Will the BJP-JDS alliance Work in the Congress stronghold Challakere ? NammaJana Ground Report
ನಮ್ಮಜನ.ಕಾಂ ಚಿತ್ರದುರ್ಗ: ಬರದ ನಾಡು ಎಂಬ ಹಣೆಪಟ್ಟಿ ಕಳಚಿ ಹಸಿರು ನಾಡು, ವಿಜ್ಞಾನ ನಗರಿ, ಅಭಿವೃದ್ಧಿ ಎಂದರೆ ಚಳ್ಳಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಮೂಲಕ ಜಿಲ್ಲೆಯ ಜನರ ಮನೆ ಮಾತಿನಲ್ಲೂ ಅಭಿವೃದ್ಧಿ ಅಂದರೆ ಚಳ್ಳಕೆರೆ ಅಂತೆ ಆಗಬೇಕು ಎಂಬ ಮಾತನ್ನು ಜಿಲ್ಲೆಯ ಜನರು ನೆನಪಿಸಿಕೊಂಡತಹ ಏಕೈಕ ಕ್ಷೇತ್ರ ಚಳ್ಳಕೆರೆ (ಎಸ್ಟಿ ಮೀಸಲು) ವಿಧಾನ ಸಭಾ ಕ್ಷೇತ್ರವಾಗಿದೆ.
ಕಾಂಗ್ರೆಸ್ ಜೆಡಿಎಸ್ ಬಿಜೆಪಿ ಪಕ್ಷೇತರ ನಡುವೆ ಫೈಟ್
ಆಯಿಲ್ ಸಿಟಿ, ಮಿನಿ ಬಾಂಬೆ ಎಂಬ ಖ್ಯಾತಿಯು ಚಳ್ಳಕೆರೆ ವಿಧಾನಸಭಾ ಕ್ಷೇತ್ರಕ್ಕೆ ಇದೆ.ಅತಿ ಹೆಚ್ಚು ಬರಗಾಲಕ್ಕೆ ತುತ್ತಾಗಿದ್ದರು ಸಹ ಚಳ್ಳಕೆರೆ ಕ್ಷೇತ್ರದಲ್ಲಿ ರಾಜಕೀಯಕ್ಕೆ ಬರಗಾಲವಿಲ್ಲ. ಕಾಂಗ್ರೆಸ್, ಜೆಡಿಎಸ್ , ಬಿಜೆಪಿ ಪಕ್ಷಗಳ ಜೊತೆ ಪಕ್ಷೇತರ ಅಭ್ಯರ್ಥಿಗಳು ಸದ್ದು ಮಾಡಿ ಮಾಡಿ ಅಖಾಡಕ್ಕೆ ಜಿದ್ದಾ ಜಿದ್ದಿ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಘುಮೂರ್ತಿ ಹ್ಯಾಟ್ರಿಕ್ ಬಾರಿಸಿ ಸೋಲಿಲ್ಲದ ಸರದಾರನಂತೆ ಚಳ್ಳಕೆರೆಯಲ್ಲಿ ಇತಿಹಾಸ ನಿರ್ಮಿಸಿದ್ದಾರೆ.
