Chitradurga news|nammajana.com|21-9-2024
ನಮ್ಮಜನ.ಕಾಂ, ಚಿತ್ರದುರ್ಗ: ಮಧ್ಯ ಕರ್ನಾಟಕದ ರೈತರ ಉಸಿರಾಗಿರುವಂತಹ ಹಿರಿಯೂರು ತಾಲೂಕಿನ ವಾಣಿವಿಲಾಸ ಜಲಾಶಯದ ನೀರಿನ ಮಟ್ಟ 21 ಸೆಪ್ಟೆಂಬರ್ 2024 ಶನಿವಾರ (VV Sagar Dam) ದಂದು 120 ಅಡಿ ತಲುಪಿದೆ. ಇನ್ನು 10 ಅಡಿ ನೀರು ಹರಿದು ಬಂದರೇ ಪ್ರಸಕ್ತ ಸಾಲಿನಲ್ಲಿ ಕೋಡಿ ಬೀಳಲಿದೆ.
ರಾಜ್ಯದ ಎಲ್ಲಾ ಕೆಲವು ಜಿಲ್ಲೆಗಳನ್ನೂ ಹೊರತುಪಡಿಸಿದರೆ, ಈ ಬಾರಿ ಬಹುತೇಕ ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬೆರೆದಿದ್ದಾನೆ. ಮಳೆರಾಯನ ಕೃಪೆಯಿಂದ ಕೆರೆ, ಕಟ್ಟೆ, ಹಳ್ಳಗಳುಕೊಳ್ಳಗಳು ತುಂಬಿ ಹರಿದಿದ್ದವು. ಆದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಮಾತ್ರ ಈ ಬಾರಿ ಮಳೆಯ ಪ್ರಮಾಣ ತಗ್ಗಿತ್ತು. (VV Sagar Dam) ಅದರಲ್ಲೂ ಜಿಲ್ಲೆಯ ಜೀವನಾಡಿಯಾಗಿರುವ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಅಷ್ಟೇನು ನೀರು ಬಂದಿರಲಿಲ್ಲ.
ಕಳೆದೊಂದು ತಿಂಗಳಿನಿಂದ ಭದ್ರಾ ಜಲಾಶಯದಿಂದ ಪ್ರತಿದಿನ 693 ಕ್ಯೂಸೆಕ್ ಒಳಹರಿವು ನೀರು ವಾಣಿ ವಿಲಾಸ ಸಾಗರ ಜಲಾಶಯಕ್ಕೆ ಹರಿದು ಬರುತ್ತಿದೆ. ಇದರಿಂದ ಪ್ರಸ್ತುತ ಜಲಾಶಯದ ನೀರಿನ ಮಟ್ಟ 120 ಅಡಿಗೆ ತಲುಪಿದೆ. ಇನ್ನು ವಾಣಿ ವಿಲಾಸ ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ ಒಟ್ಟು 135 ಅಡಿ ಆಗಿದ್ದು, 130 ಅಡಿಗೆ ಕೋಡಿ ಬೀಳುತ್ತದೆ. (VV Sagar Dam) ಜಲಾಶಯದಲ್ಲಿ 30 ಟಿಎಂಸಿ ಅಡಿ ನೀರು ಸಂಗ್ರಹವಾಗುವ ಸಾಮರ್ಥ್ಯ ಹೊಂದಿದೆ.
1908ರಲ್ಲಿ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ ನಿರ್ಮಾಣಗೊಂಡ ವಾಣಿವಿಲಾಸ ಜಲಾಶಯ 1933ರಲ್ಲಿ ಮಾತ್ರ ಕೊಡಿ ಬಿದ್ದಿತ್ತು. ನಂತರ 89 ವರ್ಷದ ಬಳಿಕ ಅಂದರೆ 2022ರಲ್ಲಿ ಎರಡನೇ ಬಾರಿಗೆ ಕೋಡಿಯಲ್ಲಿ ನೀರು ಹರಿದಿತ್ತು. ಇದೀಗ ಹೆಚ್ಚು ನೀರು ಬಂದಲ್ಲಿ ಡ್ಯಾಂ ಈ ಬಾರಿ ಕೋಡಿ ಬೀಳುವುದು ಬಹುತೇಕ ಖಚಿತವಾಗಿದೆ.
ವಾಣಿ ವಿಲಾಸ ಸಾಗರದ ನೀರಿನ ಮಟ್ಟದ ಇತಿಹಾಸದ ವಿವರ
ವಾಣಿ ವಿಲಾಸ ಜಲಾಶಯವು 1932ರಲ್ಲಿ 125.50 ಅಡಿ, 1933 ರಲ್ಲಿ 135.25 ಅಡಿ, 1934 ರಲ್ಲಿ 130.24 ಅಡಿ ನೀರು ಸಂಗ್ರಹವಾಗಿ ಇತಿಹಾಸ ನಿರ್ಮಿಸಿತ್ತು. ತದನಂತರ 1956ರಲ್ಲಿ 125 ಅಡಿ, 1957ರಲ್ಲಿ 125.05 ಅಡಿ, 1958 ರಲ್ಲಿ 124.25 ಅಡಿ ನೀರು ಸಂಗ್ರಹವಾಗಿತ್ತು. ಇದಾದ ಬಳಿಕ 2000ದಲ್ಲಿ (VV Sagar Dam) 122.50 ಅಡಿ, 2021ರಲ್ಲಿ 125.50 ಅಡಿ ನೀರು ಜಲಾಶಯದಲ್ಲಿ ಸಂಗ್ರಹವಾಗಿ ದಾಖಲೆ ಬರೆದಿತ್ತು. 2022ರಲ್ಲಿ 130 ಅಡಿ ತಲುಪುವ ಮೂಲಕ ಎರಡನೇ ಬಾರಿಗೆ ಡ್ಯಾಂ ಕೋಡಿ ಬಿದ್ದಿತ್ತು.