೆಲೆಯಲ್ಲಿ ಭದ್ರಾಮೇಲ್ದಂಡೆ ಯೋಜನೆ ಕಾರ್ಯಗತವಾಗುವುದೇ ಎಂಬ ಅನುಮಾನ ಜನರದ್ದಾಗಿದೆ.
ಕಳೆದ ಹಲವಾರು ದಶಕಗಳಿಂದ ಜನರಿಗೆ ಆಳಿದ ಎಲ್ಲಾ ಸರ್ಕಾರಗಳು ಭರವಸೆ ನೀಡುತ್ತಾ ಬಂದಿವೆ. ರಾಜ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 2028 ರೊಳಗೆ ಈ ಯೋಜನೆ ಪೂರ್ಣಗೊಳಿಸುವ ಭರವಸೆ ನೀಡಿದ್ದರು. ಆದ್ದರಿಂದ ಮುಖ್ಯಮಂತ್ರಿಗಳು ಈ ಯೋಜನೆಗೆ ಅಗತ್ಯವಿರುವ 10 ಸಾವಿರ ಕೋಟಿಹಣವನ್ನು ಬಿಡುಗಡೆಗೊಳಿಸಿ ಜನರ ವಿಶ್ವಾಸಕ್ಕೆ ಪಾತ್ರರಾಗಬೇಕೆಂದು ಮನವಿ ಮಾಡಿದರು.
ಚಳ್ಳಕೆರೆ ವಿಧಾನಸಭಾ ಕ್ಷೇತ್ರ ಶಾಸಕರಾಗಿ ಮೂರನೇ ಬಾರಿಗೆ ಆಯ್ಕೆಯಾದ ಟಿ.ರಘುಮೂರ್ತಿ ಪ್ರತಿ ಅಧಿವೇಶನದಲ್ಲೂ ಚಳ್ಳಕೆರೆ ಕ್ಷೇತ್ರದ ಅಭಿವೃದ್ದಿಗೆ ಸಂಬಂಧಪಟ್ಟಂತೆ ಹಲವಾರು ಬಾರಿ ಪ್ರಶ್ನಿಸಿ ಸರ್ಕಾರದಿಂದ ಸೂಕ್ತ ಉತ್ತರ ಪಡೆದಿದ್ದಾರೆ. ಇವರ ಕೋರಿಕೆಯಂತೆ ಕೆಲವೊಂದು ಯೋಜನೆಗೆ ಮಾತ್ರ ಸರ್ಕಾರ ಅನುದಾನ ನೀಡಿದೆ. ಇನ್ನೂ ಹಲವಾರು ಯೋಜನೆಗೆ ಅನುದಾನ ನೀಡಬೇಕಿದೆ, ರಘುಮೂರ್ತಿಯವರು ಸದನದಲ್ಲಿ (Upper Bhadra) ಪ್ರಸ್ತಾಪಿಸಿದಂತೆ ಸರ್ಕಾರ ಹಣ ನೀಡಿದರೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಇನ್ನೂ ಹೆಚ್ಚು ಶಕ್ತಿಬರಲಿದೆ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಬಾಕ್ಸ್
ಮಧ್ಯ ಕರ್ನಾಟಕದ ಜನರ ಕನಸಾಗಿರುವ ಭದ್ರಾ ಯೋಜನೆ ಪೂರ್ಣಕ್ಕೆ ನಮ್ಮ ಮುಖ್ಯಮಂತ್ರಿಗಳಿಂದ 10 ಸಾವಿರ ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದೇನೆ. 2028 ಭದ್ರಾ ಯೋಜನೆ ಪೂರ್ಣಗೊಳಲು ಈಗ ನೀಡಿರುವ 2611 ಕೋಟಿ ಜೊತೆಗೆ ಇದೇ ವರ್ಷದಲ್ಲಿ 5 ಸಾವಿರ ಕೋಟಿ ಹಣ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಿದ್ದು ರಾಜ್ಯದ ಸಂಸದರು ಸಹ ಪಕ್ಷಾತೀತವಾಗಿ ಭದ್ರಾ ಯೋಜನೆಯ ಹಣ ತರಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲಿ.
ಟಿ.ರಘುಮೂರ್ತಿ
ಶಾಸಕರು ಚಳ್ಳಕೆರೆ ವಿಧಾನ ಸಭಾ ಕ್ಷೇತ್ರ
ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ ಅಧ್ಯಕ್ಷ