ಚಳ್ಳಕೆರೆ ಕ್ಷೇತ್ರದಲ್ಲಿ ರಘುಮೂರ್ತಿ ಹ್ಯಾಟ್ರಿಕ್ ಗೆಲುವು
ಚಳ್ಳಕೆರೆ ರಾಜಕಾರಣದಲ್ಲಿ ಒಮ್ಮೆ ಶಾಸಕರಾದರು ಮರಳಿ ಶಾಸಕರಾಗಿದ್ದು ತುಂಬಾ ವಿರಳ. ಪ್ರತಿ ಚುನಾವಣೆಯಲ್ಲಿ ಶಾಸಕರನ್ನು ಬದಲಾಯಿಸುತ್ತಾ ಬಂದ ಕ್ಷೇತ್ರವಾಗಿತ್ತು. ಒಮ್ಮೆ ಗೆದ್ದವರು ಮರಳಿ ಗೆದ್ದಿಲ್ಲ. ಆದರೆ 2013 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಗೆಲುವು ಕಂಡ ಶಾಸಕ ಟಿ.ರಘುಮೂರ್ತಿ ಅವರು ಮಾತ್ರ ಕಳೆದ 2018 ಮತ್ತು 2023 ಎರಡು ಚುನಾವಣೆಯಲ್ಲಿ ಶಾಂತಿಮೂರ್ತಿಯಾಗಿ ಈ ಬಾರಿ ನಾನೇ ಶಾಸಕ ಎಂಬ ಮಾತುಗಳನ್ನು ಹಾಡಿ ತೊಡೆ ತಟ್ಟಿ ಅಖಾಡ ಪ್ರವೇಶಿಸಿದ್ದ ಕಮಲ-ದಳ ಕಲಿಗಳನ್ನು ಸೋಲಿಸಿ ಮನೆಗೆ ಕಳಸಿದ ಸೈಲೆಂಟ್ ರಾಜಕಾರಣಿ ಎಂದರೆ ತಪ್ಪಗಲಾರದು. ಶಾಸಕ ಟಿ. ರಘುಮೂರ್ತಿ ಅವರಿಗೆ ಲೋಕಸಭೆ ಸವಾಲು ಎದುರಾಗಿದ್ದು ಅಖಾಡಲ್ಲಿ ಮತ್ತೊಮ್ಮೆ ತನ್ನ ಶಕ್ತಿ ಪ್ರದರ್ಶಿಸುವ ಸವಾಲು ಎದುರಾಗಿದೆ.
Read Also: Ground Report: ಕಮಲ ಪಡೆಗೆ ಬಂಡಾಯದ ಬಿಸಿ ಹೆಚ್ಚಿಸಿದ್ದ ಹೊಳಲ್ಕೆರೆಯಲ್ಲಿ ಹೇಗಿದೆ ವಾತಾವರಣ, ಕೈ ಪಡೆಯ ಕತೆ ಏನು?
ಲೋಕಸಭೆ ಟಿಕೆಟ್ ಘೋಷಿಸಿದ ದಿನದಿಂದಲೇ ರಣತಂತ್ರ ಹೆಣೆದು ಅಖಾಡ ಪ್ರವೇಶ
ಕಾಂಗ್ರೆಸ್ ಅಭ್ಯರ್ಥಿ ಬಿ.ಎಚ್.ಚಂದ್ರಪ್ಪ ಅವರು ಅಧಿಕೃತ ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಿಸಿದ ದಿನದಿಂದಲೇ ಅಖಾಡ ಪ್ರವೇಶ ಮಾಡಿದ ಶಾಸಕ ಟಿ.ರಘುಮೂರ್ತಿ ಹೋಬಳಿ ಮಟ್ಟ, ಗ್ರಾಪಂ ಮಟ್ಟದಲ್ಲಿನ ಸ್ಥಳೀಯ ಜನಪ್ರತಿನಿಧಿಗಳ, ಮುಖಂಡರ, ಕಾರ್ಯಕರ್ತರ ಸಭೆಗಳನ್ನು ನಡೆಸಿಕೊಂಡು ಕ್ಷೇತ್ರದಲ್ಲಿ ಒಂದು ರೌಂಡ್ ಬಿರುಸಿನ ಪ್ರಚಾರ ನಡೆಸಿ ಎರಡನೇ ಸುತ್ತಿನ ಕ್ಷೇತ್ರ ಸಂಚಾರ ಆರಂಭಿಸಿ ಪ್ರತಿ ಹಳ್ಳಿಯಲ್ಲಿ ಬಿರುಸಿನ ಚುನಾವಣಾ ಪ್ರಚಾರ ನಡೆಸುತ್ತಿದ್ದು ಗ್ಯಾರೆಂಟಿ ಮತ್ತು ಅಭಿವೃದ್ಧಿ ಕಾರ್ಯದ ಮೇಲೆ ಮತಬೇಟೆ ಮಾಡುತ್ತಿದ್ದು ಪಕ್ಷಕ್ಕೆ ಎಷ್ಟು ಲೀಡ್ ನೀಡುತ್ತಾರೆ ಎಂಬುದು ಕಾದು ನೋಡಬೇಕಿದೆ.
