Chitradurga News | Nammajana.com | 01-10-2025
ನಮ್ಮಜನ ನ್ಯೂಸ್ ಕಾಂ,ಚಿತ್ರದುರ್ಗ: ಜಿಲ್ಲೆಯ(ZP CEO) ಗ್ರಾಮೀಣ ಭಾಗದ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಖಾಯಂ ಹಾಗೂ ಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವ ವೈದ್ಯಾಧಿಕಾರಿಗಳು ಸಾರ್ವಜನಿಕರಿಗೆ ಸಮರ್ಪಕ ಆರೋಗ್ಯ ಸೇವೆ ಒದಗಿಸುವಂತೆ ಜಿ.ಪಂ.ಸಿಇಓ ಡಾ.ಆಕಾಶ್ ಸೂಚಿಸಿದ್ದಾರೆ.

ಈ ಕುರಿತು ಸುತ್ತೋಲೆ ಹೊರಡಿಸಿರುವ ಅವರು ವೈದ್ಯಾಧಿಕಾರಿಗಳು ಕಡ್ಡಾಯವಾಗಿ ಬೆಳಿಗ್ಗೆ 9 ರಿಂದ ಸಂಜೆ 4:30 ರವರೆಗೆ ಆಸ್ಪತ್ರೆಯಲ್ಲಿದ್ದು ಹೊರ ರೋಗಿಗಳ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಬೇಕು. ಕಡ್ಡಾಯವಾಗಿ ಆರೋಗ್ಯ ಸುರಕ್ಷಣಾಧಿಕಾರಿಗಳು, ನಿರೀಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತೆಯರ ಪ್ರಗತಿ ಪರಿಶೀಲನೆಯನ್ನು ಮಧ್ಯಾಹ್ನ ನಂತರ ನೆಡಸಬೇಕು.
ಖಾಯಂ ವೈದ್ಯಾಧಿಕಾರಿಗಳು ಮಾತ್ರ ಕರ್ತವ್ಯ ನಿರ್ವಹಿಸುತ್ತಿರುವ ಆಸ್ಪತ್ರೆ ಹಾಗೂ ಪ್ರಭಾರಿ ಆಸ್ಪತ್ರೆ ವ್ಯಾಪ್ತಿಯಲ್ಲಿನ ಶಾಲಾ, ಅಂಗನವಾಡಿ ಹಾಗೂ ಇತರ ನಿಯಮಿತ ಕ್ಷೇತ್ರಭೇಟಿ ಕಾರ್ಯಗಳನ್ನು ಕೈಗೊಳ್ಳಬೇಕು. ಗುತ್ತಿಗೆ ವೈದ್ಯರು ಡಿ.ಹೆಚ್.ಓ ಅಥವಾ ಟಿ.ಹೆಚ್.ಓ ಅವರ ನಿರ್ದೇಶನದ ಮೇರೆಗೆ ತುರ್ತು ಸಂದರ್ಭದಲ್ಲಿ ಮಾತ್ರ ಕ್ಷೇತ್ರ ಭೇಟಿ ಮಾಡಬೇಕು.
ತುರ್ತು ಸಂದರ್ಭ ಹೊರತು ಪಡಿಸಿ ವೈದ್ಯಾಧಿಕಾರಿಗಳ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಪರಿಶೀಲನೆಗಳನ್ನು ಮಧ್ಯಾಹ್ನದ ನಂತರ ವಿಡಿಯೋ ಸಂದರ್ಶನದ ಮೂಲವೇ ನಡೆಸಬೇಕು. ವೈದ್ಯರನ್ನು ಭೌತಿಕವಾಗಿ ಕರೆದು ಸಭೆ ನಡೆಸುವ ಅವಶ್ಯಕತೆ ಇಲ್ಲ. ಚಾಚು ತಪ್ಪದೇ ನೀಡಿರುವ ಸೂಚನೆಗಳನ್ನು ಪಾಲಿಸಬೇಕು ಇಲ್ಲವಾದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಜಿ.ಪಂ.ಸಿಇಓ ಡಾ.ಆಕಾಶ್ ಎಚ್ಚರಿಸಿದ್ದಾರೆ.