ಮೈತ್ರಿ ವೇದಿಕೆಯಲ್ಲಿ ಮೂವರು ಶಾಸಕ ಆಕಾಂಕ್ಷಿಗಳು
ಚಳ್ಳಕೆರೆ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಪರಿಣಾಮ ಎರಡು ಪಕ್ಷಗಳ ನಡುಗೆ ಒಮ್ಮತ ಮೂಡಿಸುವ ದೃಷ್ಟಿಯಿಂದ ಚಳ್ಳಕೆರೆ ನಗರದಲ್ಲಿ ಸಮನ್ವಯ ಸಭೆಗಳು ನಡೆಸುವ ಮೂಲಕ ಎಲ್ಲಾರನ್ನು ಒಂದೇ ವೇದಿಕೆಗೆ ತರುವ ಪ್ರಯತ್ನ ನಡೆಸುತ್ತಿದ್ದಾರೆ. ಈ ಸಭೆಗಳಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪರಾಭವಗೊಂಡ ಬಿಜೆಪಿ ಪಕ್ಷದಿಂದ ಅನಿಲ್‌ಕುಮಾರ್ ಜೆಡಿಎಸ್ ಅಭ್ಯರ್ಥಿ ಎಂ.ರವೀಶ್ ಕುಮಾರ್ ಇಬ್ಬರೂ ಭಾಗವಹಿಸಿದ್ದಾರೆ.ಇ
ದರ ಜೊತೆಗೆ ತಂದೆ ನಾಮಬಲದಲ್ಲಿ ರಾಜಕೀಯ ನೆಲೆ ಹುಡುಕಾಟದಲ್ಲಿದ್ದ ತನ್ನದೇ ಬೆಂಬಲಿಗರನ್ನು ಹೊಂದಿರುವ ಕೆ.ಟಿ. ಕುಮಾರಸ್ವಾಮಿ ಸಮನ್ವಯ ಸಭೆಯಲ್ಲಿ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರಿದ್ದು ಬಿಜೆಪಿ ನಾಯಕರಿಗೆ ಒಂದಿಷ್ಟು ಮತಗಳು ಪ್ಲಸ್ ಆಗಬಹುದು ಎಂಬ ಲೆಕ್ಕಚಾರದಲ್ಲಿ ಬಿಜೆಪಿ ನಾಯಕರು ಉತ್ಸಾಹದಿಂದ ಸ್ವಾಗತ ಬಯಸಿದ್ದು ಯಾರು ಎಷ್ಟು ಮತಗಳನ್ನು ಮೈತ್ರಿ ಅಭ್ಯರ್ಥಿಗೆ ಕೊಡಿಸುತ್ತಾರೋ ಎಂಬುದನ್ನು ನೋಡಲು ಫಲಿತಾಂಶದ ತನಕ ಕಾಯಬೇಕಾಗಿದೆ
ಜೆಡಿಎಸ್-ಬಿಜೆಪಿ ವಿಕ್ ಮಾಡಲು ಸೆಕೆಂಡ್ ಲೈನ್ ಲೀಡರ್ ಅಪರೇಷನ್ ಗೆ ಮುಂದಾದ ರಘುಮೂರ್ತಿ
ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಮತ್ತು ಅಭಿವೃದ್ಧಿ ಕಾರ್ಯ ಒಪ್ಪಿ ಬಂದರೆ ಸ್ವಾಗತ ಎಂಬ ಓಪನ್ ಆಫರ್ ಮೂಲಕ ಶಾಸಕರ ಬಳಿ ಬರಲು ಮುಜುಗರ ಇದ್ದ ಜೆಡಿಎಸ್ – ಬಿಜೆಪಿ ಮುಖಂಡರಿಗೆ, ಸ್ಥಳೀಯ ಜನಪ್ರತಿನಿಧಿಗಳಿಗೆ ನಿಮ್ಮ ಸಮಸ್ಯೆಗಳಿಗೆ ನಾನಿರ್ತೇನೆ ನೋ ಪ್ರಾಬಂ ಬನ್ನಿ ಎಂದ ಕೂಡಲೇ ಜೆಡಿಎಸ್ ಬಲಿಷ್ಠ ನೆಲೆಯಿರುವ ಪರಶುರಾಂಪುರ ಹೋಬಳಿಯಲ್ಲಿ ಪ್ರಭಾವಿ ಮಾಜಿ ಜಿಪಂ ಮಾಜಿ ಸದಸ್ಯ ಮುತ್ತುರಾಜ್, ಗ್ರಾ.ಪಂ. ಸದಸ್ಯರು, ಚಳ್ಳಕೆರೆ ನಗರದ ಜೆಡಿಎಸ್ ಮುಖಂಡರು ಮಾಜಿ ನಗರಸಭೆ ಅಧ್ಯಕ್ಷರು, ಸದಸ್ಯರು ಸೇರಿದಂತೆ ಹಲವು ಜೆಡಿಎಸ್ ಮತ್ತು ಬಿಜೆಪಿ ಮುಖಂಡರನ್ನು ಸೆಳೆದು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ಚಳ್ಳಕೆರೆ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದಾರೆ.
ಕಾಂಗ್ರೆಸ್ ಗೆ ಸಂಪ್ರದಾಯಿಕ ಮತಗಳೇ ಶ್ರೀರಕ್ಷೆ
ಚಳ್ಳಕೆರೆ ವಿಧಾನಸಭೆ ಕ್ಷೇತ್ರದಲ್ಲಿ ಕಳೆದ 2013, 2018ರ ವಿಧಾನಸಭೆ ಫಲಿತಾಂಶದ ಪಕ್ಷಗಳ ಬಲಾಬಲ, ನಂತರ ಕ್ರಮವಾಗಿ 2014, 2019 ರಲ್ಲಿ ನಡೆದ ಲೋಕಸಭೆ ಚುನಾವಣೆ ಫಲಿತಾಂಶದ ಮತಗಳಿಕೆ ಗಮನಿಸಿದಾಗ ಕಾಂಗ್ರೆಸ್ ತನ್ನ ಸಂಪ್ರದಾಯಿಕ ಓಟ್ ಬ್ಯಾಂಕ್‌ನಿಂದಲೇ ತನ್ನ ಅಸ್ತಿತ್ವ ಉಳಿಸಿಕೊಳ್ಳುತ್ತ ಬಂದಿರುವುದು ಮತಗಳು ಪ್ರಮಾಣದಲ್ಲಿ ಸ್ಪಷ್ಟವಾಗುತ್ತದೆ.
2013 ರ ವಿಧಾನಸಭೆ ಚುನಾವಣೆ ಮತಗಳಿಕೆ
- ಕಾಂಗ್ರೆಸ್: ಟಿ.ರಘುಮೂರ್ತಿ 60,197 ಮತ
- ಜೆಡಿಎಸ್ : ಪಿ.ತಿಪ್ಪೇಸ್ವಾಮಿ 27,373 ಮತ
- ಕೆಜೆಪಿ: ಕೆ.ಟಿ.ಕುಮಾರಸ್ವಾಮಿ: 37,074 ಮತ
- ಬಿಜೆಪಿ: ಜಯಪಾಲಯ್ಯ 12,981 ಮತ
ಲೋಕಸಭೆಗೆ 2014 ರಲ್ಲಿ ನಡೆದ ಚುನಾವಣೆ ಮತಗಳಿಕೆ
- ಕಾಂಗ್ರೆಸ್ : ಬಿ.ಎನ್.ಚಂದ್ರಪ್ಪ, 59,961 ಮತ
- ಜೆಡಿಎಸ್: ಗೂಳಿಹಟ್ಟಿ ಶೇಖರ್ 23,208 ಮತ
- ಬಿಜೆಪಿ: ಜನಾರ್ಧನಸ್ವಾಮಿ 40,929 ಮತ
ಇಲ್ಲಿ2013 ರಲ್ಲಿ ವಿಧಾನಸಭೆಯಲ್ಲಿ ವಿಭಜನೆಯಾಗಿರುವ ಕೆಜೆಪಿ, ಬಿಜೆಪಿ ಮತಗಳು ಒಗ್ಗೂಡಿರುವ ಕ್ಲಿಯರ್ ಪಿಚ್ಚರ್ ದೊರೆಯುತ್ತದೆ.
2018 ರ ವಿಧಾನಸಭೆ ಚುನಾವಣೆ ಫಲಿತಾಂಶ
- ಕಾಂಗ್ರೆಸ್‌ನ ಟಿ.ರಘುಮೂರ್ತಿ 72,874 ಮತ,
- ಜೆಡಿಎಸ್‌ನ ಎಂ.ರವೀಶ್ ಕುಮಾರ್ 59,335 ಮತ
- ಬಿಜೆಪಿಯ ಕೆ.ಟಿ.ಕುಮಾರಸ್ವಾಮಿ 33,471 ಮತ
ಕಳೆದ ಬಾರಿಯ ಮೈತ್ರಿ ಫಲ ನೀಡಲಿಲ್ಲ
2019 ರ ಲೋಕಸಭಾ ಚುನಾವಣೆ ಮತಗಳಿಕೆ
ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ 72,987 ಮತ ಪಡೆದರು. ಆದರೆ
ಜೆಡಿಎಸ್ ಮೈತ್ರಿ ಫಲವಾಗಿಯು ಕಾಂಗ್ರೆಸ್‌ಗೆ ಹೆಚ್ಚುವರಿಯಾಗಿ ದಕ್ಕಿರುವುದು ಕೇವಲ 113 ಮತಗಳು ಮಾತ್ರ.
ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ 33,471 ಮತಗಳನ್ನ ಪಡೆದಿದ್ದರೆ, ಲೋಕಾ ಚುನಾವಣೆಯಲ್ಲಿ ಬಿಜೆಪಿಯ ಎ.ನಾರಾಯಣಸ್ವಾಮಿ 70,223 ಮತಗಳನ್ನು ಪಡೆದಿದ್ದಾರೆ. ಹೆಚ್ಚುವರಿಯಾಗಿ 36,471 ಮತಗಳನ್ನು ಪಡೆದಿದ್ದಾರೆ.
ವಿಧಾನಸಭೆ ಕ್ಷೇತ್ರದ ಮತದಾರರ ಸಂಖ್ಯೆ
- 1,11,280 ಪುರುಷರು
- 1,13,160 ಮಹಿಳೆಯರು
- 07 ಲಿಂಗತ್ವ ಅಲ್ಪಸಂಖ್ಯಾತರು
- 2,24,447 ಒಟ್ಟು ಮತದಾರರು
2023 ರ ಚಳ್ಳಕೆರೆ ವಿಧಾನಸಭೆ ಚುನಾವಣೆ ಫಲಿತಾಂಶ
- ಟಿ.ರಘುಮೂರ್ತಿ ಕಾಂಗ್ರೆಸ್ 67,952
- ಆರ್.ಅನಿಲ್‌ಕುಮಾರ್ ಬಿಜೆಪಿ 22,894
- ಎಂ.ರವೀಶ್‌ಕುಮಾರ್ ಜೆಡಿಎಸ್ 51,502
- ಕೆ.ಟಿ.ಕುಮಾರಸ್ವಾಮಿ ಪಕ್ಷೇತರ 29,148
ಗೆಲುವಿನ ಅಂತರ: 16,450
ಚಳ್ಳಕೆರೆ ವಿಧಾನಸಭೆ ಕ್ಷೇತ್ರದ 2019 ಲೋಕಸಭೆಯಲ್ಲಿ ಅಭ್ಯರ್ಥಿ ಪಡೆದ ಮತಗಳು
- ಬಿ.ಎನ್.ಚಂದ್ರಪ್ಪ ಕಾಂಗ್ರೆಸ್ 72,987 ಮತ
- ಎ.ನಾರಾಯಣಸ್ವಾಮಿ ಬಿಜೆಪಿ 70.223 ಮತ
English Summary: Will the BJP-JDS alliance Work in the Congress stronghold Challakere ? NammaJana.com Ground Report